More

    IPL 2024: ಇಂದು ಲಖನೌ ಸೂಪರ್​ಜೈಂಟ್ಸ್​-ಕೋಲ್ಕತ ನೈಟ್​ರೈಡರ್ಸ್​ ಕಾದಾಟ

    ಲಖನೌ: ಪ್ಲೇಆಫ್​​ ಸನಿಹದಲ್ಲಿರುವ ತಂಡಗಳಾದ ಲಖನೌ ಸೂಪರ್​ಜೈಂಟ್ಸ್​ ಮತ್ತು ಕೋಲ್ಕತ ನೈಟ್​ರೈಡರ್ಸ್​ ತಂಡಗಳು ಐಪಿಎಲ್-17ರಲ್ಲಿ ಭಾನುವಾರದ 2ನೇ ಪಂದ್ಯದಲ್ಲಿ ಕಾದಾಡಲಿವೆ. ಈ ಪಂದ್ಯದಲ್ಲಿ ಗೆದ್ದ ತಂಡ ಪ್ಲೇಆಫ್​ ಅವಕಾಶವನ್ನು ವೃದ್ಧಿಸಿಕೊಳ್ಳಲಿದೆ.

    ಇದು ಉಭಯ ತಂಡಗಳ ಮರುಮುಖಾಮುಖಿಯಾಗಿದೆ. ಏಪ್ರಿಲ್​ 14ರಂದು ಕೋಲ್ಕತದಲ್ಲಿ ನಡೆದ ಮೊದಲ ಮುಖಾಮುಖಿಯಲ್ಲಿ ಕೆಕೆಆರ್​ ಸುಲಭ ಗೆಲುವು ಸಾಧಿಸಿತ್ತು. ಅದಕ್ಕೀತ ತನ್ನ ತವರಿನಲ್ಲಿ ಸೇಡು ತೀರಿಸಿಕೊಳ್ಳಲು ಕೆಎಲ್​ ರಾಹುಲ್​ ಪಡೆ ಹೋರಾಡಲಿದೆ.

    ಕೆಕೆಆರ್​ ಇದುವರೆಗೆ ಆಡಿರುವ 10 ಪಂದ್ಯಗಳಲ್ಲಿ 7 ಜಯ ಮತ್ತು 3 ಸೋಲು ಕಂಡು ಅಂಕಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದೆ. ಈ ಪಂದ್ಯದಲ್ಲಿ ಗೆದ್ದರೆ ಕೆಕೆಆರ್​ ಪ್ಲೇಆಫ್​​ ಪ್ರವೇಶವನ್ನು ಬಹುತೇಕ ಖಾತ್ರಿಪಡಿಸಿಕೊಳ್ಳುವ ಜತೆಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರುವ ಅವಕಾಶವನ್ನೂ ಹೊಂದಿದೆ. ಸದ್ಯದ ಅಗ್ರಸ್ಥಾನಿ ರಾಜಸ್ಥಾನ ರಾಯಲ್ಸ್​ ಕೂಡ 8 ಪಂದ್ಯ ಗೆದ್ದಿದ್ದರೂ, ಕೆಕೆಆರ್​ ರನ್​ರೇಟ್​ನಲ್ಲಿ ಅದಕ್ಕಿಂತ ಮೇಲುಗೈ ಹೊಂದಿದೆ.

    ಲಖನೌ ತಂಡ 10 ಪಂದ್ಯಗಳಲ್ಲಿ 6 ಜಯ, 4 ಸೋಲು ಕಂಡಿದ್ದು, ಅಂಕಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದೆ. ಈ ಪಂದ್ಯದಲ್ಲಿ ಗೆದ್ದರೆ ಲಖನೌ ಮತ್ತು ಕೆಕೆಆರ್​ ಬಹುತೇಕ ಸಮಬಲ ಕಾಣಲಿವೆ. ಆಗ ಲಖನೌಗೆ ಸತತ 3ನೇ ಬಾರಿ ಪ್ಲೇಆಫ್​​ ಪ್ರವೇಶಿಸುವ ಅವಕಾಶವೂ ಹೆಚ್ಚಲಿದೆ. ಸನ್​ರೈಸರ್ಸ್​, ಸಿಎಸ್​ಕೆ ನಿಕಟ ಪೈಪೋಟಿ ಒಡ್ಡುತ್ತಿರುವುದರಿಂದ ಲಖನೌ ಈ ಪಂದ್ಯದಲ್ಲಿ ಸೋತರೆ ಹಿನ್ನಡೆಯನ್ನೂ ಕಾಣಲಿದೆ.

    ಲಖನೌಗೆ ತವರಿನ ಬಲ
    ಲಖನೌ ತಂಡಕ್ಕೆ ತವರಿನ ಏಕನಾ ಕ್ರೀಡಾಂಗಣದಲ್ಲಿ ಇದು ಹಾಲಿ ಆವೃತ್ತಿಯ ಕೊನೆಯ ಪಂದ್ಯವಾಗಿದೆ. ಹಿಂದಿನ 6 ತವರಿನ ಪಂದ್ಯಗಳಲ್ಲಿ 4ರಲ್ಲಿ ಗೆದ್ದಿರುವ ಎಲ್​ಎಸ್​ಜಿ, 2ರಲ್ಲಿ ಸೋತಿದೆ. ನಾಯಕ ಕೆಎಲ್​ ರಾಹುಲ್​ ಮತ್ತು ಮಾರ್ಕಸ್​ ಸ್ಟೋಯಿನಿಸ್​ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ನಿಕೋಲಸ್​ ಪೂರನ್​ ಕೂಡ ಉಪಯುಕ್ತ ಕೊಡುಗೆ ನೀಡುತ್ತಿದ್ದಾರೆ. ಕಳೆದ ಪಂದ್ಯದಲ್ಲಿ ಯುವ ಆಟಗಾರ ಅರ್ಷಿನ್​ ಕುಲಕರ್ಣಿ ಇನಿಂಗ್ಸ್​ ಆರಂಭಿಸುವ ಅವಕಾಶ ಪಡೆದರೂ ಖಾತೆ ತೆರೆಯದೆ ನಿರಾಸೆ ಮೂಡಿಸಿದ್ದರು. ಕ್ವಿಂಟನ್​ ಡಿಕಾಕ್​ ಮರಳಿ ಕಣಕ್ಕಿಳಿಯುವ ಬದಲಾಗಿ ಅರ್ಷಿನ್​ ಇನ್ನೊಂದು ಅವಕಾಶ ಪಡೆಯುವ ನಿರೀಕ್ಷೆ ಹೆಚ್ಚಿದೆ. ಬೌಲಿಂಗ್​ ವಿಭಾಗದಲ್ಲಿ ಯುವ ಬೌಲರ್​ಗಳೇ ಲಖನೌಗೆ ಶಕ್ತಿ ತುಂಬಿದ್ದಾರೆ. ಆದರೆ ಕಳೆದ ಪಂದ್ಯದಲ್ಲಿ ಮತ್ತೆ ಗಾಯಗೊಂಡ ಮಯಾಂಕ್​ ಯಾದವ್​ ಈ ಸಲ ಅಲಭ್ಯರಾಗಿದ್ದಾರೆ.

    ವಿಶ್ವಾಸದಲ್ಲಿ ಕೆಕೆಆರ್​
    ಪಂಜಾಬ್​ ಕಿಂಗ್ಸ್​ ವಿರುದ್ಧ 261 ರನ್​ ಪೇರಿಸಿಯೂ ಸೋಲು ಕಂಡಿದ್ದ ಕೆಕೆಆರ್​, ಮುಂಬೈ ವಿರುದ್ಧ ಸ್ಪರ್ಧಾತ್ಮಕ ಮೊತ್ತ ಪೇರಿಸಿಯೂ ಅದನ್ನು ರಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಇದರೊಂದಿಗೆ ಕೆಕೆಆರ್​ ಆತ್ಮವಿಶ್ವಾಸ ವೃದ್ಧಿಸಿಕೊಂಡಿದೆ. 57 ರನ್​ಗಳಿಗೆ 5 ವಿಕೆಟ್​ ಉರುಳಿದ ನಡುವೆಯೂ ಗೆಲುವು ದಾಖಲಿಸಿರುವುದು ಕೆಕೆಆರ್​ಗೆ ಎಂಥಾ ಪರಿಸ್ಥಿತಿಯಿಂದಲೂ ಪುಟಿದೆದ್ದು ಬರುವ ವಿಶ್ವಾಸ ತುಂಬಿದೆ. ಇಂಪ್ಯಾಕ್ಟ್​ ಪ್ಲೇಯರ್​ ಆಗಿ ಟೂರ್ನಿಯಲ್ಲಿ ಮೊದಲ ಬಾರಿಗೆ ಆಡುವ ಮತ್ತು ಕೆಕೆಆರ್​ ಪರ 7 ವರ್ಷಗಳ ಬಳಿಕ ಕಣಕ್ಕಿಳಿಯುವ ಅವಕಾಶ ಪಡೆದ ಕನ್ನಡಿಗ ಮನೀಷ್​ ಪಾಂಡೆ ಗೆಲುವಿಗೆ ನೆರವಾಗುವ ಮೂಲಕ ಟೀಮ್​ ಮ್ಯಾನೇಜ್​ಮೆಂಟ್​ ವಿಶ್ವಾಸ ಸಂಪಾದಿಸಿದ್ದು, ಈ ಬಾರಿ ಆಡುವ ಆರಂಭಿಕ 11ರ ಬಳಗದಲ್ಲೇ ಸ್ಥಾನ ಸಂಪಾದಿಸುವ ನಿರೀಕ್ಷೆ ಇದೆ. 2 ಪ್ರಮುಖ ಕ್ಯಾಚ್​ ಹಿಡಿಯುವ ಮೂಲಕ ಅವರು ಫೀಲ್ಡಿಂಗ್​ನಲ್ಲೂ ಮಿಂಚಿದ್ದರು.

    ಮುಖಾಮುಖಿ: 4
    ಲಖನೌ: 3
    ಕೆಕೆಆರ್​: 1
    ಆರಂಭ: ರಾತ್ರಿ 7.30.
    ನೇರಪ್ರಸಾರ: ಸ್ಟಾರ್​ ಸ್ಪೋರ್ಟ್ಸ್​, ಜಿಯೋಸಿನಿಮಾ.

    IPL 2024: ಆರ್​ಸಿಬಿಗೆ ಹ್ಯಾಟ್ರಿಕ್​ ಜಯ; ಗುಜರಾತ್​ ವಿರುದ್ಧ ಭರ್ಜರಿ ಬೌಲಿಂಗ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts