More

    ಠೇವಣಿ ಮರಳಿಸಲು ಹಿಂದೇಟು

    ಹುಬ್ಬಳ್ಳಿ: ಸ್ಮಾರ್ಟ್ ಸಿಟಿ ಯೋಜನೆಯಡಿ ಹುಬ್ಬಳ್ಳಿಯ ಹಳೇ ಬಸ್ ನಿಲ್ದಾಣ ಹೊಸ ಸ್ವರೂಪ ಪಡೆಯಲಿದೆ. ಇದರಿಂದ ತೆರವುಗೊಳ್ಳಲಿರುವ ಬಸ್ ನಿಲ್ದಾಣದ ಕಟ್ಟಡದಲ್ಲಿನ ಮಳಿಗೆದಾರರಿಂದ ಪಡೆದಿರುವ ಭದ್ರತಾ ಠೇವಣಿ ಮರಳಿಸಲು ವಾಕರಸಾ ಸಂಸ್ಥೆ ಕಳೆದ ಒಂದೂವರೆ ತಿಂಗಳಿಂದ ಸತಾಯಿಸುತ್ತಿದೆ.

    ಕರೊನಾ, ಲಾಕ್​ಡೌನ್​ನಿಂದ ಸುಮಾರು ನಾಲ್ಕೂವರೆ ತಿಂಗಳಿಂದ ವ್ಯಾಪಾರವಿಲ್ಲದೇ ಕಂಗಾಲಾಗಿರುವ ಮಳಿಗೆದಾರರು ಅತ್ತ ಬೇರೆ ವ್ಯಾಪಾರ-ವಹಿವಾಟು ನಡೆಸಲು ಬಂಡವಾಳವಿಲ್ಲದೇ, ಇತ್ತ ಬ್ಯಾಂಕ್ ಸಾಲ ತುಂಬಲು ಸಾಧ್ಯವಾಗದೇ ಸಂಕಷ್ಟಕ್ಕೆ ಸಿಲುಕಿದ್ದಾರೆ. ಭದ್ರತಾ ಠೇವಣಿಯಿಂದ ಸುಮಾರು 5-6 ಕೋಟಿ ರೂ. ಸಂಗ್ರಹಿಸಿರುವ ವಾಕರಸಾ ಸಂಸ್ಥೆ ಈ ಕಷ್ಟ ಕಾಲದಲ್ಲೂ ಕಾಲ ಹರಣ ಮಾಡುತ್ತ ಮಳಿಗೆದಾರರನ್ನು ನಡು ನೀರಿನಲ್ಲಿ ನಿಲ್ಲಿಸಿದೆ.

    ಹಳೇ ಬಸ್ ನಿಲ್ದಾಣದಲ್ಲಿ 32 ಮಳಿಗೆಗಳಿವೆ. 30 ಸಾವಿರದಿಂದ 7 ಲಕ್ಷ ರೂ. ವರೆಗೆ ಮಾಸಿಕ ಬಾಡಿಗೆ (ಪರವಾನಗಿ ಶುಲ್ಕ) ಮೇಲೆ ಮಳಿಗೆಗಳನ್ನು ಪಡೆದಿದ್ದಾರೆ. ಸ್ಮಾರ್ಟ್ ಸಿಟಿ ಯೋಜನೆಯಡಿ ಹಳೇ ಬಸ್ ನಿಲ್ದಾಣ ಕೆಡವಿ ಹೊಸ ಕಟ್ಟಡ ನಿರ್ಮಾಣ ಮಾಡುವುದು ಖಚಿತವಾಗುತ್ತಿದ್ದಂತೆ ‘ಮಳಿಗೆಗಳನ್ನು ತೆರವುಗೊಳಿಸಲು ತಾವು ಸಿದ್ಧರಿರುವುದಾಗಿ ಹಾಗೂ ತಮ್ಮದು ಯಾವುದೇ ಆಕ್ಷೇಪಣೆಗಳಿಲ್ಲ’ ಎಂದು ವಾಕರಸಾ ಸಂಸ್ಥೆಯ ಹುಬ್ಬಳ್ಳಿ ಗ್ರಾಮೀಣ ವಿಭಾಗೀಯ ನಿಯಂತ್ರಣಾಧಿಕಾರಿಯವರು ಜೂನ್ 19ರಂದು ಮಳಿಗೆದಾರರಿಂದ ಒಪ್ಪಿಗೆ ಪತ್ರ ಬರೆಯಿಸಿಕೊಂಡಿದ್ದಾರೆ.

    ಮಳಿಗೆದಾರರು ಹಾಗೂ ಸಂಸ್ಥೆಯ ನಡುವೆ ಆಗಿರುವ ಕರಾರು ಒಪ್ಪಂದದಂತೆ ಮಳಿಗೆದಾರರನ್ನು ತೆರವುಗೊಳಿಸುವಾಗ ಮುಂಚಿತವಾಗಿ ತಿಳಿಸುವುದು ಸರಿಯಾದ ಕ್ರಮ. ಆದರೆ, ಅದೇ ಮಳಿಗೆದಾರರು ಒಪ್ಪಿಗೆ ಪತ್ರದಲ್ಲಿ ತಮಗೆ ಬರಬೇಕಾದ ಭದ್ರತಾ ಠೇವಣಿ ಮೊತ್ತವನ್ನು ಬೇಗನೇ ಮರಳಿಸಿ ಎಂದು ಮನವಿ ಮಾಡಿದ್ದರೂ ಸಂಸ್ಥೆಯ ಅಧಿಕಾರಿಗಳು ಕವಡೆ ಕಾಸಿನ ಕಿಮ್ಮತ್ತು ನೀಡುತ್ತಿಲ್ಲ. ಮಳಿಗೆದಾರರೂ ನಾಲ್ಕೈದು ಬಾರಿ ಹೋಗಿ ಕೇಳಿದರೂ ಕೇಂದ್ರ ಕಚೇರಿಯಿಂದ ತಮಗೆ ಯಾವುದೇ ಆದೇಶ ಬಂದಿಲ್ಲವೆಂದು ಹುಬ್ಬಳ್ಳಿ ಗ್ರಾಮೀಣ ವಿಭಾಗೀಯ ಕಚೇರಿಯವರು ಸಾಗ ಹಾಕಿದ್ದಾರೆ. ಇದರಿಂದ ಲಕ್ಷಾಂತರ ರೂ. ಠೇವಣಿ ಕೈಗೆ ಸಿಗದೇ ಮಳಿಗೆದಾರರ ಭವಿಷ್ಯ ಅತಂತ್ರವಾಗಿದೆ.

    ‘ಮಳಿಗೆಯ ಮಾಸಿಕ ಬಾಡಿಗೆಯ 10 ಪಟ್ಟು ಮೊತ್ತವನ್ನು ಭದ್ರತಾ ಠೇವಣಿ ರೂಪದಲ್ಲಿ ಸಂಸ್ಥೆಗೆ ನೀಡಿದ್ದೇವೆ. ಈಗ ವ್ಯಾಪಾರ ಏನೂ ನಡೆಯುತ್ತಿಲ್ಲ. ಬಾಡಿಗೆ ಇಳಿಸುವ ಬಗ್ಗೆ ಲಿಖಿತವಾಗಿ ಏನೂ ಬಂದಿಲ್ಲ. ನಾವು ಬ್ಯಾಂಕ್ ಸಾಲಕ್ಕೆ ಕಂತು ಕಟ್ಟಬೇಕು. ಮಳಿಗೆ ತೆರವುಗೊಳಿಸುವ ಬಗ್ಗೆ ನಾವು ಒಪ್ಪಿಗೆ ಪತ್ರ ನೀಡಿದ್ದೇವೆ. ನಮಗೆ ಕೂಡಲೆ ಭದ್ರತಾ ಠೇವಣಿ ವಾಪಸ್ ಕೊಡಬೇಕು ಎಂದು ಕೇಳಿದ್ದೇವೆ. ಸಂಸ್ಥೆ ಈವರೆಗೂ ಸ್ಪಂದಿಸಿಲ್ಲ’ ಎಂದು ಮಳಿಗೆದಾರರಾದ ಧಾರವಾಡ ಸ್ಪೆಷಲ್ ಪೇಢಾ ಅಂಗಡಿಯ ಮಾಲೀಕ ಪ್ರಶಾಂತ ಪಟ್ಟಣಶೆಟ್ಟಿ ಹಾಗೂ ಬ್ರಹ್ಮಲಿಂಗೇಶ್ವರ ಸ್ವೀಟ್ ಮಾರ್ಟ್ ಮಾಲೀಕ ಶಂಕ್ರಪ್ಪ ಹೊಂಬಳಿ ವಿಜಯವಾಣಿಯೊಂದಿಗೆ ಅಳಲು ತೋಡಿಕೊಂಡರು.

    ಡಿಪಿಆರ್​ಗೆ ಮೂರು ವಾರ

    ಸ್ಮಾರ್ಟ್ ಸಿಟಿ ನಿಧಿ 30 ಕೋ. ರೂ. ವೆಚ್ಚದಲ್ಲಿ ಹಳೇ ಬಸ್ ನಿಲ್ದಾಣ ಅಭಿವೃದ್ಧಿ ಪಡಿಸಲಾಗುತ್ತಿದೆ. ಡಿಪಿಆರ್ ಹಾಗೂ ವಿನ್ಯಾಸ ಸಿದ್ಧ ಪಡಿಸಲು ಇನ್ನೂ 3 ವಾರ ಬೇಕು. ಬಳಿಕ ಡಿಪಿಆರ್ ಹಾಗೂ ವಿನ್ಯಾಸವನ್ನು ಕೆಯುಐಡಿಎಫ್​ಸಿ (ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ಹಾಗೂ ಹಣಕಾಸು ನಿಗಮ)ಗೆ ಅನುಮೋದನೆಗೆ ಕಳುಹಿಸಲಾಗುವುದು. ಅನುಮೋದನೆ ಸಿಕ್ಕ ಬಳಿಕ ಹಳೇ ಬಸ್ ನಿಲ್ದಾಣ ಕೆಡವಲು ಹಾಗೂ ಹೊಸ ಬಸ್ ನಿಲ್ದಾಣ ನಿರ್ಮಾಣ ಕಾಮಗಾರಿಗೆ ಪ್ರತ್ಯೇಕವಾಗಿ ಟೆಂಡರ್ ಕರೆಯಲಾಗುವುದು.

    | ಎಸ್.ಎಚ್. ನರೇಗಲ್ ವಿಶೇಷಾಧಿಕಾರಿ,

    ಹು-ಧಾ ಸ್ಮಾರ್ಟ್ ಸಿಟಿ ಲಿಮಿಟೆಡ್

    ಮಳಿಗೆದಾರರಿಂದ ಒಪ್ಪಿಗೆ ಪತ್ರ ಪಡೆದಿದ್ದೇವೆ. ಮಳಿಗೆಗಳನ್ನು ತೆರವುಗೊಳಿಸುವಂತೆ ಹಾಗೂ ಹಳೇ ಬಸ್ ನಿಲ್ದಾಣವನ್ನು ಸ್ಮಾರ್ಟ್ ಸಿಟಿ ಲಿಮಿಟೆಡ್​ನವರಿಗೆ ಹಸ್ತಾಂತರಿಸುವಂತೆ ಕೇಂದ್ರ ಕಚೇರಿಯಿಂದ ಯಾವುದೇ ಆದೇಶ ಬಂದಿಲ್ಲ.

    | ಎಚ್. ರಾಮನಗೌಡರ್ ಹುಬ್ಬಳ್ಳಿ ಗ್ರಾಮೀಣ ವಿಭಾಗೀಯ ನಿಯಂತ್ರಣಾಧಿಕಾರಿ, ವಾಕರಸಾ ಸಂಸ್ಥೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts