More

    ತುಮುಲ್‌ನಲ್ಲೂ ಹಾಲಾಹಲ

    ಮಾರುತಿ ಪ್ರಸನ್ನ ಕುಮಾರ್ ಮಧುಗಿರಿ
    ಮಂಡ್ಯ ಹಾಲು ಒಕ್ಕೂಟ (ಮನ್‌ಮುಲ್)ದ ಹಗರಣ ಬಯಲಾದ ಬೆನ್ನಲ್ಲೇ ತುಮಕೂರು ಹಾಲು ಒಕ್ಕೂಟ (ತುಮುಲ್)ದಲ್ಲೂ ಹಗರಣವೊಂದು ಬೆಳಕಿಗೆ ಬಂದಿದೆ.
    ಹಾಲಿನ ಟ್ಯಾಂಕರ್‌ನಲ್ಲಿ 2300 ಲೀಟರ್ ನೀರಿನೊಂದಿಗೆ ಉಪ್ಪು ಬೆರೆಸಿ ಹಾಲು ಸರಬರಾಜು ಮಾಡಿ ರೈತರು ಮತ್ತು ಒಕ್ಕೂಟವನ್ನು ಯಾಮಾರಿಸಿರುವ ಪ್ರಕರಣ ಮಧುಗಿರಿ ತಾಲೂಕಿನಲ್ಲಿ ನಡೆದಿರುವುದಾಗಿ ತುಮುಲ್ ಮಾಜಿ ಅಧ್ಯಕ್ಷ ಬಿ.ನಾಗೇಶ್‌ಬಾಬು ಗಂಭೀರ ಆರೋಪ ಮಾಡಿರುವುದರಿಂದ ಇಂತಹದ್ದೊಂದು ಹಗರಣ ಬಯಲಾಗಿದೆ.
    ಏನಿದು ಪ್ರಕರಣ?: ತಾಲೂಕಿನ ಸುಮಾರು 7 ಬಿಎಂಸಿಗಳಿಂದ ಸರಾಸರಿ 18000 ಲೀಟರ್ ಪ್ರತಿದಿನ ತುಮುಲ್ ಡೇರಿಗೆ ಹಾಲು ಸರಬರಾಜು ಆಗುತ್ತಿದ್ದು, ಮೇ 17ರಂದು ಒಕ್ಕೂಟದ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದಾಗ ಈ ಹಗರಣ ಮೇಲ್ನೋಟಕ್ಕೆ ಕಂಡುಬಂದಿದೆ.
    ಬಿಎಂಸಿ ರೆಡ್ಡಿಹಳ್ಳಿ, ಬೇಡತ್ತೂರು, ಹನುಮಂತಪುರ, ನೇರಳೇಕೆರೆ, ಮಿಡಿಗೇಶಿ, ಕೊಟಗಾರಹಳ್ಳಿ ಹಾಗೂ ದಬ್ಬೆಘಟ್ಟ ಮೂಲಕ ಒಕ್ಕೂಟಕ್ಕೆ ಹಾಲು ಸರಬರಾಜು ಆಗಲಿದ್ದು, ಕೆಎ 51 ಎಎಚ್ 3341 ವಾಹನವನ್ನು ನೀಲಿಹಳ್ಳಿ ಹತ್ತಿರ ಪರಿಶೀಲಿಸಲು ತಡೆದಾಗ ಲಾರಿ ಬಿಟ್ಟು ಚಾಲಕ ಓಡಿಹೋಗಿದ್ದಾನೆ. ಈ ಸಂದರ್ಭದಲ್ಲಿ ಅಧಿಕಾರಿಗಳು ಹಾಲಿನ ಟ್ಯಾಂಕರ್ ಪರಿಶೀಲಿಸಿದಾಗ ರೆಡ್ಡಿಹಳ್ಳಿಯಿಂದ 3 ಸಾವಿರ, ಬೇಡತ್ತೂರಿನಿಂದ 2 ಸಾವಿರ ಮತ್ತು ಹನುಮಂತಪುರ ಗ್ರಾಮದಲ್ಲಿ 2 ಸಾವಿರ ಹಾಲು ಸೇರಿ ಒಟ್ಟು 7 ಸಾವಿರ ಲೀಟರ್ ಹಾಲು ಇರಬೇಕಿತ್ತು. ಆದರೆ, ಟ್ಯಾಂಕರ್‌ನಲ್ಲಿ 9300 ಲೀಟರ್ ಹಾಲು ಇತ್ತು. ಹೆಚ್ಚುವರಿ 2300 ಲೀಟರ್ ನೀರನ್ನು ಮೊದಲೇ ಟ್ಯಾಂಕರ್‌ನಲ್ಲಿ ತುಂಬಿಕೊಂಡು ನಂತರ ಗ್ರಾಮಗಳಿಗೆ ತೆರಳಿ ಹಾಲು ಶೇಖರಿಸಿರುವುದು ಕಂಡುಬಂದಿದೆ. ಇದರಲ್ಲಿ ನೀರಿನ ಜತೆಗೆ 6.5 ಕೆಜಿ ಉಪ್ಪು, ಬೆರೆಸಿದ್ದಾರೆಂದು ಅಧಿಕಾರಿಗಳು ವರದಿ ನೀಡಿದ್ದು, 2 ಲಾರಿಗಳನ್ನು ವಶಕ್ಕೆ ಪಡೆಯಲಾಗಿದೆ. ವಿಪರ್ಯಾಸವೆಂದರೆ ಎರಡೂ ವಾಹನಗಳು ಒಕ್ಕೂಟದಲ್ಲಿ ಟೆಂಡರ್ ಆಗಿದ್ದು, ಈ ಟೆಂಡರ್ ಅನ್ನು ಮಂಡ್ಯ ಮೂಲದವರೇ ಪಡೆದಿರುವುದು ಮತ್ತಷ್ಟು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ.
    ಖಾಸಗಿ ಡೇರಿಗೆ ಸರಬರಾಜು..?: ಈ ಮಧ್ಯೆ ಮಿಡಿಗೇಶಿಯ ಬಿಎಂಸಿಯಲ್ಲಿ ಮೇ 17ರಂದು ಬೇರೆ ನಂಬರಿನ ವಾಹನವು (ವಾಹನ ಸಂಖ್ಯೆ:2580) ಸುಮಾರು 2300 ಲೀಟರ್ ಹಾಲನ್ನು ಬಿಎಂಸಿಯಿಂದ ತುಂಬಿಸಿ ಪ್ರೈವೇಟ್ ಡೇರಿಗೆ ಕಳುಹಿಸಿರುವುದಾಗಿ ವರದಿ ನೀಡಿದ್ದು, ಈ ರೀತಿಯ ಘಟನೆಗಳು ಕಳೆದ 6 ತಿಂಗಳಿಂದ ಮಧುಗಿರಿ ತಾಲೂಕಿನಲ್ಲಿ ನಡೆಯುತ್ತಿದ್ದು, ಒಂದು ಲೀಟರ್ ಹಾಲಿಗೆ ಒಕ್ಕೂಟ 32 ರೂಪಾಯಿ ನಿಗದಿಗೊಳಿಸಿದೆ. ಹಾಲಿನ ಗುಣಮಟ್ಟ ಕಡಿಮೆ ತೋರಿಸಿ ರೈತರು ಮತ್ತು ಸಂಘಗಳನ್ನು ಯಾಮಾರಿಸಿದ್ದು, ಇದರಿಂದ ಕಳೆದ 6 ತಿಂಗಳಲ್ಲಿ ರೈತರಿಗೆ ಸುಮಾರು 1.5 ಕೋಟಿ ರೂಪಾಯಿ ನಷ್ಟ ಸಂಭವಿಸಿದೆ. ಸರ್ಕಾರದ ಉನ್ನತ ಮಟ್ಟದ ತನಿಖಾ ಸಂಸ್ಥೆಗಳಿಂದ ಪಾರದರ್ಶಕ ತನಿಖೆ ನಡೆಸಿದಾಗ ಸತ್ಯಾಂಶ ಹೊರಬರಲಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂಬುದು ತುಮುಲ್ ಮಾಜಿ ಅಧ್ಯಕ್ಷ ಬಿ.ನಾಗೇಶ್‌ಬಾಬು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದ್ದಾರೆ.
    ರೈತರಿಗೂ ನಷ್ಟ: ಒಕ್ಕೂಟವು ಹಾಲಿನ ಗುಣಮಟ್ಟಕ್ಕೆ 8.5 ಎಸ್‌ಎನ್‌ಎಫ್ ನಿಗದಿಗೊಳಿಸಿದ್ದು, 8.5ಕ್ಕಿಂತ ಕಮ್ಮಿ ಬಂದರೆ 6 ಲೀಟರ್‌ಗೆ 6 ರೂ.,ಗಳ ಸಬ್ಸಿಡಿ ಬರುವುದಿಲ್ಲ. ಪ್ರತಿದಿನ ಸುಮಾರು 170 ಸಂಘಗಳಲ್ಲಿ 30 ಸಂಘಗಳನ್ನು ಹೊರತುಪಡಿಸಿ ಎಲ್ಲ ಸಂಘಗಳಿಗೆ ಪೆನಾಲ್ಟಿ ಹೆಸರಿನಲ್ಲಿ ಒಕ್ಕೂಟದಿಂದ 1 ರೂಪಾಯಿ ಕಡಿತ ಹಾಗೂ ಸರ್ಕಾರದಿಂದ ಬರುವ 5 ರೂಪಾಯಿ ಪ್ರೋತ್ಸಾಹಧನ ಕಡಿತಮಾಡಲಾಗುತ್ತಿದೆ. ಸುಮಾರು 5-6 ತಿಂಗಳುಗಳಿಂದ ರೈತರಿಗೆ ಮತ್ತು ಸಂಘಗಳಿಗೆ ಸುಮಾರು 1.5 ಕೋಟಿ ರೂಪಾಯಿ ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ.
    ಹಾಲಿನ ಗುಣಮಟ್ಟ ಕಡಿಮೆ ಇದ್ದಿದ್ದರಿಂದ ಉಪ್ಪು ಬೆರೆಸಲು ಟ್ಯಾಂಕರ್ ಕ್ಯಾಬಿನ್‌ನಲ್ಲಿ ಇಟ್ಟುಕೊಂಡಿದ್ದ ಉಪ್ಪಿನ ಪ್ಯಾಕೆಟ್‌ಗಳು ಪರಿಶೀಲನೆ ವೇಳೆ ಕಂಡುಬಂದಿದೆ. ಈ ಸಂಬಂಧ ಮಧುಗಿರಿಯಲ್ಲಿ ಟ್ಯಾಂಕರ್ ವಶಕ್ಕೆ ಪಡೆಯಲಾಗಿದೆ. ಅಲ್ಲದೆ, ಅದೇ ಮಾಲೀಕರ ಮತ್ತೊಂದು ವಾಹನವನ್ನು ವಶಕ್ಕೆ ಪಡೆದಿದ್ದು ತನಿಖೆಗೆ ತಂಡ ರಚಿಸಲಾಗಿದೆ. ಒಕ್ಕೂಟಕ್ಕೆ ಆಗಿರುವ ನಷ್ಟವನ್ನು ಲಾರಿ ಮಾಲೀಕರಿಂದಲೇ ಭರಿಸಲು ಕ್ರಮವಹಿಸಲಾಗಿದೆ.
    ಸಿ.ವಿ.ಮಹಲಿಂಗಯ್ಯ ತುಮುಲ್ ಅಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts