More

    ತರಬೇತಿ ವಿಮಾನ ತುರ್ತು ಭೂಸ್ಪರ್ಶ

    ಶಹಾಬಾದ್(ಕಲಬುರಗಿ): ತರಬೇತಿ ವಿಮಾನವೊಂದು ತುರ್ತು ಭೂಸ್ಪರ್ಶ ಮಾಡಿದ ಪ್ರಸಂಗ ಮುತ್ತಗಿ, ಪೇಠಶಿರೂರ ಗ್ರಾಮಗಳ ಮಧ್ಯೆ ಭಾನುವಾರ ನಡೆದಿದೆ.

    ರೆಡ್‌ಬರ್ಡ್ ವಿಮಾನ ಚಾಲನಾ ತರಬೇತಿ ಸಂಸ್ಥೆ ವಿಮಾನ ಇದಾಗಿದ್ದು, ನಾಲ್ಕು ಆಸನ ಸಾಮರ್ಥ್ಯ ಹೊಂದಿದೆ. ಬೆಳಗ್ಗೆ ಕಲಬುರಗಿ ನಿಲ್ದಾಣದಿಂದ ಟೇಕಾಫ್ ಆದ ಕೆಲವೇ ನಿಮಿಷಗಳಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದೆ. ೯.೩೦ರ ಸುಮಾರಿಗೆ ವಿಮಾನದಲ್ಲಿ ಸಮಸ್ಯೆ ಹೆಚ್ಚಾಗಿ ಕಾಣಿಸಿದ್ದರಿಂದ ಪೈಲಟ್ ತುರ್ತು ಭೂಸ್ಪರ್ಶ ಮಾಡಿದ್ದಾನೆ. ವಿಮಾನದಲ್ಲಿ ಚಾಲಕ ಮತ್ತು ಒಬ್ಬ ಮಹಿಳೆ ಇದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

    ಮುತ್ತಗಿ, ಪೇಠಶಿರೂರ ಮಧ್ಯದ ಮಲ್ಲಿಕಾರ್ಜುನ ಲಾಳಿ ಎಂಬುವರ ಹೊಲದಲ್ಲಿ ವಿಮಾನ ಲ್ಯಾಂಡ್ ಆಗಿದ್ದು, ಸುಮಾರು ೮೦೦ ಮೀಟರ್ ದೂರ ಸಾಗಿದೆ. ಎರಡು ಹೊಲಗಳಲ್ಲಿ ವಿಮಾನದ ಚಕ್ರಗಳ ಗುರುತು ಬಿದ್ದಿದೆ. ಎರಡು ದಿನಗಳಿಂದ ಮಳೆ ಸುರಿಯುತ್ತಿದ್ದು, ಹೊಲಗಳು ಕೆಸರುಮಯವಾಗಿವೆ. ಇನ್ನು ವಿಮಾನ ಭೂಸ್ಪರ್ಶವಾದ ಸ್ಥಳ ಮುಖ್ಯ ರಸ್ತೆಯಿಂದ ಸಾಕಷ್ಟು ದೂರದಲ್ಲಿದೆ. ವಿಮಾನದ ಸಮೀಪ ಹೋಗಲು ಯಾವುದೇ ಮಾರ್ಗವಿಲ್ಲ. ದ್ವಿಚಕ್ರ ವಾಹನ ಸಹ ಸಂಚರಿಸಲು ಕಷ್ಟಕರ. ಮಳೆಗೂ ಮುನ್ನ ವಿಮಾನದ ಪಕ್ಕಕ್ಕೆ ಹೋಗಿದ್ದ ಏರ್‌ಪೋರ್ಟ್ ಸಿಬ್ಬಂದಿ ವಾಹನವೂ ಹೊಲದಲ್ಲಿ ಸಿಕ್ಕಿಬಿದ್ದಿದೆ. ಹೀಗಾಗಿ ತಾಂತ್ರಿಕ ಸಿಬ್ಬಂದಿಗೆ ಫ್ಲೈಟ್ ಸ್ಥಳಾಂತರ ಕಷ್ಟಸಾಧ್ಯ ಎನಿಸಿದೆ.

    ಸುದ್ದಿ ತಿಳಿಯುತ್ತಿದ್ದಂತೆ ಕಲಬುರಗಿ ಏರಪೋರ್ಟ್ ನಿರ್ದೇಶಕ ಚಿಲ್ಕ ಮಹೇಶ ಹಾಗೂ ಸಿಬ್ಬಂದಿ, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ವಿಮಾನದ ಸುತ್ತಲಿನ ಪ್ರದೇಶದಲ್ಲಿ ಬಂದೋಬಸ್ತ್ ಒದಗಿಸಲಾಗಿದೆ. ಯಾವುದೇ ಪೋಟೋ, ವಿಡಿಯೋ ತೆಗೆಯದಂತೆ ನಿರ್ಬಂಧ ಹೇರಲಾಗಿದೆ.

    ನವದೆಹಲಿ ಟೀಮ್‌ನಿಂದ ತನಿಖೆ: ತರಬೇತಿ ವಿಮಾನ ತುರ್ತು ಭೂಸ್ಪರ್ಶದ ಬಗ್ಗೆ ನವದೆಹಲಿಯ ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯಕ್ಕೆ ಮಾಹಿತಿ ನೀಡಿದ್ದು, ಅಲ್ಲಿಂದ ವಿಶೇಷ ತಾಂತ್ರಿಕ ತಜ್ಞರ ತಂಡವೊಂದು ಭೇಟಿ ನೀಡಿ ಪರಿಶೀಲನೆ ನಡೆಸಲಿದೆ. ಬಳಿಕವೇ ಭೂಸ್ಪರ್ಶಕ್ಕೆ ನಿಖರ ಕಾರಣ ತಿಳಿದುಬರಲಿದೆ ಎಂದು ಮೂಲಗಳು ತಿಳಿಸಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts