More

    ಹೊನ್ನಾವರ ಖಾಸಗಿ ಬಂದರು ನಿರ್ಮಾಣಕ್ಕೆ ಸಚಿವರ ಜಿಲ್ಲಾಡಳಿತದ ಬೆಂಬಲ: ಸ್ಥಳೀಯ ಮೀನುಗಾರ ಕುಟುಂಬಗಳ ತಳಮಳ

    ಕಾರವಾರ: ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವ ಸಮಯದಲ್ಲಿ ಜಿಲ್ಲಾಡಳಿತ ಸೆಕ್ಷನ್ 144 ಜಾರಿ ಮಾಡಿ, ಪೊಲೀಸ್ ಭದ್ರತೆಯಲ್ಲಿ ಹೊನ್ನಾವರ ಕಾಸರಕೋಡು ಖಾಸಗಿ ಬಂದರಿಗೆ ರಸ್ತೆ ನಿರ್ಮಾಣ ಕಾಮಗಾರಿಗೆ ಸಿದ್ಧತೆ ನಡೆಸಿದ್ದು, ಸ್ಥಳೀಯರಿಂದ ಆಕ್ಷೇಪಣೆಗೆ ಕಾರಣವಾಗಿದೆ.

    ಹೊನ್ನಾವರ ಬಂದರಿನ ರಸ್ತೆ ನಿರ್ಮಾಣಕ್ಕೆ ಈಗಾಗಲೇ ಜಲ್ಲಿ ತಂದು ಹಾಕಲಾಗಿದೆ. ಇನ್ನೊಂದೆಡೆ ಬಂದರು ಇಲಾಖೆ ಹಾಗೂ ಜಿಲ್ಲಾಡಳಿತ ಬಂದರು ನಿರ್ಮಾಣಕ್ಕೆ ಬೇಕಾದ ಎಲ್ಲ ಕಡತಗಳನ್ನು ಸಿದ್ಧ ಮಾಡಿಕೊಳ್ಳುತ್ತಿದೆ. ಸೋಮವಾರ ಎಡಿಸಿ ಪ್ರಕಾಶ ರಜಪೂತ ಅವರ ಅಧ್ಯಕ್ಷತೆಯಲ್ಲಿ ಬಂದರು ನಿರ್ಮಾಣ ಸಂಬಂಧ ಸಭೆಗಳು ನಡೆಸಿವೆ. ಕ್ಯಾಪ್ಟನ್‌ ಸಿ.ಸ್ವಾಮಿ, ಮೀನುಗಾರಿಕೆ ಹಾಗೂ ಇತರ ಅಧಿಕಾರಿಗಳು ಸಭೆಯಲ್ಲಿದ್ದರು.

    ಏನಿದು ಬಂದರು ಯೋಜನೆ

    ಹೈದ್ರಾಬಾದ್ ಮೂಲದ ಹೊನ್ನಾವರ ಪೋರ್ಟ್ ಪ್ರೈವೇಟ್‌ ಲಿಮಿಟೆಡ್ ಎಂಬ ಕಂಪನಿಗೆ ಬಂದರು ಇಲಾಖೆಯು 30 ವರ್ಷಕ್ಕೆ 92 ಎಕರೆ ಜಾಗವನ್ನು ಲೀಸ್ ನೀಡಿ 2010 ರಲ್ಲಿ ಒಪ್ಪಂದ ಮಾಡಿಕೊಂಡಿತ್ತು. ಆದರೆ, ಬಂದರು ನಿರ್ಮಾಣಕ್ಕೆ ಆಕ್ಷೇಪ ವ್ಯಕ್ತಪಡಿಸಿ ಸ್ಥಳೀಯರು ತೀವ್ರ ಹೋರಾಟ ಕೈಗೊಂಡಿದ್ದರು. ಎನ್‌ಜಿಟಿ, ಹೈಕೋರ್ಟ್ಗಳಲ್ಲಿ ದಾವೆ ಹೂಡಿದ್ದರು. ಆದರೆ, ಜನರ ಹೋರಾಟಕ್ಕೆ ಬೆಲೆ ನೀಡದ ಸರ್ಕಾರ ಜಿಲ್ಲಾಡಳಿತದ ಮೂಲಕ ಬಂದರು ನಿರ್ಮಾಣಕ್ಕೆ ಎಲ್ಲ ಸಹಕಾರ ನೀಡುತ್ತಿರುವುದು ಮೀನುಗಾರರನ್ನು ಕೆರಳಿಸಿದೆ.

    ಸರ್ಕಾರದ ನಡೆಯಿಂದ ಬೇಸತ್ತ ಗ್ರಾಮಸ್ಥರು ಮತದಾನ ಬಹಿಷ್ಕಾರದ ಎಚ್ಚರಿಕೆ ನೀಡಿದ್ದರು. ಆದರೆ, ಅದಕ್ಕೂ ಬೆಲೆ ಸಿಕ್ಕಿಲ್ಲ. ಕೆಲ ದಿನಗಳ ಹಿಂದೆ ಕಾರವಾರದಲ್ಲಿ ಸಭೆ ನಡೆಸಿದ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್‌ ಹೊನ್ನಾವರ ಬಂದರು ನಿರ್ಮಾಣಕ್ಕೆ ಎಲ್ಲ ಸಹಕಾರ ನೀಡುವಂತೆ ಸರ್ಕಾರದ ನಿರ್ದೇಶನವಿದೆ. ಯಾವುದೇ ಕಾರಣಕ್ಕೂ ಬಂದರನ್ನು ಮಾಡಿಯೇ ಮಾಡುತ್ತೇವೆ. ನಿಮ್ಮ ಮನೆಗಳಿಗೂ ಕಂಪನಿಯ ಮೂಲಕ ಪರಿಹಾರ ಕೊಡಿಸಲಾಗುವುದು ಬಂದರು ನಿರ್ಮಾಣಕ್ಕೆ ಸಹಕಾರ ನೀಡಿ ಎಂದಿದ್ದರು. ಆದರೆ, ಗ್ರಾಮಸ್ಥರು ಅದಕ್ಕೆ ಒಪ್ಪದೇ ಸಭೆ ಬಹಿಷ್ಕರಿಸಿದ್ದರು. ಅದಾಗಿ ಎರಡೇ ದಿನಕ್ಕೆ ಗ್ರಾಮದಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ.

    600 ಕುಟುಂಬಗಳು ಆತಂಕದಲ್ಲಿ

    ಬಂದರು ನಿರ್ಮಾಣವಾಗಬೇಕಿರುವ ಪ್ರದೇಶದಲ್ಲಿ ಇರುವ ಶೆಡ್‌ಗಳನ್ನು ಕೆಲ ವರ್ಷಗಳ ಹಿಂದೆಯೇ ತೆರವು ಮಾಡಲಾಗಿದ್ದು, ಅದಕ್ಕೆ ಖಾಸಗಿ ಕಂಪನಿ ಚೆಕ್ ಮೂಲಕ ಪರಿಹಾರ ನೀಡಿರುವುದಾಗಿ ತಿಳಿಸಿದೆ. ಆದರೆ, ಈಗ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಬಂದರಿಗೆ ಸಂಪರ್ಕ ಕಲ್ಪಿಸಲು 4 ಕಿಮೀ ರಸ್ತೆ ನಿರ್ಮಾಣ ಕಾಮಗಾರಿ ನಡೆಸಲಾಗುತ್ತಿದೆ. ಅದಕ್ಕೆ ಸುಮಾರು 350 ಕುಟುಂಬಗಳು ನಿರಾಶ್ರಿತವಾಗುವ ಆತಂಕವಿದೆ. ಮುಂದೆ ಬಂದರಿಗೆ ರೈಲ್ವೆ ಸಂಪರ್ಕ ಕಲ್ಪಿಸುವ ಯೋಜನೆ ಇದ್ದು, ಅದಕ್ಕೆ 250 ಕುಟುಂಬಗಳು ನಿರಾಶ್ರಿತವಾಗುವ ಸಾಧ್ಯತೆ ಇದೆ. ಇದು ಮೀನುಗಾರರ ನಿದ್ದೆಗೆಡಿಸಿದೆ.

    ಜಿಲ್ಲಾಡಳಿತದ ನಡೆಗೆ ಆಕ್ಷೇಪ:

    ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಮೀನುಗಾರರ ಮುಖಂಡ ರಾಜೇಶ ತಾಂಡೇಲ, ಬಂದರು ಸಂಪರ್ಕಕ್ಕೆ ರಸ್ತೆ ಮಾಡಲಾಗುತ್ತಿರುವ ಸ್ಥಳ ಆಮೆ ಮೊಟ್ಟೆ ಇಡುವ ಸ್ಥಳ ಎಂದು ಅರಣ್ಯ ಇಲಾಖೆ ಗುರುತಿಸಿದೆ. ಖಾಸಗಿ ಕಂಪನಿ ರಸ್ತೆಗಾಗಿ ಮಣ್ಣು, ಕಲ್ಲು ಹಾಕಿ, ಆಮೆ ಮೊಟ್ಟೆ ಇಡುವ ಜಾಗವನ್ನು ನಾಶ ಮಾಡುತ್ತಿದೆ ಎಂದು ದೂರಿದ್ದಾರೆ.

    ಬಂದರು ನಿರ್ಮಾಣಕ್ಕೆ 2012 ರಲ್ಲಿ ಎಚ್‌ಪಿಪಿಎಲ್‌ಗೆ ನೀಡಿದ ಪರಿಸರ ಪರವಾನಗಿ ರದ್ದುಗೊಂಡಿರುವ ಬಗ್ಗೆ ಎನ್‌ಜಿಟಿ ತನ್ನ ತೀರ್ಪಿನಲ್ಲಿ ಪ್ರಸ್ತಾಪಿಸಿದೆ. ಇನ್ನು 4 ಕಿಮೀ ರಸ್ತೆ ನಿರ್ಮಾಣಕ್ಕೆ ಸಲ್ಲಿಸಿದ್ದ ಪ್ರಸ್ತಾವನೆಯನ್ನು ಆರ್‌ಜಡ್‌ ರಾಷ್ಟ್ರೀಯ ತಜ್ಞರ ಸಮಿತಿ ತಿರಸ್ಕರಿಸಿದೆ. ಇದರಿಂದ ಗಲಿಬಿಲಿಗೊಂಡ ಎಚ್‌ಪಿಪಿಎಲ್‌ ಕಂಪನಿಯು ವಾಮ ಮಾರ್ಗದಿಂದ ಜಿಲ್ಲಾ ಆಡಳಿತದ ಸಹಕಾರ ಪಡೆದು, ಇತ್ತೀಚೆಗೆ ಎಂದರೆ ಫೆಬ್ರವರಿ 16 ರಂದು ಪರಿಸರ ಪರವಾನಗಿಗೆ ಬದಲಿ ಪ್ರಸ್ತಾವನೆ ಸಲ್ಲಿಸಿದೆ. ಆದರೆ, ಕಂಪನಿಯು ನ್ಯಾಯಾಲಯಕ್ಕೂ ತಪ್ಪು ಮಾಹಿತಿ ನೀಡುತ್ತಿದೆ. ತನ್ನ ಬಲದಿಂದ ಜಿಲ್ಲಾಡಳಿತ, ಪೊಲೀಸ್‌ ಇಲಾಖೆಯನ್ನೂ ತಪ್ಪು ದಾರಿಗೆ ಎಳೆಯುತ್ತಿದೆ ಎಂದು ತಿಳಿಸಿದ್ದಾರೆ.

    ಸಚಿವರ ವಿರುದ್ಧ ಅಸಮಾಧಾನ

    ಮಂಕಾಳ ವೈದ್ಯ ಹಿಂದೆ 2022 ರಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನು ಕಾಸರಕೋಡಿಗೆ ಕರೆತಂದಿದ್ದರು. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಬಂದರು ನಿರ್ಮಾಣಕ್ಕೆ ಅವಕಾಶ ನೀಡುವುದಿಲ್ಲ ಎಂದು ಸಚಿವರು ಆಗ ಡಿ.ಕೆ.ಶಿವಕುಮಾರ್ ಭರವಸೆ ನೀಡಿದ್ದರು. ಮಂಕಾಳ ವೈದ್ಯ ಹಾಗೂ ಡಿಕೆಶಿ ಇಬ್ಬರೂ ಈಗ ಸರ್ಕಾರದ ಭಾಗವಾಗಿದ್ದಾರೆ. ಆದರೆ, ಅವರ ಅನುಮತಿ ಇಲ್ಲದೇ ಈಗ ಪೊಲೀಸ್ ಭದ್ರತೆಯಲ್ಲಿ ಕಾಮಗಾರಿ ನಡೆಯಲು ಹೇಗೆ ಸಾಧ್ಯ ಎಂದು ಮೀನುಗಾರರ ಮುಖಂಡ ರಾಜೇಶ ತಾಂಡೇಲ ಪತ್ರಿಕಾ ಹೇಳಿಕೆಯಲ್ಲಿ ಪ್ರಶ್ನಿಸಿದ್ದಾರೆ. ಸಚಿವರ ನಡೆಯ ಬಗ್ಗೆ ಆಕ್ಷೇಪಿಸಿದ್ದಾರೆ.

    ಇದನ್ನೂ ಓದಿ: ಕಾಸರಕೋಡು ಬಂದರು ಪ್ರದೇಶದ ಸುತ್ತ ನಿಷೇಧಾಜ್ಞೆ ಜಾರಿ



    ಬಂದರು ನಿರ್ಮಾಣಕ್ಕೆ ಪರಿಸರ, ಅರಣ್ಯ, ಸಿಆರ್‌ಜಡ್ ಅನುಮತಿ ಪಡೆದುಕೊಳ್ಳಲಾಗಿದೆ. ರಸ್ತೆ ನಿರ್ಮಾಣದ ಕುರಿತು ಮೀನುಗಾರರು ಹೂಡಿದ್ದ ದಾವೆಯನ್ನು ಪರಿಶೀಲಿಸಿದ ಎನ್‌ಜಿಟಿ ಕೆಲವು ಷರತ್ತು ವಿಧಿಸಿ ವಜಾ ಮಾಡಿದೆ. ಬಂದರು ನಿರ್ಮಾಣಕ್ಕೆ ನೀಡಿದ್ದ ಪರಿಸರ ನಿರಾಕ್ಷೇಪಣಾ ಪತ್ರವನ್ನು ರದ್ದು ಮಾಡುವಂತೆ ಕೋರಿ ಹಸಿ ಮೀನು ಮಾರಾಟಗಾರರು ಸಲ್ಲಿಸಿದ್ದ ಮನವಿಯನ್ನು ಹೈಕೋರ್ಟ್ ವಜಾ ಮಾಡಿದೆ. 1 ಸಾವಿರ ಕೋಟಿ ವೆಚ್ಚದ ಬಂದರು ಇದಾಗಿದ್ದು, ಸರ್ಕಾರ ಒಂದು ಪೈಸೆಯನ್ನೂ ಖರ್ಚು ಮಾಡುವುದಿಲ್ಲ. ಬದಲಾಗಿ ಸರ್ಕಾರಕ್ಕೆ ಆದಾಯ ಬರಲಿದೆ. ಅಲ್ಲದೆ, ಜನರಿಗೂ ಅನುಕೂಲವಾಗಲಿದೆ.
    ಕ್ಯಾ.ಸಿ.ಸ್ವಾಮಿ
    ಬಂದರು ಇಲಾಖೆ ನಿರ್ದೇಶಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts