More

    ತುಂಗಾ ಡ್ಯಾಮ್ ಭರ್ತಿಗೆ ಅರ್ಧ ಮೀಟರ್ ಬಾಕಿ

    ಶಿವಮೊಗ್ಗ: ಜಿಲ್ಲಾದ್ಯಂತ ಮುಂಗಾರು ಮಳೆ ಚುರುಕುಗೊಂಡಿದ್ದು ಜಿಲ್ಲೆಯ ಹಲವೆಡೆ ಶುಕ್ರವಾರ ಉತ್ತಮ ಮಳೆಯಾಗಿದೆ. ಇದರಿಂದ ಜಲಾಶಯಗಳಿಗೆ ನೀರಿನ ಒಳಹರಿವು ತುಸು ಹೆಚ್ಚಿದ್ದು ತುಂಗಾ ಜಲಾಶಯ ಭರ್ತಿಗೆ ಅರ್ಧ ಮೀ. ಮಾತ್ರ ಬಾಕಿ ಇದೆ.

    ಕಳೆದ 24 ಗಂಟೆಯಲ್ಲಿ 81.14 ಮಿಮೀ ಮಳೆಯಾಗಿದೆ. ಜೂನ್ ತಿಂಗಳ ಸಾಮಾನ್ಯ ಮಳೆಯ ಸರಾಸರಿ ಪ್ರಮಾಣ 390.67 ಮಿಮೀ ಇದ್ದು, ಇದುವರೆಗೆ ಸರಾಸರಿ 18.57 ಮಿಮೀ ಮಳೆ ದಾಖಲಾಗಿದೆ. ಶಿವಮೊಗ್ಗ 3.20 ಮಿಮೀ., ಭದ್ರಾವತಿ 4.40, ತೀರ್ಥಹಳ್ಳಿ 11.60, ಸಾಗರ 6.04, ಶಿಕಾರಿಪುರ 13.40, ಸೊರಬ 10.10 ಹಾಗೂ ಹೊಸನಗರ 32.40 ಮಿಮೀ. ಮಳೆ ದಾಖಲಾಗಿದೆ.

    ಇದೇ ವೇಳೆ ಜಲಾಶಯಗಳ ನೀರಿನ ಮಟ್ಟದಲ್ಲೂ ಸ್ವಲ್ಪ ಏರಿಕೆ ಕಂಡಿದ್ದು ಲಿಂಗನಮಕ್ಕಿ ಜಲಾಶಯಕ್ಕೆ 2,530 ಕ್ಯೂಸೆಕ್ ಒಳಹರಿವಿದೆ. 6,085.00 ಕ್ಯೂಸೆಕ್ ನೀರನ್ನು ಹೊರ ಬಿಡಲಾಗುತ್ತಿದೆ. ಭದ್ರಾ ಜಲಾಶಯಕ್ಕೆ 307 ಕ್ಯೂಸೆಕ್ ಒಳಹರಿವಿದ್ದು, 157 ಕ್ಯೂಸೆಕ್ ನೀರನ್ನು ನದಿಗೆ ಬಿಡಲಾಗುತ್ತಿದೆ. ಇನ್ನೂ ತುಂಗಾ ಜಲಾಶಯಕ್ಕೆ 417 ಕ್ಯೂಸೆಕ್ ಒಳಹರಿವು ಹಾಗೂ 35 ಕ್ಯೂಸೆಕ್ ನೀರನ್ನು ಹೊರ ಬಿಡಲಾಗುತ್ತಿದೆ.

    ನಗರದಲ್ಲೂ ಶುಕ್ರವಾರ ಮಧ್ಯಾಹ್ನದವರೆಗೂ ಆಗ್ಗಾಗೆ ಸಾಧಾರಣೆ ಮಳೆ ಸುರಿದಿದ್ದು, ಆನಂತರ ಮೋಡ ಕವಿದ ವಾತಾವರಣವಿತ್ತು. ಇದರಿಂದ ದ್ವಿಚಕ್ರ ವಾಹನ ಸವಾರರು, ಪಾದಚಾರಿಗಳು ಪರದಾಡಿದರು. ಕೆಲವರು ಮಳೆಯನ್ನೂ ಲೆಕ್ಕಿಸದೇ ಮುಂದೆ ಸಾಗುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

    ಭದ್ರಾವತಿಯಲ್ಲಿ ಉತ್ತಮ ಮಳೆ: ಭದ್ರಾವತಿ ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಶುಕ್ರವಾರ ಅರ್ಧ ತಾಸು ಉತ್ತಮ ಮಳೆಯಾಗಿದೆ. ದಿನವಿಡೀ ಮೋಡಕವಿದ ವಾತಾವರಣವಿದ್ದು ಬಿಸಿಲಿನ ಝುಳ ಕಾಣೆಯಾಗಿತ್ತು. ಬಿಸಿಲಿನ ತಾಪಕ್ಕೆ ಹೈರಾಣಾಗಿದ್ದ ಜನತೆ ಉತ್ತಮ ಮಳೆಯಿಂದ ನಿಟ್ಟುಸಿರು ಬಿಡುವಂತಾಗಿದೆ. ರೈತರು ತಮ್ಮ ಜಮೀನುಗಳ ಉಳುಮೆ ಕಾರ್ಯ ಆರಂಭಿಸಿದ್ದು ಮುಸುಕಿನ ಜೋಳ ಬಿತ್ತನೆಗೆ ಸಿದ್ಧತೆ ನಡೆಸಿದ್ದಾರೆ.

    ಸಾಗರದಲ್ಲಿ ಗಾಳಿ-ಮಳೆಗೆ ಬಿದ್ದ ವಿದ್ಯುತ್ 7 ಕಂಬ: ರಾಷ್ಟ್ರೀಯ ಹೆದ್ದಾರಿ ಗಣಪತಿ ಕೆರೆ ಪಕ್ಕದ ದಂಡೆಯಲ್ಲಿ ಗುರುವಾರ ರಾತ್ರಿ ಸುರಿದ ಗಾಳಿ ಸಹಿತಿ ಮಳೆಗೆ 7 ವಿದ್ಯುತ್ ಕಂಬ ಮುರಿದಿವೆ. ಇದರಿಂದ ಗುರುವಾರ ರಾತ್ರಿ ಕೆಲ ಹೊತ್ತು ವಿದ್ಯುತ್ ವ್ಯತ್ಯಯ ಉಂಟಾಗಿತ್ತು. ಗಣಪತಿ ಕೆರೆ ಪಕ್ಕದಲ್ಲಿ ಹೂಳು ತೆಗೆಯುವ ಸಂದರ್ಭದಲ್ಲಿ ಮಣ್ಣು ಕುಸಿತ ಉಂಟಾಗಿರುವುದರಿಂದ ವಿದ್ಯುತ್ ಕಂಬಗಳು ಉರುಳಿವೆ.

    ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ವಾರ್ಡ್ ಸದಸ್ಯ ಅರವಿಂದ ರಾಯ್ಕರ್, ಕಳೆದ ಬಾರಿಯೂ ಕಂಬಗಳು ಉರುಳಿದ್ದವು. ಮೆಸ್ಕಾಂನವರು ವ್ಯವಸ್ಥಿತವಾಗಿ ಕಾರ್ಯನಿರ್ವಹಿಸದಿದ್ದರಿಂದ ಸಮಸ್ಯೆ ಮರುಕಳಿಸಿದೆ ಎಂದು ದೂರಿದರು.

    ಕೆರೆ ಪಕ್ಕದಲ್ಲಿ ವಿದ್ಯುತ್ ಕಂಬ ಹಾಕುವಾಗ ಸೂಕ್ತ ಸಿಮೆಂಟ್ ಕಾಮಗಾರಿ ಮಾಡಿಕೊಳ್ಳಬೇಕಾಗಿತ್ತು. ಆದರೆ ಮೆಸ್ಕಾಂನವರು ನೆಟ್ಟಿರುವ ವಿದ್ಯುತ್ ಕಂಬ ಸಹ ಅತ್ಯಂತ ತೆಳವಾಗಿದ್ದು, ಗಾಳಿ ಬಂದರೆ ಮುರಿದು ಹೋಗುವ ಸ್ಥಿತಿಯಲ್ಲಿವೆ. ಈ ಬಗ್ಗೆ ಹಿಂದೆಯೇ ಮನವಿ ಮಾಡಲಾಗಿತ್ತು. ಆದರೆ ಮೆಸ್ಕಾಂನವರು ಎಚ್ಚೆತ್ತುಕೊಂಡಿಲ್ಲ ಎಂದು ಆರೋಪಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts