More

    ತಿಪಟೂರು ಸಾವಯವ ಸಂತೆಗೆ ಕರೊನಾದಿಂದ ಗ್ರಹಣ ; ಗ್ರಾಹಕರ ಸಂಖ್ಯೆಯೂ ದಿನದಿಂದ ದಿನಕ್ಕೆ ಕಡಿಮೆ

    ತಿಪಟೂರು : ಸಾವಯವ ಸಂತೆಗೆ ಕರೊನಾದಿಂದ ಗ್ರಹಣ ಬಡಿದಿದೆ. ಸಂತೆ ನಿಂತಿದ್ದರಿಂದ ರೈತರು ಬೆಳೆ ಬೆಳೆಯುವುದನ್ನು ಕಡಿಮೆ ಮಾಡಿದ್ದು, ಸಾವಯವ ಉತ್ಪನ್ನಗಳನ್ನು ಖರೀದಿಸಲು ಮುಗಿ ಬೀಳುತ್ತಿದ್ದ ಗ್ರಾಹಕರ ಸಂಖ್ಯೆಯೂ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ.

    ನಗರದ ಕೆ.ಆರ್.ಬಡಾವಣೆಯ ಶಿಕ್ಷಕರ ಭವನದ ಆವರಣದಲ್ಲಿ ಎರಡು ವರ್ಷಗಳ ಹಿಂದೆ ರೈತರೇ ನಡೆಸುವ ಸಾವಯವ ಸಂತೆ, ಆರಂಭದ ದಿನಗಳಲ್ಲಿ ಹೆಚ್ಚಿನ ಯಶಸ್ಸು ಕಂಡಿತ್ತು. ಇಲ್ಲಿರುವ 10ಕ್ಕೂ ಹೆಚ್ಚು ಮಳಿಗೆಗಳಲ್ಲಿ ಯಾವುದೇ ಕೀಟನಾಶಕ ಬಳಸದೆ, ಸಂಪೂರ್ಣವಾಗಿ ದೇಶಿ ಹಣ್ಣು, ತರಕಾರಿ, ಬೇಳೆ, ಕಾಳುಗಳು, ತೆಂಗಿನ ಎಣ್ಣೆ, ಮನೆಯಲ್ಲಿ ಗಾಣದಿಂದ ಅರೆದ ಅರಳೆಣ್ಣೆ, ಹುಚ್ಚೆಳ್ಳು ಎಣ್ಣೆ, ಸಾವಯವ ಬೆಲ್ಲ, ನಾಟಿ ಹಸುವಿನ ಉತ್ಪನ್ನಗಳಾದ ಮೊಸರು, ತುಪ್ಪ, ಬೆಣ್ಣೆ, ತಾಜಾ ತರಕಾರಿ, ಮತ್ತು ಸೊಪ್ಪು ಸೇರಿ 50 ರಿಂದ 60ಕ್ಕೂ ಹೆಚ್ಚು ಉತ್ಪನ್ನಗಳನ್ನು ಕೊಳ್ಳಲು ಗ್ರಾಹಕರು ಹೆಚ್ಚಿನ ಆಸಕ್ತಿ ತೋರಿಸುತ್ತಿದ್ದರು.

    ಪಾರಂಪರಿಕ ನಾಟಿ ವೈದ್ಯರಿಂದ ತಯಾರಿಸಲಾದ ಗಿಡ ಮೂಲಿಕೆ ಔಷಧಗಳೂ ಇಲ್ಲಿ ಲಭ್ಯವಿದೆ. ಶೇ.50 ಲ್ಯಾರಿಕ್ ಆಸಿಡ್ ಅಂಶವುಳ್ಳ ತೆಂಗಿನ ಕಾಯಿ ಎಣ್ಣೆ ( ತೆಂತಾ ಎಣ್ಣೆ) ಇಲ್ಲಿ ದೊರೆಯುತ್ತದೆ. ಆದರೆ, ಕರೊನಾದಿಂದ ಹೊರಬಂದು ಪುನಃ ನಿಗದಿತ ಗ್ರಾಹಕರನ್ನು ಸೆಳೆಯುವ ಪ್ರಯತ್ನದಲ್ಲಿರುವಾಗ ಮತ್ತೆ ಲಾಕ್‌ಡೌನ್ ಘೋಷಿಸಿದ ಪರಿಣಾಮ ಹೊಸದಾಗಿ ಗ್ರಾಹಕರನ್ನು ಹುಡುಕಬೇಕಾದ ಪರಿಸ್ಥಿತಿ ನಿರ್ಮಾಣವಾಗಿದ್ದು, ರೈತರಿಗೆ ಹೊಸದಾಗಿ ಸಂತೆ ಮಾಡಿದ ಅನುಭವ ಆಗುತ್ತಿದೆ. ಮೊದಲಿನ ಜನ ಸಂದಣಿ ಕಂಡು ಬರುತ್ತಿಲ್ಲ. ಗಿರಾಕಿಗಳನ್ನು ಹಿಡಿದಿಟ್ಟುಕೊಳ್ಳಲು ಸಾಧ್ಯವಾಗುತ್ತಿಲ್ಲ. ಕರೊನಾ ಭಯದಿಂದ ಬಹುತೇಕರು ಈಚೆ ಓಡಾಡುವುದನ್ನು ಕಡಿಮೆ ಮಾಡಿದ್ದಾರೆ. ಕೆಲ ಗ್ರಾಹಕರು ೆನ್ ಮಾಡಿ ತಮಗೆ ಬೇಕಿದ್ದ ಉತ್ಪನ್ನಗಳನ್ನು ತರಿಸಿಕೊಳ್ಳುತ್ತಾರೆ. ಸಾವಯವ ಪದ್ಧತಿ ಅಳವಡಿಸಿಕೊಂಡು, ಕಷ್ಟಪಟ್ಟು ಬೆಳೆದು ತಂದ ಉತ್ಪನ್ನಗಳನ್ನು ಹೆಚ್ಚು ಖರೀಧಿಸುವ ಮೂಲಕ ರೈತರ ಬೆನ್ನು ತಟ್ಟುವವರ ಸಂಖ್ಯೆ ಹೆಚ್ಚಬೇಕಿದೆ.

    ಕೆ.ಬಿ. ಕ್ರಾಸ್ ಬಳಿ ಇರುವ ಹಿಂಡಿಸ್ಕೆರೆ, ಗೌಡನಕಟ್ಟೆ, ಲಿಂಗದೇವರಹಳ್ಳಿ, ನಾಗರಘಟ್ಟ, ಶಿವರ, ಪುಟ್ಟಯ್ಯನಪಾಳ್ಯ, ಕೆರೆಗೋಡಿ, ಮೂಕ್ತಿಹಳ್ಳಿ ಮುಂತಾದ ಗ್ರಾಮದ ರೈತರು ಪ್ರತೀ ಭಾನುವಾರ, ತಾವು ಬೆಳೆದ ಸಾವಯವ ಉತ್ಪನ್ನಗಳನ್ನು ಮಾರಾಟಕ್ಕೆ ತರುತ್ತಾರೆ. ಸಾವಯವ ಸಂತೆ ಸಮಯ ಬೆಳಗ್ಗೆ 8 ರಿಂದ ಮಧ್ಯಾಹ್ನ 12.

    ಗ್ರಾಹಕರ ಸಂಖ್ಯೆಯಲ್ಲಿ ಅಂತಹ ಇಳಿಮುಖ ಆಗಿಲ್ಲ. ಆದರೆ ಲಾಕ್‌ಡೌನ್ ನಿಂದ ಸಂತೆ ನಿಂತ ಪರಿಣಾಮ ಸಾವಯವ ಬೆಳೆ ಬೆಳೆಯಲು ರೈತರು ಹೆಚ್ಚು ಆಸಕ್ತಿ ವಹಿಸಲಿಲ್ಲ. ಈಗ ಲಾಕ್‌ಡೌನ್ ತೆರವಾಗಿದೆ. ಬಿತ್ತಿದ ಬೆಳೆ ಬರಲು ಸಮಯಾವಕಾಶ ಬೇಕು. ಅಷ್ಟರೊಳಗೆ ಏನೇನು ಅಡ್ಡಿ, ಆತಂಕ ಸೃಷ್ಟಿಯಾಗುತ್ತೊ ದೇವರೇ ಬಲ್ಲ.
    ಪಂಡಿತ್ ಶಿವರಾಮಯ್ಯ. ಪಾರಂಪರಿಕ ನಾಟಿ ವೈದ್ಯ್ಯರು. ಗೌಡನಕಟ್ಟೆ, ತಿಪಟೂರು ತಾಲೂಕು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts