More

    ಜಿಲ್ಲೆಯ ಮೂವರಲ್ಲಿ ಕರೊನಾ ಸೋಂಕು ಶಂಕೆ

    ಧಾರವಾಡ: ಜಿಲ್ಲೆಯಲ್ಲಿ ಮೂವರಲ್ಲಿ ಕರೊನಾ ಸೋಂಕು ಇರುವ ಲಕ್ಷಣಗಳು ಕಾಣಿಸಿಕೊಂಡಿದ್ದು, ಅವರ ಗಂಟಲು ದ್ರವ ಹಾಗೂ ರಕ್ತ ಮಾದರಿಯನ್ನು ತಪಾಸಣೆಗಾಗಿ ಶಿವಮೊಗ್ಗಕ್ಕೆ ಕಳುಹಿಸಲಾಗಿದ್ದು, ಮೂವರನ್ನು ಪ್ರತ್ಯೇಕ ವಾರ್ಡ್​ನಲ್ಲಿ ಇರಿಸಲಾಗಿದೆ.

    ಈ ಮೂವರು ಯಾವ ಪ್ರದೇಶದಿಂದ ಆಗಮಿಸಿದ್ದಾರೆ ಎಂಬುದು ಮಾತ್ರ ಇನ್ನೂ ಸ್ಪಷ್ಟವಾಗಿಲ್ಲ. ಕೆಲ ದಿನಗಳ ಹಿಂದೆ ವಿದೇಶದಿಂದ ನಗರಕ್ಕೆ ಆಗಮಿಸಿದ್ದರು ಎಂದು ಗೊತ್ತಾಗಿದೆ. ಮುಂಜಾಗ್ರತಾ ಕ್ರಮವಾಗಿ ಅವರನ್ನು ಗುರುವಾರ ಆಸ್ಪತ್ರೆಗೆ ದಾಖಲಿಸಿ ಪ್ರತ್ಯೇಕ ವಾರ್ಡ್​ನಲ್ಲಿ ಇರಿಸಿದ್ದು, ವರದಿಗಾಗಿ ಜಿಲ್ಲಾಡಳಿತ ಕಾಯುತ್ತಿದೆ.

    ಈ ಸುದ್ದಿ ಗುರುವಾರ ಇಡೀ ದಿನ ನಗರದಲ್ಲಿ ಸಾಕಷ್ಟು ಸದ್ದು ಮಾಡಿದ್ದಲ್ಲದೆ, ಜನರಲ್ಲಿ ಭಯ ಹುಟ್ಟಿಸಿತ್ತು. ಮೂವರು ಆಸ್ಪತ್ರೆಗೆ ದಾಖಲಾಗುತ್ತಿದ್ದಂತೆಯೇ ಅವರು ವಾಸವಾಗಿದ್ದ ಪ್ರದೇಶಗಳ ಜನರಲ್ಲಿ ಭಯದ ವಾತಾವರಣ ನಿರ್ವಣವಾಗಿತ್ತು. ಅವರಿಗೆ ಸೋಂಕು ತಗುಲಿದೆ ಎಂಬ ರೀತಿಯಲ್ಲಿ ವಂದತಿ ಸಹ ಹಬ್ಬಿತ್ತು. ಸುಳ್ಳು ಸುದ್ದಿ ಹಬ್ಬಿರುವುದು ಜಿಲ್ಲಾಡಳಿತ ಸೇರಿದಂತೆ ಆರೋಗ್ಯ ಇಲಾಖೆ ಅಧಿಕಾರಿಗಳಿಗೂ ತಲೆ ನೋವಾಗಿತ್ತು. ಕೊನೆಗೆ ಸಂಜೆ ಹೊತ್ತಿಗೆ ಪ್ರಕಟಣೆ ಹೊರಡಿಸಿದ ಜಿಲ್ಲಾಡಳಿತ, ಮೂವರು ಶಂಕಿತರನ್ನು ಆಸ್ಪತ್ರೆಯ ಪ್ರತ್ಯೇಕ ವಾರ್ಡ್​ನಲ್ಲಿ ಇಡಲಾಗಿದೆ. ವರದಿ ಇನ್ನೂ ಬಂದಿಲ್ಲ ಎಂದು ಹೇಳುವ ಮೂಲಕ ಈ ಎಲ್ಲ ಊಹಾಪೋಗಳಿಗೆ ಬ್ರೇಕ್ ಹಾಕಿದೆ.

    158 ಜನರ ಮೇಲೆ ನಿಗಾ

    ಕರೊನಾ ಭೀತಿ ಹಿನ್ನೆಲೆಯಲ್ಲಿ ಜಿಲ್ಲೆಯ ಆರೋಗ್ಯ ಇಲಾಖೆಯು ಶಂಕಿತರ ಮೇಲೆ ನಿಗಾ ಇಟ್ಟಿರುವವರ ಸಂಖ್ಯೆ 158ಕ್ಕೆ ಏರಿಕೆಯಾಗಿದೆ. ವಿದೇಶದಿಂದ ಆಗಮಿಸಿರುವ ಹಾಗೂ ಅವರ ಸಂಪರ್ಕಕ್ಕೆ ಒಳಗಾದವರ ಸಂಖ್ಯೆ ಬುಧವಾರ 123 ಇದ್ದದ್ದು, ಗುರುವಾರ 158ಕ್ಕೆ ಏರಿಕೆಯಾಗಿದೆ. ಇವರೆಲ್ಲರ ಮೇಲೆ ಆರೋಗ್ಯ ಇಲಾಖೆ ಹದ್ದಿನ ಕಣ್ಣು ಇಟ್ಟಿದ್ದು, ಈ ಪೈಕಿ 122 ಜನರು ಮನೆಯಲ್ಲಿಯೇ ಪ್ರತ್ಯೇಕವಾಗಿ (14 ದಿನ) ವಾಸವಾಗಿದ್ದಾರೆ. ಆಸ್ಪತ್ರೆಯ ಪ್ರತ್ಯೇಕ ವಾರ್ಡ್​ಗಳಲ್ಲಿ 3 ಜನ ದಾಖಲಾಗಿದ್ದಾರೆ. 27 ಜನರು 14 ದಿನಗಳ ಪ್ರತ್ಯೇಕ ವಾಸ ಪೂರ್ಣಗೊಳಿಸಿದ್ದರೆ, 6 ಜನರು 28 ದಿನಗಳ ಪ್ರತ್ಯೇಕ ವಾಸವನ್ನು ಪೂರ್ಣಗೊಳಿಸಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

    ಕರೊನಾ ಲಕ್ಷಣ ಇದ್ದವರ ಮಾಹಿತಿ ನೀಡಿ

    ಕರೊನಾ ಸೋಂಕು ತಡೆಗೆ ಖಾಸಗಿ ಆಸ್ಪತ್ರೆಗಳು ಮತ್ತು ವೈದ್ಯರ ಸಹಕಾರ ಅಗತ್ಯ. ಸೋಂಕು ಲಕ್ಷಣ ಇರುವವರು ಖಾಸಗಿ ಆಸ್ಪತ್ರೆಗಳಿಗೆ ಚಿಕಿತ್ಸೆಗೆ ಬಂದರೆ ಕೂಡಲೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗೆ ಮಾಹಿತಿ ನೀಡಬೇಕು. ಖಾಸಗಿ ಆಸ್ಪತ್ರೆಗಳು ಸರ್ಕಾರ ಸೂಚಿಸಿದ ಶಿಷ್ಟಾಚಾರ ಪಾಲಿಸಬೇಕು. ಶಂಕಿತ ವ್ಯಕ್ತಿಗಳಿಗೆ ಕಿಮ್ಸ್​ನಲ್ಲಿ ಪ್ರತ್ಯೇಕವಾಗಿ ಚಿಕಿತ್ಸೆ ನೀಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ಹೇಳಿದರು.

    ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಆರೋಗ್ಯ ಕಾರ್ಯ ಪಡೆಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪರಿಸ್ಥಿತಿ ಎದುರಿಸಲು ಖಾಸಗಿ ಆಸ್ಪತ್ರೆಗಳು ಸರ್ಕಾರದೊಂದಿಗೆ ಕೈ ಜೋಡಿಸಬೇಕು. ಖಾಸಗಿ ಆಸ್ಪತ್ರೆಗಳು ತಮ್ಮ ದೈನಂದಿನ ಸೇವೆ ನೀಡಬಹುದು. ಆದರೆ ಸೋಂಕಿತ ಲಕ್ಷಣಗಳಿರುವವರು ಆಸ್ಪತ್ರೆಗಳಿಗೆ ಬಂದರೆ ಅವರ ಬಗ್ಗೆ ಹಾಗೂ ಹಿಂದಿನ 15 ದಿನಗಳ ಪ್ರವಾಸದ ಮಾಹಿತಿಯೊಂದಿಗೆ ತಕ್ಷಣ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ (ಮೊ. 9449843049) ಅಥವಾ ಜಿಲ್ಲಾ ಸರ್ವೆಕ್ಷಣಾಧಿಕಾರಿಗೆ (ಮೊ. 9449843254) ಮಾಹಿತಿ ನೀಡಬೇಕು ಎಂದರು.

    ಆಯುಷ್ ವೈದ್ಯರು ಚಿಕಿತ್ಸೆ ನೀಡಬಾರದು: ಖಾಸಗಿ ಆಸ್ಪತ್ರೆಗಳು ಈ ಪ್ರಕರಣಗಳಲ್ಲಿ ಸದ್ಯಕ್ಕೆ ಚಿಕಿತ್ಸೆ ನೀಡುವುದು ಬೇಡ. ಖಾಸಗಿ ಆಸ್ಪತ್ರೆಗಳ ಸೇವೆ ಅಮೂಲ್ಯ. ಆದರೆ ಸೋಂಕು ತಡೆಯಲು ಒಟ್ಟಾಗಿ ಪ್ರಯತ್ನಿಸಬೇಕು ಎಂಬುದು ಸರ್ಕಾರದ ಉದ್ದೇಶ. ಆಯುಷ್ ವೈದ್ಯರೂ ಶಂಕಿತರಿಗೆ ಚಿಕಿತ್ಸೆ ನೀಡಬಾರದು. ಜನರಲ್ಲಿ ಅರಿವು ಮೂಡಿಸಬಹುದು ಎಂದರು.

    ಜಿಲ್ಲಾ ಸರ್ವೆಕ್ಷಣಾಧಿಕಾರಿ ಡಾ. ಸುಜಾತಾ ಹಸವಿಮಠ ಮಾತನಾಡಿ, ಮುಂಜಾಗ್ರತಾ ಕ್ರಮವಾಗಿ ಆಸ್ಪತ್ರೆಗಳಲ್ಲಿ ಪ್ರತ್ಯೇಕ ವಾರ್ಡ್, ವೈದ್ಯರು, ನರ್ಸ್​ಗಳು ಹಾಗೂ ಸಹಾಯಕರನ್ನು ಪಾಳಿ ಆಧಾರದಲ್ಲಿ ಕರ್ತವ್ಯಕ್ಕೆ ನಿಯೋಜಿಸಲು ಸಿದ್ಧತೆ ಮಾಡಿಕೊಳ್ಳಬೇಕು. ನಿಯೋಜಿಸಿದ ವೈದ್ಯರು ಮತ್ತು ಸಹಾಯಕರ ವಿವರಗಳನ್ನು ಜಿಲ್ಲಾಡಳಿತಕ್ಕೆ ಒದಗಿಸಬೇಕು. ಕರೊನಾ ರೋಗಿಗಳ ಚಿಕಿತ್ಸೆಗೆ ಅನುಸರಿಸಬೇಕಾದ ಕ್ರಮ, ರಕ್ಷಣಾ ಮತ್ತು ಜೈವಿಕ ವೈದ್ಯಕೀಯ ಸಾಮಗ್ರಿಗಳ ವಿಲೇವಾರಿ ಕುರಿತು ಮಾರ್ಗದರ್ಶನಕ್ಕಾಗಿ ಜಿಲ್ಲಾ ಆರೋಗ್ಯ ಇಲಾಖೆಯ ಮೈಕ್ರೋ ಬಯಾಲಜಿಸ್ಟ್ ಡಾ. ಮಂಜುನಾಥ ಅವರನ್ನು ಸಂಪರ್ಕಿಸಬಹುದು ಎಂದರು.

    ಜಿಪಂ ಸಿಇಒ ಡಾ. ಬಿ.ಸಿ. ಸತೀಶ, ಕಿಮ್್ಸ ವೈದ್ಯಕೀಯ ಅಧೀಕ್ಷಕ ಡಾ. ಅರುಣಕುಮಾರ ಮಾತನಾಡಿದರು. ಅಪರ ಜಿಲ್ಲಾಧಿಕಾರಿ ಶಿವಾನಂದ ಕರಾಳೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಯಶವಂತ ಮದೀನಕರ, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ. ಶಿವಕುಮಾರ ಮಾನಕರ, ಡಾ. ಎಸ್.ಎಂ. ಹೊನಕೇರಿ, ಡಾ. ಎಸ್.ಎಂ. ನಿಂಬಣ್ಣವರ, ಡಾ. ಸಂಜೀವ ಕುಲಕರ್ಣಿ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾಧಿಕಾರಿ ವಿನಾಯಕ ಪಾಲನಕರ, ಆಹಾರ ನಾಗರಿಕ ಸರಬರಾಜು ಹಾಗೂ ಗ್ರಾಹಕ ವ್ಯವಹಾರಗಳ ಇಲಾಖೆ ಜಂಟಿ ನಿರ್ದೇಶಕ ಸದಾಶಿವ ಮರ್ಜಿ, ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts