More

    ವಿವಿಧ ಪ್ರಗತಿಪರ ಸಂಘಟನೆಗಳಿಂದ ಪ್ರತಿಭಟನೆ

    ಶ್ರೀರಂಗಪಟ್ಟಣ: ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ಆರೋಪದಡಿ ತಲೆಮರೆಸಿಕೊಂಡಿರುವ ಸಂಸದ ಪ್ರಜ್ವಲ್ ರೇವಣ್ಣನನ್ನು ತಕ್ಷಣ ಬಂಧಿಸುವುದರ ಜತೆಗೆ ಬಂಧನದಲ್ಲಿರುವ ಶಾಸಕ ರೇವಣ್ಣ ಅವರನ್ನು ಸೂಕ್ಷ್ಮತನಿಖೆಗೆ ಒಳಪಡಿಸಬೇಕು ಎಂದು ಆಗ್ರಹಿಸಿ ವಿವಿಧ ಪ್ರಗತಿಪರ ಸಂಘಟನೆಗಳ ಕಾರ್ಯಕರ್ತರು ಮಂಗಳವಾರ ಪ್ರತಿಭಟನೆ ನಡೆಸಿದರು.

    ಪಟ್ಟಣದ ತಾಲೂಕು ಕಚೇರಿ ಮುಂಭಾಗ ಜಮಾಯಿಸಿದ್ದ ರೈತ ಸಂಘ, ದಸಂಸ, ಕರವೇ ಸೇರಿದಂತೆ ವಿವಿಧ ಸಂಘಟನೆಗಳ ಪದಾಧಿಕಾರಿಗಳು, ಸಂಸದ ಪ್ರಜ್ವಲ್ ಹಾಗೂ ಶಾಸಕ ರೇವಣ್ಣ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

    ರೈತ ಮುಖಂಡರಾದ ಮರಳಗಾಲ ಕೃಷ್ಣೇಗೌಡ ಹಾಗೂ ಪಾಂಡು ಮಾತನಾಡಿ, ಹಾಸನ ಜಿಲ್ಲೆಯಲ್ಲಿ ನಡೆದಿರುವ ಮಹಿಳೆಯರ ಮೇಲಿನ ಲೈಂಗಿಕ ಕಿರುಕುಳ ಹಾಗೂ ಅಪ್ಪ-ಮಗ ಎಸಗಿರುವ ದೌರ್ಜನ್ಯ ನಾಗರಿಕ ಸಮಾಜವನ್ನು ತಲೆ ತಗ್ಗಿಸುವಂತೆ ಮಾಡಿದೆ. ರಾಜ್ಯ, ರಾಷ್ಟ್ರ ಮಾತ್ರವಲ್ಲ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾನ ಹರಾಜು ಹಾಕಿದ್ದಾರೆ. ರಾಜ್ಯ ಸರ್ಕಾರ ಎಸ್‌ಐಟಿ ರಚಿಸಿ ತನಿಖೆ ನಡೆಸುತ್ತಿರುವುದು ಸ್ವಾಗತಾರ್ಹ. ಆದರೆ ಇನ್ನೂ ಪ್ರಜ್ವಲ್ ರೇವಣ್ಣ ಬಂಧನಕ್ಕೆ ಕಠಿಣ ನಿರ್ಧಾರಗಳನ್ನು ಕೈಗೊಳ್ಳದಿರುವುದು ಅಸಮಾಧಾನ ತರಿಸಿದೆ ಎಂದು ಕಿಡಿಕಾರಿದರು.

    ರಾಜ್ಯದಲ್ಲಿ ರಾಜಕೀಯ ಮೇಲಾಟ ಹೆಚ್ಚಾಗುತ್ತಿದ್ದು, ಸರ್ಕಾರ ಯಾವುದೇ ಒತ್ತಡಗಳಿಗೆ ಮಣಿಯದೆ ಹಾಗೂ ರಾಜಕೀಯ ಮಾಡದೆ ಪಾರದರ್ಶಕ ತನಿಖೆ ನಡೆಸಿ ಸತ್ಯಾಂಶ ಹೊರತೆಗೆಯಬೇಕು. ಆರೋಪಿ ಸ್ಥಾನದಲ್ಲಿರುವ ತಂದೆ-ಮಗನ ದೌರ್ಜನ್ಯ ಸಾಬೀತಾದಲ್ಲಿ ಇಂತಹ ರಾಕ್ಷಸರಿಂದ ಲೈಂಗಿಕ ದೌರ್ಜನ್ಯಕ್ಕೆ ತುತ್ತಾದ ಸಂತ್ರಸ್ತರಿಗೆ ಸೂಕ್ತ ರಕ್ಷಣೆ ಒದಗಿಸಬೇಕು ಎಂದರು.

    ನಿವೃತ್ತ ಪ್ರೊ.ಇಲಿಯಾಸ್ ಅಹಮದ್ ಹಾಗೂ ಕರುನಾಡ ವೇದಿಕೆ ಅಧ್ಯಕ್ಷೆ ಪ್ರಿಯಾ ರಮೇಶ್ ಮಾತನಾಡಿ, ಪ್ರಜೆಗಳಿಂದ ಲಭಿಸಿದ ಸಂಸದ ಹಾಗೂ ಶಾಸಕನ ಸ್ಥಾನವನ್ನು ಇಂತಹ ನೀಚ ಕೃತ್ಯಕ್ಕೆ ಬಳಸಿಕೊಂಡಿರುವುದು ಅತ್ಯಂತ ಹ್ಯೇಯ ಹಾಗೂ ನಾಚೀಕೆ ಗೇಡಿನ ಕೃತ್ಯ. ಇಂತಹ ಘೋರ ಅಪರಾಧ ಎಸಗಿ ನಾಪತ್ತೆಯಾಗಿರುವ ಪ್ರಜ್ವಲ್‌ನನ್ನು ಎಲ್ಲಿದ್ದರೂ ಎಳೆತಂದು ಕಠಿಣ ಕ್ರಮಕ್ಕೆ ಒಳಪಡಿಸುವ ಮೂಲಕ ಜವಾಬ್ದಾರಿ ಮೆರೆಯಬೇಕು ಎಂದು ಆಗ್ರಹಿಸಿದರು.

    ಬಳಿಕ ಗ್ರೇಡ್-2 ತಹಸೀಲ್ದಾರ್ ಆದರ್ಶ ಅವರ ಮೂಲಕ ಮನವಿಯನ್ನು ರಾಜ್ಯ ಸರ್ಕಾರಕ್ಕೆ ರವಾನಿಸಿದರು. ರೈತ ಮುಖಂಡರಾದ ಕಡತನಾಳು ಬಾಲಕೃಷ್ಣ, ದೊಡ್ಡಪಾಳ್ಯ ಜಯರಾಮು, ಬಿ.ಎಸ್.ರಮೇಶ್,ಚಂದ್ರಶೇಖರ್, ಕರವೇ ಮುಖಂಡ ಚಂದಗಾಲು ಶಂಕರ್, ಕೆಂಪೇಗೌಡ, ದಸಂಸ ಮುಖಂಡರಾದ ಗಂಜಾಂ ರವಿಚಂದ್ರು, ಹೊನ್ನಪ್ಪ ಸೇರಿದಂತೆ ಹಲವರು ಭಾಗಿಯಾಗಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts