More

    ತಬ್ಲಿಘಿ ಲಿಂಕ್ ತಂದಿಟ್ಟ ವೈರಸ್ ಕಂಟಕ

    ಕಲಬುರಗಿ: ಸೋಮವಾರ ಸಂಜೆ ಜಿಲ್ಲೆಯಲ್ಲಿ ಹೊಸದಾಗಿ ಪತ್ತೆಯಾಗಿರುವ ಎಲ್ಲ ಆರು ಕರೊನಾ ಸೋಂಕಿತ ಪ್ರಕರಣಗಳಿಗೆ ನವದೆಹಲಿ ನಿಜಾಮುದ್ದೀನ್ ಮರ್ಕಜ್ನಲ್ಲಿ ನಡೆದ ತಬ್ಲಿಘಿ ಜಮಾತ್ ಸಂಘಟನೆ ಧಾರ್ಮಿಕ ಸಭೆಯ ಪರೋಕ್ಷ ಲಿಂಕ್ ಇರುವುದು ಬಹುತೇಕ ಖಚಿತವಾಗಿದೆ.
    ಜಿಲ್ಲೆಯಲ್ಲಿ ಇದುವರೆಗೆ 44 ಪ್ರಕರಣ ಕರೊನಾ ಸೋಂಕಿತ ಎಂದು ವರದಿಯಾಗಿದ್ದು, ಇವರಲ್ಲಿ 17ಕ್ಕೂ ಹೆಚ್ಚು ಜನರಿಗೆ ತಬ್ಲಿಘಿ ಸಭೆಯಲ್ಲಿ ಪಾಲ್ಗೊಂಡು ಬಂದವರ ಸಂಪರ್ಕ ಇರುವುದು ಹೆಚ್ಚೂ-ಕಡಿಮೆ ಖಚಿತವಾಗಿದೆ. ಮಂಗಳವಾರ ಜಿಲ್ಲೆಯಲ್ಲಿ ಮತ್ತಾವುದೇ ಹೊಸ ಪ್ರಕರಣ ವರದಿಯಾಗಿಲ್ಲ.
    ತಬ್ಲಿಘಿ ಜಮಾತ್ ಧಾರ್ಮಿಕ ಸಭೆಯಲ್ಲಿ ಜಿಲ್ಲೆಯ 26 ಜನ ಭಾಗವಹಿಸಿದ್ದರು. ಇವರು ಕಲಬುರಗಿಗೆ ಬರುತ್ತಲೇ ಕರೊನಾ ಪರೀಕ್ಷೆಗೆ ಒಳಪಡಿಸಿದಾಗ ನೆಗೆಟಿವ್ ರಿಪೋರ್ಟ ಬಂದಿತ್ತು. ಆದರೂ ಮುಂಜಾಗ್ರತಾ ಕ್ರಮವಾಗಿ ಹೋಂ ಕ್ವಾರಂಟೈನ್ನಲ್ಲಿ ಇರಿಸಲಾಯಿತು. ವಿಚಿತ್ರವೆಂದರೆ ಇವರಿಗೆ ಕರೊನಾ ದೃಢಪಟ್ಟಿಲ್ಲ. ಆದರೆ ಇವರ ಸಂಪರ್ಕಕ್ಕೆ ಬಂದವರಿಗೆ ಸೋಂಕು ಇರುವುದು ಪತ್ತೆಯಾಗುತ್ತಲೇ ಇದೆ. ಇದು ಯಾವ ಹಂತ ತಲುಪುತ್ತದೋ ಎಂಬ ಭಯ ಜನರಲ್ಲಿ ಮನೆ ಮಾಡಿದೆ.
    ಸೋಮವಾರ ಬೆಳಗ್ಗೆ ಮತ್ತು ಸಂಜೆಯ ಆರೋಗ್ಯ ಬುಲೆಟಿನ್ ಪ್ರಕಾರ ಜಿಲ್ಲೆಯಲ್ಲಿ ಯಾವುದೇ ಪಾಸಿಟಿವ್ ಕೇಸ್ ಇರಲಿಲ್ಲ. ಆದರೆ ಕೆಲ ಹೊತ್ತಿನಲ್ಲೇ ದಿಢೀರ್ ಒಂದು ಸಾವು ಮತ್ತು ಆರು ಹೊಸ ಕರೊನಾ ಸೋಂಕಿತ ಪ್ರಕರಣ ಪತ್ತೆಯಾಗಿರುವ ಬಗ್ಗೆ ಜಿಲ್ಲಾಡಳಿತ ಬುಲೆಟಿನ್ ಬಿಡುಗಡೆ ಮಾಡಿತು.
    ಮೃತ ವ್ಯಕ್ತಿ (ಪಿ.422) ಆಳಂದದವನಾಗಿದ್ದು, ಈತನಿಗೆ ಯಾವುದೇ ತಬ್ಲಿಘಿ ಲಿಂಕ್ ಇರಲಿಲ್ಲ. ಆದರೆ ನಂತರ ಬಿಡುಗಡೆಯಾದ ಆರು ಪ್ರಕರಣಗಳಿಗೆ ಈ ಲಿಂಕ್ ಇದೆ ಎಂದು ಹೇಳಲಾಗುತ್ತಿದೆ.
    ಈಗಾಗಲೇ ಸೋಂಕಿನಿಂದ ಬಳಲುತ್ತಿರುವ 19 ವರ್ಷದ ಯುವಕನ (ಪಿ.395) ಜತೆ ನೇರ ಸಂಪರ್ಕಕ್ಕೆ ಬಂದ ನಾಲ್ವರು ಮಹಿಳೆಯರು ಮತ್ತು ಇಬ್ಬರು ಪುರುಷರಿಗೆ ಸೋಂಕು ದೃಢಪಟ್ಟಿದೆ. ಸೋಮವಾರದ ಪಟ್ಟಿಯಲ್ಲಿ ಸೇರ್ಪಡೆಯಾದವರ ವಿವರ ಹೀಗಿದೆ. 55 ವರ್ಷದ ಪುರುಷ (ಪಿ.515), 40 ವರ್ಷದ ಮಹಿಳೆ (ಪಿ.516), 43 ವರ್ಷದ ಪುರುಷ (ಪಿ.517), 28 ವರ್ಷದ ಮಹಿಳೆ (ಪಿ.518), 45 ವರ್ಷದ ಮಹಿಳೆ (ಪಿ.519) ಮತ್ತು 22 ವರ್ಷದ ಯುವತಿ (ಪಿ.520).
    ಸೋಂಕಿನಿಂದ ಮೃತಪಟ್ಟಿರುವ ಬಟ್ಟೆ ವ್ಯಾಪಾರಿ (ಪಿ.205)ಗೆ ತಬ್ಲಿಘಿಗಳ ಸಂಪರ್ಕ ಇತ್ತು. ಈತನ ಮೂಲಕ 19 ವರ್ಷದ ಯುವಕನಿಗೆ ಸೋಂಕು ತಗುಲಿದ್ದು, ಈತನಿಂದ ಈಗ ಆರು ಮಂದಿಗೆ ಹರಡಿದೆ. ಇನ್ನು ಸೋಂಕಿನಿಂದ ಜಿಲ್ಲೆಯಲ್ಲಿ ಐವರು ಮೃತಪಟ್ಟಿದ್ದು, ಈ ಪೈಕಿ ಇಬ್ಬರಿಗೆ ತಬ್ಲಿಘಿಗಳ ಸಂಪರ್ಕ ಇತ್ತು ಎನ್ನಲಾಗಿದೆ. ಇವರಲ್ಲಿ ಒಬ್ಬ ಬಟ್ಟೆ ವ್ಯಾಪಾರಿ, ಇನ್ನೊಬ್ಬ ಹಣ್ಣಿನ ವ್ಯಾಪಾರಿ. ಈ ಇಬ್ಬರಿಗೂ ಪ್ರೈಮರಿ ಮತ್ತು ಸೆಕೆಂಡರಿ ಕಾಂಟ್ಯಾಕ್ಟ್ ಇದ್ದವರಿಗೂ ಸೋಂಕು ತಗಲುತ್ತಿದೆ ಎಂಬುದು ಸೋಮವಾರ ಸಂಜೆ ಪತ್ತೆಯಾದ ಆರು ಪ್ರಕರಣಗಳಿಂದ ಸಾಬೀತಾಗಿದೆ.
    ಇವರೆಲ್ಲರನ್ನು ಇಎಸ್ಐಸಿ ಐಸೋಲೇಷನ್ ವಾರ್ಡಗೆ ಸೇರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇವರ ಜತೆ ಸಂಪರ್ಕಕ್ಕೆ ಬಂದವರಲ್ಲಿ ಹಲವರನ್ನು ಆಸ್ಪತ್ರೆಗೆ ಸೇರಿಸಿದರೆ, ಇನ್ನೂ ಕೆಲವರನ್ನು ಹೋಂ ಕ್ವಾರಂಟೈನ್ ಮಾಡಲಾಗಿದೆ.

    ಲಾಕ್ಡೌನ್ ಯಥಾಸ್ಥಿತಿ ಮುಂದುವರಿಕೆ
    ಕಲಬುರಗಿ ಜಿಲ್ಲೆ ರೆಡ್ ಜೋನ್ನಲ್ಲಿದ್ದು, ಲಾಕ್ಡೌನ್ಗೆ ಸಂಬಂಧಿಸಿದಂತೆ ಈಗಿರುವ ಎಲ್ಲ ನಿಯಮ ಮುಂದುವರಿಯಲಿದೆ ಎಂದು ಕೇಂದ್ರ ಗೃಹ ಸಚಿವಾಲಯ ಪ್ರಕಟಿಸಿದೆ. ಹೀಗಾಗಿ ಜಿಲ್ಲೆಯಲ್ಲಿ ಯಾವುದೇ ರೀತಿಯ ವ್ಯವಹಾರ ನಡೆಯಲ್ಲ. ಕೈಗಾರಿಕೆಗಳು, ಶಾಲಾ-ಕಾಲೇಜುಗಳು, ವಾಹನ ಸಂಚಾರ ಹೀಗೆ ಎಲ್ಲ ರೀತಿಯ ಸಂಚಾರ 15 ದಿನಗಳವರೆಗೆ ಬಂದ್ ಇರಲಿದೆ. ಕಲಬುರಗಿಯಲ್ಲಿ ದಿನೇದಿನೆ ಪ್ರಕರಣ ಹೆಚ್ಚುತ್ತಿರುವುದು ಒಂದೆಡೆಯಾದರೆ, ಲಾಕ್ಡೌನ್ ಲೆಕ್ಕಕ್ಕೆ ಇಲ್ಲವಾಗಿದೆ. ಬೆಳಗ್ಗಿನ ಸಮಯದಲ್ಲಿ ಎಲ್ಲೋ ಒಂದು ಕಡೆ ನಿಲ್ಲುವ ಪೊಲೀಸರು ಕೆಲ ಸಮಯ ಲಾಠಿ ಬೀಸಿ ನಂತರ ಹೋಗಿ ಬಿಡುತ್ತಾರೆ. ಇನ್ನು ಅಲ್ಲಲ್ಲಿ ನಿಲ್ಲುವ ಪೊಲೀಸರು ಬಹುತೇಕ ಜನರನ್ನು ಪರೀಕ್ಷಿಸುವುದೇ ಇಲ್ಲ. ಹೀಗಾಗಿ ಜನಜೀವನ ಯಥೇಚ್ಛ ಮುಂದುವರಿದಿದೆ. ಕೆಲ ಪ್ರದೇಶ ಗಮನಿಸಿದರಂತೂ ಕಲಬುರಗಿ ರೆಡ್ ಜೋನ್ ಜಿಲ್ಲೆಯೇ ಎಂಬ ಅನುಮಾನ ಮೂಡುತ್ತದೆ. ದ್ವಿಚಕ್ರ ಮತ್ತು ನಾಲ್ಕು ಚಕ್ರ ವಾಹನಗಳು ಯಾವುದೇ ಅಡೆತಡೆ ಇಲ್ಲದೆ ಓಡಾಡುತ್ತಿವೆ. ಅಲ್ಲಲ್ಲಿ ಆಟೋಗಳು ಓಡಾಡುವುದು ಕಂಡು ಬರುತ್ತಿದೆ. ಇನ್ನು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದೂ ಕಾಣುತ್ತಿಲ್ಲ. ಜಿಲ್ಲಾಡಳಿತ, ಪೊಲೀಸ್ ಇಲಾಖೆಗಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳದಿದ್ದರೆ ಸೋಂಕಿನ ಸಂಖ್ಯೆ ಹೆಚ್ಚಾದರೂ ಅಚ್ಚರಿಪಡಬೇಕಿಲ್ಲ.


    ಆರೋಗ್ಯ ಇಲಾಖೆ ಬುಲೆಟಿನ್ ಗೊಂದಲ
    ಕಲಬುರಗಿ ಜಿಲ್ಲೆಯ ಕರೊನಾ ಸೋಂಕು ಬಗ್ಗೆ ಬುಲೆಟಿನ್ ಬಿಡುಗಡೆ ಮಾಡುವಾಗ ಆರೋಗ್ಯ ಇಲಾಖೆ ಪದೇಪದೆ ಗೊಂದಲ ಸೃಷ್ಟಿಸಿ ಜನರನ್ನು ಭಯಗ್ರಸ್ತರನ್ನಾಗಿ ಮಾಡುತ್ತಿದೆ. ಜಿಲ್ಲೆಯಲ್ಲಿ ಕರೊನಾದಿಂದ ಒಂದು ಸಾವು ಮತ್ತು ಆರು ಹೊಸ ಪ್ರಕರಣ ಪತ್ತೆ ಎಂದು ಸೋಮವಾರ ಸಂಜೆಯೇ ತಿಳಿಸಲಾಯಿತು. ಸಾವಿನ ಬಗ್ಗೆ ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ಟ್ವೀಟ್ ಮಾಡಿದರು. ಹೊಸದಾಗಿ ಪತ್ತೆಯಾದ ಪ್ರಕರಣಗಳು ಪಿ.395 ಸಂಪರ್ಕಕ್ಕೆ ಬಂದಿವೆ ಎಂದು ಜಿಲ್ಲಾಡಳಿತ ತಿಳಿಸಿತು. ಆದರೆ ಮಂಗಳವಾರ ಬುಲೆಟಿನ್ ಬಿಡುಗಡೆ ಮಾಡಿದ ಆರೋಗ್ಯ ಇಲಾಖೆ ಜಿಲ್ಲೆಯಲ್ಲಿ ಒಂದು ಸಾವು ಸಂಭವಿಸಿದೆ. ಆರು ಹೊಸ ಪ್ರಕರಣ ಪತ್ತೆಯಾಗಿವೆ. ಈ ಎಲ್ಲ ಪ್ರಕರಣಗಳು ಪಿ. 425ರ ಸಂಪರ್ಕಕ್ಕೆ ಬಂದದ್ದು ಎಂದು ತಪ್ಪು ವರದಿ ಮಾಡಿತು. ಇದಕ್ಕೂ ಮೊದಲು ಕಲಬುರಗಿಗೆ ಸಂಪರ್ಕವಿದ್ದ ಪ್ರಕರಣಗಳು ವಿಜಯಪುರ ಸಂಪರ್ಕದಿಂದ ಬಂದದ್ದು ಎಂದು ಪ್ರಕಟಿಸಿಯೂ ನಗೆಪಾಟಿಲಿಗೆ ಈಡಾಗಿದ್ದನ್ನು ಮರೆಯಲಾಗದು. ಇನ್ನು ಹೊಸ ಪ್ರಕರಣಗಳ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡುವ ಜಿಲ್ಲಾಡಳಿತ, ಪ್ರತಿ ಸೋಂಕಿತನಿಗೆ ಸಂಪರ್ಕಿತ ವ್ಯಕ್ತಿಯ ಸಂಬಂಧ ಎಂಥದ್ದು ಎಂಬುದನ್ನು ತಿಳಿಸುವ ಗೋಜಿಗೂ ಹೋಗುತ್ತಿಲ್ಲ. ಮಾಹಿತಿ ಕೇಳಿದರೆ ಪ್ರೈಮರಿ, ಸೆಕೆಂಡರಿ ಕಾಂಟ್ಯಾಕ್ಟ್ ಎಂದಷ್ಟೇ ತಿಳಿಸಿಬಿಡುವ ಮೂಲಕ ಸ್ಪಷ್ಟ ಮಾಹಿತಿ ನೀಡುತ್ತಿಲ್ಲ. ಇದು ಸಹ ಅನಗತ್ಯ ಗೊಂದಲಕ್ಕೆ ಕಾರಣವಾಗುತ್ತಿದೆ. ಸುಳ್ಳು ಸುದ್ದಿ ಬಿತ್ತರಿಸಿದರೆ ಪ್ರಕರಣ ದಾಖಲಿಸುವುದಾಗಿ ಮಾಧ್ಯಮಗಳನ್ನು ಹೆದರಿಸುವ ಕಾಯಾಂಗವೇ ತಪ್ಪು ಮಾಹಿತಿ ತಪ್ಪು ನೀಡಿದರೆ ಹೇಗೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts