More

    ದಾಳಿಂಬೆಗೆ ದುಂಡಾಣು ಬಾಧೆ!

    ಲಕ್ಷ್ಮೇಶ್ವರ: ಒಣ ಬೇಸಾಯದ ಅನಿಶ್ಚಿತತೆಯಿಂದ ಬೇಸತ್ತು ದಾಳಿಂಬೆಯ ಮೊರೆ ಹೋಗಿರುವ ರೈತರಿಗೆ ಈ ವರ್ಷ ಲಾಕ್​ಡೌನ್ ಸಂಕಷ್ಟದ ಜತೆಗೆ ರೋಗಬಾಧೆ ಎದುರಾಗಿದೆ.

    ಪಟ್ಟಣದ ಪ್ರಗತಿಪರ ರೈತ ಕುತ್ಬುದ್ದೀನ್ ಕಣಿಕೆ ಅವರು ಕಳೆದ ಎಂಟು ವರ್ಷಗಳ ಹಿಂದೆ ರಾಮಗೇರಿ ಗ್ರಾಮದಲ್ಲಿ ಒಟ್ಟು 15 ಎಕರೆ ಪ್ರದೇಶದಲ್ಲಿ ದಾಳಿಂಬೆ ಬೆಳೆದಿದ್ದಾರೆ. ಇಲ್ಲಿಯವರೆಗೂ ಲಕ್ಷಾಂತರ ರೂ. ಖರ್ಚು ಮಾಡುತ್ತಾ ನಿಭಾಯಿಸಿಕೊಂಡು ಬಂದಿದ್ದಾರೆ. ಮೂರು ವರ್ಷದ ನಂತರ ಫಲ ಕೊಡುವ ದಾಳಿಂಬೆ ಆರಂಭದಲ್ಲಿ ಉತ್ತಮ ಲಾಭ ತಂದುಕೊಟ್ಟಿತು. ಆದರೆ, ಕಳೆದೆರಡು ವರ್ಷದಿಂದ ಡುಂಡಾಣು ರೋಗಬಾಧೆಯಿಂದ ಇಳುವರಿಯಲ್ಲಿ ಕುಂಠಿತವಾಗಿದೆ. ಫಲ ಬಿಟ್ಟ ಸಮಯದಲ್ಲಿ ಹವಾಮಾನ ವೈಪರೀತ್ಯದಿಂದ ಈ ರೋಗ ಕಾಣಿಸಿಕೊಳ್ಳುತ್ತದೆ. ಹಣ್ಣಿನ ಮೇಲೆ ಕಪ್ಪು ಚುಕ್ಕಿ, ರಂಧ್ರವಾಗಿ ಹಣ್ಣು ಕೊಳೆಯುತ್ತದೆ. ಇದು ಸಾಂಕ್ರಾಮಿಕ ರೋಗವಾಗಿದ್ದು ಒಂದು ಗಿಡದಿಂದ ಮತ್ತೊಂದು ಗಿಡಕ್ಕೆ ಅಂಟಿಕೊಳ್ಳುತ್ತದೆ. ಇದರಿಂದ ಬೇಸತ್ತ ಕುತ್ಬುದ್ದೀನ್, ಕಳೆದ ವರ್ಷ ಬೇಸಿಗೆಯಲ್ಲಿ 9 ಎಕರೆ ದಾಳಿಂಬೆ ಬೆಳೆ ತೆಗೆದುಹಾಕಿದ್ದಾರೆ. ಇನ್ನು ಗ್ರಾಮದ ಹದ್ದಿನಲ್ಲಿರುವ 6 ಎಕರೆ ದಾಳಿಂಬೆ ಬೆಳೆ ಇದೀಗ ಸಮೃದ್ಧವಾಗಿ ಬೆಳೆದಿದೆ. ಆದರೆ, ಮತ್ತೆ ದುಂಡಾಣು ರೋಗ ಆವರಿಸಿ ಹಣ್ಣುಗಳ ಮೇಲೆ ಕಪ್ಪು ಚುಕ್ಕೆ, ರಂಧ್ರಗಳು ಬಿದ್ದು ಕೊಳೆತು ನೆಲಕ್ಕುದುರುತ್ತಿವೆ.

    ಕೈಗೆ ಬಂದ ಹಣ್ಣನ್ನು ಮಾರುಕಟ್ಟೆಗೆ ತೆಗೆದುಕೊಂಡು ಹೋದರೂ ಕರೊನಾ ಎಫೆಕ್ಟ್​ನಿಂದ ಕೇಳುವವರೇ ಇಲ್ಲದಂತಾಗಿದೆ. ಕೇಳಿದ ಬಂದ ದರಕ್ಕೆ ಮಾರಾಟ ಮಾಡಬೇಕಾದ ಅನಿವಾರ್ಯತೆ ಇದೆ. 10 ಕೆಜಿಯ 1 ಬಾಕ್ಸ್​ಗೆ ವ್ಯಾಪಾರಿಗಳು 40 ರಿಂದ 50 ರೂ.ಗೆ ಕೇಳುತ್ತಿದ್ದಾರೆ. ಇದರಿಂದ ಮಾಡಿದ ಖರ್ಚೂ ವಾಪಸ್ ಬಾರದಂತಾಗಿದೆ.

    ತೋಟಗಾರಿಕೆ ಇಲಾಖೆಯ ಮೂಲಗಳಿಂದ ಲಭ್ಯವಾಗಿರುವ ಮಾಹಿತಿ ಪ್ರಕಾರ ತಾಲೂಕಿನಲ್ಲಿ 1424 ಎಕರೆ ಪ್ರದೇಶದಲ್ಲಿ ವಿವಿಧ ತೋಟಗಾರಿಕೆ ಬೆಳೆ ಬೆಳೆಯಲಾಗುತ್ತಿದೆ. ಇದರಲ್ಲಿ 125 ಎಕರೆ ದಾಳಿಂಬೆ ಕ್ಷೇತ್ರವಿದೆ. ಲಕ್ಷ್ಮೇಶ್ವರ ಸೇರಿ ತಾಲೂಕಿನ ನೆಲೂಗಲ್, ಚಿಕ್ಕಸವಣೂರ, ದೊಡ್ಡೂರ, ಸೂರಣಗಿ ಸೇರಿ ಅನೇಕ ಕಡೆ ದಾಳಿಂಬೆ ಬೆಳೆಯಲಾಗಿದೆ.

    ದಾಳಿಂಬೆ ಬೆಳೆಗೆ ನಮ್ಮ ಭಾಗ ಅಷ್ಟೊಂದು ಸೂಕ್ತವಲ್ಲ. ಮುಂಗಾರಿನಲ್ಲಿ ಹವಾಮಾನ ವೈಪರೀತ್ಯದಿಂದ ದಾಳಿಂಬೆಗೆ ರೋಗ ಕಾಣಿಸಿಕೊಳ್ಳುತ್ತದೆ. ಹತೋಟಿಗಾಗಿ ಪ್ರತಿ ಲೀಟರ್ ನೀರಿಗೆ ಅರ್ಧ ಗ್ರಾಂ ಸ್ಟೆಪೋಟೀಸೈಕ್ಲಿನ್ ಪುಡಿಯನ್ನು ಮತ್ತು 2.5 ಗ್ರಾಂ ಅಕ್ಸಿಕ್ಲೋರೈಡ್ ಬೆರೆಸಿ 15 ದಿನಕ್ಕೊಮ್ಮೆ ಸಿಂಪಡಿಸಬೇಕು. ಲಾಕ್​ಡೌನ್ ಹಿನ್ನೆಲೆಯಲ್ಲಿ ಬೆಳೆಗಾರರಿಗಾದ ಹಾನಿಯ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ.

    | ಸುರೇಶ ಕುಂಬಾರ, ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ

    ದಾಳಿಂಬೆ ಬೆಳೆಯಿಂದ ಉತ್ತಮ ಆದಾಯ ಪಡೆಯಬಹುದು ಎಂಬ ನಿರೀಕ್ಷೆ ನಮ್ಮನ್ನು ಸಂಕಷ್ಟಕ್ಕೀಡು ಮಾಡಿದೆ. ಈ ವರ್ಷ ಕರೊನಾ ಎಫೆಕ್ಟ್​ನಿಂದ ಮಾರುಕಟ್ಟೆ, ಸಾರಿಗೆ ವ್ಯವಸ್ಥೆ ಸಂಪೂರ್ಣ ಸ್ಥಗಿತಗೊಂಡಿದೆ. ಬಹುತೇಕ ತೋಟಗಾರಿಕೆ ಬೆಳೆ ಬೆಳೆದ ರೈತರಿಗೆ ಸರ್ಕಾರ ಕೊಡುತ್ತಿರುವ ಪರಿಹಾರ ಅತ್ಯಂತ ಕಡಿಮೆಯಾಗಿದೆ. ಪ್ರತಿ ಎಕರೆಗೆ 20 ಸಾವಿರ ರೂ. ಪರಿಹಾರ ನೀಡಿ ರೈತರ ಸಂಕಷ್ಟಕ್ಕೆ ಸ್ಪಂದಿಸಬೇಕು.

    | ಕುತ್ಬುದ್ದೀನ್ ಕಣಿಕೆ, ನೀಲನಗೌಡ ಪಾಟೀಲ, ದಾಳಿಂಬೆ ಬೆಳೆಗಾರರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts