More

    ತೆರಿಗೆ ಏರಿಸದೆ ಬಜೆಟ್ ಮಂಡನೆ

    ಮೇಯರ್ ಶೋಭಾ ಸೋಮನಾಚೆ ಅಧ್ಯಕ್ಷತೆ | 484.15 ಕೋಟಿ ರೂ.ಆಯ-ವ್ಯಯ

    ಬೆಳಗಾವಿ: ಗಡಿಭಾಗದ ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಪ್ರಪ್ರಥಮ ಬಾರಿಗೆ ಬಿಜೆಪಿ ಚಿಹ್ನೆ ಅಡಿಯಲ್ಲಿ ಗೆದ್ದಿರುವ ಮೇಯರ್ ಅವರು ಯಾವುದೇ ತೆರಿಗೆ ಏರಿಕೆ ಮಾಡದೇ 2023-24ನೇ ಸಾಲಿನಲ್ಲಿ 5.82 ಲಕ್ಷ ರೂ. ಉಳಿತಾಯ ಬಜೆಟ್ ಮಂಡನೆ ಮಾಡುವ ಮೂಲಕ ಹೊಸ ಇತಿಹಾಸ ನಿರ್ಮಿಸಿದ್ದಾರೆ.

    ಇಲ್ಲಿನ ಮಹಾನಗರ ಪಾಲಿಕೆ ಸಭಾಂಗಣದಲ್ಲಿ ಸೋಮವಾರ ಕರೆದಿದ್ದ ವಿಶೇಷ ಪರಿಷತ್ ಸಭೆಯಲ್ಲಿ ಮೇಯರ್ ಶೋಭಾ ಸೋಮನಾಚೆ ಅವರು 484.15 ಕೋಟಿ ರೂ.ಬಜೆಟ್ ಮಂಡಿಸಿದರು. ಅಲ್ಲದೆ, ವಾರ್ಷಿಕ ಸಿಬ್ಬಂದಿ ವೇತನ, ಕಚೇರಿಗಳ ನಿರ್ವಹಣೆ, ವಿವಿಧ ಅಭಿವೃದ್ಧಿಗಾಗಿ ವಾರ್ಷಿಕ ಒಟ್ಟು 484.40 ಕೋಟಿ ರೂ. ವೆಚ್ಚವಾಗಲಿದೆ. 2023-24ನೇ ಸಾಲಿನ ಅವಧಿಯಲ್ಲಿ ವಿವಿಧ ಮೂಲಗಳಿಂದ 484.15 ಕೋಟಿ ಆದಾಯ ನಿರೀಕ್ಷೆ ಹಾಕಿಕೊಂಡಿದೆ.

    2023-24ನೇ ಸಾಲಿನ ಅಮೃತ-2.0 ಯೋಜನೆ ಅಡಿಯಲ್ಲಿ 25.10 ಕೋಟಿ ರೂ. ಅನುದಾನ ಬಳಕೆಗೆ ಅವಕಾಶ ಕಲ್ಪಿಸಿದೆ. ಕೆರೆಗಳ ಪುನರುಜ್ಜೀವನಕ್ಕಾಗಿ 20 ಕೋಟಿ ರೂ., ನಗರದ ಉದ್ಯಾನ ಮತ್ತು ಹಸಿರೀಕರಣಕ್ಕಾಗಿ 5.10 ಕೋಟಿ ರೂ.ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲು ಸರ್ಕಾರಕ್ಕೆ ಕ್ರಿಯಾ ಯೋಜನೆ ಸಲ್ಲಿಸಲಾಗಿದೆ. ಕಚೇರಿಗಳ ಸುಧಾರಣೆ, ಪೀಠೋಪಕರಣಕ್ಕಾಗಿ 2 ಕೋಟಿ ರೂ., ಸರ್ಕಾರಿ ನಿಯಮಾವಳಿಯ ಪ್ರಕಾರ ಪರಿಸರ ಸ್ನೇಹಿ ಕಟ್ಟಡಗಳಿಗೆ ಆಸ್ತಿ ತೆರಿಗೆಯಲ್ಲಿ ವಿನಾಯಿತಿ ಹಾಗೂ ಸ್ವಾತಂತ್ರೃಯೋಧರಿಗೆ ಶೇ.10 ರಿಯಾಯಿತಿ ಮುಂದುವರಿಸಿದೆ. ನಗರ ಸಾರಿಗೆ ಉಪಕರ, ಆರೋಗ್ಯ ಕರ, ಶಿಕ್ಷಣ ಕರ, ಭಿಕ್ಷುಕ ಕರ, ವಾಚನಾಲಯ ಕರದಲ್ಲಿ ವಸೂಲಿಯಾಗಿರುವ ಮೊತ್ತದಲ್ಲಿ ಸರ್ಕಾರಕ್ಕೆ ನೀಡಿದ ಬಳಿಕ ಶೇ.10 ಆದಾಯ ನಿರೀಕ್ಷೆ ಹಾಕಿಕೊಂಡಿರುವುದು ವಿಶೇಷ.

    255 ಪೌರ ಕಾರ್ಮಿಕರ ಕಾಯಂ: ಪಾಲಿಕೆಯಲ್ಲಿ ನೇರ ಹಾಗೂ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವ 255 ಪೌರ ಕಾರ್ಮಿಕರ ಸೇವೆ ಕಾಯಂಗೊಳಿಸಲಾಗುವುದು. ಎಸ್‌ಎಫ್‌ಸಿ, ಪಾಲಿಕೆ ನಿಧಿ ಹಾಗೂ ಮಹಾತ್ಮ ಗಾಂಧಿ ನಗರ ವಿಕಾಸ ಯೋಜನೆ ಅನುದಾನದಡಿ ಪೌರ ಕಾರ್ಮಿಕರಿಗೆ ದ್ವಿಚಕ್ರ ವಾಹನಗಳ ಖರೀದಿಗೆ 68 ಲಕ್ಷ ರೂ., ಉಪಾಹಾರ ಭತ್ಯೆಗಾಗಿ 40 ಲಕ್ಷ ರೂ, ಆರೋಗ್ಯ ವಿಮೆಗಾಗಿ 40 ಲಕ್ಷ ರೂ., ಆರೋಗ್ಯ ತಪಾಸಣೆಗಾಗಿ 30 ಲಕ್ಷ ರೂ., ಮಕ್ಕಳ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ನೀಡಲು 20 ಲಕ್ಷ ರೂ. ಮೀಸಲಿಡಲಾಗಿದೆ ಎಂದು ಪಾಲಿಕೆ ಆಯುಕ್ತ ಡಾ.ರುದ್ರೇಶ ಘಾಳಿ ಸಭೆಗೆ ವಿವರಿಸಿದರು.

    62 ಕೋಟಿ ರೂ. ಆಸ್ತಿ ಕರ ಸಂಗ್ರಹ ಗುರಿ: 2023-24 ನೇ ಸಾಲಿಗೆ 62 ಕೋಟಿ ರೂ. ಲಕ್ಷ ಆಸ್ತಿ ತೆರಿಗೆ ಸಂಗ್ರಹಿಸುವ ಗುರಿ ಹಾಕಿಕೊಂಡಿದೆ. ಆಸ್ತಿ ತೆರಿಗೆ ಮೇಲೆ ವಿಳಂಬ ನೀತಿ ಅನುಸರಿಸುವವರಿಂದ ದಂಡ ರೂಪದಲ್ಲಿ ರೂ.3.25 ಕೋಟಿ ರೂ. ದಂಡ, ಸ್ಥಿರಾಸ್ತಿಗಳ ವರ್ಗಾವಣೆ ಶುಲ್ಕ ನೋಂದಣಿ ಇಲಾಖೆಯಿಂದ 1.10 ಕೋಟಿ ರೂ. ಪಾಲಿಕೆಗೆ ಅಭಿವೃದ್ಧಿ ಶುಲ್ಕದಿಂದ 8.60 ಕೋಟಿ ರೂ. ಮೂಲ ಸೌಕರ್ಯದ ಬೆಟರಮೆಂಟ್ ಶುಲ್ಕದಿಂದ 51.36 ಲಕ್ಷ ರೂ. ಕಟ್ಟಡ ಅವಶೇಷ ನಿರ್ಮೂಲನೆಗಳಿಂದ 2.26 ಕೋಟಿ ರೂ., ಕಟ್ಟಡ ಪರವಾನಗಿಯಿಂದ 3.27 ಕೋಟಿ ರೂ. ಹೆಸ್ಕಾಂನಿಂದ ಅಳವಡಿಸಿರುವ ಭೂಗತ ಕೇಬಲ್ ಸಂಪರ್ಕದಿಂದ 17 ಕೋಟಿ ರೂ. ಉದ್ದಿಮೆ ಪರವಾನಿಗೆ ಶುಲ್ಕವಾಗಿ 2 ಕೋಟಿ ರೂ. ವಾಹನ ನಿಲುಗಡೆ ಶುಲ್ಕ 40 ಲಕ್ಷ ರೂ. ಪಾಲಿಕೆಯ ವ್ಯಾಪ್ತಿಯಲ್ಲಿರುವ 40 ಖಾಲಿ ನಿವೇಶನಗಳ ಮಾರಾಟದಿಂದ 20 ಕೋಟಿ ರೂ. ಇತರ ಮೂಲಗಳಿಂದ 17.55 ಕೋಟಿ ರೂ.

    ನಿರ್ವಹಣಾ ವೆಚ್ಚದ ವಿವರಗಳು: ಸ್ವಚ್ಛ ಬೆಳಗಾವಿ ಘನತ್ಯಾಜ್ಯ ವಿಲೇವಾರಿಗಾಗಿ 26 ಕೋಟಿ ರೂ. ಘನತ್ಯಾಜ್ಯ ನಿರ್ವಹಣೆ ಸ್ವಚ್ಛತಾ ಕಾರ್ಮಿಕರಿಗೆ 20 ಕೋಟಿ ರೂ.ವೆಚ್ಚ ವೈಜ್ಞಾನಿಕ ಘನತ್ಯಾಜ್ಯ ವಿಲೇವಾರಿಗೆ 4 ಕೋಟಿ ರೂ. ಸಾಂಕ್ರಾಮಿಕ ರೋಗ ತಡೆಗಟ್ಟಲು 50 ಲಕ್ಷ ರೂ. ಹೊಸ ಶೌಚಗೃಹ ನಿರ್ಮಾಣ, ಇ-ಶೌಚಗೃಹ ನಿರ್ವಹಣೆಗಾಗಿ 25 ಲಕ್ಷ ರೂ. ಬೀದಿನಾಯಿ ನಿರ್ವಹಣೆಗಾಗಿ 1 ಕೋಟಿ ರೂ. ರಸ್ತೆ, ಒಳಚರಂಡಿ, ಪಾದಚಾರಿ, ಮಳೆ ನೀರು ನಿರ್ವಹಣೆಗಾಗಿ 10 ಕೋಟಿ ರೂ. ಬೀದಿ ದೀಪ ನಿರ್ವಹಣೆಗಾಗಿ 2.50 ಕೋಟಿ ರೂ. ನಗರದ ತುಂಬ 35,000 ಎಲ್‌ಇಡಿ ಬಲ್ಬ್ ಅಳವಡಿಕೆ ಒಳಚರಂಡಿ ನಿರ್ವಹಣೆಗೆ 2 ವಾಹನ ಖರೀದಿಗೆ 1 ಕೋಟಿ ರೂ. ವಿವಿಧ ಸ್ಮಶಾನ ನಿರ್ವಹಣೆ, ಪರಿಸರ ಸ್ನೇಹಿ ದಹನ ಕ್ರಿಯೆ ನಡೆಸಲು 60 ಲಕ್ಷ ರೂ. ಶವ ಸಾಗಿಸುವ ವಾಹನಗಳ ನಿರ್ವಹಣೆಗಾಗಿ 15 ಲಕ್ಷ ರೂ. ಕ್ರೀಡಾ ಚಟುವಟಿಕೆಗಳಿಗೆ 27.43 ಲಕ್ಷ ರೂ. ನಗರದಲ್ಲಿ ಗೋಡೆಗಳ ಮೇಲೆ ದೊಡ್ಡ ಗಾತ್ರದ ಗಿಡಗಳ ಚಿತ್ರ ಬಿಡಿಸುವುದಕ್ಕಾಗಿ 25 ಲಕ್ಷ ರೂ. ಪಾಲಿಕೆ ಸದಸ್ಯರ ಅಧ್ಯಯನ ಪ್ರವಾಸಕ್ಕಾಗಿ 15 ಲಕ್ಷ ರೂ. ಪಾಲಿಕೆ 58 ವಾರ್ಡ್‌ಗಳಲ್ಲಿ ಮೂಲ ಸೌಕರ್ಯಕ್ಕಾಗಿ 9.50 ಕೋಟಿ ರೂ. ಅಂಗವಿಕಲರ ಕಲ್ಯಾಣ ಅಭಿವೃದ್ಧಿಗಾಗಿ 1.37 ಕೋಟಿ ರೂ. ಮಹಿಳೆಯರ ಆರ್ಥಿಕ ಸ್ವಾವಲಂಬನೆಗಾಗಿ 50 ಲಕ್ಷ ರೂ. ವಸತಿ ರಹಿತ ನಿರಾಶ್ರಿತ ಮಹಿಳೆಯರಿಗಾಗಿ 50 ಲಕ್ಷ ರೂ. ಪತ್ರಕರ್ತರ ಕ್ಷೇಮನಿಧಿಗಾಗಿ 35 ಲಕ್ಷ ರೂ.

    ಸರ್ಕಾರದಿಂದ ಬರುವ ಅಂದಾಜು ಅನುದಾನ: ಮಹಾನಗರ ಪಾಲಿಕೆ ಬೆಳಗಾವಿಗೆ ಸಿಬ್ಬಂದಿ ಮಾಸಿಕ ವೇತನ , ಖರ್ಚು ವೆಚ್ಚಕ್ಕಾಗಿ ರಾಜ್ಯ ಸರ್ಕಾರದಿಂದ ಬಿಡುಗಡೆಯಾಗುವ ಎಸ್.ಎಫ್.ಸಿ ವೇತನ ಅನುದಾನ 77.54 ಕೋಟಿ ರೂ. ನಿರೀಕ್ಷೆ.
    ರಾಜ್ಯ ಸರ್ಕಾರದಿಂದ ಬಿಡುಗಡೆಯಾಗುವ ಎಸ್.ಎಫ್.ಸಿ ಬೀದಿ ದೀಪಗಳ ಹಾಗೂ ನೀರು ಸರಬರಾಜು ವಿದ್ಯುತ್‌ಶಕ್ತಿ ಬಿಲ್ ಅನುದಾನ 66.90 ಕೋಟಿ ರೂ.
    ಮಹಾನಗರ ಪಾಲಿಕೆ ಬೆಳಗಾವಿಗೆ ಅಭಿವೃಧ್ದಿಗಾಗಿ ಎಸ್.ಎಫ್.ಸಿ ಮುಕ್ತ ನಿಧಿ 6.25 ಕೋಟಿ ರೂ.
    15ನೇ ಹಣಕಾಸು ಸಾಮಾನ್ಯ ಮೂಲ ಅನುದಾನದಡಿ ಇತರ ಕಾರ್ಯಕ್ರಮಗಳಿಗಾಗಿ 23.24 ಕೋಟಿ ರೂ.
    ಒಟ್ಟಾರೆ ಸ್ವೀಕೃತಿ 2023-24 ನೇ ಸಾಲಿಗಾಗಿ 48.14 ಆದಾಯ ನಿರೀಕ್ಷೆ ಹಾಕಿಕೊಂಡಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts