More

    ತೆರಿಗೆ ಇಲಾಖೆಯಲ್ಲೂ ಭ್ರಷ್ಟಾಚಾರ

    ಕಲಬುರಗಿ ಪಿಎಸ್ಐ ನೇಮಕ ಪರೀಕ್ಷೆ ಅಕ್ರಮ ಹಗರಣ ಚರ್ಚೆಯಲ್ಲಿರುವಾಗಲೇ ಸರ್ಕಾರದ ವಾಣಿಜ್ಯ ತೆರಿಗೆ ಇಲಾಖೆಯಲ್ಲಿ ಮತ್ತೊಂದು ಬ್ರಹ್ಮಾಂಡ ಭ್ರಷ್ಟಾಚಾರ ನಡೆದಿರುವುದು ಬಯಲಿಗೆ ಬಂದಿದೆ. ಕೆಲ ಉದ್ಯೋಗಿಗಳು ಸೇರಿ ವ್ಯಾಟ್ ತೆರಿಗೆ ಜಾರಿಯಲ್ಲಿದ್ದಾಗಲೇ ಕೋಟ್ಯಂತರ ರೂಪಾಯಿ ಕೊಳ್ಳೆ ಹೊಡೆದಿದ್ದಾರೆ.

    ವಾಣಿಜ್ಯ ತೆರಿಗೆ ಇಲಾಖೆ ವ್ಯಾಟ್ ಫಾರ್ಮ ನಂ.156 ಅನ್ನು ಕಲಬುರಗಿ ಕಚೇರಿಯ ಕೆಲ ಸಿಬ್ಬಂದಿ ಸೇರಿ ದುರ್ಬಳಕೆ ಮಾಡಿಕೊಂಡು ನಕಲಿ ಸಂಸ್ಥೆಗಳನ್ನು ಹುಟ್ಟು ಹಾಕಿ ಟಿಡಿಎಸ್ ಮೂಲಕ ಬರಬೇಕಿದ್ದ ಕೋಟಿ ಕೋಟಿ ಹಣ ಲೂಟಿ ಮಾಡಿದ್ದಾರೆ ಎಂಬ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ. ಈ ಬಗ್ಗೆ ವಾಣಿಜ್ಯ ತರಿಗೆ ಸಹಾಯಕ ಆಯುಕ್ತ ಮಹೇಶ ಇಲ್ಲಿನ ಸ್ಟೇಷನ್ ಬಜಾರ ಠಾಣೆಯಲ್ಲಿ ಎಫ್​ಐಆರ್ ದಾಖಲಿಸಿದ್ದಾರೆ.

    ಇಲಾಖೆ ಕಲಬುರಗಿ ಕಚೇರಿಯ ಎಫ್​ಡಿಎ ಪಂಢರಿನಾಥ, ಹೊರಗುತ್ತಿಗೆ ನೌಕರರಾದ ಮಹ್ಮದ್ ರಹೀಲ್, ಮಹ್ಮದ್ ಇರ್ಫಾನ್ ಹಾಗೂ ಜಲಮಂಡಳಿ ಎಇಇ ಕಚೇರಿ ನೌಕರ ಆಸೀಫ್​ ಸೇರಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ಹಣವನ್ನು ಸರ್ಕಾರದಿಂದ ನಕಲಿ ಖಾತೆಗಳಿಗೆ ಮರು ಪಾವತಿಸಿಕೊಂಡು ವಂಚಿಸಿದ್ದಾರೆ ಎಂದು ದೂರಲಾಗಿದೆ. ಕೋಟ್ಯಂತರ ಸರ್ಕಾರಿ ಹಣ ಲೂಟಿ ಮಾಡಿದವರು ಕೇಸ್ ದಾಖಲಾಗುತ್ತಲೇ ತಲೆಮರೆಸಿಕೊಂಡಿದ್ದಾರೆ.

    ಸದ್ಯದ ಮಾಹಿತಿ ಪ್ರಕಾರ ಅಂದಾಜು 2 ಕೋಟಿ ರೂ. ದುರ್ಬಳಕೆ ಆಗಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಅಲ್ಲದೆ ಈ ಹಿಂದೆ ಇಲ್ಲಿ ಕರ್ತವ್ಯನಿರ್ವಹಿಸಿದ ವಾಣಿಜ್ಯ ತೆರಿಗೆ ಇಲಾಖೆ ಸಹಾಯಕ ಆಯುಕ್ತರು ಇತರ ಅಕಾರಿಗಳು ಶಾಮೀಲಾಗಿರುವ ಶಂಕೆ ವ್ಯಕ್ತವಾಗಿದೆ.

    ಪಂಢರಿನಾಥ ಇತರರು ಸೇರಿ 2005ರಿಂದ 2017ರವರೆಗೆ ವ್ಯಾಟ್ ತೆರಿಗೆ ಪದ್ಧತಿ ಜಾರಿಯಲ್ಲಿದ್ದ ಅವಯಲ್ಲಿ ಫಾರ್ಮ ನಂ.156 ದುರ್ಬಳಕೆ ಮಾಡಿಕೊಂಡಿದ್ದಾರೆ. ಟಿಡಿಎಸ್ ಮೊತ್ತ ಮರಳಿ ಬರಬೇಕಿದ್ದ ಸಂಸ್ಥೆಗಳ ಹೆಸರಿನಲ್ಲಿ ನಕಲಿ ದಾಖಲೆ ಸೃಷ್ಟಿಸಿ ಅದೇ ಹೆಸರಿನಲ್ಲಿ ಮತ್ತೊಂದು ಬ್ಯಾಂಕ್ ಖಾತೆ ತೆರೆದು ಯಾರಿಗೂ ಗೊತ್ತಾಗದಂತೆ ಸರ್ಕಾರದ ಖಜಾನೆಯಿಂದ ವರ್ಗಾಯಿಸಿಕೊಂಡಿದ್ದಾರೆ. 200ಕ್ಕೂ ಹೆಚ್ಚಿನ ಫಾರ್ಮ ಗಳನ್ನು ದುರುಪಯೋಗ ಮಾಡಿಕೊಂಡಿರುವ ಸಂಶಯವಿದೆ.

    ಅಕ್ರಮಕೋರರು ಟಿಡಿಎಸ್ ಹಣ ಬರುವ ಸಂಸ್ಥೆಗಳ ಹೆಸರಿನಲ್ಲೇ ನಕಲಿ ದಾಖಲೆಗಳನ್ನು ಸೃಷ್ಟಿಸಿ ವಾಣಿಜ್ಯ ತೆರಿಗೆ ಇಲಾಖೆಗೆ ನೀಡಿದ್ದಾರೆ. ಅಲ್ಲದೆ ಅದೇ ನಕಲಿ ದಾಖಲೆಗಳನ್ನು ಬಳಸಿ ಬ್ಯಾಂಕ್ ಖಾತೆಗಳನ್ನು ತೆರೆದಿದ್ದಾರೆ. ಅದಕ್ಕಾಗಿ ಇಲ್ಲದ ವ್ಯಕ್ತಿಗಳನ್ನು ಸಹ ಹುಟ್ಟು ಹಾಕಿದ್ದಾರೆ ಎನ್ನಲಾಗಿದೆ.

    ಬೆಳಕಿಗೆ ಬಂದಿದ್ದು ಹೀಗೆ: ಮೇ ರಿದನಾಲ್ ವಾಟರ್ ಪ್ಯೂರಿಫೈಯರ್ ಸಂಸ್ಥೆ 2017ರಲ್ಲಿ ಮುಚ್ಚಿದೆ. ಆದರೆ ಈ ಸಂಸ್ಥೆ ಹೆಸರಲ್ಲಿ ಟಿಡಿಎಸ್ ರೀಫಂಡ್ ಮಾಡಿಕೊಳ್ಳಲು ಮುಂದಾದಾಗ ಪಂಢರಿನಾಥ, ಮಹ್ಮದ್ ರಹೀಲ್, ಮಹ್ಮದ್ ಇರ್ಫಾನ್ ಮತ್ತು ಆಸೀಫ್​ ಅವರ ಅಕ್ರಮ ಬಯಲಿಗೆ ಬಂದಿದೆ. ಇವರು ಬಂದ್ ಆಗಿದ್ದ ಸಂಸ್ಥೆ ಹೆಸರಿನಲ್ಲಿ 12.65 ಲಕ್ಷ ರೂ. ಮರು ಪಾವತಿಗೆ ಅರ್ಜಿ ಸಲ್ಲಿಸಿದ್ದರು. ಇದರಿಂದ ಸಂಶಯಗೊಂಡ ವಾಣಿಜ್ಯ ತೆರಿಗೆ ಇಲಾಖೆ ಜಂಟಿ ಆಯುಕ್ತರು, ಕಡತಕ್ಕೆ ಸಹಿ ಹಾಕುವ ಬದಲಿಗೆ ಅರ್ಜಿಯಲ್ಲಿ ನ್ಯೂನ್ಯತೆ ಕಂಡು ಬಂದಿದ್ದರಿಂದ ಪರಿಶೀಲಿಸಲು ಸೂಚಿಸಿದರು. ಆಂತರಿಕ ತಪಾಸಣೆ ನಡೆಸಿದಾಗ ಕೆಲವರು ಸೇರಿ ಇಲ್ಲದ ಸಂಸ್ಥೆ ಹೆಸರಿನಲ್ಲಿ ಅರ್ಜಿ ಸಲ್ಲಿರುವುದು ಬೆಳಕಿಗೆ ಬಂದಿದ್ದು, ತನಿಖೆ ನಡೆಸಿದರೆ ಇನ್ನಷ್ಟು ಅಕ್ರಮ ಬಯಲಿಗೆ ಬರುವ ಸಾಧ್ಯತೆ ಇದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts