More

    ತಿ.ನರಸೀಪುರದಲ್ಲಿ ಅದ್ದೂರಿ ಹನುಮೋತ್ಸವ

    ತಿ.ನರಸೀಪುರ: ಪಟ್ಟಣದಲ್ಲಿ ಶನಿವಾರ ಹನುಮ ಜಯಂತಿ ಹಿನ್ನೆಲೆಯಲ್ಲಿ ಹನುಮಮೂರ್ತಿಯ ಮೆರವಣಿಗೆ ವಿಜೃಂಭಣೆಯಿಂದ ನೆರವೇರಿತು.


    ಪಟ್ಟಣದ ಶ್ರೀಗುಂಜಾನರಸಿಂಹಸ್ವಾಮಿ ದೇವಾಲಯದ ಬಳಿ ಹನುಮ ಜಯಂತಿಯ ಅಂಗವಾಗಿ ಹನುಮಮೂರ್ತಿಯ ಮೆರವಣಿಗೆಗೆ ಮಧ್ಯಾಹ್ನ ವಾಟಾಳು ಮಠಾಧ್ಯಕ್ಷರಾದ ಡಾ.ಶ್ರೀಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ವಿಗ್ರಹಕ್ಕೆ ಪುಷ್ಪ ಅರ್ಪಿಸುವ ಮೂಲಕ ಉತ್ಸವ ಮೆರವಣಿಗೆಗೆ ಚಾಲನೆ ನೀಡಿದರು.
    ನಂತರ ಮಾತನಾಡಿದ ಅವರು, ಹನುಮನ ಕೃಪಾಶೀರ್ವಾದ ನಾಡಿನ ಹಾಗೂ ರಾಜ್ಯದ ಜನರಿಗೆ ದೊರಕಿ ರಾಜ್ಯದ ಜನ ಸುಭೀಕ್ಷವಾಗಿ ಬದುಕವಂತಾಗಲಿ. ಮಳೆ, ಬೆಳೆ ಚೆನ್ನಾಗಿ ಆಗಿ ರಾಜ್ಯದ ಜನರು ನೆಮ್ಮದಿಯಿಂದ ಬದುಕಲಿ ಹಾಗೂ ತಿ.ನರಸೀಪುರ ತಾಲೂಕಿನ ಜನರು ಸಮೃದ್ಧಿ, ಆರೋಗ್ಯ, ಸಂತೋಷದಿಂದ ಇರಲಿ ಎಂದು ಶುಭ ಕೋರಿದರು.


    ಯುವ ಸಮುದಾಯ ಹನುಮ ಜಯಂತಿ ಮಾಡುವುದಷ್ಟೆ ಅಲ್ಲ, ಉತ್ತಮ ಶಿಕ್ಷಣ ಪಡೆದು ಸಮಾಜದ ಒಳಿತಿಗೆ ಶ್ರಮಿಸುವಂತಾಗಲಿ ಎಂದು ಹಾರೈಸಿದರು.
    ಬಳಿಕ ದೇವಾಲಯದ ಮುಂಭಾಗದಿಂದ ಆರಂಭಗೊಂಡ ಮೆರವಣಿಗೆ ವಿಶ್ವ ಕರ್ಮ ರಸ್ತೆ, ಪ್ರಾಥಮಿಕ ಶಾಲಾ ರಸ್ತೆ, ಭಗವಾನ್ ವೃತ್ತ, ಪುರಸಭ ರಸ್ತೆ, ತಾಲೂಕು ಕಚೇರಿ ರಸ್ತೆ, ವಿದ್ಯೋದಯ ವೃತ್ತ ಹಾಗೂ ಖಾಸಗಿ ಬಸ್ ನಿಲ್ದಾಣ, ಲಿಂಕ್ ರಸ್ತೆಯ ಮೂಲಕ ಮತ್ತೆ ಭಗವಾನ್ ವೃತ್ತದಲ್ಲಿ ಕೊನೆಗೊಂಡಿತು.
    ಮೆರವಣಿಗೆಯಲ್ಲಿ ಪೂಜಾ ಕುಣಿತ, ವೀರಗಾಸೆ, ಚಂಡೆವಾದ್ಯ, ದೇವರ ಕುಣಿತ, ಡೊಳ್ಳುಕುಣಿತ, ಗಾಡಿಗೊಂಬೆ, ವಿವಿಧ ಕಲಾ ತಂಡ, ಹನುಮನ ಮೂರ್ತಿ ಜನರ ಮನ ಸೆಳೆಯಿತು.


    ಮೆರವಣಿಗೆಗೂ ಮೊದಲು ಶ್ರೀಗುಂಜಾನರಸಿಂಹಸ್ವಾಮಿ ದೇವಾಲಯದ ಪಕ್ಕದ ಆವರಣದಲ್ಲಿ ಹನುಮನ ಉತ್ಸವಕ್ಕೆ ವಿವಿಧ ಹೋಮ, ಪೂಜಾ ಕೈಂಕರ್ಯಗಳು ಜರುಗಿದವು.


    ಮೆರವಣಿಗೆ ವೀಕ್ಷಿಸಲು ಜನಸ್ತೋಮವೇ ನೆರದಿತ್ತು. ಎಲ್ಲರು ಜೈ ಹನುಮಾನ್, ಜೈ ಶ್ರೀರಾಂ ಘೋಷಣೆಯು ಕೂಗುತ್ತಾ ಸಾಗಿದರು.
    ಮುನ್ನೆಚ್ಚರಿಕೆ ಕ್ರಮವಾಗಿ ಕಾರ್ಯಕ್ರಮ ಜಿಲ್ಲಾ ವರಿಷ್ಠಾಧಿಕಾರಿ ಸೀಮಾ ಲಾಟ್ಕರ್, ಅಡಿಷನಲ್ ಎಸ್‌ಪಿ ಡಾ.ನಂದಿನಿ ಅವರು ಖುದ್ದು ಪರಿಶೀಲಿಸಿ ಅಗತ್ಯ ಪೊಲೀಸ್ ಬಂದೋಬಸ್ತ್ ನಿಯೋಜಿಸಿದ್ದರು.


    ಮದ್ಯದಂಗಡಿಗಳನ್ನು ಮುಚ್ಚಿಸಲಾಗಿತ್ತು. ರಸ್ತೆಯುದ್ದಕ್ಕೂ ಸಂಚಾರ ಪೊಲೀಸರು ಸೇರಿದಂತೆ ನೂರಾರು ಪೊಲೀಸರನ್ನು ನಿಯೋಜಿಸಲಾಗಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts