More

    ಜಾಗೃತಿಯಿಂದ ಎಚ್‌ಐವಿ ನಿಯಂತ್ರಣ ಸಾಧ್ಯ, ಜಿಲ್ಲಾಧಿಕಾರಿ ಕೆ. ಶ್ರೀನಿವಾಸ್ ಅಭಿಮತ, ಸಾಮಾಜಿಕ ಸವಲತ್ತು ಕುರಿತ ಜಿಲ್ಲಾ ಮಟ್ಟದ ಸಭೆ

    ಬೆಂಗಳೂರು ಗ್ರಾಮಾಂತರ: ಜಿಲ್ಲೆಯ ನಾಲ್ಕೂ ತಾಲೂಕುಗಳಲ್ಲಿ ಎಚ್‌ಐವಿ ಸೋಂಕಿನ ಬಗ್ಗೆ ದೊಡ್ಡಮಟ್ಟದಲ್ಲಿ ಜಾಗೃತಿ ಮೂಡಿಸುವ ಮೂಲಕ ರೋಗ ಹರಡದಂತೆ ಅಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ಸೂಚಿಸಿದರು.

    ದೇವನಹಳ್ಳಿ ತಾಲೂಕು ಬೀರಸಂದ್ರ ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಮಂಗಳವಾರ ಸೋಂಕಿತರಿಗೆ ಸಾಮಾಜಿಕ ಸವಲತ್ತು ನೀಡುವ ಕುರಿತು ಮಂಗಳವಾರ ಜಿಲ್ಲಾಮಟ್ಟದ ಅಧಿಕಾರಿಗಳ ಸಮನ್ವಯ ಸಮಿತಿ ಸಭೆಯಲ್ಲಿ ಮಾತನಾಡಿದರು.

    ನಗರ ಸ್ಥಳೀಯ ಸಂಸ್ಥೆಗಳು ಹಾಗೂ ಗ್ರಾಪಂ ಮಟ್ಟದಲ್ಲಿ ಕರಪತ್ರಗಳನ್ನು ಹಂಚುವುದು ಸೇರಿ ಐಇಸಿ ಚಟುವಟಿಕೆಯಡಿ ಧ್ವನಿ ಮುದ್ರಿತ (ಆಡಿಯೋ) ಪ್ರಚಾರ ಕೈಗೊಳ್ಳುವ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕು. ಸೋಂಕಿತರಿಗೆ ಸಾಮಾಜಿಕ ಸವಲತ್ತುಗಳನ್ನು ದೊರಕಿಸಿಕೊಡುವಲ್ಲಿ ಅಧಿಕಾರಿಗಳು ಪ್ರಾಮಾಣಿಕವಾಗಿ ಶ್ರಮಿಸಬೇಕು ಎಂದು ಸೂಚನೆ ನೀಡಿದರು.

    ಜಿಲ್ಲೆಯಲ್ಲಿ 787 ಸೋಂಕಿತರು: ನೆಲಮಂಗಲ, ಹೊಸಕೋಟೆ, ದೇವನಹಳ್ಳಿ ಹಾಗೂ ದೊಡ್ಡಬಳ್ಳಾಪುರ ಸೇರಿ ಜಿಲ್ಲೆಯ ನಾಲ್ಕೂ ತಾಲೂಕುಗಳಲ್ಲಿ 787 ಎಚ್‌ಐವಿ ಸೋಂಕಿತರಿದ್ದಾರೆ. ಅವರೆಲ್ಲರಿಗೂ ಅಗತ್ಯ ಚಿಕಿತ್ಸೆ ನೀಡಲಾಗುತ್ತಿದೆ. ಸೋಂಕಿತರ ಚಿಕಿತ್ಸೆ ಹಾಗೂ ಕೊಡಬೇಕಾದ ಸವಲತ್ತುಗಳು ಸಮರ್ಪಕವಾಗಿ ದೊರಕುತ್ತಿರುವ ಬಗ್ಗೆ ಅಧಿಕಾರಿಗಳು ನಿಗಾವಹಿಸಬೇಕು ಎಂದು ಜಿಲ್ಲಾಧಿಕಾರಿ ಹೇಳಿದರು.
    ಜನಸಂದಣಿ ಹೆಚ್ಚಿರುವ ಪ್ರದೇಶದಲ್ಲಿ ಭಿತ್ತಿಪತ್ರಗಳನ್ನು ಅಂಟಿಸಬೇಕು. ಜನಪದ ನಾಟಕಗಳ ಮೂಲಕ ಸಾರ್ವಜನಿಕ ಪ್ರದೇಶಗಳಲ್ಲಿ ಅರಿವು ಮೂಡಿಸಬೇಕು ಎಂದು ತಿಳಿಸಿದರು.

    ಉಪನ್ಯಾಸ: ಹೆಚ್ಚಿನ ಪ್ರಮಾಣದಲ್ಲಿ ಎಚ್‌ಐವಿ ಬಾಧಿತರಿರುವ ಪ್ರದೇಶದಲ್ಲಿ ವಿಶೇಷ ಶಿಬಿರಗಳನ್ನು ಆಯೋಜಿಸಿ ವೈದ್ಯಕೀಯ ಸೇವೆ ಸೇರಿ ಅಗತ್ಯವಿರುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಬೇಕು. ಶಾಲಾ-ಕಾಲೇಜು ವಿದ್ಯಾರ್ಥಿಗಳಿಗಾಗಿ ಎಚ್‌ಐವಿ ಕುರಿತು ಉಪನ್ಯಾಸ ಕಾರ್ಯಕ್ರಮಗಳನ್ನು ಆಯೋಜಿಸಬೇಕು ಎಂದು ಜಿಪಂ ಮುಖ್ಯ ಯೋಜನಾಧಿಕಾರಿ ವಿನುತಾರಾಣಿ ಅಧಿಕಾರಿಗಳಿಗೆ ಸೂಚಿಸಿದರು.
    ಸೋಂಕಿತರಿಗೆ ಅಗತ್ಯ ಚಿಕಿತ್ಸೆ ನೀಡುವುದರಿಂದ ತಾಯಿಯಿಂದ ಮಗುವಿಗೆ ಸೋಂಕು ಹರಡುವುದನ್ನು ತಡೆಯಬಹುದು. ಹಾಗೂ ಅಗತ್ಯದ ಚಿಕಿತ್ಸೆ ಪಡೆಯುವುದರಿಂದ ಸೋಂಕಿತರೂ ಸಹ ಸಾಮಾನ್ಯರಂತೆ ಜೀವನ ನಡೆಸಬಹುದು. ಸೋಂಕಿತರಿಗೆ ಸಿಗಬೇಕಾದ ಅಗತ್ಯ ಸೌಲಭ್ಯಗಳನ್ನು ಒದಗಿಸುವುದು ಅಧಿಕಾರಿಗಳ ಕರ್ತವ್ಯ ಎಂದು ಹೇಳಿದರು.

    ಜಿಲ್ಲಾ ಏಡ್ಸ್ ನಿಯಂತ್ರಣ ಮತ್ತು ತಡೆಗಟ್ಟುವ ಘಟಕದ ಸಂಚಾಲಕ ಡಾ. ನಾಗೇಶ್ ಮಾತನಾಡಿ, ಜಿಲ್ಲೆಯಲ್ಲಿ ಗುರುತಿಸಿರುವ ಎಲ್ಲ ಸೋಂಕಿತರಿಗೆ ಅಗತ್ಯ ವೈದ್ಯಕೀಯ ಚಿಕಿತ್ಸಾ ಸೌಲಭ್ಯ ಕಲ್ಪಿಸಲಾಗಿದೆ. ಅವರ ಆರೋಗ್ಯದ ಬಗ್ಗೆ ಆಗಾಗ ಮಾಹಿತಿ ಕಲೆಹಾಕಲಾಗುತ್ತಿದೆ. ಈಗಾಗಲೇ ಸಾರ್ವಜನಿಕ ಸ್ಥಳಗಳಲ್ಲಿ ಭಿತ್ತಿಪತ್ರ ಅಂಟಿಸುವುದು ಸೇರಿ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಅರಂಭಿಸಲಾಗಿದೆ ಎಂದು ಮಾಹಿತಿ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts