More

    ಡಿಪೋ ನಿರ್ಮಾಣಕ್ಕೆ 5 ಕೋಟಿ ರೂ. – ಸಚಿವ ಲಕ್ಷ್ಮಣ ಸವದಿ


    ಅಥಣಿ: ಪಟ್ಟಣದಲ್ಲಿ ಹೊಸ ಬಸ್ ಡಿಪೋ ಬೇಕೆಂಬ ಬೇಡಿಕೆ ಬಹಳ ದಿನಗಳಿಂದ ಇತ್ತು. ಅದಕ್ಕಾಗಿ 5 ಕೋಟಿ ರೂ. ಮಿಸಲಿಟ್ಟಿದ್ದು ಎಂದು ಸಾರಿಗೆ ಸಚಿವ ಲಕ್ಷ್ಮಣ ಸವದಿ ಹೇಳಿದರು. ಪಟ್ಟಣದಲ್ಲಿ 5 ಕೋಟಿ ರೂ. ವೆಚ್ಚದ ಹೈಟೆಕ್ ಬಸ್ ಡಿಪೋ ನಿರ್ಮಾಣ ಕಾಮಗಾರಿಗೆ ಸೋಮವಾರ ಚಾಲನೆ ನೀಡಿ ಮಾತನಾಡಿದರು. ಹಿಂದುಳಿದ ತಾಲೂಕು ಎಂಬ ಹಣೆಪಟ್ಟಿಯಿಂದ ಶೀಘ್ರ ಮುಕ್ತಿ ದೊರೆಯಲಿದೆ.

    ಹೊಸ ಕಟ್ಟಡದಿಂದ ಬಸ್ ಚಾಲಕರು, ನಿರ್ವಾಹಕರು ಹಾಗೂ ಇತರ ಸಿಬ್ಬಂದಿಗೆ ಅನುಕೂಲವಾಗಲಿದೆ. ಅಥಣಿಯಲ್ಲಿ ನಗರ ಸಾರಿಗೆ ಬಸ್ ಸಂಚಾರ ಆರಂಭಿಸುವ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು. ತಾಲೂಕಿನ ಸಮಗ್ರ ಅಭಿವೃದ್ಧಿಗೂ ಒತ್ತು ನೀಡಲಾಗುವುದು ಎಂದರು.

    ಸಿಬ್ಬಂದಿಗೆ ಅಭಯ ಹಸ್ತ: ಕರೊನಾ ಲಾಕ್‌ಡೌನ್‌ನಿಂದ ಸಾರಿಗೆ ಇಲಾಖೆಗೆ 4 ಸಾವಿರ ಕೋಟಿ ರೂ. ನಷ್ಟವುಂಟಾಗಿದೆ. ಗಂಭೀರ ಪರಿಸ್ಥಿತಿಯ ನಡುವೆಯೂ 1.20 ಲಕ್ಷ ಸಿಬ್ಬಂದಿಗೆ ವೇತನ ನೀಡಲಾಗಿದೆ. 16 ತಿಂಗಳಿಂದ ಸಾರಿಗೆ ಸಿಬ್ಬಂದಿ ವೇತನಕ್ಕಾಗಿ ಸರ್ಕಾರ 2480 ಕೋಟಿ ರೂ. ನೀಡಿದೆ. ಸೇವೆ ಕಾಯಂ ಹಾಗೂ ಇತರ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ನೌಕರರು ಎರಡು ಬಾರಿ ಪ್ರತಿಭಟನೆ ನಡೆಸಿದರೂ ನಾವು ಬೇಸರ ಮಾಡಿಕೊಂಡಿಲ್ಲ. ನ್ಯಾಯಕ್ಕಾಗಿ ಪ್ರತಿಭಟಿಸುವುದು ಎಲ್ಲರ ಹಕ್ಕಾದರೂ ಯಾರದ್ದೋ ಮಾತು ಕೇಳಿ ಮುಷ್ಕರ ಹಾದಿ ಹಿಡಿಯಬಾರದು. ವೇತನ ಹೆಚ್ಚಳಕ್ಕೆ ಸರ್ಕಾರ ಬದ್ಧ ಎಂದು ಸಚಿವರು ಅಭಯ ಹಸ್ತ ನೀಡಿದರು.

    ಹುಬ್ಬಳ್ಳಿಯ ವಾಯವ್ಯ ಸಾರಿಗೆ ನಿಗಮ ಅಧ್ಯಕ್ಷ ವಿ.ಎಸ್. ಪಾಟೀಲ ಮಾತನಾಡಿ, ಅಥಣಿಯಲ್ಲಿ ಆರ್‌ಟಿಒ ಕಚೇರಿ, ತರಬೇತಿ ಶಾಲೆ ಆರಂಭಿಸಿರುವ ಸಚಿವ ಲಕ್ಷ್ಮಣ ಸವದಿ ಬಸ್ ಡಿಪೋಗೆ ಮನಸ್ಸು ಮಾಡಿದ್ದು, ಅಭಿವೃದ್ಧಿ ಶಕೆ ಆರಂಭಿಸಿದ್ದಾರೆ ಎಂದರು. ವಾಯವ್ಯ ಸಾರಿಗೆ ನಿಗಮ ವ್ಯವಸ್ಥಾಪಕ ನಿರ್ದೇಶಕ ಕೃಷ್ಣ ಭಾಜಪೇಯಿ ಮಾತನಾಡಿ, 4 ಎಕರೆ ವಿಸ್ತಾರದಲ್ಲಿ ಹೈಟೆಕ್ ಡಿಪೋ ನಿರ್ಮಾಣವಾಗುತ್ತಿದ್ದು, ರಾಜ್ಯಕ್ಕೆ ಮಾದರಿಯಾಗಲಿದೆ ಎಂದು ಹೇಳಿದರು.

    ಮುಖಂಡ ರವಿಂದರಾವ ದೇಶಪಾಂಡೆ ಮಾತನಾಡಿದರು. ಸಾರಿಗೆ ಇಲಾಖೆ ಅಧಿಕಾರಿಗಳಾದ ಕೆ.ಶಶಿಧರ, ಎಸ್.ಬಿ.ಕಬಾಡಗಿ, ಎನ್.ಎಂ.ಕೇರಿ, ಬಿ.ಎಸ್.ಜಗದಾಳ, ಡಾ.ಎಂ.ಜಿ.ಹಂಜಿ, ಪ್ರಕಾಶ ಮಹಾಜನ, ಉಮೇಶರಾವ ಬಂಟೊಡ್ಕರ, ಶಂಭುಲಿಂಗ ಮಮದಾಪುರ, ವಿಜಯ ಬುರ್ಲಿ, ಎಸ್.ಎಸ್.ಘೂಳಪ್ಪನವರ, ಶ್ರೀಶೈಲ ಹಳ್ಳದಮಳ, ಎ.ಎಂ.ಖೊಬ್ರಿ, ರಾಮನಗೌಡ ಪಾಟೀಲ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts