More

    ತೆರಿಗೆ ಸಂಗ್ರಹಣೆಯಲ್ಲಿ ಮೋಸ ; ಅಧಿಕಾರಿಗಳಿಗೆ ಶಾಸಕ ನಾಗೇಶ್ ಕ್ಲಾಸ್

    ತಿಪಟೂರು: ಎಪಿಎಂಸಿ ಮಾರುಕಟ್ಟೆಯಲ್ಲಿ ಸಂಗ್ರಹವಾದ ಜಿಎಸ್‌ಟಿ ತೆರಿಗೆಯಲ್ಲಿ ಮೋಸ, ಕುಡಿವ ನೀರಿನ ಘಟಕಗಳ ನಿರ್ವಹಣೆ ಸೇರಿ ಇನ್ನಿತರ ವಿಷಯಗಳು ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ಶಾಸಕ ಬಿ.ಸಿ.ನಾಗೇಶ್ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಚರ್ಚೆಗೆ ಗ್ರಾಸವಾದವು.

    ಪಟ್ಟಭದ್ರರ ಕಪಿಮುಷ್ಠಿಯಲ್ಲಿರುವ ತಾಲೂಕು ಸಹಕಾರಿ ಇಲಾಖೆ ಮತ್ತು ಡಿಸಿಸಿ ಬ್ಯಾಂಕ್ ಉಳ್ಳವರ ಹಿತಾಸಕ್ತಿ ಕಾಪಾಡುವಲ್ಲಿ ನಿರತವಾಗಿದ್ದು, 3 ದಿನಗಳ ಒಳಗೆ ಲೆಕ್ಕಪತ್ರ ಒಪ್ಪಿಸಬೇಕೆಂದು ಶಾಸಕ ನಾಗೇಶ್ ಅಧಿಕಾರಿಗಳಿಗೆ ಎಚ್ಚರಿಸಿದರು.

    6 ವರ್ಷಗಳಿಂದ ಬೆನ್ನಾಯಕನಹಳ್ಳಿ ಕೃಷಿ ಸಹಕಾರಿ ಸಂಘ ಸೇರಿ ಇತರೆ ಹಲವು ಸಂಘಗಳು ವಾರ್ಷಿಕ ಲೆಕ್ಕ ಪರಿಶೀಲನೆಗೆ ಒಳಪಡದಿದ್ದರೂ ಕ್ರಮ ಕೈಗೊಂಡಿಲ್ಲ, ಕಾರ್ಯದರ್ಶಿ ಸರ್ಕಾರಿ ದಾಖಲೆಗಳನ್ನು ಮನೆಗೆ ಕೊಂಡೊಯ್ದಿದ್ದರೂ ಏಕೆ ಸುಮ್ಮನಿದ್ದೀರಿ? ಅವರ ವಿರುದ್ಧ ಇಲಾಖೆ ಕ್ರಮ ಏಕೆ ಜರುಗಿಸಿಲ್ಲ. ಆಡಿಟ್ ಆಗಿಲ್ಲದ ಸೊಸೈಟಿಗಳನ್ನು ಏಕೆ ಸೂಪರ್‌ಸೀಡ್ ಮಾಡಿಲ್ಲ ಎಂದು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

    ಎಪಿಎಂಸಿ ಮಾರುಕಟ್ಟೆಯಲ್ಲಿ ಸಂಗ್ರಹವಾಗುತ್ತಿರುವ ಜಿಎಸ್‌ಟಿ ತೆರಿಗೆಗೂ, ಸಂಗ್ರಹಿಸಲಾಗಿರುವ ಸೆಸ್‌ಗೂ ಲೆಕ್ಕ ತಾಳೆಯಾಗುತ್ತಿಲ್ಲ ಎಂದು ವಾಣಿಜ್ಯ ತೆರಿಗೆ ಇಲಾಖೆಯ ಅಧಿಕಾರಿ ಸಭೆಗೆ ಮಾಹಿತಿ ನೀಡಿದ್ದನ್ನು ಗಂಭೀರವಾಗಿ ಪರಿಗಣಿಸಿದ ಶಾಸಕರು, ಸೆಸ್ ಕಟ್ಟದೇ ಜಿಎಸ್‌ಟಿ ಪಾವತಿಸಿದರೆ ಸಾಲದು, ಇತ್ತೀಚೆಗೆ ಜಾರಿಯಾಗಿರುವ ಇ-ವೇ-ಬಿಲ್‌ಮೂಲಕ ರವಾನೆಯಾಗಿರುವ ಕೊಬ್ಬರಿ ಪ್ರಮಾಣ, ವರ್ತಕ ಖರೀದಿಸಿರುವ ಕೊಬ್ಬರಿ ಪ್ರಮಾಣ ಮತ್ತು ಇ-ವೇ-ಬಿಲ್ ಅನ್ನು ಹಿಂಪಡೆದಿರುವ ಬಗ್ಗೆ ಸಮಗ್ರ ತನಿಖೆ ಮಾಡಿ ವರದಿ ನೀಡಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.

    ತಾಲೂಕಿನಲ್ಲಿ ಕೆಟ್ಟು ನಿಂತಿರುವ 16 ಕುಡಿವ ನೀರಿನ ಘಟಕಗಳ ನಿರ್ವಹಣೆ ಜವಾಬ್ದಾರಿ 5 ವರ್ಷಗಳವರೆಗೂ ಗುತ್ತಿಗೆದಾರನದ್ದು, ಆದರೆ 6 ಲಕ್ಷ ಬೆಲೆಯ ಘಟಕಕ್ಕೆ 12 ಲಕ್ಷ ರೂಪಾಯಿ ನಮೂದಿಸಿ ಶೇ.80 ಹಣ ಪಡೆದಿರುವ ಗುತ್ತಿಗೆದಾರ ಪುನಃ ಇತ್ತ ತಿರುಗಿ ನೋಡಲ್ಲ. ಅಂತಹವರನ್ನು ಕಪ್ಪುಪಟ್ಟಿಗೆ ಸೇರಿಸಿದರೆ ಸಾಲದು, ಅವರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಿ ಎಂದು ಸೂಚಿಸಿದ ಶಾಸಕರು, ತಾಲೂಕಿನಲ್ಲಿರುವ 58 ಕುಡಿವ ನೀರಿನ ಕೆರೆಗಳ ಪೈಕಿ 18 ಕೆರೆಗಳು ಸಂಕಷ್ಟದಲ್ಲಿವೆ. ಈಗಾಗಲೇ 4 ಹಳ್ಳಿಗಳಲ್ಲಿ ತೀವ್ರ ಸಮಸ್ಯೆ ತಲೆದೋರಿದೆ ಬೇಸಿಗೆ ಎದುರಿಸಲು ಸಿದ್ಧರಾಗಿ ಎಂದರು.

    ತಾಪಂ ಅಧ್ಯಕ್ಷ ಜಿ.ಎಸ್.ಶಿವಸ್ವಾಮಿ, ಉಪಾಧ್ಯಕ್ಷ ಎನ್.ಶಂಕರ್, ಸ್ಥಾಯಿ ಸಮಿತಿ ಅಧ್ಯಕ್ಷೆ ಜಯಂತಿ ಕುಮಾರ್, ತಹಸೀಲ್ದಾರ್ ಬಿ.ಆರತಿ. ಇಒ ಸುದರ್ಶನ್ ಸೇರಿ ಇಲಾಖೆ ಅಧಿಕಾರಿಗಳು ಇದ್ದರು.

    ಕೋಟಿಗಟ್ಟಲೆ ವಹಿವಾಟು ನಡೆಸಿ ಕೇವಲ ಜಿಎಸ್‌ಟಿ ನೀಡಿದರೆ ಸಾಲದು, ಎಪಿಎಂಸಿಗೆ ಸಲ್ಲಬೇಕಾದ ಸೆಸ್ ಅನ್ನೂ ಕಡ್ಡಾಯವಾಗಿ ಪಾವತಿಸಬೇಕು. ಮಣ್ಣು, ಗಾರೆ ಕೆಲಸ ಮಾಡುವವರ ಹೆಸರಿನಲ್ಲಿ ಸುಲಭವಾಗಿ ಸಿಗುವ ಜಿಎಸ್‌ಟಿ ನಂಬರ್ ಪಡೆದು ಕೆಲವರು ತೆರಿಗೆ ಮತ್ತು ಸೆಸ್ ಕಟ್ಟದೇ ವಂಚಿಸುತ್ತಿದ್ದಾರೆ. ಗಾರೆ ಕೆಲಸ ಮಾಡುವವನ ಹೆಸರಿಗೆ ಲಕ್ಷಾಂತರ ತೆರಿಗೆ ಬಾಕಿಯ ನೋಟಿಸ್ ಬಂದಿದೆ. ಇತ್ತೀಚೆಗೆ ರದ್ದುಪಡಿಸಿಕೊಂಡಿರುವ ಟ್ರೇಡ್ ಲೈಸೆನ್ಸ್
    ದಾರರ ವಿವರ ಸಂಗ್ರಹಿಸಿ.
    ಬಿ.ಸಿ.ನಾಗೇಶ್ ಶಾಸಕ

    ಡಿಸಿಸಿ ಬ್ಯಾಂಕ್‌ನಲ್ಲಿ ತಮಗೆ ಬೇಡವಾದವರಿಗೆ ಸಾಲ ನೀಡುವುದಿಲ್ಲ. ಕೆಲವರಿಂದ ಸೆಲ್ಫ್‌ಚೆಕ್ ಪಡೆದು ಸಾಲ ನೀಡಿ, ನಂತರ ಹೊಂದಾಣಿಕೆ ಮಾಡಿಕೊಳ್ಳುವ ಜಾಲ ಈಗಲೂ ಮುಂದುವರಿದಿದೆ.
    ರಾಜು, ಸಹಕಾರ ಸಂಘಗಳ ಸಹಾಯಕ ನಿಬಂಧಕ ತಿಪಟೂರು ಉಪ-ವಿಭಾಗ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts