More

    ತೇಲಿ ಹೋಗಿದ್ದ ಬಾಲಕಿ ಮೃತದೇಹ ಪತ್ತೆ

    ಕಲಘಟಗಿ: ತಾಲೂಕಿನ ಗಂಜೀಗಟ್ಟಿ ಗ್ರಾಮದ ಹಿರೇಕೆರೆಯ ನೀರಿನ ಸೆಳೆತಕ್ಕೆ ತೇಲಿ ಹೋಗಿದ್ದ ಬಾಲಕಿ ಶ್ರೀದೇವಿಯ ಮೃತದೇಹ ಶನಿವಾರ ಬೆಳಗ್ಗೆ ಗೋವಿನ ಜೋಳದ ಹೊಲದಲ್ಲಿ ಪತ್ತೆಯಾಗಿದೆ.

    ಆ. 6ರಂದು ಬಾಲಕಿ ಶ್ರೀದೇವಿ ತನ್ನ ತಾಯಿಯೊಂದಿಗೆ ಹೋಗುತ್ತಿದ್ದ ಸಮಯದಲ್ಲಿ ಈ ಅವಘಡ ಸಂಭವಿಸಿದೆ. ಸತತ 3 ದಿನಗಳಿಂದ ಜಿಲ್ಲಾಧಿಕಾರಿಗಳ ನಿರ್ದೇಶನದನ್ವಯ ತಹಸೀಲ್ದಾರ್ ಅಶೋಕ ಶಿಗ್ಗಾಂವಿ ಹಾಗೂ ಸಿಬ್ಬಂದಿ ಸಹಕಾರದಿಂದ ರಾಷ್ಟ್ರೀಯ ವಿಪತ್ತು ನಿರ್ವಹಣೆ ಜಿಲ್ಲಾ ತಂಡ ಹಾಗೂ ಅಗ್ನಿ ಶಾಮಕ ದಳದ ಸಿಬ್ಬಂದಿ ನಿರಂತರ ಶೋಧ ಕಾರ್ಯ ನಡೆಸಿ ದೇಹ ಪತ್ತೆ ಮಾಡಿದ್ದಾರೆ. ಶೋಧ ಕಾರ್ಯಕ್ಕೆ ಶ್ರಮಿಸಿದ ಎನ್.ಡಿ.ಆರ್.ಎಫ್. ತಂಡ, ಅಗ್ನಿ ಶಾಮಕ ದಳ, ಪೊಲೀಸ್ ಸಿಬ್ಬಂದಿ ಹಾಗೂ ಸ್ಥಳೀಯ ಕೆಲ ಯುವಕರು ಕೂಡ ಸಹಕಾರ ನೀಡಿದರು. ಮೃತದೇಹ ಪತ್ತೆಯಾಗುತ್ತಿದ್ದಂತೆ ಶ್ರೀದೇವಿ ಕುಟುಂಬ ವರ್ಗದ ಆಕ್ರಂದನ ಮುಗಿಲು ಮುಟ್ಟಿತ್ತು. ಬಾಲಕಿಯ ಮೃತದೇಹ ತೇಲಿಹೊದ ಸ್ಥಳದಿಂದ 2 ಕಿ.ಮೀ. ದೂರದ ಹೊಲದಲ್ಲಿ ಪತ್ತೆಯಾಗಿದೆ. ನೀರಿನ ರಭಸಕ್ಕೆ ಬಾಲಕಿಯ ಕುತ್ತಿಗೆ ಗೋವಿನ ಜೋಳದ ಕಸದಲ್ಲಿ ಸಿಲುಕಿಕೊಂಡು ಕಾಲುಗಳು ಮಾತ್ರ ಮೇಲೆ ಕಾಣಿಸುತ್ತಿತ್ತು. ಹೀಗಾಗಿ ಪತ್ತೆ ಮಾಡಲು ವಿಳಂಬವಾಯಿತು. ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಮೃತದೇಹವನ್ನು ಕುಟುಂಬಕ್ಕೆ ಹಸ್ತಾಂತರಿಸಲಾಯಿತು.

    5 ಲಕ್ಷ ರೂ.ಗಳ ಪರಿಹಾರಧನ ಚೆಕ್ ವಿತರಣೆ
    ಕಲಘಟಗಿ: ತಾಲೂಕಿನ ಗಂಜಿಗಟ್ಟಿ ಗ್ರಾಮದ ಹಿರೇಕೆರೆಯ ನೀರಿನಲ್ಲಿ ತೇಲಿ ಹೋಗಿ ಮೃತಪಟ್ಟ ಬಾಲಕಿ ಶ್ರೀದೇವಿ ಮನೆಗೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಶಾಸಕ ಸಿ.ಎಂ. ನಿಂಬಣ್ಣವರ, ಜಿಲ್ಲಾಧಿಕಾರಿ ನಿತೇಶ ಪಾಟೀಲ ಭೇಟಿ ನೀಡಿದರು. ಈ ವೇಳೆ ಕುಟುಂಬದವರಿಗೆ ರಾಷ್ಟ್ರೀಯ ವಿಪತ್ತು ನಿರ್ವಹಣೆ ನಿಧಿಯಿಂದ 4 ಲಕ್ಷ ರೂ. ಹಾಗೂ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ 1 ಲಕ್ಷ ಸೇರಿ ಒಟ್ಟು 5 ಲಕ್ಷ ರೂ.ಗಳ ಪರಿಹಾರಧನ ಚೆಕ್ ಅನ್ನು ವಿತರಿಸಲಾಯಿತು. ಬಿಜೆಪಿ ಗ್ರಾಮಾಂತರ ಜಿಲ್ಲಾಧ್ಯಕ್ಷ ಬಸವರಾಜ ಕುಂದಗೋಳಮಠ, ತಾಲೂಕು ಅಧ್ಯಕ್ಷ ಬಸವರಾಜ ಶೆರೆವಾಡ, ತಾ.ಪಂ. ಅಧ್ಯಕ್ಷೆ ಸುನೀತಾ ಮ್ಯಾಗಿನಮನಿ, ವಿ.ಎಸ್. ಪಾಟೀಲ, ಭೀಮಣ್ಣ ಗಾಣಿಗೇರ, ಅಧಿಕಾರಿಗಳು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts