More

    ಡಿಕೆಶಿ ಪ್ರತಿಕೃತಿ ದಹಿಸಿ ಹಾಸನದಲ್ಲಿ ಜೆಡಿಎಸ್ ಬೃಹತ್ ಪ್ರತಿಭಟನೆ

    ಹಾಸನ: ಅಶ್ಲೀಲ ವಿಡಿಯೋ ಹಂಚಿಕೆ ಪ್ರಕರಣದಲ್ಲಿ ಕಾಂಗ್ರೆಸ್ ಕೈವಾಡವಿದ್ದು, ಎಸ್‌ಐಟಿಯಿಂದ ನಿಷ್ಪಕ್ಷಪಾತ ತನಿಖೆ ಆಗುತ್ತಿಲ್ಲ. ಶೀಘ್ರದಲ್ಲಿ ಡಿ.ಕೆ. ಶಿವಕುಮಾರ್ ಅವರನ್ನು ಬಂಧಿಸಬೇಕು ಮತ್ತು ರೇವಣ್ಣ ಅವರನ್ನು ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿ ಜೆಡಿಎಸ್ ಕಾರ್ಯಕರ್ತರು ಮತ್ತು ಮುಖಂಡರು ಮಂಗಳವಾರ ಬೃಹತ್ ಪ್ರತಿಭಟನೆ ನಡೆಸಿ ಆಗ್ರಹಿಸಿದರು.
    ಹೇಮಾವತಿ ಪ್ರತಿಮೆಯಿಂದ ಹೊರಟ ನೂರಾರು ಕಾರ್ಯಕರ್ತರು ಮತ್ತು ಮುಖಂಡರು ಎನ್.ಆರ್. ವೃತದಲ್ಲಿ ಮಾನವ ಸರಪಳಿ ನಿರ್ಮಿಸಿ, ಡಿ.ಕೆ. ಶಿವಕುಮಾರ್ ಮತ್ತು ಮಾಜಿ ಸಂಸದ ಎಲ್.ಆರ್. ಶಿವರಾಮೇಗೌಡ ಅವರ ಪ್ರತಿಕೃತಿಯನ್ನು ದಹಿಸಿ ಆಕ್ರೋಶ ವ್ಯಕ್ತಪಡಿಸಿ, ಅಧಿಕಾರ ದುರುಪಯೋಗ ಪಡಿಸಿಕೊಂಡಿರುವ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಸಂಪುಟದಿಂದ ಕೈಬಿಡಬೇಕು. ಮತ್ತು ಎಸ್‌ಐಟಿ ಅಧಿಕಾರಿಗಳು ಬಂಧಿಸಿರುವ ಮಾಜಿ ಸಚಿವರಾದ ಎಚ್.ಡಿ.ರೇವಣ್ಣ ಅವರನ್ನು ಬಿಡುಗಡೆ ಮಾಡುವಂತೆ ಆಗ್ರಹಿಸಿದರು.
    ಇದೇ ವೇಳೆ ಮಾತನಾಡಿದ ಮಾಜಿ ಶಾಸಕ ಹಾಗೂ ಜೆಡಿಎಸ್ ಜಿಲ್ಲಾಧ್ಯಕ್ಷ ಕೆ.ಎಸ್. ಲಿಂಗೇಶ್, ಪೆನ್‌ಡ್ರೈವ್ ಹಂಚಿಕೆ ಪ್ರಕರಣ ಸಂಬಂಧ ಈಗಾಗಲೇ ಜೆಡಿಎಸ್ ಪಕ್ಷ ಹಾಗೂ ನಮ್ಮ ನಾಯಕರು ನಿಷ್ಪಕ್ಷಪಾತ ತನಿಖೆಗೆ ಒತ್ತಾಯಿಸಿದ್ದೇವೆ. ಅಲ್ಲದೆ ಈ ಪ್ರಕರಣದಲ್ಲಿ ಯಾರೇ ತಪ್ಪು ಮಾಡಿದ್ದರೂ ತನಿಖೆ ನಡೆಸಿ ಕಠಿಣ ಶಿಕ್ಷೆ ನೀಡುವಂತೆಯೂ ಆಗ್ರಹ ಮಾಡಲಾಗಿದೆ. ಪ್ರಕರಣವನ್ನು ರಾಜ್ಯ ಸರ್ಕಾರ ಎಸ್‌ಐಟಿ ತನಿಖೆಗೆ ಆದೇಶ ಮಾಡಿರುವುದನ್ನೂ ನಾವು ಸ್ವಾಗತ ಮಾಡಿದ್ದೇವೆ. ಆದರೆ ಆರಂಭದಲ್ಲೇ ತನಿಖೆಯ ಹಾದಿ ತಪ್ಪುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
    ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಅಧಿಕಾರ ದುರ್ಬಳಕೆ ಮಾಡಿಕೊಂಡು ತನಿಖೆಯಲ್ಲಿ ಹಸ್ತಕ್ಷೇಪ ಮಾಡುವುದರ ಜತೆಗೆ ಪೆನ್ ಡ್ರೈವ್ ಹಂಚಿಕೆ ಪ್ರಕರಣವನ್ನೇ ಮುಂದಿಟ್ಟುಕೊಂಡು ದ್ವೇಷ ರಾಜಕೀಯದ ಮೂಲಕ ಜೆಡಿಎಸ್ ಪಕ್ಷ ಹಾಗೂ ನಾಯಕರನ್ನು ಹಣಿಯುವ ಷಡ್ಯಂತ್ರ ಮಾಡಿರುವುದು ಜಗಜ್ಜಾಹೀರವಾಗಿದೆ. ಪೆನ್‌ಡ್ರೈವ್ ಹಂಚಿಕೆಯಲ್ಲಿ ಭಾಗಿಯಾಗುವ ಮೂಲಕ ಮಹಿಳೆಯರು ಮತ್ತು ಹೆಣ್ಣು ಮಕ್ಕಳ ಮಾನ ಹರಾಜಾಗುವಲ್ಲಿ ಪ್ರಮುಖ ಪಾತ್ರ ವಹಿಸಿರುವ ಡಿಸಿಎಂ ಸೇರಿದಂತೆ ರಾಜಕೀಯ ಲಾಭಕ್ಕಾಗಿ ಪಕ್ಷದಿಂದ ಪಕ್ಷಕ್ಕೆ ಹಾರುವ ಜಾಯಮಾನ ಹೊಂದಿರುವ ಎಲ್.ಆರ್.ಶಿವರಾಮೇಗೌಡ, ಶ್ರೇಯಸ್ ಪಟೇಲ್, ಕಾರು ಚಾಲಕ ಕಾರ್ತಿಕ್, ಹೊಳೆನರಸೀಪುರ ಪುರಸಭೆ ಮಾಜಿ ಅಧ್ಯಕ್ಷ ಪುಟ್ಟರಾಜು ಅಲಿಯಾಸ್ ಪುಟ್ಟಿ ಅವರ ವಿರುದ್ಧ ಮಾನಹಾನಿ ಪ್ರಕರಣ ದಾಖಲಿಸಿ, ಸೂಕ್ತ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
    ಶಾಸಕ ಸಿ.ಎನ್. ಬಾಲಕೃಷ್ಣ ಮಾತನಾಡಿ, ಎಸ್‌ಐಟಿ ತನಿಖೆ ಹಾದಿ ತಪ್ಪುತ್ತಿರುವುದರಿಂದ ಪ್ರಕರಣದ ಸತ್ಯಾಸತ್ಯತೆ ಹೊರ ಬರುವುದು ಅನುಮಾನವಾಗಿದ್ದು, ಕೂಡಲೇ ಇದನ್ನು ಹೈಕೋರ್ಟ್ ಅಥವಾ ಸುಪ್ರೀಂಕೋರ್ಟ್ ಹಾಲಿ ನ್ಯಾಯಮೂರ್ತಿಗಳಿಂದ ತನಿಖೆ ನಡೆಸಲು ಆದೇಶ ಮಾಡಬೇಕು. ಇಲ್ಲವೇ ಸಿಬಿಐ ತನಿಖೆಗೆ ವಹಿಸಬೇಕು. ಸುಮಾರು 40 ವರ್ಷಗಳ ರಾಜಕೀಯ ಇತಿಹಾಸದಲ್ಲಿ ಯಾವುದೇ ಕಪ್ಪು ಚುಕ್ಕೆ ಇಲ್ಲದೆ ಸಾರ್ವಜನಿಕ ಸೇವೆಯ ಜತೆಗೆ ಜಿಲ್ಲೆಯ ಸವಾರ್ಂಗೀಣ ಅಭಿವೃದ್ಧಿಗೆ ದುಡಿದು ತಮ್ಮದೇ ಸ್ಮರಣೀಯ ಕೊಡುಗೆ ನೀಡಿರುವ ಮಾಜಿ ಸಚಿವ ಎಚ್.ಡಿ.ರೇವಣ್ಣ ಅವರನ್ನು ರಾಜಕೀಯವಾಗಿ ಹಣಿಯುವ ದುರುದ್ದೇಶದಿಂದ ಅವರ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಿ ಬಂಧಿಸಲಾಗಿದೆ. ಈ ಕೂಡಲೇ ಅವರನ್ನು ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.
    ನಂತರ ಪ್ರತಿಭಟನಾಕಾರರು ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ ಜಿಲ್ಲಾಧಿಕಾರಿ ಮತ್ತು ಡಿಕೆ ಶಿವಕುಮಾರ್ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ನಂತರ ಜಿಲ್ಲಾಧೀಕಾರಿ ಸಿ. ಸತ್ಯಭಾಮಾ ಅವರಿಗೆ ಮನವಿ ಪತ್ರ ಸಲ್ಲಿಸಿದರು.
    ಈ ಸಂದರ್ಭದಲ್ಲಿ ಶಾಸಕ ಎ ಮಂಜು, ಮಾಜಿ ಶಾಸಕ ಎಚ್.ಕೆ. ಕುಮಾರಸ್ವಾಮಿ, ಜೆಡಿಎಸ್ ಮುಖಂಡರಾದ ಎನ್.ಆರ್. ಸಂತೋಷ್, ತೋ.ಚ. ಅನಂತ ಸುಬ್ಬರಾಯ, ಕೆ.ಎಸ್.ಮಂಜೇಗೌಡ, ಎಸ್.ದ್ಯಾವೇಗೌಡ ಸೇರಿದಂತೆ ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳು ಮುಖಂಡರು ಹಾಗೂ ಜೆಡಿಎಸ್ ಪದಾಧಿಕಾರಿಗಳು ಹಾಜರಿದ್ದರು.

    ನೀಚ ರಾಜಕಾರಣವನ್ನು ಯಾರು ಮಾಡಬಾರದು: ಎ.ಮಂಜು
    ಪ್ರತಿಭಟನಕಾರರನ್ನು ಉದ್ದೇಶಿಸಿ ಶಾಸಕ ಎ.ಮಂಜು ಮಾತನಾಡಿ, ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಎಚ್ ಡಿ ರೇವಣ್ಣ ಅವರ ವಿರುದ್ಧ ಪಿತೂರಿ ಮಾಡಿ ಅವರನ್ನು ಬಂಧಿಸಲಾಗಿದೆ. ಇಂತಹ ನೀಚ ರಾಜಕಾರಣವನ್ನು ಯಾರು ಮಾಡಬಾರದು. ಈ ಕೃತ್ಯ ಎಸಗಿದವರನ್ನು ದೇವರು ಸುಮ್ಮನೆ ಬಿಡುವುದಿಲ್ಲ. ಈ ಕೆಲಸ ಮಾಡಿದವರ ಹೆಸರು ಮುಂದೆ ಹೊರಗೆ ಬರಲಿದೆ. ಒಂದು ಕುಟುಂಬದ ವಿರುದ್ಧ ಈ ರೀತಿ ಷಡ್ಯಂತರ ನಡೆಸಬಾರದು. ಈ ಪ್ರಕರಣವನ್ನು ರಾಜ್ಯ ಸರ್ಕಾರ ಸಿಬಿಐಗೆ ವಹಿಸಬೇಕು ನಾನು ದೇವೇಗೌಡರನ್ನು ಭೇಟಿಯಾಗಿ ಸಾಂತ್ವನ ಹೇಳಿದ್ದೇನೆ. ಮುಂದಿನ ದಿನಗಳಲ್ಲಿ ಪಕ್ಷ ಇದರ ಬಗ್ಗೆ ಕಾನೂನು ಹೋರಾಟ ನಡೆಸಲಿದೆ ಎಂದು ಹೇಳಿದರು.

    ‘ಗೋ ಬ್ಯಾಕ್ ಡಿಸಿ’ ಘೋಷಣೆ
    ಪ್ರತಿಭಟನಾಕಾರರು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲು ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ ಸಂದರ್ಭದಲ್ಲಿ ಡಿಸಿ.ಸಿ ಸತ್ಯಭಾಮಾ ಅವರು ಮನವಿ ಸ್ವೀಕರಿಸಲು ಆಗಮಿಸಿದರು. ಈ ಸಂದರ್ಭದಲ್ಲಿ ಕಾರ್ಯಕರ್ತರು ‘ಡೌನ್ ಡೌನ್ ಡಿಸಿ’, ‘ಗೋ ಬ್ಯಾಕ್ ಡಿಸಿ’ ಎಂದು ಘೋಷಣೆ ಕೂಗಿದರು. ನಂತರ ಪ್ರತಿಭಟನಾಕಾರರನ್ನು ಸಮಾಧಾನಪಡಿಸಲು ಪೊಲೀಸರು ಹರಸಾಹಸಪಟ್ಟರು. ಈ ಸಂದರ್ಭದಲ್ಲಿ ಸ್ಥಳದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಯಿತು. ನಂತರ ಪೊಲೀಸರು ಪ್ರತಿಭಟನಾಕಾರರನ್ನು ಸಮಾಧಾನಪಡಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts