More

    ಅಡಕೆ ಬೆಳೆಗಾರರ ನಿರೀಕ್ಷೆ ಹುಸಿಗೊಳಿಸಿದ ಫಸಲು; ಹವಾಮಾನ ವೈಪರೀತ್ಯದಿಂದ ಇಳುವರಿ ಕುಸಿತ , ತೂಕದಲ್ಲೂ ಹೊಡೆತ

    ಕೆ.ಸತೀಶ ಮೈದೊಳಲು ಹೊಳೆಹೊನ್ನೂರು
    ಈ ಬಾರಿ ಮಳೆಯ ಅಬ್ಬರ ಕಡಿಮೆ ಇರುವುದರಿಂದ ಅಡಕೆ ಸಂಸ್ಕರಣೆಗೆ ಉತ್ತಮ ವಾತಾವರಣವಿದೆ. ಆದರೆ ಹವಾಮಾನ ವೈಪರೀತ್ಯದಿಂದಾಗಿ ಫಸಲು ಸಂಪೂರ್ಣ ಕುಸಿದಿದ್ದು, ಒಣಗಿಸಲು ಅಡಕೆಯೇ ಸಿಗದಂತಾಗಿದೆ. ಒಂದೆಡೆ ಇಳುವರಿ ಕುಸಿತ, ಮತ್ತೊಂದೆಡೆ ತೂಕ ನಷ್ಟದ ಅಡಕತ್ತರಿಯಲ್ಲಿ ಸಿಲುಕಿ ಬೆಳೆಗಾರರು ಹೈರಾಣಾಗಿದ್ದಾರೆ.

    ಈ ಬಾರಿ ಅಡಕೆ ಇಳುವರಿ ಭಾಗಶಃ ಕುಸಿತ ಕಂಡಿರುವುದು ಬೆಳೆಗಾರರ ನಿದ್ದೆಗೆಡಿಸಿದೆ. ಗ್ರಾಮೀಣ ಭಾಗದಲ್ಲಿ ಮೂರನೇ ಕೊಯ್ಲು ಭರದಿಂದ ಸಾಗುತ್ತಿದೆ. ಬೆಳೆಗಾರರ ನಿರೀಕ್ಷೆಗೆ ತಕ್ಕಂತೆ ತೋಟದಲ್ಲಿ ಅಡಕೆ ಸಿಗುತ್ತಿಲ್ಲ. ಮರಗಳಲ್ಲಿ 4-5 ಹಿಂಗಾರಗಳಿದ್ದರೂ ಮೊದಲ ಮತ್ತು ಕೊನೆಯ ಗೊನೆಗಳಲ್ಲಿ ಅಡಕೆ ಇಲ್ಲವಾಗಿದೆ. ಅಳಿದುಳಿದಿರುವ ಗೊನೆಗಳಲ್ಲಿ ಹೇಳಿಕೊಳ್ಳುವಷ್ಟು ಅಡಕೆ ಕಾಯಿಗಳಿಲ್ಲ. ಎಕರೆಗೆ 10-15 ಕ್ವಿಂಟಾಲ್‌ನಷ್ಟು ಹಸಿ ಅಡಕೆ ಇಳುವರಿ ಕುಸಿತವಾಗಿದೆ.
    ತೂಕ ಸಹ ನಷ್ಟ: ಇಳುವರಿ ಕುಸಿತದೊಂದಿಗೆ ಅಡಕೆ ತೂಕ ಕಳೆದುಕೊಳ್ಳುತ್ತಿರುವುದು ಬೆಳೆಗಾರರ ಗಾಯದ ಮೇಲೆ ಬರೆ ಎಳೆದಂತಾಗುತ್ತಿದೆ. ತೂಕ ನಷ್ಟದಿಂದ ಬೆಳೆಗಾರರು ದಿಕ್ಕು ತೋಚದಂತಾಗಿದ್ದಾರೆ. ಒಂದು ಕ್ವಿಂಟಾಲ್ ಹಸಿ ಅಡಕೆ ಸಂಸ್ಕರಣೆ ಮಾಡಿದರೆ 13-14 ಕೆ.ಜಿ.ಯಷ್ಟು ಒಣ ರಾಶಿ ಅಡಕೆ ಸಿಗುತ್ತಿಲ್ಲ. 75 ಕೆ.ಜಿ. ತೂಗುತ್ತಿದ್ದ ಒಂದು ಚೀಲ ರಾಶಿ ಅಡಕೆ 68-70 ಕೆ.ಜಿ. ತೂಗುತ್ತಿದೆ.
    ಕಳೆದ ಎರಡು ವರ್ಷಗಳಿಂದ ಹವಾಮಾನ ವೈಪರೀತ್ಯದಿಂದಾಗಿ ಬೆನ್ನುಮುರೆ (ಒರಟು) ಅಡಕೆಯ ಪ್ರಮಾಣ ಹೆಚ್ಚಾಗುತ್ತಿದ್ದು, ಗುಣಮಟ್ಟ ಕುಸಿಯುತ್ತಿದೆ. ಒರಟಿನಿಂದ ಕೂಡಿದ ಬೆನ್ನುಮುರೆ ಅಡಕೆ ಬಂದಷ್ಟೂ ತೂಕ ತಗ್ಗುವುದರೊಂದಿಗೆ ಗುಣಮಟ್ಟವೂ ಕುಸಿಯುತ್ತಿದೆ ಎನ್ನುತ್ತಾರೆ ಬೆಳೆಗಾರ ಶ್ರೀನಿವಾಸ್.
    ಮೂರನೇ ಕೊಯ್ಲಿಗೆ ತೋಟಗಳಲ್ಲಿ ಅಡಕೆ ಖಾಲಿಯಾಗಿದೆ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ. ಕಳೆದ ಬಾರಿ ಅತಿವೃಷ್ಟಿಯಿಂದ ಬೆಳೆ ಕೈಕೊಟ್ಟಿದ್ದರೆ, ಈ ಬಾರಿ ಅನಾವೃಷ್ಟಿಯಿಂದ ಇಳುವರಿ ನೆಲಕಚ್ಚಿದೆ ಎನ್ನುತ್ತಾರೆ ಬೆಳೆಗಾರರು.

    ಮೂರನೇ ಕೊಯ್ಲಿಗೆ ತೋಟ ಖಾಲಿ
    ವಾಡಿಕೆಯಂತೆ ತಿಂಗಳಿಗೊಮ್ಮೆ ಅಡಕೆ ಕೊಯ್ಲು ನಡೆದು ನಾಲ್ಕನೇ ಕೊಯ್ಲು ಮುಕ್ತಾಯವಾದರೂ ತೋಟಗಳಲ್ಲಿ ಅಡಕೆ ಸಿಗುತ್ತಿತ್ತು. ಈ ಬಾರಿ ಪರಿಸ್ಥಿತಿ ಸಂಪೂರ್ಣ ಬದಲಾಗಿದೆ. ಈ ಬಾರಿ ಮೂರನೇ ಕೊಯ್ಲಿನ ಅಂತ್ಯಕ್ಕೇ ಬಹುತೇಕ ಮರಗಳಲ್ಲಿ ಗೊನೆಗಳು ಖಾಲಿಯಾಗಿವೆ. ಕಳೆದ ಬಾರಿ ಅತಿವೃಷ್ಟಿಯಿಂದ ಭಾಗಶಃ ಅಡಕೆ ಉದುರಿ ಕೊಳೆತುಹೋಗಿತ್ತು. ಈ ಬಾರಿ ಇಳುವರಿ ಕುಸಿತವಾಗಿದೆ. ಹವಾಮಾನ ವೈಪರೀತ್ಯಕ್ಕೆ ಸಿಲುಕಿ ಎರಡು ವರ್ಷಗಳಿಂದ ಅಡಕೆ ಬೆಳೆಗಾರರು ನಲುಗಿಹೋಗಿದ್ದಾರೆ. ಈ ಬಾರಿ ಮಳೆಯ ಪ್ರಮಾಣ ತಗ್ಗಿರುವುದರಿಂದ ಮುಂದಿನ ಬೇಸಿಗೆಯಲ್ಲಿ ತೋಟಗಳನ್ನು ಉಳಿಸಿಕೊಳ್ಳುವುದು ಬಹುದೊಡ್ಡ ಸವಾಲಾಗಿದೆ.
    ಖೇಣಿದಾರರಿಗೂ ಸಂಕಷ್ಟ
    ಈ ಬಾರಿಯ ಅಡಕೆಯ ತೂಕ ನಷ್ಟ ಖೇಣಿದಾರರು ಮತ್ತು ಬೆಳೆಗಾರರ ಮಧ್ಯೆ ಮುಸುಕಿನ ಗುದ್ದಾಟಕ್ಕೆ ಕಾರಣವಾಗಿದೆ. ಒಂದು ಕ್ವಿಂಟಾಲ್ ಹಸಿ ಅಡಕೆ ಬದಲಾಗಿ 13-14 ಕೆ.ಜಿ. ಒಣ ಸಂಸ್ಕರಿಸಿದ ರಾಶಿ ಅಡಕೆ ನೀಡುವ ಒಡಂಬಡಿಕೆಗಳು ಮುರಿದುಬೀಳುವ ಹಂತಕ್ಕೆ ತಲುಪುತ್ತಿವೆ. ಖೇಣಿದಾರರು ನಿಗದಿತ ಸಮಯಕ್ಕೆ ಸರಿಯಾಗಿ ಕೊಯ್ಲು ನಡೆಸಿ ಅಡಕೆ ಸಂಸ್ಕರಿಸಿದರೆ ಕೆಲವೆಡೆ 13-14 ಕೆ.ಜಿ ಒಣ ಅಡಕೆ ಸಿಗುತ್ತಿಲ್ಲ. ಒಟ್ಟಿನಲ್ಲಿ ಖೇಣಿದಾರರೂ ನಷ್ಟ ಅನುಭವಿಸುವುದು ಕಟ್ಟಿಟ್ಟ ಬುತ್ತಿ ಎನ್ನಲಾಗುತ್ತಿದೆ.
    ಲೆಕ್ಕಾಚಾರವೆಲ್ಲ ತಲೆಕೆಳಗೆ
    ಸಾಂಪ್ರದಾಯಕವಾಗಿ ಮೊದಲಿನಿಂದಲೂ ರೂಢಿಯಲ್ಲಿದ್ದ ಅಡಕೆ ತೋಟಗಳ ಹಿಡಿ ಗುತ್ತಿಗೆ ಖೇಣಿಗೆ ಕಳೆದ ಐದಾರು ವರ್ಷಗಳಿಂದ ತಿಲಾಂಜಲಿ ಬಿಡಲಾಗಿದೆ. ಇತ್ತೀಚಿನ ದಿನಗಳಲ್ಲಿ ಮಾರುಕಟ್ಟೆ ಬೆಲೆ ಆಧಾರ ಮತ್ತು ಒಣ ರಾಶಿ ಅಡಕೆ ವಾಪಸ್ ನೀಡುವ ಖೇಣಿ ಒಪ್ಪಂದಗಳು ಮುನ್ನೆಲೆಗೆ ಬಂದವು. ಮಾರುಕಟ್ಟೆ ನಿಗದಿತ ಒಪ್ಪಂದದ ವ್ಯವಹಾರದಲ್ಲೂ ಪೈಪೋಟಿ ಉಂಟಾಗಿ ಒಂದು ಕ್ವಿಂಟಾಲ್ ಹಸಿ ಅಡಕೆಗೆ ಮಾರುಕಟ್ಟೆ ದರಕ್ಕಿಂತ 1,000-1,200 ರೂ. ಹೆಚ್ಚು ನೀಡುವ ಒಡಂಬಡಿಕೆಗಳು ನಡೆದವು. ಖೇಣಿಯಲ್ಲಿ ಒಣ ಅಡಕೆ ವಾಪಸ್ ನೀಡುವ ಒಪ್ಪಂದ ಉತ್ತಮ ಎನ್ನಲಾಗುತ್ತಿತ್ತು. ಈ ಬಾರಿ ತೂಕ ನಷ್ಟದಿಂದ ರಾಶಿ ಅಡಕೆ ವಾಪಸ್ ನೀಡುವ ಒಡಂಬಡಿಕೆಯೂ ಒಳಿತಲ್ಲ ಎನ್ನಲಾಗುತ್ತಿದೆ.

    ಉತ್ತಮ ಬಿಸಿಲು ಇರುವುದರಿಂದ ಈ ಬಾರಿ ಅಡಕೆ ಸಂಸ್ಕರಣೆ ಗುಣಮಟ್ಟದಿಂದ ಕೂಡಿದೆ. ಅಡಕೆ ಇಳುವರಿಯಲ್ಲಿ ಕುಸಿತವಾಗುತ್ತಿರುವುದರಿಂದ ಸಂಸ್ಕರಿಸಲು ಅಡಕೆಯೇ ಸಿಗದಂತಾಗಿದೆ. ಹವಾಮಾನ ವೈಪರೀತ್ಯದಿಂದಾಗಿ ಅಡಕೆ ಬೆಳೆಗಾರರ ಪಾಡು ‘ಹಲ್ಲಿದ್ದವನಿಗೆ ಕಡಲೆ ಇಲ್ಲ, ಕಡಲೆ ಇದ್ದವನಿಗೆ ಹಲ್ಲಿಲ್ಲ’ ಎನ್ನುವಂತಾಗಿದೆ. ಎರಡು ವರ್ಷದಿಂದ ಹವಾಮಾನ ವೈಪರೀತ್ಯ ನೀಡುತ್ತಿರುವ ಹೊಡೆತ ತಿನ್ನುತ್ತಿರುವ ಬೆಳೆಗಾರರ ಸಂಕಷ್ಟ ಹೇಳತೀರದಾಗಿದೆ.
    ಹರೀಶ್, ಅಡಕೆ ಬೆಳೆಗಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts