More

    ಜಿಟಿ ಜಿಟಿ ಮಳೆಗೆ ಹಾಳಾಗುತ್ತಿದೆ ಬೆಳೆ

    ಗಜೇಂದ್ರಗಡ: ಪಟ್ಟಣ ಸೇರಿ ತಾಲೂಕಿನಾದ್ಯಂತ ಕಳೆದ ಮೂರು ದಿನಗಳಿಂದ ಜಿಟಿಜಿಟಿ ಮಳೆ ಸುರಿಯುತ್ತಿದ್ದು, ನಿರಂತರ ಮಳೆಯಿಂದಾಗಿ ಶೇಂಗಾ, ಉಳ್ಳಾಗಡ್ಡಿ ಸೇರಿದಂತೆ ವಿವಿಧ ಬೆಳೆಗಳು ಹಾಳಾಗುತ್ತಿವೆ.

    ತಾಲೂಕಿನ ಯರಿ ಹಾಗೂ ಮಸಾರಿ ಭಾಗಗಳಲ್ಲಿ ಶೇಂಗಾ ಹಾಗೂ ಮೆಕ್ಕೆಜೋಳ ರಾಶಿ ಮಾಡುತ್ತಿದ್ದು ಸುಗ್ಗಿಯ ಸಮಯದಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ರಾಶಿ ಮಾಡಲು ಸಾಧ್ಯವಾಗುತ್ತಿಲ್ಲ. ಶೇಂಗಾ ಹಾಗೂ ಮೆಕ್ಕೆಜೋಳಗಳು ಮಳೆಯಿಂದಾಗಿ ಮೊಳಕೆಯೊಡೆದು ಹಾಳಾಗಿವೆ. ಇದರಿಂದ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ.

    ಕಳೆದ ನಾಲ್ಕು ತಿಂಗಳಿನಿಂದ ತಾಲೂಕಿನಲ್ಲಿ ವಾಡಿಕೆಗಿಂತ ಹೆಚ್ಚಿನ ಮಳೆ ಸುರಿದಿದ್ದರಿಂದ ತೇವಾಂಶ ಹೆಚ್ಚಳವಾಗಿದ್ದು ಉಳ್ಳಾಗಡ್ಡಿ ಬೆಳೆಗೆ ಹಳದಿ, ಸುಳಿತಿರುವು ರೋಗಗಳು ತಗಲಿದ್ದು ಫಸಲು ನೆಲಕಚ್ಚುತ್ತಿದೆ. ಹತ್ತಿ, ಮೆಕ್ಕೆಜೋಳ, ಬೆಳೆಗಳಿಗೂ ಹಳದಿ ರೋಗ ಬಾಧಿಸುತ್ತಿದೆ. ಕಟಾವಿಗೆ ಬಂದಿರುವ ಮೆಕ್ಕೆಜೋಳ, ಶೇಂಗಾ ಬೆಳೆ ಅಕಾಲಿಕ ಮಳೆಗೆ ತುತ್ತಾಗುವ ಭೀತಿ ಉಂಟಾಗಿದೆ. ಮೆಕ್ಕೆಜೋಳ ರಾಶಿ ಮಾಡುವ ಹಂತದಲ್ಲಿದೆ. ಕಟಾವು ಮಾಡಿ ಗುಡ್ಡೆಹಾಕಲಾದ ಬೆಳೆಯನ್ನು ರಕ್ಷಿಸಿಕೊಳ್ಳಬಹುದು ಆದರೆ, ಹೊಲದಲ್ಲಿರುವ ಬೆಳೆಯನ್ನು ರಕ್ಷಿಸುವುದು ಹೇಗೆ ಎನ್ನುತ್ತಾರೆ ರೈತರು.

    ಕಳೆದ ತಿಂಗಳು ಸುರಿದ ಉತ್ತಮ ಮಳೆಯಿಂದಾಗಿ ಈ ಬಾರಿ ಬಂಪರ್ ಬೆಳೆ ಬರಬಹುದು ಎಂಬ ಆಸೆ ಇಟ್ಟುಕೊಂಡಿದ್ದ ರೈತರಿಗೆ ಮೋಡ ಮುಸುಕಿದ ವಾತಾವರಣ ಹಾಗೂ ಜಿಟಿ ಜಿಟಿ ಮಳೆ ನಿರಾಸೆ ಮೂಡಿಸಿದೆ. ಕಿತ್ತು ಹಾಕಲಾದ ಶೇಂಗಾ ಕಪ್ಪು ಬಣ್ಣಕ್ಕೆ ತಿರುಗುತ್ತಿದೆ. ಶೇಂಗಾ ಭೂಮಿಯಿಂದ ಕಿತ್ತಿದರೂ ಕಷ್ಟ, ಭೂಮಿಯಲ್ಲಿ ಬಿಟ್ಟರೂ ಕಷ್ಟ ಎನ್ನುವಂತಾಗಿದೆ. ಹೀಗಾಗಿ ಶೇಂಗಾ ಬೆಳೆಗೆ ಮಾಡಿದ ಖರ್ಚು ಕೂಡ ವಾಪಸ್ ಬರುವುದು ಕಷ್ಟ ಎನ್ನುತ್ತಾರೆ ರೈತರು.

    ಕರೊನಾ ಹಾವಳಿಯಿಂದಾಗಿ ಕೆಲಸವಿಲ್ಲದೇ ಜೀವನ ನಿರ್ವಹಣೆ ಕಷ್ಟವಾಗಿದೆ. ಇಂತಹ ಸಂದಿಗ್ಧ ಸ್ಥಿತಿಯಲ್ಲಿ ಸಾಲ ಮಾಡಿ ಶೇಂಗಾ ಬಿತ್ತನೆ ಮಾಡಿದ್ದೇವೆ. ಈ ಬಾರಿ ಬೆಳೆಗೆ ಮಾಡಿದ ಖರ್ಚು ಕೂಡ ವಾಪಸ್ ಬರುವ ಲಕ್ಷಣಗಳಿಲ್ಲ. ನಿರಂತರ ಮಳೆಯಿಂದಾಗಿ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಹ ಸ್ಥಿತಿ ನಿರ್ವಣವಾಗಿದೆ. ಸರ್ಕಾರ ರೈತರ ನೆರವಿಗೆ ಧಾವಿಸಬೇಕು.
    | ರುದ್ರಪ್ಪ ನಡಕಟ್ಟಿನ, ಕೊಡಗಾನೂರ ಗ್ರಾಮದ ರೈತ

    ಅತಿಯಾದ ಮಳೆಯಿಂದ ಬೆಳೆಗಳು ಈ ರೀತಿ ಆಗಿವೆ. ಬೆಳೆಗಳನ್ನು ಪರಿಶೀಲಿಸಿ ತಹಸೀಲ್ದಾರ್ ಅವರ ಗಮನಕ್ಕೆ ತಂದು ಸೂಕ್ತ ಪರಿಹಾರ ಒದಗಿಸಲಾಗುತ್ತದೆ. ರೈತರು ಬೆಳೆಗಳ ಮೇಲೆ ವಿಮೆ ಮಾಡಿಸಿದ್ದರೆ ಅದರ ಪ್ರಯೋಜನ ಪಡೆದುಕೊಳ್ಳಬಹುದು.
    | ರವೀಂದ್ರಗೌಡ ಪಾಟೀಲ, ತಾಲೂಕು ಕೃಷಿ ಅಧಿಕಾರಿ

    ದನ-ಕರುಗಳಿಗೆ ಮೇವಿನ ಅಭಾವ

    ಡಂಬಳ: ಸತತ ಸುರಿಯುತ್ತಿರುವ ಮಳೆಯಿಂದಾಗಿ ಕಟಾವುಗೊಳಿಸಿದ ಉಳ್ಳಾಗಡ್ಡಿ, ಗೆಜ್ಜೆ ಶೇಂಗಾ ಹೊಲದಲ್ಲೇ ಕೊಳೆಯುತ್ತಿವೆ.

    ಡಂಬಳ ಹೋಬಳಿ ವ್ಯಾಪ್ತಿಯ ಹಿರೇವಡ್ಡಟ್ಟಿ, ಡೋಣಿ, ಡೋಣಿ ತಾಂಡ, ಕದಾಂಪುರ, ಅತ್ತಿಕಟ್ಟಿ, ಮುರುಡಿ ಸೇರಿ 400 ಹೆಕ್ಟೇರ್ ಗೆಜ್ಜೆ ಶೇಂಗಾ, 1500 ಹೆಕ್ಟೇರ್ ಪ್ರದೇಶದಲ್ಲಿ ಉಳ್ಳಾಗಡ್ಡಿ ಬೆಳೆಯಲಾಗಿದೆ. ಕೆಲವು ರೈತರು ಬೆಳೆ ಕಟಾವು ಮಾಡಿದ್ದಾರೆ. ಆದರೀಗ ಮಳೆಯಿಂದ ಬೆಳೆ ಜಮೀನಿನಲ್ಲಿ ಮೊಳಕೆಯೊಡೆಯುವ ಹಂತಕ್ಕೆ ಬಂದಿದೆ.

    ಡಂಬಳದ ಬಸಪ್ಪ ಸೊರಟೂರ 2 ಎಕರೆ ಹೊಲದಲ್ಲಿ ನೀರಾವರಿ ಬೇಸಾಯದಿಂದ ಬೆಳೆದ ಗೆಜ್ಜೆ ಶೇಂಗಾವನ್ನು ಹೊಲದಲ್ಲಿ ಕಿತ್ತು ಹಾಕಲಾಗಿದೆ. ಮಳೆಯಿಂದಾಗಿ ಫಸಲು ಹೊಲದಲ್ಲೇ ಕೊಳೆಯುವಂತಾಗಿದೆ. ಇದರಿಂದ ರೈತರು ಸಾಕಷ್ಟು ನಷ್ಟ ಅನುಭವಿಸುವಂತಾಗಿದೆ.

    ಗೆಜ್ಜೆ ಶೇಂಗಾ ಕಿತ್ತು ಹಾಕಿ 5 ದಿನಗಳಾಯಿತು. ಮಳೆಯಿಂದಾಗಿ ಕೂಡಿ ಹಾಕಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಶೇಂಗಾ ಹೊಲದಲ್ಲೇ ಕೊಳೆಯುವಂತಾಗಿದೆ. ಮಳೆ ಹೀಗೆ ಮುಂದುವರಿದರೆ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ. ಇದರಿಂದ ಮುಂಬರುವ ದಿನಗಳಲ್ಲಿ ದನ-ಕರುಗಳಿಗೆ ಮೇವಿನ ಕೊರತೆ ಕಾಡುವ ಆತಂಕವಾಗಿದೆ.
    | ಬಸಪ್ಪ ಸೊರಟೂರ, ಡಂಬಳ ಗ್ರಾಮದ ರೈತ

    ಮಳೆಯಿಂದಾಗಿ ಉಳ್ಳಾಗಡ್ಡಿ ಬೆಳೆಗೆ ಹಳದಿ ರೋಗ ಕಾಣಿಸಿತ್ತು. ಈಗ ಕೊಳೆ ರೋಗ ಬಿದ್ದು ನೆಲಕಚ್ಚುತ್ತಿದೆ. ಔಷಧ ಸಿಂಪಡಿಸಿದರೂ ಪ್ರಯೋಜನವಾಗುತ್ತಿಲ್ಲ. ಸರ್ಕಾರ ಉಳ್ಳಾಗಡ್ಡಿ ಬೆಳೆ ನಾಶ ಹೊಂದಿದ ರೈತರಿಗೆ ಸೂಕ್ತ ಪರಿಹಾರ ನೀಡಬೇಕು.
    | ಮಳ್ಳಪ್ಪ ಮಂಡಲಗೇರಿ, | ಗುಂಡಪ್ಪ ಲಮಾಣಿ, ರೈತರು

    ಡಂಬಳ ವ್ಯಾಪ್ತಿಯ ಡೋಣಿ, ಹಿರೇವಡ್ಡಟ್ಟಿ, ಜಂತ್ಲಿಶಿರೂರು, ಡೋಣಿ ತಾಂಡಾ, ದಿಂಡೂರು ತಾಂಡಾ ಮೊದಲಾದೆಡೆ ಉಳ್ಳಾಗಡ್ಡಿ ಬೆಳೆ ಕಟಾವು ಹಂತಕ್ಕೆ ತಲುಪಿದೆ. ಮಳೆಯಿಂದಾಗಿ ತೇವಾಂಶ ಹೆಚ್ಚಾಗಿ ಬೆಳೆ ಜಮೀನಿನಲ್ಲೇ ಕೊಳೆಯುತ್ತಿದೆ. ರೈತರ ಜಮೀನಿಗೆ ಹೋಗಿ ಬೆಳೆ ಪರಿಶೀಲಿಸಲಾಗುವುದು.
    | ವೈ.ಎಚ್. ಜಾಲವಾಡಗಿ, ತೋಟಗಾರಿಕೆ ಹಿರಿಯ ಸಹಾಯಕ ನಿರ್ದೇಶಕ, ಮುಂಡರಗಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts