More

    ಟನ್ ಕಬ್ಬಿಗೆ 5 ರೂ. ಸಾವಿರ ನಿಗದಿಗೆ ಆಗ್ರಹ

    ಕೆ.ಎಂ.ದೊಡ್ಡಿ: ಟನ್ ಕಬ್ಬಿಗೆ 5 ಸಾವಿರ ರೂ. ಬೆಲೆ ನಿಗದಿಪಡಿಸುವುದು ಸೇರಿದಂತೆ ರೈತರ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ಕರ್ನಾಟಕ ಕಬ್ಬು ಬೆಳೆಗಾರರ ಸಂಘ, ಪ್ರಾಂತ ರೈತ ಸಂಘ ಸದಸ್ಯರು ಹಾಗೂ ರೈತರು ಚಾಂಶುಗರ್ಸ್‌ ಕಾರ್ಖಾನೆ ಎದುರು ಗುರುವಾರ ಪ್ರತಿಭಟನೆ ನಡೆಸಿದರು.

    ಪಟ್ಟಣದ ಮುಖ್ಯರಸ್ತೆಯಲ್ಲಿ ಪ್ರತಿಭಟನಾ ಮೆರವಣಿಗೆ ಮೂಲಕ ಚಾಂಶುಗರ್ಸ್‌ ಕಾರ್ಖಾನೆಯ ಆಡಳಿತ ಕಚೇರಿ ಮುಂದೆ ಧರಣಿ ನಡೆಸಿ ಆಡಳಿತ ಮಂಡಳಿ ಹಾಗೂ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

    ಕಬ್ಬು ಬೆಳೆಗಾರರ ಸಂಘದ ರಾಜ್ಯ ಸಂಚಾಲಕ ಭರತ್‌ರಾಜ್ ಮಾತನಾಡಿ, ಚಾಂಶುಗರ್ಸ್‌ ಕಾರ್ಖಾನೆ ಟನ್ ಕಬ್ಬಿಗೆ 5 ಸಾವಿರ ರೂ. ಬೆಲೆ ನಿಗದಿಪಡಿಸಬೇಕು ಹಾಗೂ 2022-23ನೇ ಸಾಲಿನಲ್ಲಿ ಕಬ್ಬು ಸರಬರಾಜು ಮಾಡಿದ ರೈತರಿಗೆ ಟನ್‌ಗೆ 100 ರೂ.ಗಳ ಬಾಕಿ ಹಣ ಶೀಘ್ರ ನೀಡಬೇಕೆಂದು ಆಗ್ರಹಿಸಿದರು.

    ಇತ್ತೀಚಿನ ದಿನಗಳಲ್ಲಿ ರಸಗೊಬ್ಬರ ಬಿತ್ತನೆ ಕಬ್ಬು, ಆಳಿನ ಕೂಲಿ, ಉಳುಮೆ ವೆಚ್ಚ ಸೇರಿದಂತೆ ಕಬ್ಬು ಬೆಳೆಯಲು ದುಬಾರಿ ಖರ್ಚು ಬರುತ್ತಿದ್ದು ಇವುಗಳನ್ನು ಪರಿಗಣಿಸಿ ಬೆಲೆ ನಿಗದಿ ಪಡಿಸಿ ಎಂದು ಒತ್ತಾಯಿಸಿದರು. ಗುಜರಾತ್‌ನಲ್ಲಿ ಟನ್ ಕಬ್ಬಿಗೆ 4400 ರೂ., ಪಂಜಾಬ್‌ನಲ್ಲಿ 3800 ರೂ., ಉತ್ತರ ಪ್ರದೇಶದಲ್ಲಿ 3500 ರೂ., ಹಾಗೂ ಕರ್ನಾಟಕದ ರೇಣುಕಾ ಶುಗರ್ 3660 ರೂ.ಗಳು ಸೇರಿದಂತೆ ಬೆಳಗಾವಿಯ ಹಲವು ಕಾರ್ಖಾನೆಗಳೇ 3500 ರೂ.ಗಳಿಗಿಂತ ಹೆಚ್ಚಾಗಿ ನೀಡುತ್ತಿವೆ. ಹಾಗಾಗಿ ರಾಜ್ಯ ಸರ್ಕಾರ ಮಧ್ಯ ಪ್ರವೇಶಿಸಿ ಸುಪ್ರೀಂ ಕೋರ್ಟಿನ ಐವರು ನ್ಯಾಯಾಧೀಶರ ಪೀಠದ ಆದೇಶದಂತೆ ಎಸ್.ಎ.ಪಿ. ನಿಗದಿಪಡಿಸಲು ಅವಕಾಶ ನೀಡಿದೆ. ಅದನ್ನು ಬಳಸಿಕೊಂಡು ರಾಜ್ಯ ಸರ್ಕಾರ ಟನ್ ಕಬ್ಬಿಗೆ 500 ರೂ.ಗಳ ಹೆಚ್ಚುವರಿ ಮೊತ್ತ ಘೋಷಣೆಯೊಂದಿಗೆ ಪ್ರತಿ ಟನ್ ಕಬ್ಬಿಗೆ 5000 ರೂ. ಬೆಲೆ ನಿಗದಿಪಡಿಸಬೇಕೆಂದು ಆಗ್ರಹಿಸಿದರು.
    ಉಪವಿಭಾಗಧಿಕಾರಿ ಶಿವಮೂರ್ತಿ ಮನವಿ ಸ್ವೀಕರಿಸಿ ಮಾತನಾಡಿ, ರೈತರ ಬೇಡಿಕೆಗಳನ್ನು ಸರ್ಕಾರದ ಗಮನಕ್ಕೆ ತಂದು ಸಮಸ್ಯೆ ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಕಬ್ಬಿನ ಹಣವನ್ನು ಕಟಾವು ಆದ 45 ದಿನಗಳಲ್ಲಿ ಹಣ ನೀಡಲಾಗುತ್ತದೆ ಎಂದು ಕಾರ್ಖಾನೆ ಅಧಿಕಾರಿಗಳು ಹೇಳುತ್ತಿದ್ದಾರೆ. ಎಷ್ಟು ದಿನದೊಳಗೆ ಹಣ ಕೊಡಬಹುದು ಎನ್ನುವುದನ್ನು ಚರ್ಚಿಸಿ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು ಎಂದರು.

    ಪ್ರತಿಭಟನೆಯಲ್ಲಿ ಚಾಂಶುಗರ್ಸ್‌ ಕಾರ್ಖಾನೆಯ ಉಪಾಧ್ಯಕ್ಷ ಮಣಿ, ಕೃಷಿ ಉಪ ನಿರ್ದೇಶಕ ಅಶೋಕ್‌ಕುಮಾರ್, ತಹಸೀಲ್ದಾರ್ ನರಸಿಂಹಮೂರ್ತಿ, ಕೃಷಿ ಇಲಾಖೆ ಸಹಾಯ ನಿರ್ದೇಶಕ ಪರಮೇಶ್, ಮುಖಂಡರಾದ ಶಿವಲಿಂಗಯ್ಯ, ಚಂದ್ರಶೇಖರಯ್ಯ, ಚಾಮುಂಡೇಶ್ವರಿ ಸಕ್ಕರೆ ಕಾರ್ಖಾನೆ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುಳ್ಳೇಗೌಡ, ಕಾರ್ಯದರ್ಶಿ ಸತೀಶ್, ಹೊಂಬೇಗೌಡನದೊಡ್ಡಿ ನಾಗೇಂದ್ರ, ಮರಿಲಿಂಗೇಗೌಡ, ಚಿಕ್ಕರಸಿನಕೆರೆ ಶಿವಲಿಂಗಯ್ಯ, ಚಂದ್ರಶೇಖರ್, ಶಿವರಾಮು, ರಘುವೆಂಕಟೇಗೌಡ, ರಾಮಲಿಂಗೇಗೌಡ, ತಿಮ್ಮೇಗೌಡ, ಕೃಷ್ಣೇಗೌಡ, ಲತಾ, ನಾಗರಾಜು ಸೇರಿದಂತೆ ನೂರಾರು ರೈತರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts