More

    ದಸರಾಗೆ ಮದುವಣಗಿತ್ತಿಯಂತೆ ಸಿಂಗಾರಗೊಂಡಿರುವ ಮೈಸೂರು

    ಮಂಜುನಾಥ ಟಿ.ಭೋವಿ ಮೈಸೂರು

    ಸಾಂಸ್ಕೃತಿಕ ಸಿರಿ ಮತ್ತು ಧಾರ್ಮಿಕ ಐಸಿರಿಯ ಸಮ್ಮಿಲನವಾದ ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವವೊಂದು ಸುಂದರ ದೃಶ್ಯಕಾವ್ಯ. ವರ್ಷಕ್ಕೊಮ್ಮೆ ಬರುವ ಈ ರಮಣೀಯ ಘಳಿಗೆಗೆ ಸಾಂಸ್ಕೃತಿಕ ನಗರಿ ಮದುವಣಗಿತ್ತಿಯಂತೆ ಅಂದವಾಗಿ ಸಿಂಗಾರಗೊಂಡು ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ.
    ಇದು ಕರೊನೋತ್ತರದ ಮೊದಲ ದಸರೆ. ಕೋವಿಡ್ ಸಂಕ್ರಮಣದಿಂದ ಕಳೆದ 2 ವರ್ಷ ಸರಳವಾಗಿ ನಡೆದಿದ್ದ ಉತ್ಸವದಲ್ಲಿ ಈ ಬಾರಿ ಸಡಗರ ಮೇಳೈಸಲಿದೆ. ಹೀಗಾಗಿ, ಎಲ್ಲಿಲ್ಲದ ಉತ್ಸಾಸದೊಂದಿಗೆ ಸೆ. 26ರಂದು ನಾಡಹಬ್ಬದ ಅಂಕದ ಪರದೆ ಗರಿ ಬಿಚ್ಚಲಿದೆ. ಇದಕ್ಕೆ ಸಾಕ್ಷಿಯಾಗಲಿರುವ ಅರಮನೆ ನಗರಿ ಮೈಸೂರು ಸಕಲ ರೀತಿಯಲ್ಲೂ ಸಜ್ಜಾಗಿದೆ.

    ಮೊದಲ ಬಾರಿಗೆ ರಾಷ್ಟ್ರಪತಿಯಿಂದ ಚಾಲನೆ:
    ಚಾಮುಂಡಿಬೆಟ್ಟದ ಶ್ರೀ ಚಾಮುಂಡೇಶ್ವರಿ ದೇವಿಯ ಸನ್ನಿಧಿಯಲ್ಲಿ ದಸರೆಗೆ ಸೆ.26ರಂದು ಬೆಳಗ್ಗೆ 9.45ರಿಂದ ಸಲ್ಲುವ ಶುಭ ವೃಶ್ಚಿಕ ಲಗ್ನದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ವಿಧ್ಯುಕ್ತವಾಗಿ ಚಾಲನೆ ನೀಡಿ ಮುನ್ನುಡಿ ಬರೆಯಲಿದ್ದಾರೆ. ದೇಶದ ಪ್ರಥಮ ಪ್ರಜೆಯಿಂದ ಉದ್ಘಾಟನೆ ಆಗುತ್ತಿರುವುದು ಇದೇ ಮೊದಲು. ಬಳಿಕ ಸಾಲು ಸಾಲು ದಸರಾ ಚಟುವಟಿಕೆಗಳು ಅನಾವರಣಗೊಳ್ಳಲಿದ್ದು, 10 ದಿನಗಳ ಕಾಲ ಹಬ್ಬದ ನವೋಲ್ಲಾಸ ಕಳೆಗಟ್ಟಲಿದೆ.

    ಸಾಂಸ್ಕೃತಿಕ ಕಾರ್ಯಕ್ರಮ ಹಿರಿಮೆ:
    ದಸರಾದ ವೈಶಿಷ್ಟೃವಾದ ಸಾಂಸ್ಕೃತಿಕ ಕಾರ್ಯಕ್ರಮ ಅರಮನೆ ಅಂಗಳದಲ್ಲಿ ನಿತ್ಯ ಸಂಜೆ ಗರಿಗೆದರಲಿದೆ. ಕಲಾವಿದರು 290 ವಿವಿಧ ಬಗೆಯ ಕಾರ್ಯಕ್ರಮಗಳನ್ನು ಉಣಬಡಿಸಲಿದ್ದಾರೆ. ಜಗನ್ಮೋಹನ ಅರಮನೆ, ಕಲಾಮಂದಿರ, ಗಾನಭಾರತಿ, ನಾದಬ್ರಹ್ಮ, ಕಿರುರಂಗಮಂದಿರ, ಚಿಕ್ಕಗಡಿಯಾರ ಹಾಗೂ ಪುರಭವನ ವೇದಿಕೆಯಲ್ಲೂ ವಿಶಿಷ್ಟ ಕಾರ್ಯಕ್ರಮಗಳು ನಡೆಯಲಿವೆ. ದೇಸಿ ಕಲಾಸಂಸ್ಕೃತಿ ನೋಡಲು ಸಿಗಲಿದೆ.

    ಯುವ ದಸರಾದಲ್ಲಿ ಮಂಗ್ಲಿ ಮಿಂಚು:
    ಯುವ ಮನಸ್ಸುಗಳನ್ನು ಹುಚ್ಚೆದ್ದು ಕುಣಿಸುವ ‘ಯುವ ದಸರಾ’ ಸೆ.27ರಿಂದ ಏಳು ದಿನಗಳ ಕಾಲ ವರ್ಣರಂಜಿತವಾಗಿ ನಡೆಯಲಿದೆ. ತೆಲುಗಿನ ಜನಪ್ರಿಯ ಗಾಯಕಿ ಮಂಗ್ಲಿ, ಬಾಲಿವುಡ್ ಗಾಯಕರಾದ ಕನ್ನಿಕಾ ಕಪೂರ್, ಅಮಿತ್ ತ್ರಿವೇದಿ ಮತ್ತು ಸುನಿಧಿ ಚೌಹಾಣ್ ಸಂಗೀತದ ಧೂಳೆಬ್ಬಿಸಲಿದ್ದಾರೆ. ಗಾಯಕರಾದ ರಘು ದೀಕ್ಷಿತ್, ಡಾ.ಶಮಿತಾ ಮಲ್ನಾಡ್ ಸಹ ಮೋಡಿ ಮಾಡಲಿದ್ದಾರೆ. ಸ್ಯಾಂಡಲ್‌ವುಡ್ ನೈಟ್‌ನಲ್ಲಿ ನಟ-ನಟಿಯರು ಮಿಂಚು ಹರಿಸಲಿದ್ದಾರೆ. ಹರ್ಷಿಕಾ ಪೂಣಚ್ಚ-ವಿಜಯರಾಘವೇಂದ್ರ ಅವರಿಂದ ನರ್ತನ, ಫ್ಯಾಷನ್ ಷೋ ಸಹ ಇರಲಿದೆ.

    ಹೂವಿನ ರಾಷ್ಟ್ರಪತಿ ಭವನ:
    ಫಲಪುಷ್ಪ ಪ್ರದರ್ಶನ ಹೂವಿನ ಲೋಕಕ್ಕೆ ಕರೆದೊಯ್ಯಲಿದೆ. 20 ಅಡಿ ಎತ್ತರದ ದೆಹಲಿಯ ರಾಷ್ಟ್ರಪತಿ ಭವನದ ಪ್ರತಿಕೃತಿ ಪ್ರಮುಖ ಆಕರ್ಷಣೆ. ಹೂವಿನಿಂದ ಸಿಂಗಾರಗೊಂಡ ಡಾ.ರಾಜ್‌ಕುಮಾರ್ ಅವರ ಗಾಜನೂರಿನ ಮನೆ, ಚಾಮುಂಡಿಬೆಟ್ಟ, ನಂದಿ ವಿಗ್ರಹದ ಮಾದರಿಗಳು ಇಲ್ಲಿವೆ. 7 ಅಡಿ ಉದ್ದದ ಜೇನುಹುಳು, 12 ಅಡಿ ಉದ್ದದ ಜಿರಾಫೆ, 7 ಅಡಿಯ ದಪ್ಪಮೆಣಸಿನಕಾಯಿ ಸೇರಿದಂತೆ ಇನ್ನಿತರ ವಿವಿಧ ಪ್ರಾಣಿ, ಪಕ್ಷಿಗಳ ಗೊಂಬೆ ಚಿಣ್ಣರನ್ನು ಸೆಳೆಯಲಿವೆ.

    ಸಿನಿ ಉತ್ಸವ:
    ಚಲನಚಿತ್ರೋತ್ಸವದಲ್ಲಿ 112 ಚಿತ್ರಗಳು ಪ್ರದರ್ಶನವಾಗಲಿವೆ. 56 ಕನ್ನಡ, 28 ಪನೋರಮಾ, 28 ಅಂತಾರಾಷ್ಟ್ರೀಯ ಸಿನಿಮಾಗಳು ಮಲ್ಟಿಫ್ಲೆಕ್ಸ್‌ಗಳಾದ ಐನಾಕ್ಸ್ ಮತ್ತು ಡಿಆರ್‌ಸಿಯ ಒಂದು ಪರದೆಯಲ್ಲಿ ವೀಕ್ಷಿಸಬಹುದು. ಅಪ್ಪು ಮತ್ತು ಸಂಚಾರಿ ವಿಜಯ್ ಅಭಿಯನಯದ ತಲಾ 5 ಚಿತ್ರಗಳ ಪ್ರದರ್ಶನದ ಮೂಲಕ ಅವರಿಗೆ ಸಿನಿ ನಮನ ಸಲ್ಲಿಸಲಾಗುತ್ತದೆ.
    ಇದೇ ಮೊದಲ ಬಾರಿಗೆ ರೈತ ದಸರಾಕ್ಕೆ ಸಾಕುಪ್ರಾಣಿಗಳು ಆಗಮಿಸಲಿವೆ. ‘ಚಾರ್ಲಿ 777’ ಸಿನಿಮಾ ಖ್ಯಾತಿಯ ಶ್ವಾನ ಗಮನ ಸೆಳೆಯಲಿದೆ. ಜತೆಗೆ, ಇದು ಕೃಷಿ ಸಂಸ್ಕೃತಿಯೊಂದಿಗೆ ಅನ್ನದಾತನ ಸಂಭ್ರಮಕ್ಕೆ ಮತ್ತು ಪ್ರತಿಭೆಗೂ ಸಾಕ್ಷಿಯಾಗಲಿದೆ.

    ಚಿಣ್ಣರ ಚಿಲಿಪಿಲಿ
    ವಿವಿಧ ವಿಷಯಗಳ ಮೇಲೆ ಬೆಳಕು ಚೆಲ್ಲುವ ದಸರಾ ಕವಿಗೋಷ್ಠಿ ಸೆ.28ರಿಂದ ನಾಲ್ಕು ದಿನ ನೆರವೇರಲಿದೆ. ಹಾಸ್ಯ ಕವಿಗೋಷ್ಠಿ, ಉರ್ದು ಕವಿಗೋಷ್ಠಿ(ಮುಷಾಹಿರ), ಯುವ ಕವಿಗೋಷ್ಠಿ, ಪ್ರಾದೇಶಿಕ ಕವಿಗೋಷ್ಠಿ, ಚಿಗುರು ಕವಿಗೋಷ್ಠಿ, ಪ್ರಧಾನ ಕವಿಗೋಷ್ಠಿ ಜರುಗಲಿವೆ. ಜಗನ್ಮೋಹನ ಅರಮನೆಯಲ್ಲಿ ಮಕ್ಕಳ ದಸರಾದಲ್ಲಿ ಚಿಣ್ಣರ ಚಿಲಿಪಿಲಿ ರಂಜಿಸಲಿದೆ.
    ರುಚಿ, ಕೈರುಚಿ, ಅಭಿರುಚಿಯ ಹಬ್ಬ ‘ಆಹಾರ ಮೇಳ’ದಲ್ಲಿ ವೈವಿಧ್ಯಮಯ ಖಾದ್ಯಗಳನ್ನು ಸವಿಯುವುದರೊಂದಿಗೆ ಒಂದಿಷ್ಟು ಮನರಂಜನೆ, ಅಡುಗೆ ಸ್ಪರ್ಧೆ, ತಿನ್ನುವ ಸ್ಪರ್ಧೆಯೂ ಇರಲಿದೆ. ಮಡಕೆ ಬಿರಿಯಾನಿ, ಬೊಂಬು ಬಿರಿಯಾನಿ ಈ ಸಲದ ವಿಶೇಷ ಊಟ.


    ಕುಸ್ತಿಗೆ ‘ಸಾಕ್ಷಿ’:
    ಕುಸ್ತಿ ಕಾಳಗವೂ ಜರುಗಲಿದೆ. ಈ ಬಾರಿ ಖ್ಯಾತ ಕುಸ್ತಿಪಟು ಸಾಕ್ಷಿ ಮಲ್ಲಿಕ್ ವಿಶೇಷ ಆಹ್ವಾನಿತರು. ವಿವಿಧ ವಿಭಾಗದಲ್ಲಿ ಪೈಲ್ವಾನರು ಗೆಲುವಿಗಾಗಿ ಪೈಪೋಟಿಗೆ ಇಳಿಯದ್ದಾರೆ. ಪಂಜಕುಸ್ತಿ ಟೂರ್ನಿಯೂ ಇದೆ.
    ಮೊದಲ ಬಾರಿಗೆ ಕೈಗಾರಿಕೆ ದಸರಾ, ವೈದ್ಯಕೀಯ ದಸರಾ ನೋಡಲು ಸಿಗಲಿದೆ. ಯೋಗ ದಸರಾ, ಶಿಲ್ಪ ಮತ್ತು ಚಿತ್ರಕಲೆ ಪ್ರದರ್ಶನ, ಯೋಗ ಸಂಭ್ರಮ, ದಸರಾ ದರ್ಶನ, ಯೋಗಾಸನ ಸ್ಪರ್ಧೆವನ್ನೂ ಆಯೋಜಿಸಲಾಗಿದೆ. ಪುರಭವನದಿಂದ ಪಾರಂಪರಿಕ ಟಾಂಗಾ ಸವಾರಿ, ಸೈಕಲ್ ಸವಾರಿ, ನಡಿಗೆ ಹೊರಡಲಿದೆ. ಚಾಮುಂಡಿಬೆಟ್ಟದಲ್ಲಿ ಯೋಗ ಚಾರಣ ಕಾಣಸಿಗಲಿದೆ. ಹೀಗೆ ನಾನಾ ಚಟುವಟಿಕೆಗಳ ಸುಗ್ಗಿ ಇಲ್ಲಿದೆ.

    3ಡಿ ಮ್ಯಾಪಿಂಗ್:
    3 ತಿಂಗಳ ಕಾಲ ನಡೆಯುವ ದಸರಾ ವಸ್ತುಪ್ರದರ್ಶನದಲ್ಲಿ ಸ್ವಾತಂತ್ರೃ ಸೇನಾನಿಗಳ ಮರಳಿನ (ಎಂ-ಸ್ಯಾಂಡ್) ಕಲಾಕೃತಿಗಳು ವೀಕ್ಷಣೆಗೆ ದೊರೆಯಲಿವೆ. ಗತವೈಭವ ತಿಳಿಸುವ 3ಡಿ ಮ್ಯಾಪಿಂಗ್ ಇದೆ.

    ದೀಪದ ಮೆರುಗು:
    ಬೆಳಕಿನ ಚಿತ್ತಾರ ದಸರೆಗೆ ಮೆರುಗು ಹೆಚ್ಚಿಸಿದೆ. 124 ಕಿ.ಮೀ ರಸ್ತೆ ಹಾಗೂ 96 ವೃತ್ತಗಳಲ್ಲಿ ವಿದ್ಯುತ್ ದೀಪಾಲಂಕಾರದಿಂದ ಮೈಸೂರು ಝಗಮಗಿಸುತ್ತಿದೆ. ಪ್ರವಾಸಿಗರನ್ನು ಆಕರ್ಷಿಸಲು ದೀಪಗಳು ಬೆಳಗುವ ಅವಧಿಯನ್ನು ಸೂರ್ಯಾಸ್ತರಿಂದ ರಾತ್ರಿ 10.30ರವರೆಗೂ ವಿಸ್ತರಿಸಲಾಗಿದೆ.

    ಬಿಗಿ ಭದ್ರತೆ:
    ದಸರೆಗೆ ಖಾಕಿ ಸರ್ಪಗಾವಲು ಹಾಕಲಾಗಿದೆ. 5,485 ಪೊಲೀಸರನ್ನು ಬಂದೋಬಸ್ತ್‌ಗೆ ನಿಯೋಜಿಸಲಾಗಿದೆ. ಜತೆಗೆ, ಸಿಸಿಟಿವಿ ಕ್ಯಾಮರಾ, ಡ್ರೋನ್ ಕ್ಯಾಮರಾ, ಬಾಡಿ ವೋರ್ನ್ ಕ್ಯಾಮರಾ ಮೂಲಕವೂ ಕಣ್ಗಾವಲು ಇಡಲಾಗಿದೆ.

    4ನೇ ಬಾರಿಗೆ ಅಭಿಮನ್ಯು ಸಾರಥ್ಯ:
    ದಸರಾ ಕೊನೆಯ ದಿನವಾದ ಅ. 5ರಂದು ಜಂಬೂಸವಾರಿಯಲ್ಲಿ ವಿವಿಧ ಸಂದೇಶ ಸಾರುವ ಸ್ತಬ್ಧಚಿತ್ರಗಳು ಹಾಗೂ ವೈವಿಧ್ಯತೆಯ ಕಲಾ ತಂಡಗಳು ಸಾಗಲಿವೆ. 4ನೇ ಬಾರಿಗೆ ಅಂಬಾರಿ ಹೊರಲು ‘ಅಭಿಮನ್ಯು’ ಆನೆ ಅಣಿಯಾಗಿದ್ದಾನೆ.

    ದಸರೆಯಲ್ಲೂ ಅಪ್ಪು ಜೀವಂತ:
    ಪುನೀತ್ ರಾಜ್‌ಕುಮಾರ್‌ಗೆ ದಸರೆಯಲ್ಲಿ ವಿಶೇಷ ನಮನ ಸಲ್ಲಿಸಲಾಗುತ್ತಿದೆ. ಚಲನಚಿತ್ರೋತ್ಸವದಲ್ಲೂ ‘ಅಪ್ಪು ದಿನ’ ಆಚರಿಸಲಾಗುತ್ತಿದೆ. ಅವರ ಆರು ಸಿನಿಮಾಗಳನ್ನು ತೋರಿಸಲಾಗುತ್ತಿದೆ. ದೀಪಾಲಂಕಾರದಲ್ಲಿ ಪವರ್‌ಸ್ಟಾರ್‌ಗೆ ಬೆಳಕಿನ ರೂಪಕ ನೀಡಿದ್ದರೆ, ಫಲಪುಷ್ಪ ಪ್ರದರ್ಶನದಲ್ಲೂ ‘ಯುವರತ್ನ’ನಿಗೆ ಹೂವಿನ ಸಿಂಗಾರ ಮಾಡಲಾಗಿದೆ. ದಸರಾ ವಸ್ತುಪ್ರದರ್ಶನದಲ್ಲೂ ಪುನೀತ್‌ಗೆ ಮರಳುಶಿಲ್ಪದ ರೂಪ ನೀಡಲಾಗಿದೆ. ಇನ್ನು ಯುವ ದಸರಾದಲ್ಲಿ ಗಾಯಕರಾದ ಗುರುಕಿರಣ್, ವಿಜಯಪ್ರಕಾಶ್, ಬಾಲಿವುಡ್‌ನ ಕುನಾಲ್ ಗಾಂಜಾವಾಲ್ ಅವರು ‘ಅಂಜನಿಪುತ್ರ’ನಿಗೆ ಸಂಗೀತ ನಮನ ಅರ್ಪಿಸಲಿದ್ದಾರೆ.ಅರಮನೆಯಲ್ಲೂ ಸಡಗರ:
    ಖಾಸಗಿ ದಸರಾಕ್ಕೂ ಅರಮನೆ ಸಿದ್ಧವಾಗಿದೆ. ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ 9ನೇ ಬಾರಿಗೆ ಖಾಸಗಿ ದರ್ಬಾರ್ ಮುನ್ನಡೆಸುವರು. ಆಳರಸರ ಗತಕಾಲದ ವೈಭವವೂ ಗರಿಗೆದರಲಿದೆ.

    ಸ್ವಾಗತ ಕೋರುವ ಗುಂಡಿಗಳು:
    ದಸರಾಗೆ ಈ ಸಲ 34.50 ಕೋಟಿ ರೂ. ಖರ್ಚು ಮಾಡಲಾಗುತ್ತಿದೆ. ಆದರೆ, ಕೊನೇ ಹಂತದಲ್ಲೇ ಸಿದ್ಧತೆಗಳನ್ನು ಆತುರದಲ್ಲಿ ಮಾಡಲಾಗಿದ್ದು, ‘ಯುದ್ಧ ಕಾಲದಲ್ಲಿ ಶಸ್ತ್ರಾಭ್ಯಾಸ’ ತಪ್ಪಲಿಲ್ಲ. ಗುಂಡಿ ಬಿದ್ದ ರಸ್ತೆಗಳು ಪ್ರವಾಸಿಗರಿಗೆ ಸ್ವಾಗತ ಕೋರುತ್ತಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts