More

    ಜವುಳಗಲ್ಲಿ ಜನರಿಗೆ ನರಕಯಾತನೆ

    ಗದಗ: ನಗರದ ಜವುಳಗಲ್ಲಿ ಪ್ರದೇಶದಲ್ಲಿ ಕಳೆದೆರಡು ವರ್ಷಗಳಿಂದ ರಾಜ ಕಾಲುವೆ ದುರಸ್ತಿ ಕಾಮಗಾರಿ ನಡೆದಿರುವುದರಿಂದ ಸಾರ್ವಜನಿಕರು ನಿತ್ಯ ನರಕಯಾತನೆ ಅನುಭವಿಸುವಂತಾಗಿದೆ. ಕಾಮಗಾರಿಗಾಗಿ ಕಾಲುವೆ ಪಕ್ಕದ ರಸ್ತೆಯನ್ನೇ ಅಗೆಯಲಾಗಿದ್ದು, ರಸ್ತೆ ಮೇಲೆ ಮಣ್ಣು ಹಾಕಲಾಗಿದೆ. ಇದರಿಂದ ರಸ್ತೆ ಸಂಚಾರ ತೊಂದರೆ ಉಂಟಾಗುತ್ತಿದೆ.

    ಕಳೆದ ಒಂದು ವಾರದಿಂದ ಸುರಿಯುತ್ತಿರುವ ನಿರಂತರ ಮಳೆಗೆ ಕಾಲುವೆ ನೀರು ಮನೆಗಳಿಗೆ ನುಗ್ಗಿದ್ದು, ಜವುಳ ಗಲ್ಲಿ, ಕಾಗದಗೇರಿ ಮತ್ತಿತರ ಪ್ರದೇಶಗಳ ನಿವಾಸಿಗಳು ತೊಂದರೆ ಅನುಭವಿಸುತ್ತಿದ್ದಾರೆ. ಕಾಲುವೆ ದುರಸ್ತಿ ಕಾಮಗಾರಿಯಿಂದ ಚರಂಡಿ ನೀರು ಮತ್ತು ಮಳೆ ನೀರು ಸರಾಗವಾಗಿ ಹರಿಯದೆ ಜವುಳ ಗಲ್ಲಿ ಪ್ರದೇಶಕ್ಕೆ ಹರಿಯುತ್ತಿದೆ. ರಾತ್ರಿ ವೇಳೆಯೇ ಮಳೆ ಸುರಿದಿದ್ದರಿಂದ ಇಲ್ಲಿನ ಜನರು ಜಾಗರಣೆ ಮಾಡುವಂತಾಗಿದೆ. ಹೀಗಾಗಿ ಅಧಿಕಾರಿಗಳು ಬೇಗನೆ ದುರಸ್ತಿ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಜವುಳಗಲ್ಲಿ ನಿವಾಸಿಗಳಾದ ರಜಾಕ್, ಫಾತಿಮಾ ಸೇರಿ ಹಲವಾರು ಜನರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

    ನಗರಸಭೆ ವತಿಯಿಂದ 2016-17ನೇ ಸಾಲಿನ ನಗರೋತ್ಥಾನ ಯೋಜನೆಯ 2ನೇ ಹಂತದಲ್ಲಿ ರಾಜ ಕಾಲುವೆ ದುರಸ್ತಿ ಮತ್ತು ರಸ್ತೆ ನಿರ್ಮಾಣ ಕಾಮಗಾರಿ ಆರಂಭಿಸಲಾಗಿದೆ. 2.5 ಕೋಟಿ ರೂ. ವೆಚ್ಚದ ಯೋಜನೆ ಇದಾಗಿದ್ದು, ನಗರದ ಗೌರಿಶಂಕರ ವಸತಿ ನಿಲಯದಿಂದ ಡಿಸಿ ಮಿಲ್​ಫೂಲ್​ವರೆಗೆ 415 ಮೀ ರಸ್ತೆ ಕಾಮಗಾರಿ ಕೈಗೊಳ್ಳಲಾಗಿದೆ.

    ಕಾಮಗಾರಿ ಆರಂಭವಾಗಿ ಎರಡು ಕಳೆದರೂ ಪೂರ್ಣಗೊಂಡಿಲ್ಲ. ಗುತ್ತಿಗೆದಾರರು ಕೆಲಸವನ್ನು ಅರ್ಧಕ್ಕೆ ಬಿಟ್ಟು ಹೋಗಿದ್ದರಿಂದ ಆರು ತಿಂಗಳು ಕೆಲಸ ಸ್ಥಗಿತಗೊಂಡಿತ್ತು ಎಂದು ಜನರು ಆರೋಪಿಸುತ್ತಿದ್ದಾರೆ. ಇದೀಗ ಬೇರೊಬ್ಬ ಗುತ್ತಿಗೆದಾರರನ ಮೂಲಕ ಕೆಲಸ ಆರಂಭಿಸಲಾಗಿದ್ದು, ಮಳೆ ನೆಪವೊಡ್ಡಿ ಮತ್ತೆ ಕೆಲಸ ನಿಲ್ಲಿಸಲಾಗಿದೆ ಎಂದು ಜವುಳಗಲ್ಲಿ ನಿವಾಸಿಗಳು ಆರೋಪಿಸಿದ್ದಾರೆ.

    ಹರಿಯುವ ನೀರಲ್ಲಿ ಕೆಲಸ ಮಾಡುವುದು ಹರಸಾಹಸದ ಕೆಲಸವಾಗಿದೆ. ಕಳೆದ ಕೆಲ ದಿನಗಳಿಂದ ನಿರಂತರ ಮಳೆ ಸುರಿಯುತ್ತಿದ್ದು, ಕೆಲಸ ಬಂದ್ ಆಗಿದೆ. ಕಾಲುವೆ ನೀರು ಓಣಿಯಲ್ಲಿ ಹೊಕ್ಕು ತೊಂದರೆ ಆಗಿದೆ ಎಂದು ಜನರು ಆರೋಪಿಸುತ್ತಿದ್ದಾರೆ. ಮಳೆ ನಿಂತ ಮೇಲೆ ಕೆಲಸವನ್ನು ಬೇಗನೆ ಪೂರ್ಣಗೊಳಿಸಿ ಜನರಿಗೆ ಅನುಕೂಲ ಮಾಡಿಕೊಡಲಾಗುವುದು.

    |ಎಚ್.ಸಿ. ಬಂಡಿವಡ್ಡರ, ಗದಗ ಬೆಟಗೇರಿ ನಗರಸಭೆ ಇಂಜಿನಿಯರ್



    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts