More

    ಜೀವವೈವಿಧ್ಯ ಸಂರಕ್ಷಣೆಗೆ ಸಮುದಾಯ ಸಹಕಾರ ಅಗತ್ಯ

    ಕುಶಾಲನಗರ: ಹೆಚ್ಚೆಚ್ಚು ಗಿಡ-ಮರಗಳನ್ನು ಬೆಳೆಸಿ ಅರಣ್ಯ ಪ್ರದೇಶವನ್ನು ವೃದ್ಧಿಸುವ ಮೂಲಕ ಉತ್ತಮ ಪರಿಸರ ನಿರ್ಮಾಣದೊಂದಿಗೆ, ಭವಿಷ್ಯಕ್ಕಾಗಿ ನೀರು ಮತ್ತು ಜೀವವೈವಿಧ್ಯ ಸಂರಕ್ಷಣೆ ಮಾಡಲು ಸಮುದಾಯದ ಸಹಕಾರ ಅಗತ್ಯ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಎ.ಟಿ.ಪೂವಯ್ಯ ಹೇಳಿದರು.


    ಅರಣ್ಯ ಇಲಾಖೆಯ ಕೊಡಗು ವೃತ್ತದ ಮಡಿಕೇರಿ ವಿಭಾಗ ಮತ್ತು ಕುಶಾಲನಗರ ಅರಣ್ಯ ವಲಯ ಹಾಗೂ ಶಾಲಾ ಶಿಕ್ಷಣ ಇಲಾಖೆಯ ರಾಷ್ಟ್ರೀಯ ಹಸಿರು ಪಡೆಯ ಇಕೋ ಕ್ಲಬ್ ಘಟಕದ ವತಿಯಿಂದ ಕುಶಾಲನಗರ ತಾಲೂಕಿನ ಬಸವನಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ನಿಸರ್ಗ ಇಕೋ ಕ್ಲಬ್ ಹಾಗೂ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ಜಿಲ್ಲಾ ಸಮಿತಿ ಸಹಯೋಗದಲ್ಲಿ ‘ನಮ್ಮ ನಡೆ ಹಸಿರೆಡೆಗೆ’ ಹಾಗೂ ‘ನನ್ನ ಗಿಡ ನನ್ನ ಹೆಮ್ಮೆ’ ಅಂಗವಾಗಿ ಬುಧವಾರ ಆಯೋಜಿಸಿದ್ದ ವನಮಹೋತ್ಸವ ಸಪ್ತಾಹ 2023ರ ಅಂಗವಾಗಿ 100 ಅರಣ್ಯ ಸಸಿ ನೆಡುವ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದರು.


    ಜಿಲ್ಲೆಯಲ್ಲಿ ಉತ್ತಮ ಹಸಿರು ಹೊದಿಕೆಯೊಂದಿಗೆ ಶೇ.45 ರಷ್ಟು ಅರಣ್ಯ ಪ್ರದೇಶವಿದೆ. ಜಿಲ್ಲೆಯ ಶಾಲಾ- ಕಾಲೇಜು, ಸರ್ಕಾರಿ ಸಂಸ್ಥೆಗಳ ಆವರಣ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಸಸಿಗಳನ್ನು ನೆಟ್ಟು ಬೆಳೆಸುವ ಮೂಲಕ ಜಿಲ್ಲೆಯಲ್ಲಿ ಅರಣ್ಯ ಪ್ರದೇಶವನ್ನು ವೃದ್ಧಿಸಲು ಕ್ರಮವಹಿಸಲಾಗಿದೆ ಎಂದರು.


    ಸ್ವಚ್ಛ ವಾತಾವರಣ ನಿರ್ಮಾಣಕ್ಕೆ ಪ್ರತಿಯೊಬ್ಬ ನಾಗರಿಕರು ಕೈಜೋಡಿಸಬೇಕು. ಪ್ರಸ್ತುತ ಕಾರ್ಖಾನೆ, ವಾಹನಗಳ ದಟ್ಟಣೆಯಿಂದ ಅಪಾರ ಪ್ರಮಾಣದಲ್ಲಿ ಪರಿಸರ ಹಾನಿ ಉಂಟಾಗುತ್ತಿದೆ. ಹೀಗಾಗಿ ನಗರದಲ್ಲಿ ಹೆಚ್ಚು ಸಸಿಗಳನ್ನು ನೆಟ್ಟು ಉತ್ತಮ ವಾತಾವರಣ ನಿರ್ಮಿಸುವ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.


    ಶಿಕ್ಷಣ ಇಲಾಖೆ ರಾಷ್ಟ್ರೀಯ ಹಸಿರು ಪಡೆಯ ಜಿಲ್ಲಾ ನೋಡಲ್ ಅಧಿಕಾರಿ ಟಿ.ಜಿ.ಪ್ರೇಮಕುಮಾರ್ ಮಾತನಾಡಿ, ವಿದ್ಯಾರ್ಥಿಗಳು
    ತಲಾ ಒಂದು ಸಸಿ ನೆಟ್ಟು ಪರಿಸರ ಸಂರಕ್ಷಣೆಗೆ ಪಣ ತೊಡಬೇಕು ಎಂದರು.


    ಬಸವನಹಳ್ಳಿ ಲ್ಯಾಂಪ್ಸ್ ಸೊಸೈಟಿ ಅಧ್ಯಕ್ಷ ಅರುಣ್ ರಾವ್, ಮುಖ್ಯ ಶಿಕ್ಷಕಿ ಕೆ.ಎಂ.ಅಯ್ಯಚ್ಚು, ಎನ್‌ಎಸ್‌ಎಸ್ ಅಧಿಕಾರಿ ಎ.ಎ.ಲಕ್ಷ್ಮಣ್ ಮಾತನಾಡಿದರು. ಕಾವೇರಿ ನದಿ ಸಂರಕ್ಷಣಾ ಸಮಿತಿ ಸಂಚಾಲಕ ಎಂ.ಎನ್.ಚಂದ್ರಮೋಹನ್, ಎಸಿಎಫ್ ಎ.ಎ.ಗೋಪಾಲ್, ಆರ್‌ಎಫ್‌ಒ ಕೆ.ವಿ.ಶಿವರಾಂ, ಡಿಆರ್‌ಎಫ್‌ಒಗಳಾದ ಅನಿಲ್ ಡಿ‘ಸೋಜ, ಕೆ.ಎನ್.ದೇವಯ್ಯ, ಕೆ.ಎಸ್.ಸುಬ್ರಾಯ, ಲ್ಯಾಂಪ್ಸ್ ಸೊಸೈಟಿಯ ಮಾಜಿ ಅಧ್ಯಕ್ಷ ಕೆ.ಸಿ.ಉದಯಕುಮಾರ್, ಕಾಳಿಂಗ, ನಿರ್ದೇಶಕಿ ಕಾವೇರಿ, ಅರಣ್ಯ ರಕ್ಷಕರಾದ ಮಂಜೇಗೌಡ, ದಿನೇಶ್, ಸಿದ್ದರಾಮ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts