More

    ಟ್ಯಾಕ್ಸಿ ಚಾಲಕರಿಗೆ ರಸ್ತೆ ತೆರಿಗೆ ಹೊರೆ

    ರಾಣೆಬೆನ್ನೂರ: ಲಾಕ್​ಡೌನ್ ಜಾರಿಯಾದ ದಿನದಿಂದಲೂ ಟ್ಯಾಕ್ಸಿ ಚಾಲಕರಿಗೆ ನಯಾಪೈಸೆ ದುಡಿಮೆಯಿಲ್ಲ. ನಿತ್ಯದ ತುತ್ತಿನ ಚೀಲ ತುಂಬಿಸಿಕೊಳ್ಳುವುದೇ ಕಷ್ಟಕರವಾಗಿದೆ. ಇಂಥದರಲ್ಲಿ ರಸ್ತೆ ತೆರಿಗೆ ಕಟ್ಟಲೇಬೇಕು…!

    ಕಾರು ರಸ್ತೆಗಿಳಿಯದಿದ್ದರೂ ತೆರಿಗೆ ಕಟ್ಟಬೇಕು ಎಂಬ ಸರ್ಕಾರದ ಕ್ರಮದಿಂದಾಗಿ ಕಾರು ಚಾಲಕರು, ಮಾಲೀಕರು ಕಂಗೆಟ್ಟು ಹೋಗಿದ್ದಾರೆ.

    ಕೊರನಾ ವೈರಸ್ ಹರಡುವಿಕೆ ಆರಂಭವಾಗುತ್ತಿದ್ದಂತೆಯೇ ಸರ್ಕಾರ ಘೊಷಿಸಿದ ಲಾಕ್​ಡೌನ್​ನಿಂದಾಗಿ ಟ್ಯಾಕ್ಸಿ ಚಾಲಕರಿಗೆ ದುಡಿಮೆ ಇಲ್ಲದೆ ಸಂಕಷ್ಟ ಎದುರಿಸುವಂತಾಗಿದೆ. ಜಿಲ್ಲೆಯಲ್ಲಿ ಮುಂದುವರಿದ ಲಾಕ್​ಡೌನ್ 3.0ದಲ್ಲಿ ಅಗತ್ಯ ವಸ್ತುಗಳ ಮಾರಾಟಕ್ಕೆ ಮಾತ್ರ ವಿನಾಯಿತಿ ನೀಡಿರುವುದರಿಂದ ಬಾಡಿಗೆ ಕಾರುಗಳು ದುಡಿಮೆ ಇಲ್ಲದೆ ಖಾಲಿ ನಿಂತಿವೆ.

    ನಗರದಲ್ಲಿ 250ಕ್ಕೂ ಅಧಿಕ ಕಾರು, 5 ಮಿನಿ ಬಸ್​ಗಳಿವೆ. ಈ ಪೈಕಿ ಹತ್ತಾರು ಕಾರುಗಳನ್ನು ಸ್ವಂತಕ್ಕೆ ಬಳಕೆ ಮಾಡಿಕೊಳ್ಳುವ ಸ್ಥಿತಿವಂತರಿದ್ದರೆ, ಇನ್ನುಳಿದ ಬಹುತೇಕ ವಾಹನಗಳನ್ನು ಬಾಡಿಗೆಗೆಂದು ನಿಯೋಜಿಸಿದ್ದಾರೆ. ಆದರೆ, ಲಾಕ್​ಡೌನ್ ಪರಿಣಾಮ ಈ ವಾಹನಗಳ ಚಾಲಕರು ಮತ್ತು ಅವರ ಕುಟುಂಬ ತೀವ್ರ ತೊಂದರೆ ಎದುರಿಸುತ್ತಿದ್ದು, ಬದುಕಿನ ಬಂಡಿ ಸಾಗಿಸಲು ಪರದಾಡುವಂತಾಗಿದೆ.

    ಚಾಲಕರು ಬಾಡಿಗೆಗೆ ಹೊರಗಡೆ ಹೋದರೆ ಭತ್ಯೆ ರೂಪವಾಗಿ ದಿನಕ್ಕೆ 500 ರೂ. ಪಡೆಯುತ್ತಿದ್ದರು. ಇದೀಗ ಅವರ ಜೇಬುಗಳು ಖಾಲಿಯಾಗಿವೆ. ‘ಇಷ್ಟು ದಿನ ವಿವಿಧ ಸಂಘ-ಸಂಸ್ಥೆಯವರು ನೀಡಿದ ದಿನಸಿ ಬಳಸಿಕೊಂಡು ಊಟ ಮಾಡಿದ್ದೇವೆ. ಈಗ ಲಾಕ್​ಡೌನ್​ನಲ್ಲಿ ಕೊಂಚ ವಿನಾಯಿತಿ ಸಿಕ್ಕಿದ್ದರೂ ಕಾರು ಬಾಡಿಗೆಗೆ ತೆರಳಲು ಬಾರದ ಸ್ಥಿತಿಯಿದೆ. ಯಾರೂ ಬೇರೆ ಬೇರೆ ಊರಿಗೆ ತೆರಳದ ಕಾರಣ ಬಾಡಿಗೆ ಇಲ್ಲದಂತಾಗಿದೆ’ ಎನ್ನುತ್ತಾರೆ ಚಾಲಕರು

    ರಸ್ತೆ ತೆರಿಗೆ ಪಾವತಿ ಕಡ್ಡಾಯ. ಪಾವತಿಸಲು ತಡವಾಗಿದ್ದರೆ ದಂಡಕ್ಕೆ ವಿನಾಯಿತಿ ನೀಡಿ ಕಟ್ಟಿಸಿಕೊಳ್ಳಲಾಗುತ್ತಿದೆ. ಕಾರು ಚಾಲಕರು ಹಾಗೂ ಮಾಲೀಕರು ಸದ್ಯದ ಪರಿಸ್ಥಿತಿಯಲ್ಲಿ ತುತ್ತು ಹೊತ್ತಿನ ಚೀಲ ತುಂಬಿಸಿಕೊಳ್ಳುವುದೇ ದುಸ್ತರವಾಗಿದೆ. ಇಂಥ ಸಮಯದಲ್ಲಿ ರಸ್ತೆ ತೆರಿಗೆ ಕಟ್ಟುವುದು ಚಾಲಕರ ಮೇಲಿದೆ. ಕಳೆದ ಎರಡು ತಿಂಗಳಿಂದ ಒಂದು ಕಿ.ಮೀ. ಸಹ ಓಡಿಸಿಲ್ಲ. ಹೀಗಿದ್ದಾಗ ತೆರಿಗೆ ಕಟ್ಟುವುದಾದರೂ ಹೇಗೆ ಎಂಬ ಚಿಂತೆ ಚಾಲಕರನ್ನು ಕಾಡುತ್ತಿದೆ.

    ಲಾಕ್​ಡೌನ್ ಮುಂದುವರಿದಷ್ಟು ನಮ್ಮ ಬದುಕು ದುಸ್ತರವಾಗತೊಡಗಿದೆ. ಮೇ ತಿಂಗಳಲ್ಲಿ ಜೀವನ ಸಾಗಿಸಲು ಸಾಲ ಪಡೆಯಬೇಕಾದ ಪರಿಸ್ಥಿತಿ ಬಂದಿದೆ. ನಮ್ಮ ಸಂಕಷ್ಟ ಯಾರೊಬ್ಬರಿಗೂ ಬಾರದಿರಲಿ. ಕರೊನಾ ಸೋಂಕು ಭೀತಿ ನಮ್ಮ ಪಾಲಿಗೆ ಅತೀವ ಸಂಕಷ್ಟ ತಂದುಕೊಟ್ಟಿದೆ. ಇಂಥ ಸಮಯದಲ್ಲಿ ತೆರಿಗೆ ಕಟ್ಟುವುದು ದುಸ್ತರವಾಗಿದೆ. ಸರ್ಕಾರ ಎರಡ್ಮೂರು ತಿಂಗಳು ವಿನಾಯಿತಿ ನೀಡಿದರೆ ಅನುಕೂಲವಾಗಲಿದೆ.
    | ಮಂಜುನಾಥ ಜಿ., ಕಾರು ಚಾಲಕ

    ರಸ್ತೆ ತೆರಿಗೆ ಪಾವತಿ ಕಡ್ಡಾಯ. ಆದರೆ, ಲಾಕ್​ಡೌನ್ ಹಿನ್ನೆಲೆಯಲ್ಲಿ ದಂಡಕ್ಕೆ ವಿನಾಯಿತಿ ನೀಡಲಾಗಿದೆ. ಈ ಹಿಂದೆ ತೆರಿಗೆ ಕಟ್ಟುವುದರಲ್ಲಿ ತಡಮಾಡಿದರೆ, ಶೇ. 20ರಷ್ಟು ದಂಡ ತುಂಬಬೇಕಿತ್ತು. ಅದನ್ನು ಕೈ ಬಿಡಲಾಗಿದೆ.
    | ಪ್ರಲ್ಹಾದ್ ದೇಸಾಯಿ, ಪ್ರಭಾರ ಎಆರ್​ಟಿಒ ರಾಣೆಬೆನ್ನೂರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts