More

    ಜಿಲ್ಲಾದ್ಯಂತ ವರುಣನ ಆರ್ಭಟ

    ಬೆಳಗಾವಿ: ಮಹಾನಗರ ಸೇರಿ ಜಿಲ್ಲೆಯ ಬಹುತೇಕ ಕಡೆ ಮಳೆಯಾರ್ಭಟ ಗುರುವಾರ ಮುಂದುವರಿದಿದ್ದು, ಜನತೆ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅಲ್ಲದೆ, ನದಿ ಮತ್ತು ಹಳ್ಳಗಳು ಉಕ್ಕಿ ಹರಿಯುತ್ತಿರುವುದರಿಂದ ಹಳ್ಳಿಗಳಿಗೆ ಸಂಪರ್ಕಿಸುವ ರಸ್ತೆಗಳು ಮುಳುಗಡೆಯಾಗಿವೆ. ಕೆಲವು ಕಡೆ ವಿದ್ಯುತ್ ಕಂಬಗಳು, ತಂತಿಗಳು ಕಟ್ಟಾಗಿ ಬಿದ್ದಿವೆ.
    ಕಳೆದ ನಾಲ್ಕೈದು ದಿನಗಳಿಂದ ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಮಣ್ಣಿನ ಮನೆಗಳು ಕುಸಿಯುತ್ತಿವೆ. ಹಳ್ಳಗಳು ಉಕ್ಕಿ ಹರಿಯುತ್ತಿರುವುದರಿಂದ ಗ್ರಾಮಗಳು, ಕೃಷಿ ಜಮೀನುಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳು ಸಂಪೂರ್ಣ ಮುಳುಗಡೆಯಾಗಿವೆ. ಕೆಲವು ಕಡೆ ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದ್ದರಿಂದ ವಿದ್ಯಾರ್ಥಿಗಳು ಸಮಸ್ಯೆಗೆ ಒಳಗಾಗಿದ್ದಾರೆ.

    ಸೋಮವಾರ ರಾತ್ರಿಯಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಗೋಕಾಕ, ಮೂಡಲಗಿ, ಬೈಲಹೊಂಗಲ, ರಾಮದುರ್ಗ, ಖಾನಾಪುರ, ಬೆಳಗಾವಿ, ಸವದತ್ತಿ, ಕಿತ್ತೂರು, ಹುಕ್ಕೇರಿ ಸೇರಿ ವಿವಿಧ ತಾಲೂಕಿನಲ್ಲಿ ಅತಿವೃಷ್ಟಿ ಉಂಟಾಗಿದೆ. ಮಲಪ್ರಭಾ, ಘಟಪ್ರಭಾ ನದಿಗಳು, ಹಳ್ಳಗಳಲ್ಲಿನ ನೀರಿನ ಮಟ್ಟ ಏರಿಕೆಯಾಗಿದೆ. ಇದರಿಂದಾಗಿ ಕೃಷಿ ಜಮೀನುಗಳಲ್ಲಿ ಕಬ್ಬು, ಮೆಕ್ಕೆಜೋಳ, ಹತ್ತಿ, ತೊಗರಿ ಸೇರಿ ಇತರ ಬೆಳೆಗಳು ಸಂಪೂರ್ಣ ಜಲಾವೃತಗೊಂಡು ಹಾನಿ ಸಂಭವಿಸಿವೆ. ಜಿಲ್ಲೆಯಲ್ಲಿ ಮಳೆ ಸುರಿಯುತ್ತಿರುವುದರಿಂದ ಕಬ್ಬು ಕಟಾವು, ಹಿಂಗಾರು ಬಿತ್ತನೆ ಕಾರ್ಯ ಸ್ಥಗಿತಗೊಂಡಿದೆ. ಅಲ್ಲದೆ, ಸುಮಾರು 2450 ಹೆಕ್ಟೇರ್ ಪ್ರದೇಶದಲ್ಲಿನ ಹತ್ತಿ, ತೊಗರಿ, ಸಜ್ಜೆ ಇತರ ಬೆಳೆಗಳು ಮುಳುಗಡೆಯಾಗಿವೆ. ಸುಮಾರು 25 ಮನೆಗಳು ಕುಸಿದಿವೆ. ಯಾವುದೇ ರೀತಿಯಲ್ಲಿ ಪ್ರಾಣಹಾನಿ ಸಂಭವಿಸಿಲ್ಲ ಎಂದು ಕಂದಾಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

    ಹಳ್ಳದಲ್ಲಿ ಕೊಚ್ಚಿ ಹೋಗುತ್ತಿದ್ದ ಬೈಕ್ ಸವಾರ ಪಾರು: ಬೈಲಹೊಂಗಲ ತಾಲೂಕಿನಲ್ಲಿ ಬುಧವಾರ ರಾತ್ರಿ ಸುರಿಯುತ್ತಿರುವ ವರುಣನ ಆರ್ಭಟಕ್ಕೆ ಎರಡು ಸೇತುವೆ ಮುಳುಗಡೆಯಾಗಿವೆ. ಬೆಳಗಾವಿ- ಬೈಲಹೊಂಗಲ ರಸ್ತೆ ಸಾಣಿಕೊಪ್ಪ ಗ್ರಾಮದ ಬಳಿ ತುಂಬಿ ಹರಿಯುತ್ತಿದ್ದ ಹಳ್ಳದ ಸೇತುವೆ ಜಲಾವೃತಗೊಂಡಿದೆ. ಈ ವೇಳೆ ಬೈಕ್ ಸವಾರ ಬಸಪ್ಪ ಜಡೆಯಣ್ಣವರ ಎಂಬಾತ ಸೇತುವೆ ದಾಟಲು ಹೋಗಿ ನೀರಿನಲ್ಲಿ ಬೈಕ್ ಸಮೇತ ಕೊಚ್ಚಿಕೊಂಡು ಹೋಗಿದ್ದಾರೆ. ಅದೃಷ್ಟವಶಾತ್ ಬೈಕ್ ಸವಾರ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಆದರೆ, ಬೈಕ್ ಮಾತ್ರ ಕೊಚ್ಚಿ ಹೋಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts