More

    ತುಂಬಿ ಹರಿದ ಚೌಥನಿ ಹೊಳೆ

    ಕಾರವಾರ/ಭಟ್ಕಳ: ಶನಿವಾರ ರಾತ್ರಿಯಿಂದ ಸುರಿದ ಭಾರಿ ಮಳೆಗೆ ಭಟ್ಕಳದ ಕೆಲ ಪ್ರದೇಶಗಳು ಜಲಾವೃತವಾಗಿವೆ. ಭಾನುವಾರ ಬೆಳಗಿನ ವರದಿಯಂತೆ ಹಿಂದಿನ 24 ಗಂಟೆಗಳ ಅವಧಿಯಲ್ಲಿ ಭಟ್ಕಳ ತಾಲೂಕಿನಲ್ಲಿ 209 ಮಿಮೀ ಮಳೆ ಸುರಿದಿತ್ತು. ಇದರಿಂದ ಚೌಥನಿ ಹೊಳೆ ತುಂಬಿ ಹರಿಯಿತು. ಮೂಡ ಭಟ್ಕಳ, ಪುರವರ್ಗ, ಮುಂಡಳ್ಳಿ ಸೇರಿ ವಿವಿಧ ಗ್ರಾಮಗಳಲ್ಲಿ 100ಕ್ಕೂ ಅಧಿಕ ಮನೆಗಳಿಗೆ ನೀರು ನುಗ್ಗಿದೆ. ಚೌಥನಿ ಹೊಳೆಯ ಸಮೀಪವಿರುವ ರುದ್ರ ಬೀರಪ್ಪ ದೇವಸ್ಥಾನ ಜಲಾವೃತವಾಗಿತ್ತು.

    ತಾಲೂಕು ಆಡಳಿತವು ಮುಂಡಳ್ಳಿ, ಪುರವರ್ಗ, ಮುಟ್ಟಳ್ಳಿಯಲ್ಲಿ ಕಾಳಜಿ ಕೇಂದ್ರ ತೆರೆದಿತ್ತು. ಆದರೆ, ಸಾಯಂಕಾಲದ ಹೊತ್ತಿಗೆ ಮಳೆ ಇಳಿಮುಖವಾಗಿದೆ. ನೀರು ನಿಧಾನವಾಗಿ ಇಳಿಯಲಾರಂಭಿಸಿದ್ದು, ಜನ ನಿಟ್ಟುಸಿರು ಬಿಟ್ಟಿದ್ದಾರೆ. ರಾಷ್ಟ್ರೀಯ ಹೆದ್ದಾರಿ 66 ವಿಸ್ತರಣೆ ಅವೈಜ್ಞಾನಿಕ ಚರಂಡಿ ಕಾಮಗಾರಿಯಿಂದ ಪಟ್ಟಣದ ರಂಗಿನಕಟ್ಟಾ, ಶಂಶುದ್ದೀನ್ ಸರ್ಕಲ್ ಸೇರಿ ವಿವಿಧೆಡೆ ರಸ್ತೆಯಲ್ಲಿ ನೀರು ನಿಂತು ಸಂಚಾರಕ್ಕೆ ತೊಂದರೆ ಉಂಟಾಯಿತು. ಮಣ್ಕುಳಿಯ ಕೆಲ ಗಲ್ಲಿಗಳಲ್ಲಿ ನೀರು ತುಂಬಿತ್ತು. ಉಪವಿಭಾಗಾಧಿಕಾರಿ ಮಮತಾದೇವಿ ನೀರು ತುಂಬಿದ ಪ್ರದೇಶಗಳಿಗೆ ತೆರಳಿ ಜನರಿಗೆ ಧೈರ್ಯ ತುಂಬಿದರು.

    ಎಡೆಬಿಡದೆ ಮಳೆ

    ಕಾರವಾರದಲ್ಲಿ ಎಡೆಬಿಡದೆ ಮಳೆಯಾಗಿದ್ದು, ವ್ಯಾಪಾರ, ವಹಿವಾಟಿಗೆ ತೊಂದರೆ ಉಂಟಾಯಿತು. ಚಿತ್ತಾಕುಲಾದ ಉಲ್ಲಾಸ ದೇವು ಮುಂಬೈಕರ್ ಅವರ ಮನೆಯ ಹೆಂಚು ಹಾರಿ ಹೋಗಿ ಹಾನಿಯಾಗಿದೆ. ಕಿನ್ನರದ ಗಂಗಾಧರ ಮಲ್ಲು ಗುರ ಅವರ ಮನೆಯ ಮೇಲ್ಛಾವಣಿಗೆ ಭಾಗಶಃ ಹಾನಿಯಾಗಿದೆ.

    ಮೀನುಗಾರರ ರಕ್ಷಣೆ

    ಅರಬ್ಬಿ ಸಮುದ್ರ ಪ್ರಕ್ಷುಬ್ಧವಾಗಿದ್ದರಿಂದ ಮೀನುಗಾರಿಕೆಗೆ ತೆರಳಿದ ಕೆಲ ಸಾಂಪ್ರದಾಯಿಕ ಮೀನುಗಾರರ ದೋಣಿಗಳು ಮಗುಚಿ ಸಂಕಷ್ಟಕ್ಕೆ ಈಡಾಗಿದ್ದರು. ಭಟ್ಕಳ ಬಂದರಿನ ಅಳಿವೆ ಸಮೀಪ ಅಲೆಗಳ ಹೊಡೆತದಿಂದ ವಾಪಸ್ ದಡಕ್ಕೆ ಮರಳಲಾಗದೇ ಕಷ್ಟಪಡುತ್ತಿದ್ದರು. ಬೆಳ್ನಿ, ಮುಂಡಳ್ಳಿ ಬಂದರುಗಳಿಗೆ ಸೇರಿದ 10ಕ್ಕೂ ಹೆಚ್ಚು ಮೀನುಗಾರರನ್ನು ಬೇರೆ ಮೀನುಗಾರರ ತಂಡ ಗಿಲ್​ನೆಟ್ ದೋಣಿಗಳ ಮೂಲಕ ತೆರಳಿ ರಕ್ಷಣೆ ಮಾಡಿದೆ.

    ಮಳೆಯ ಪ್ರಮಾಣ: ಭಾನುವಾರ ಬೆಳಗಿನ ವರದಿಯಂತೆ ಹಿಂದಿನ 24 ಗಂಟೆಗಳ ಅವಧಿಯಲ್ಲಿ ಅಂಕೋಲಾದಲ್ಲಿ 15.5, ಹಳಿಯಾಳ-1.6, ಹೊನ್ನಾವರ-42.5, ಕಾರವಾರ-43.3, ಕುಮಟಾ-23.9, ಮುಂಡಗೋಡ-8.8, ಸಿದ್ದಾಪುರ-13.2, ಶಿರಸಿ-20, ಜೊಯಿಡಾ-19.6, ಯಲ್ಲಾಪುರ-5.6 ಮಿಮೀ ಮಳೆಯಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts