More

    ಜೈಘೋಷಗಳ ಮಧ್ಯೆ ಔರಾದ್​ ಶ್ರೀ ಅಮರೇಶ್ವರ ಪಲ್ಲಕ್ಕಿ ಉತ್ಸವ

    ಔರಾದ್: ಆರಾಧ್ಯ ದೈವ ಶ್ರೀ ಉದ್ಭವಲಿಂಗ ಅಮರೇಶ್ವರ ಜಾತ್ರೋತ್ಸವ ಶ್ರದ್ಧಾ ಭಕ್ತಿಯೊಂದಿಗೆ ನೆರವೇರಿತು. ಐದು ದಿನಗಳಿಂದ ಪಟ್ಟಣದ ಪ್ರತಿಯೊಂದು ಬಡಾವಣೆಯಲ್ಲಿ ಸಂಚರಿಸುತ್ತಿರುವ ದೇವರ ಪಲ್ಲಕ್ಕಿ ಉತ್ಸವ ಬುಧವಾರ ಸಹಸ್ರಾರು ಭಕ್ತರ ಮಧ್ಯೆ ಓ ಭಲಾ, ಶಂಕರ ಭಲಾ, ಅಮರೇಶ್ವರ ಮಹಾರಾಜ್ ಕೀ ಜೈ ಸಂಭ್ರಮದಿಂದ ನಡೆಯಿತು.

    ಬೆಳಗ್ಗೆ 9ಕ್ಕೆ ಅಗ್ಗಿ ಬಸವಣ್ಣ ದೇವಸ್ಥಾನದ ಅಗ್ನಿಕುಂಡಕ್ಕೆ ಬಂದು ಪ್ರದಕ್ಷಿಣೆ ಹಾಕಿದ ನಂತರ ಅಗ್ಗಿ ತುಳಿಯಲು ಭಕ್ತರಿಗೆ ಅನುಕೂಲ ಮಾಡಿಕೊಡಲಾಯಿತು. ನಂತರ ಒಬ್ಬೊಬ್ಬರಾಗಿ ಸರದಿ ಸಾಲಿನಲ್ಲಿ ಭಕ್ತರು ಯಾವುದೇ ಅಡತಡೆಯಿಲ್ಲದೆ ಅಗ್ನಿ ಪ್ರದಕ್ಷಿಣೆ ಮಾಡಿ ಪುನೀತರಾದರು. ನಸುಕಿನ ಜಾವವೇ ಅಗ್ನಿಕುಂಡದ ಹತ್ತಿರ ಸಹಸ್ರಾರು ಭಕ್ತರು ಜಮಾಯಿಸಿದ್ದರು. ಸಚಿವ ಪ್ರಭು ಚವ್ಹಾಣ್ ಹಾಗೂ ಕಾಂಗ್ರೆಸ್ ಮುಖಂಡ ರಮೇಶ ಡಾಕುಳಗಿ ಸಹ ಪ್ರದಕ್ಷಿಣೆ ಹಾಕಿ ಧನ್ಯತಾಭಾವ ಮೆರೆದರು.

    ನೆರೆಯ ತೆಲಂಗಾಣ, ಆಂಧ್ರಪ್ರದೇಶ, ಮಹಾರಾಷ್ಟ್ರಗಳಿಂದ ಆಗಮಿಸಿದ್ದ ನೂರಾರು ಭಕ್ತರು ದೇವರನ್ನು ನಮಿಸಿ ಭಕ್ತಿ ಸಮರ್ಪಿಸಿದರು. ಸ್ಥಳೀಯ ಮುಖಂಡರು ಹಾಗೂ ದೇವಸ್ಥಾನ ಕಮಿಟಿಯಿಂದ ಭಕ್ತರಿಗಾಗಿ ಅನ್ನ ದಾಸೋಹ, ಲಡ್ಡು, ಬಾಳೆ ಹಣ್ಣು, ಕಲ್ಲಂಗಡಿ, ಅಂಬಲಿ ಇತರ ಖಾದ್ಯಗಳ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು.

    ಪಲ್ಲಕ್ಕಿ ಉತ್ಸವ ಮತ್ತು ಅಗ್ನಿ ಪ್ರದಕ್ಷಿಣೆಗೆ ಯಾವುದೇ ರೀತಿಯ ಸಮಸ್ಯೆಯಾಗದಂತೆ ತಾಲೂಕು ಆಡಳಿತ ಹಾಗೂ ಯುವಕರ ತಂಡ, ದೇವಸ್ಥಾನ ಕಮಿಟಿ ಸದಸ್ಯರ ನೇತೃತ್ವದ ತಂಡದಿಂದ ನೋಡಿಕೊಳ್ಳಲಾಯಿತು. ಎಪಿಎಂಸಿ ಕ್ರಾಸ್​ನಿಂದ ಕೇಂದ್ರ ಬಸ್ ನಿಲ್ದಾಣ, ಸಾರ್ವಜನಿಕ ಆಸ್ಪತ್ರೆ ರಸ್ತೆಯಲ್ಲಿ ಭಕ್ತರ ದಂಡು ಮೂರು ಕಿಮೀ ನಡೆದುಕೊಂಡು ದೇವಸ್ಥಾನಕ್ಕೆ ಬಂದು ದರ್ಶನ ಪಡೆಯುತ್ತಿರುವುದು ಕಂಡುಬಂತು.

    ಜಾತ್ರೆ ಸುವ್ಯವಸ್ಥಿತ ಮತ್ತು ಶಾಂತಿಯುತವಾಗಿ ಜರುಗಲು ಪೊಲೀಸ್ ಇಲಾಖೆಯಿಂದ ಪ್ರಮುಖ ರಸ್ತೆಗಳಲ್ಲಿ ಬ್ಯಾರಿಕೇಡ್​ಗಳನ್ನು ಅಳವಡಿಸಿ ಸೂಕ್ತ ಬಂದೋಬಸ್ತ್ ಕಲ್ಪಿಸಲಾಗಿತ್ತು. ಸಿಪಿಐ ರವೀಂದ್ರನಾಥ, ಪಿಎಸ್ಐಗಳಾದ ಮಂಜನಗೌಡ ಪಾಟೀಲ್, ನಂದಿನಿ, ರೇಣುಕಾ, ಸಿದ್ದಲಿಂಗ, ಶಂಕ್ರಪ್ಪ ಇತರರು ಗದ್ದಲವಾಗದಂತೆ ನೋಡಿಕೊಂಡರು.

    ಗಮನ ಸೆಳೆದ ಆರೋಗ್ಯ ಮಳಿಗೆ: ಅಮರೇಶ್ವರ ಜಾತ್ರೆ ನಿಮಿತ್ತ ಪಟ್ಟಣದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ಶಿಕ್ಷಣ ಸಂವಹನ ವಿಭಾಗ ಬೀದರ್ ಹಾಗೂ ತಾಲೂಕು ಆರೋಗ್ಯ ಇಲಾಖೆಯಿಂದ ಸ್ಥಾಪಿಸಿರುವ ಆರೋಗ್ಯ ವಸ್ತು ಪ್ರದರ್ಶನ ಮಳಿಗೆ ಗಮನ ಸೆಳೆಯಿತು. ಸಚಿವ ಪ್ರಭು ಚವ್ಹಾಣ್ ಮಳಿಗೆ ಉದ್ಘಾಟಿಸಿ ಮಾತನಾಡಿ, ಸಾರ್ವಜನಿಕರು ಸರ್ಕಾರದ ಯೋಜನೆಗಳನ್ನು ಬಳಸಿಕೊಂಡು ಉತ್ತಮ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು. ತಾಲೂಕು ಆರೋಗ್ಯಾಧಿಕಾರಿ ಡಾ.ಗಾಯತ್ರಿದೇವಿ ಮಾತನಾಡಿ, ಆಯುಷ್ಮಾನ್ ಭಾರತ- ಆರೋಗ್ಯ ಕರ್ನಾಟಕ ಯೋಜನೆಯಡಿ 50ಕ್ಕಿಂತ ಹೆಚ್ಚಿನ ಚಿಕಿತ್ಸಾ ಸೌಲಭ್ಯಗಳಿವೆ. ಅರ್ಹರು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು. ತಹಸೀಲ್ದಾರ್ ಅರುಣಕುಮಾರ ಕುಲಕರ್ಣಿ, ಪ್ರತೀಕ ಚವ್ಹಾಣ್, ಬಿಎಚ್ಇಒ ಅನೀತಾ ಬಿರಾದಾರ, ಮಹಾದೇವ ಅಲಮಾಜೆ, ಶಿವಕುಮಾರ ಘಾಟೆ, ದಯಾನಂದ ಘೂಳೆ, ಶರಣು ಸಾವಳೆ, ಅಶೋಕ ಅಲಮಾಜೆ, ವಿಠ್ಠಲ್ ಘಾಟೆ, ಆನಂದ ದ್ಯಾಡೆ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts