More

    ಡಿಸಿ ಕಚೇರಿಯಲ್ಲೇ ರಾತ್ರಿ ಕಳೆದ ರಷ್ಯಾ ಪ್ರವಾಸಿಗ

    ಕಾರವಾರ: ತಾಯ್ನಾಡಿಗೆ ಮರಳಲು ಹಣವಿಲ್ಲದೆ, ರಷ್ಯಾ ಪ್ರವಾಸಿಗ ಜಿಲ್ಲಾಧಿಕಾರಿ ಕಚೇರಿಯಲ್ಲೇ ರಾತ್ರಿ ಕಳೆದ ಘಟನೆ ನಡೆದಿದೆ. ಶುಕ್ರವಾರ ರಾತ್ರಿ ಇಲ್ಲಿನ ಜಿಲ್ಲಾಧಿಕಾರಿ ಕಚೇರಿಗೆ ಬಂದು ಕುಳಿತಿದ್ದ ರುಸ್ಲಾನ್ ಎಂಬ 32 ವರ್ಷದ ರಷ್ಯಾ ಪ್ರವಾಸಿಗ ತನ್ನ ಸಮಸ್ಯೆ ಹೇಳಿಕೊಳ್ಳಲು ಸ್ಥಳೀಯ ಭಾಷೆ ಬಾರದೇ ಸಮಸ್ಯೆ ಅನುಭವಿಸಿದ.

    ರುಸ್ಲಾನ್ ಕೆಲ ತಿಂಗಳಿಂದ ಗೋಕರ್ಣಕ್ಕೆ ಪ್ರವಾಸಕ್ಕೆ ಬಂದಿದ್ದ. ಕರೊನಾ ಲಾಕ್​ಡೌನ್ ಹಾಗೂ ವೀಸಾ ಅವಧಿ ಮುಕ್ತಾಯವಾದ ಕಾರಣ ವಾಪಸ್ ತೆರಳಲು ಸಾಧ್ಯವಾಗಿರಲಿಲ್ಲ. ಸಾಕಷ್ಟು ಕುಡಿಯುವ ಚಟವಿದ್ದ ರುಸ್ಲಾನ್ ತನ್ನ ಬ್ಯಾಗ್, ಹಣ, ಮೊಬೈಲ್ ಎಲ್ಲವನ್ನೂ ಕಳೆದುಕೊಂಡಿದ್ದ. ಪಾಸ್​ಪೋರ್ಟ್ ಮಾತ್ರ ಹೇಗೋ ಸಂರಕ್ಷಿಸಿ ಇಟ್ಟುಕೊಂಡಿದ್ದ. ಇಲ್ಲಿ ತೊಂದರೆಗೊಳಗಾದ ಆತ ಸ್ವದೇಶಕ್ಕೆ ತೆರಳುವ ಹಂಬಲದಲ್ಲಿದ್ದ. ಭಾರತ ವಿದೇಶಾಂಗ ಇಲಾಖೆ ವೀಸಾ ಅವಧಿಯನ್ನು ಜೂನ್ ಅಂತ್ಯದವರೆಗೆ ವಿಸ್ತರಿಸಿತ್ತು. ಆದರೆ, ಆತ ಸ್ವದೇಶ ರಷ್ಯಾಕ್ಕೆ ತೆರಳಲು ಮುಂಬೈ ಅಥವಾ ನವದೆಹಲಿಯ ರಷ್ಯಾ ರಾಯಭಾರ ಕಚೇರಿಯನ್ನು ತಲುಪಬೇಕಿತ್ತು. ಕಾರವಾರ ಜಿಲ್ಲಾಧಿಕಾರಿ ಕಚೇರಿಗೆ ಹೋದರೆ ಮುಂಬೈ ತಲುಪಲು ವ್ಯವಸ್ಥೆ ಮಾಡಿಕೊಡುತ್ತಾರೆ ಎಂದು ಯಾರೋ ಹೇಳಿದ್ದರು. ಆದಕ್ಕೆ ಆತ ಗೋಕರ್ಣದಿಂದ ಬಸ್ ಹತ್ತಿ ಶುಕ್ರವಾರ ಸಾಯಂಕಾಲವೇ ಕಾರವಾರ ಜಿಲ್ಲಾಧಿಕಾರಿ ಕಚೇರಿಗೆ ತಲುಪಿದ್ದ. ಆದರೆ, ಆತನಿಗೆ ಇಂಗ್ಲಿಷ್ ಅಥವಾ ಯಾವುದೇ ಭಾರತೀಯ ಭಾಷೆ ಬಾರದೇ ಇರುವುದು ಸಮಸ್ಯೆಗೆ ಕಾರಣವಾಗಿದೆ. ಅಪರ ಜಿಲ್ಲಾಧಿಕಾರಿ ನಾಗರಾಜ ಸಿಂಗ್ರೇರ್, ಪಿಎಸ್​ಐ ಸಂತೋಷಕುಮಾರ್ ಸೇರಿ ಹಲವರು ಆತನನ್ನು ಮಾತನಾಡಿಸಿ ಸಮಸ್ಯೆ ಅರಿಯಲು ಯತ್ನಿಸಿದರು. ಆದರೆ, ರಷ್ಯನ್ ಭಾಷೆಯಲ್ಲಿ ಮಾತನಾಡುವ ಆತನ ಅಳಲು ಏನು ಎಂಬುದೇ ಅರ್ಥವಾಗದಾಗಿತ್ತು.

    ರುಸ್ಲಾನ್ ರಾತ್ರಿ ಜಿಲ್ಲಾಧಿಕಾರಿ ಕಚೇರಿಯಲ್ಲೇ ಕಳೆದಿದ್ದು, ಶನಿವಾರ ಬೆಳಗ್ಗೆ ಕಚೇರಿಗೆ ಸಿಬ್ಬಂದಿ ಬರುವ ಹೊತ್ತಿಗೆ ಆತ ವ್ಯಾಯಾಮ ಮಾಡುತ್ತ ಭಯ ಹುಟ್ಟಿಸಿದ್ದ. ನಂತರ ಮಧ್ಯಾಹ್ನದವರೆಗೂ ಬಾಗಿಲಲ್ಲೇ ಏನೂ ಹೇಳದೇ ಕುಳಿತಿದ್ದ. ಶಹರ ಠಾಣೆ ಪೊಲೀಸರು ಆತನನ್ನು ಕರೆದೊಯ್ದು ಸಹಾಯ ಮಾಡಿದ್ದಾರೆ. ಗೂಗಲ್ ಟ್ರಾನ್ಸ್​ಲೇಟರ್ ಸಹಾಯದಿಂದ ಸುಮಾರು ಮೂರು ತಾಸು ಆತನ ಸಮಸ್ಯೆ ಆಲಿಸಿದ್ದಾರೆ. ನಂತರ ಮುಂಬೈನಲ್ಲಿರು ರಷ್ಯಾ ರಾಯಭಾರ ಕಚೇರಿಗೆ ಮಾತನಾಡಿ, ಬಸ್ ಮೂಲಕ ಅಲ್ಲಿಗೆ ಕಳಿಸುವ ವ್ಯವಸ್ಥೆ ಮಾಡಲಾಗಿದೆ ಎಂದು ಪಿಎಸ್​ಐ ಸಂತೋಷ ಕುಮಾರ್ ಹಾಗೂ ಸಿಪಿಐ ಸಂತೋಷ ಶೆಟ್ಟಿ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts