More

    ದಂಧೆಗಳಿಗೆ ಕಡಿವಾಣ ಹಾಕಲು ಸಹಕಾರ ಕೊಡಿ

    ಮಳವಳ್ಳಿ: ತಾಲೂಕಿನಲ್ಲಿ ಅಕ್ರಮ ದಂಧೆಗಳು ಎಗ್ಗಿಲ್ಲದೇ ನಡೆಯುತ್ತಿದ್ದು, ಇವುಗಳಿಗೆ ಕಡಿವಾಣ ಹಾಕಲು ಯಾವ ಮುಲಾಜಿಗೂ ಒಳಗಾಗದೇ ಆಡಳಿತ ಯಂತ್ರಕ್ಕೆ ಸರ್ಜರಿ ಮಾಡಬೇಕಾದ ಅನಿವಾರ್ಯತೆ ಇದ್ದು, ನನಗೆ ಎಲ್ಲರ ಸಹಕಾರ ಬೇಕೆಂದು ಶಾಸಕ ಪಿ.ಎಂ.ನರೇಂದ್ರ ಸ್ವಾಮಿ ಮನವಿ ಮಾಡಿದರು.

    ಪಟ್ಟಣದ ರೈತ ಸಮುದಾಯ ಭವನದಲ್ಲಿ ವಿಶ್ವಗುರು ಕೋ ಆಪರೇಟಿವ್ ಸೊಸೈಟಿ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ಶಾಸಕರಿಗೆ ಅಭಿನಂದನಾ ಹಾಗೂ ಸಾಧಕರಿಗೆ ಶ್ರೀ ವಿಶ್ವಗುರು ಪ್ರಶಸ್ತಿ ಪ್ರದಾನ ಸಮಾರಂಭ ಕಾರ್ಯಕ್ರಮದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದರು.
    ತಾಲೂಕಿನಲ್ಲಿ ಆಡಳಿತ ಯಂತ್ರ ಹಳಿತಪ್ಪಿದೆ. ತಾಲೂಕು ವ್ಯಾಪ್ತಿಯಲ್ಲಿ ಸರ್ಕಾರದ ಸಾವಿರಾರು ಎಕರೆ ಭೂಮಿ ಪರಭಾರೆಯಾಗಿ ಹೋಗಿದ್ದು, ಎಗ್ಗಿಲ್ಲದೇ ನಡೆಯುತ್ತಿರುವ ಇಂತಹ ಹಲವಾರು ಅಕ್ರಮ ದಂಧೆಗಳಿಗೆ ಕಡಿವಾಣ ಹಾಕಲು ಮೊದಲು ಆಡಳಿತ ವ್ಯವಸ್ಥೆ ಸರಿಪಡಿಸಬೇಕಿದೆ. ಅಕ್ರಮಗಳಲ್ಲಿ ಭಾಗಿಯಾಗಿರುವ ಯಾವುದೇ ವ್ಯಕ್ತಿಯ ವಿರುದ್ಧ ಕ್ರಮಕ್ಕೆ ಮುಂದಾದ ಸಂದರ್ಭದಲ್ಲಿ ದಯವಿಟ್ಟು ನಮ್ಮ ಕಾರ್ಯಕರ್ತರಾಗಲಿ, ಆತ್ಮೀಯರಾಗಲಿ ಅವರ ರಕ್ಷಣೆಗಾಗಿ ನನ್ನ ಬಳಿ ಬರಬೇಡಿ. ಜನರಿಗೆ ಸ್ವಚ್ಛ ಆಡಳಿತ ನೀಡಬೇಕಾದರೇ ನಾನೊಬ್ಬ ಶಾಸಕನಾಗಿ ಎಲ್ಲವನ್ನು ಸರಿಪಡಿಸಲು ಸಾಧ್ಯವಿಲ್ಲ. ಇದಕ್ಕೆ ತಮ್ಮೆಲ್ಲರ ಸಹಕಾರವೂ ಅತ್ಯಗತ್ಯವಾಗಿದ್ದು, ಕ್ಷೇತ್ರದ ಶುದ್ಧಿಕರಣಕ್ಕಾಗಿ ಎಲ್ಲರೂ ಕೈ ಜೋಡಿಸುವಂತೆ ಮನವಿ ಮಾಡಿದರು.

    ತಾಲೂಕಿನಲ್ಲಿ ಹಂತಹಂತವಾಗಿ ಅಭಿವೃದ್ಧಿ ಕೆಲಸಗಳನ್ನು ಕೈಗೆತ್ತಿಕೊಂಡು ಸಮಗ್ರವಾಗಿ ಅಭಿವೃದ್ಧಿ ಪಡಿಸುವ ಮೂಲಕ ಮಾದರಿ ಕ್ಷೇತ್ರವಾಗಿಸಲು ಶ್ರಮಿಸುತ್ತೇನೆ. ನನ್ನ ಅರಿವೆಗೆ ಬಾರದೇ ತಾಲೂಕಿನ ಸರ್ಕಾರಿ ಶಾಲೆಗಳ ಬಹಳಷ್ಟು ಶಿಕ್ಷಕರು ವರ್ಗಾವಣೆ ಮಾಡಿಸಿಕೊಂಡು ಬೇರೆಡೆಗೆ ಹೋಗಿರುವುದರಿಂದ ಶೇ.50 ರಷ್ಟು ಶಿಕ್ಷಕರ ಕೊರತೆ ಎದುರಾಗಿದೆ. ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳ ಶಿಕ್ಷಣದ ಮೇಲೆ ಪರಿಣಾಮ ಬೀರಬಾರದು ಎಂದು ತಿಳಿಸಿದರು.

    ಕೆಪಿಸಿಸಿ ಕಾರ್ಯದರ್ಶಿಬಿ.ಎಸ್.ಶಿವಣ್ಣ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಡಿಸಿಸಿ ಬ್ಯಾಂಕ್ ಜಿಲ್ಲಾಧ್ಯಕ್ಷ ಕೆ.ಸಿ.ಜೋಗಿಗೌಡ, ಜಿಲ್ಲಾ ಸಹಕಾರ ಸಂಘಗಳ ಉಪ ನಿಬಂಧಕ ಜೆ.ವಿಕ್ರಂರಾಜೇ ಅರಸ್, ಟಿಎಪಿಸಿಎಂಎಸ್ ಅಧ್ಯಕ್ಷ ದ್ಯಾಪೇಗೌಡ, ಜಿಪಂ ಮಾಜಿ ಸದಸ್ಯ ಆರ್.ಎನ್.ವಿಶ್ವಾಸ್, ಪಿಕಾರ್ಡ್ ಬ್ಯಾಂಕ್ ಮಾಜಿ ಅಧ್ಯಕ್ಷ ಕುಂದೂರು ಪ್ರಕಾಶ್, ವಿಶ್ವಗುರು ಸೊಸೈಟಿ ಅಧ್ಯಕ್ಷ ಎಂ.ವಿ.ಕೃಷ್ಣಶೆಟ್ಡಿ, ಉಪಾಧ್ಯಕ್ಷ ಪ್ರಕಾಶ್, ಸಂಸ್ಥಾಪಕ ನಿರ್ದೇಶಕ ಕೆ.ಎಸ್.ಗುರುಪ್ರಸಾದ್ ಸೇರಿದಂತೆ ಇತರ ನಿರ್ದೇಶಕರು ಇದ್ದರು.

    ವಿಶ್ವ ಗುರು ಪ್ರಶಸ್ತಿ ಪ್ರದಾನ: ಮೈಸೂರು ಹೆಚ್ಚುವರಿ ಪ್ರಾದೇಶಿಕ ಆಯುಕ್ತ ಪಿ.ಶಿವರಾಜು, ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಕೀಲು ಮತ್ತು ಮೂಳೆ ತಜ್ಞವೈದ್ಯ ಎಚ್.ಸುನೀಲ್, ಶಿಕ್ಷಣ ಪ್ರೇಮಿ ಡಾ.ಟಿ.ಎಂ.ಪ್ರಕಾಶ್ ಅವರಿಗೆ ವಿಶ್ವಗುರು ಪ್ರಶಸ್ತಿ ನೀಡಿ ಗೌರವಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts