More

    ಜಿಲ್ಲಾ ಸಾಹಿತ್ಯ ಸಮ್ಮೇಳನಕ್ಕೆ ಭರದ ಸಿದ್ಧತೆ

    ಗದಗ: ನಗರದ ಸಾಹಿತ್ಯ ಭವನದಲ್ಲಿ ಮಾ.14 ಹಾಗೂ ಮಾ. 15ರಂದು 9ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜಿಸಲಾಗಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಶರಣು ಗೋಗೇರಿ ಹೇಳಿದರು.

    ನಗರದಲ್ಲಿ ಗುರುವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಮಾ.14 ರಂದು ಬೆಳಗ್ಗೆ 8 ಗಂಟೆಗೆ ಗದಗ ತಾಪಂ ಅಧ್ಯಕ್ಷ ಶರಣಪ್ಪಗೌಡ ಪಾಟೀಲರಿಂದ ರಾಷ್ಟ್ರಧ್ವಜ, ಜಿಲ್ಲಾ ಕಸಾಪ ಅಧ್ಯಕ್ಷ ಡಾ.ಶರಣು ಗೋಗೇರಿ ಅವರಿಂದ ಪರಿಷತ್ತಿನ ಧ್ವಜ, ಗದಗ ತಾಲೂಕು ಕಸಾಪ ಅಧ್ಯಕ್ಷ ರವಿ ಶಿಶ್ವಿನಹಳ್ಳಿ ಅವರಿಂದ ನಾಡ ಧ್ವಜಾರೋಹಣ ನಡೆಯಲಿದೆ. 9 ಗಂಟೆಗೆ ತಾಯಿ ಭುವನೇಶ್ವರಿ ಭಾವಚಿತ್ರ ಹಾಗೂ ಸಮ್ಮೇಳನ ಸರ್ವಾಧ್ಯಕ್ಷ ರವೀಂದ್ರ ಕೊಪ್ಪರ ಅವರ ಮೆರವಣಿಗೆ ನಡೆಯಲಿದೆ.

    ಬೆಳಗ್ಗೆ 10.30ಕ್ಕೆ ಡಾ. ತೋಂಟದ ಸಿದ್ಧರಾಮ ಸ್ವಾಮೀಜಿ ಸಾನ್ನಿಧ್ಯ, ಬಾಲೇಹೊಸೂರಿನ ಶ್ರೀ ದಿಂಗಾಲೇಶ್ವರ ಸ್ವಾಮೀಜಿ ಸಮ್ಮುಖದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ. ಪಾಟೀಲ ಸಮ್ಮೇಳನಕ್ಕೆ ಚಾಲನೆ ನೀಡುವರು. ಶಾಸಕ ಎಚ್.ಕೆ. ಪಾಟೀಲ ಅಧ್ಯಕ್ಷತೆ ವಹಿಸುವರು. ಶಾಸಕ ಕಳಕಪ್ಪ ಬಂಡಿ ಪುಸ್ತಕ ಬಿಡುಗಡೆ ಮಾಡುವರು ಎಂದರು.

    ಮಧ್ಯಾಹ್ನ 1 ಗಂಟೆಗೆ ವಿಶ್ರಾಂತ ನ್ಯಾಯಾಧೀಶ ಅರಳಿ ನಾಗರಾಜ ಅವರ ಅಧ್ಯಕ್ಷತೆಯಲ್ಲಿ ಮೊದಲ ಗೋಷ್ಠಿ ನಡೆಯಲಿದೆ. ಮಧ್ಯಾಹ್ನ 3 ರಿಂದ 4.45 ರವರೆಗೆ 2ನೇ ಗೋಷ್ಠಿ ನಡೆಯಲಿದ್ದು, ಜಾನಪದ ವಿದ್ವಾಂಸ ಡಾ.ಸಿದ್ದಣ್ಣ ಜಕಬಾಳ ಅಧ್ಯಕ್ಷತೆ ವಹಿಸುವರು. 4.45ರಿಂದ 6.30 ರವರೆಗೆ ಸಮ್ಮೇಳನ ಸರ್ವಾಧ್ಯಕ್ಷ ರವೀಂದ್ರ ಕೊಪ್ಪರ ಅವರೊಂದಿಗೆ ಸಂವಾದ ನಡೆಯಲಿದೆ. ಅಂದಾನೆಪ್ಪ ವಿಭೂತಿ ಅವರು ಸಮ್ಮೇಳನ ಸರ್ವಾಧ್ಯಕ್ಷರ ಬದುಕು ಮತ್ತು ಬರಹ ಕುರಿತು ಮಾತನಾಡುವರು. ಬಳಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ವಿವರಿಸಿದರು.

    ಮಾ.15 ರಂದು ಬೆಳಗ್ಗೆ 9.30 ರಿಂದ 12ರವರೆಗೆ ಕವಿಗೋಷ್ಠಿ ನಡೆಯಲಿದ್ದು, ಸಾಹಿತಿ ಐ.ಕೆ. ಕಮ್ಮಾರ ಅಧ್ಯಕ್ಷತೆ ವಹಿಸುವರು. ಮಧ್ಯಾಹ್ನ 12 ರಿಂದ 1 ರವರೆಗೆ ವಿಶೇಷ ಉಪನ್ಯಾಸ ನಡೆಯಲಿದ್ದು, ಬಸವರಾಜ ಗುರಿಕಾರ ಅಧ್ಯಕ್ಷತೆ ವಹಿಸುವರು. ಸರ್ಕಾರಿ ಶಾಲೆಗಳ ಸಬಲೀಕರಣ ಕುರಿತು ಪ್ರಕಾಶ ಮನ್ನಂಗಿ, ಪಾಲಕರು ಮತ್ತು ಇಂಗ್ಲಿಷ್ ವ್ಯಾಮೋಹ ಕುರಿತು ಸಂಡೂರು ಬಿಇಒ ಐ.ಆರ್. ಅಕ್ಕಿ, ಕನ್ನಡ ಉಳಿವು ಮತ್ತು ಬೆಳವಣಿಗೆ ಕುರಿತು ಆರ್.ಎಸ್. ಬುರಡಿ ವಿಷಯ ಮಂಡಿಸುವರು. ಸಂಜೆ 4 ಕ್ಕೆ ಜಿಲ್ಲಾ ಕಸಾಪ ಅಧ್ಯಕ್ಷ ಡಾ.ಶರಣು ಗೋಗೇರಿ ಅಧ್ಯಕ್ಷತೆಯಲ್ಲಿ ಬಹಿರಂಗ ಅಧಿವೇಶನ ನಡೆಯಲಿದೆ. ಇದೇ ವೇಳೆ ಸಮ್ಮೇಳನದ ನಿರ್ಣಯ ಮಂಡಿಸಲಾಗುವುದು ಎಂದರು.

    ಸಮ್ಮೇಳನ ಸಮಾರೋಪ ಕಾರ್ಯಕ್ರಮ ದಲ್ಲಿ ವೀರೇಶ್ವರ ಪುಣ್ಯಾಶ್ರಮದ ಕಲ್ಲಯ್ಯಜ್ಜನವರು, ಭೈರನಹಟ್ಟಿಯ ಶ್ರೀ ಶಾಂತಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಸಾಹಿತಿ ಕುಂ.ವೀರಭದ್ರಪ್ಪ ಅವರು ಸಮಾರೋಪ ನುಡಿಗಳನ್ನಾಡುವರು. ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 75 ಜನರನ್ನು ಸನ್ಮಾನಿಸಲಾಗುವುದು ಎಂದರು.

    ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ರವಿ ಗುಂಜೀಕರ ಮಾತನಾಡಿ, ಎರಡು ದಿನಗಳ ಕಾಲ ನಡೆಯುವ ಜಿಲ್ಲಾ ಮಟ್ಟದ 9ನೇ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಲು ಸರ್ಕಾರಿ ನೌಕರರಿಗೆ ಒಒಡಿ ಸೌಲಭ್ಯವನ್ನು ಸರ್ಕಾರ ಕಲ್ಪಿಸಿದೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts