More

    ಡಾ.ಕೋರೆ ಅಮೃತ ಮಹೋತ್ಸವ 15ರಂದು

    ಬೆಳಗಾವಿ: ಕೆಎಲ್ಇ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ಅವರ 75ನೇ ಜನ್ಮದಿನ ಅಂಗವಾಗಿ ಅ.15ರಂದು ಅಮೃತ ಮಹೋತ್ಸವ ಸಮಾರಂಭವನ್ನು ನೆಹರು ನಗರದ ಜೆಎನ್‌ಎಂಸಿ ಆವರಣದಲ್ಲಿನ ಜಿಲ್ಲಾ ಕ್ರೀಡಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ. ಕರ್ನಾಟಕ, ಮಹಾರಾಷ್ಟ್ರ ಹಾಗೂ ಗೋವಾ ರಾಜ್ಯ ಹಾಗೂ ಕೇಂದ್ರದ ಹಲವು ನಾಯಕರು ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ವಿಧಾನ ಪರಿಷತ್ ಆಡಳಿತ ಪಕ್ಷದ ಮಾಜಿ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ ಹೇಳಿದರು.

    ನಗರದಲ್ಲಿನ ಕೆಎಲ್ಇ ಕೇಂದ್ರ ಕಚೇರಿಯಲ್ಲಿ ಬುಧವಾರ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 15ರಂದು ಮಧ್ಯಾಹ್ನ 2ಗಂಟೆಗೆ ಸಮಾರಂಭ ಉದ್ಘಾಟನೆಯಾಗಲಿದೆ. ಮುಖ್ಯ ಅತಿಥಿಯಾಗಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಆಗಮಿಸಲಿದ್ದು, ಸಿಎಂ ಬಸವರಾಜ ಬೊಮ್ಮಾಯಿ, ಗೋವಾ ಸಿಎಂ ಪ್ರಮೋದ ಸಾವಂತ್ ಹಾಗೂ ಮಹಾರಾಷ್ಟ್ರ ಡಿಸಿಎಂ ದೇವೇಂದ್ರ ಡ್ನವೀಸ್, ಮಹಾರಾಷ್ಟ್ರದ ಕಂದಾಯ ಸಚಿವ ರಾಧಾಕೃಷ್ಣ ವಿಖೆಪಾಟೀಲ ಹಾಗೂ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಆಗಮಿಸಲಿದ್ದಾರೆ. ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ ಮತ್ತು ಜಗದೀಶ ಶೆಟ್ಟರ್, ಮಾಜಿ ಸಚಿವ ಆರ್.ವಿ.ದೇಶಪಾಂಡೆ ಹಾಗೂ ಮಾಜಿ ಸಚಿವ, ಅಖಿಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷ ಡಾ.ಶಾಮನೂರು ಶಿವಶಂಕರಪ್ಪ ಮತ್ತು ನಾಡಿನ ವಿವಿಧ ಮಠಾಧೀಶರು ಪಾಲ್ಗೊಳ್ಳಲಿದ್ದಾರೆ ಎಂದರು.

    6 ಸ್ಥಳಗಳಲ್ಲಿ ದಾಸೋಹ ವ್ಯವಸ್ಥೆ: ಡಾ.ಕೋರೆ ಅಮೃತ ಮಹೋತ್ಸವಕ್ಕೆ ಆಗಮಿಸುವ ಅಭಿಮಾನಿಗಳಿಗೆ ಉತ್ತರ ಕರ್ನಾಟಕದ ರುಚಿಯಾದ ಅನ್ನ ದಾಸೋಹ ವ್ಯವಸ್ಥೆ ಮಾಡಲಾಗಿದೆ. ಚಿಕ್ಕೋಡಿ ಭಾಗದವರಿಗೆ ಮುಕ್ತಿಮಠ, ಗೋಕಾಕ ಭಾಗದವರಿಗೆ ಕಣಬರ್ಗಿಯ ಸಂಕಲ್ಪ ಗಾರ್ಡನ್, ಸವದತ್ತಿ ಬೈಲಹೊಂಗಲ ಭಾಗದವರಿಗೆ ನಿಲಜಿ ಗ್ರಾಮದಲ್ಲಿ, ಹುಬ್ಬಳ್ಳಿ, ಧಾರವಾಡ, ಗದಗ ಹಾವೇರಿ, ರಾಣೆಬೆನ್ನೂರ, ಕಿತ್ತೂರು ಭಾಗದವರಿಗೆ ಬೆಳಗಾವಿಯ ಧರ್ಮನಾಥ ಮಂಗಲ ಕಾರ್ಯಾಲಯದಲ್ಲಿ ಹಾಗೂ ಖಾನಾಪುರ ಹಾಗೂ ಬೆಳಗಾವಿಯ ಜನರಿಗೆ ನಾಗನೂರು ಮಠ ಸೇರಿ ಒಟ್ಟು ಆರು ಸ್ಥಳಗಳಲ್ಲಿ ಊಟದ ವ್ಯವಸ್ಥೆ ಮಾಡಲಾಗಿದೆ ಎಂದರು. ಸಮಾರಂಭದಲ್ಲಿ 1.80 ಲಕ್ಷ ಜನ ಸೇರುವ ನಿರೀಕ್ಷೆಯಿದೆ.

    ವಾಹನಗಳ ಪಾರ್ಕಿಂಗ್‌ಗೆ ಶ್ರೀನಗರ, ಮಹಾಂತೇಶ ನಗರ, ಐಸಿಎಂ ಬಾಕ್ಸೈಟ್ ರೋಡ್ ಸೇರಿ ಹಲವೆಡೆ ಸ್ಥಳ ಗುರುತಿಸಲಾಗುತ್ತಿದ್ದು, ಪೊಲೀಸ್ ಅಧಿಕಾರಿಗಳೊಂದಿಗೆ ಚರ್ಚಿಸಿ ನಿಗದಿಪಡಿಸಲಾಗುವುದು ಎಂದರು. ಬಹುಮುಖ ವ್ಯಕ್ತಿತ್ವದ ಡಾ.ಪ್ರಭಾಕರ ಕೋರೆ ಅವರು, ರಾಜಕೀಯ, ಶಿಕ್ಷಣ, ಆರೋಗ್ಯ ಹಾಗೂ ಸಮಾಜಿಕ ಸೇವೆ, ಕೃಷಿ, ಸಹಕಾರಿ, ಕೈಗಾರಿಕೆ- ವಾಣಿಜ್ಯೋದ್ಯಮ ಕ್ಷೇತ್ರದಲ್ಲಿ ಅಪ್ರತಿಮ ಸೇವೆ ಸಲ್ಲಿಸಿದ್ದು, ಜಗತ್ತಿನ ಪ್ರತಿಷ್ಠಿತ ವಿಶ್ವವಿದ್ಯಾಲಯ, ಮಠ ಮಾನ್ಯಗಳು ಹಾಗೂ ಸಂಘ-ಸಂಸ್ಥೆಗಳು ಕೊಡಮಾಡುವ ನೂರಾರು ಪ್ರಶಸ್ತಿಗಳು ಅವರ ಸಾಧನೆಗೆ ಸಂದಿವೆ ಎಂದು ಅಭಿಮಾನ ವ್ಯಕ್ತಪಡಿಸಿದರು.

    ಸುದ್ದಿಗೋಷ್ಠಿಯಲ್ಲಿ ಸಂಸದ ಈರಣ್ಣ ಕಡಾಡಿ, ಶಾಸಕರಾದ ಮಹಾಂತೇಶ ದೊಡಗೌಡರ, ಅಭಯ ಪಾಟೀಲ, ಅನಿಲ ಬೆನಕೆ, ಕೆಎಲ್‌ಇ ಗೌರವಾಧ್ಯಕ್ಷ ಮಹಾಂತೇಶ ಕೌಜಲಗಿ, ಎಂ.ಬಿ.ಜಿರಲಿ, ಕೆಎಲ್‌ಇ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts