More

    ಜೀವಜಲ, ಮೇವಿಗೆ ಸಮಸ್ಯೆ ಆಗದಿರಲಿ

    ಚಿತ್ರದುರ್ಗ: ಕುಡಿಯುವ ನೀರು ಹಾಗೂ ಮೇವು ಸಮಸ್ಯೆಗಳ ಬಗ್ಗೆ ದೈನಂದಿನ ವರದಿ ಆಧರಿಸಿ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಅಧಿಕಾರಿಗಳಿಗೆ ಸೂಚಿಸಿದರು.
    ಡಿಸಿ ಕಚೇರಿಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕುಡಿಯುವ ನೀರಿನ ನಿರ್ವಹಣೆಗೆ ನೇಮಿಸಿರುವ ತಾಲೂಕು ನೋಡಲ್ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು.
    ಕುಡಿಯುವ ನೀರಿನ ಸಮಸ್ಯೆ ಎದುರಾಗಿರುವ ಹಳ್ಳಿಗಳಲ್ಲಿ ಗ್ರಾಮಸ್ಥರು ಮತದಾನ ಬಹಿಷ್ಕರಿಸುವುದಾಗಿ ಹೇಳಿ, ಪ್ರತಿಭಟನೆಗೆ ಮುಂದಾಗುವ ವರದಿಗಳಿವೆ. ಇದು ಉತ್ತಮ ಲಕ್ಷಣವಲ್ಲ. ಅಧಿಕಾರಿಗಳು ತಕ್ಷಣವೇ ಸಮಸ್ಯೆಗೆ ಸ್ಪಂದಿಸಿ, ಸಾರ್ವಜನಿಕರಿಗೆ ತಿಳಿ ಹೇಳಬೇಕು. ಅಗತ್ಯವಿರುವೆಡೆ ಕೊಳವೆಬಾವಿ ಕೊರೆಸಿ ನೀರು ಸರಬರಾಜು ಮಾಡಲು ಕ್ರಮಕೈಗೊಳ್ಳಬೇಕು ಎಂದರು.
    ವಾಣಿಜ್ಯ ಬಳಕೆಗಾಗಿ ಖಾಸಗಿ ಬೋರ್‌ವೆಲ್ ನೀರು ಸರಬರಾಜು ಮಾಡುವುದನ್ನು ನಿಷೇಧಿಸಲಾಗುವುದು. ಸರ್ಕಾರ ನಿಗದಿಪಡಿಸಿದ ದರದಲ್ಲಿ ಖಾಸಗಿ ಕೊಳವೆಬಾವಿಗಳಿಂದ ನೀರು ಪಡೆದು ಸಾರ್ವಜನಿಕರಿಗೆ ಪೂರೈಸಬೇಕು. ನೀರು ಸರಬರಾಜು ಮಾಡುವ ಟ್ಯಾಂಕರ್‌ಗಳಿಗೆ ಜಿಪಿಎಸ್ ಅಳವಡಿಸಬೇಕು. ಟ್ರಿಪ್ ವಿವರವನ್ನು ತಂತ್ರಾಂಶದಲ್ಲಿ ಅಳವಡಿಸಬೇಕು ಎಂದು ಹೇಳಿದರು.
    ಟ್ಯಾಂಕರ್‌ಗೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಿರುವ ತಾಲೂಕುಗಳಲ್ಲಿ ತಕ್ಷಣವೇ ಟ್ಯಾಂಕರ್ ಬಾಡಿಗೆ ಪಡೆಯಬೇಕು. ತಾಲೂಕು ಮಟ್ಟದಲ್ಲಿ ಟಾಸ್ಕ್‌ಪೋಸ್ ಸಭೆ ನಡೆಸಿ ನಡಾವಳಿಗಳನ್ನು ಜಿಲ್ಲಾಮಟ್ಟಕ್ಕೆ ಕಳುಹಿಸುವಂತೆ ನಿರ್ದೇಶಿಸಿದರು.
    *1,33 ಲಕ್ಷ ಟನ್ ಮೇವು ಲಭ್ಯ: ಜಿಲ್ಲೆಯಲ್ಲಿ 1,33,318 ಮೆಟ್ರಿಕ್ ಟನ್ ಮೇವು ಲಭ್ಯವಿದ್ದು, ನಿತ್ಯ 2033 ಟನ್ ಮೇವಿನ ಅಗತ್ಯವಿದೆ. ಜಿಲ್ಲೆಯಲ್ಲಿ 3,38 ಲಕ್ಷ ದನಕರುಗಳಿದ್ದು, 65 ದಿನಗಳ ಕಾಲ ಮೇವಿಗೆ ಯಾವುದೇ ಸಮಸ್ಯೆ ಇಲ್ಲ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಬಿ.ಮಂಜುನಾಥ ಹೇಳಿದರು.
    ಗೋಶಾಲೆಗಳಲ್ಲಿ ಪ್ರತಿದಿನ ಖರ್ಚಾಗುವ ಮೇವಿನ ಬಗ್ಗೆ ವರದಿ ನೀಡಬೇಕು. ಜಿಲ್ಲೆಯಲ್ಲಿ ವಿತರಿಸಿರುವ ಮೇವಿನ ಕಿಟ್, ಅವುಗಳಿಂದ ಉತ್ಪಾದನೆಯಾದ ಮೇವಿನ ಪ್ರಮಾಣ ಹಾಗೂ ಬಳಕೆ ನಿಖರ ಮಾಹಿತಿ ಒದಗಿಸುವಂತೆ ಡಿಸಿ ಸೂಚಿಸಿದರು.
    ಜಿಲ್ಲೆಯಲ್ಲಿ ಮೊದಲ ಹಂತದಲ್ಲಿ 21,000 ಮೇವಿನ ಕಿಟ್ ವಿತರಿಸಲಾಗಿದೆ. 2ನೇ ಹಂತದಲ್ಲಿ 15,300 ಮೇವಿನ ಕಿಟ್‌ಗಳು ಬಂದಿದ್ದು, ಶೀಘ್ರ ವಿತರಿಸುವುದಾಗಿ ಪಶುಪಾಲನಾ ಮತ್ತು ಪಶುವೈದ್ಯಸೇವಾ ಇಲಾಖೆ ಉಪನಿರ್ದೇಶಕಿ ಇಂದಿರಾಬಾಯಿ ಮಾಹಿತಿ ನೀಡಿದರು.
    ಜಿಪಂ ಸಿಇಒ ಎಸ್.ಜೆ. ಸೋಮಶೇಖರ್, ಎಡಿಸಿ ಬಿ.ಟಿ.ಕುಮಾರಸ್ವಾಮಿ, ಎಸಿ ಎಂ.ಕಾರ್ತಿಕ್, ಡಿಡಿಎಲ್‌ಆರ್ ರಾಮಾಂಜನೇಯ, ರೇಷ್ಮೆ ಇಲಾಖೆ ಉಪನಿರ್ದೇಶಕ ಎಂ.ಬಿ.ಬೀರಲದಿನ್ನಿ, ಗ್ರಾಮೀಣ ಕುಡಿಯುವ ನೀರು ಇಲಾಖೆ ಇಇ ಬಸವನಗೌಡ ಮೇಟಿ ಪಾಟೀಲ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts