More

    ಹುಬ್ಬಾ ಮಳೆ ಹೊಡೆತಕ್ಕೆ ಜನಜೀವನ ಅಸ್ತವ್ಯಸ್ತ

    ಚಿಕ್ಕಮಗಳೂರು: ಜಿಲ್ಲೆಯ ಕೆಲವೆಡೆ ಭಾನುವಾರ ರಾತ್ರಿ ಹುಬ್ಬಾ ಮಳೆ ಅಬ್ಬರಿಸಿದೆ. ತಾಲೂಕಿನ ಕಳಸಾಪುರ ಕೆರೆ ಕೋಡಿಬಿದ್ದು, ಜಮೀನುಗಳಿಗೆ ನೀರು ನುಗ್ಗಿದೆ. ರಸ್ತೆಗಳು ಜಲಾವೃತವಾಗಿವೆ. ಬಾಳೆಹೊನ್ನೂರಲ್ಲಿ ಜಮೀನುಗಳಿಗೆ ನುಗ್ಗಿ ಭತ್ತದ ಗದ್ದೆಗಳು ಹಾನಿಗೀಡಾಗಿವೆ. ಅಜ್ಜಂಪುರ ತಾಲೂಕಿನ ಸೋಮವಾರ ಗಡಿಹಳ್ಳಿ, ವೀರಾಪುರ ಗ್ರಾಮದಲ್ಲಿ ಎರಡು ಮನೆಗಳು ಭಾಗಶಃ ಹಾನಿಗೀಡಾಗಿವೆ. ಮೂಡಿಗೆರೆ ತಾಲೂಕಿನಲ್ಲಿ ಎರಡು ಮನೆಗಳು ನೆಲಕಚ್ಚಿವೆ.

    ಮೂಡಿಗೆರೆ ತಾಲೂಕಿನ ಸಾರಗೋಡು ಗ್ರಾಮದಲ್ಲಿ ಕೇವಲ ಒಂದು ತಾಸಿನಲ್ಲಿ 200 ಮಿಮೀ ಮಳೆಯಾಗಿದೆ. ಮಳೆಗೆ ಕಾಫಿ ನಾಡಿಗರು ಬೆಚ್ಚಿಬಿದ್ದಿದ್ದಾರೆ. ಸಾರಗೋಡು, ಹುಯಿಗೆರೆ ಸುತ್ತಮುತ್ತಲ ಪ್ರದೇಶ ಹಾಗೂ ಮಲೆನಾಡಿನ ಹಲವೆಡೆ ರಾತ್ರಿ ಆರಂಭವಾದ ಮಳೆ ಬೆಳಗಿನವರೆಗೆ ನಿರಂತರವಾಗಿ ಸುರಿದಿದೆ. ತಗ್ಗು ಪ್ರದೇಶದಲ್ಲಿದ್ದ ಮನೆಗಳಿಗೆ ನೀರು ನುಗ್ಗಿದ್ದು, ಕಾಂಪೌಂಡ್​ಗಳು ಕುಸಿದಿವೆ. ದಾಖಲೆ ಪ್ರಮಾಣದ ಮಳೆ ಕಂಡು ಸ್ಥಳೀಯರು ಕಂಗಾಲಾಗಿದ್ದಾರೆ.

    ಬಾಣಾವರ-ಚಿಕ್ಕಮಗಳೂರು ಮಾರ್ಗದ ಚಿಕ್ಕದೇವನೂರು ಅಂಡರ್ ಪಾಸ್ ಸಂಪೂರ್ಣ ಮುಳುಗಿದೆ. ಬಸ್ ಸಂಚಾರದಲ್ಲಿ ವ್ಯತ್ಯಯವಾಗಿದೆ. ದೇವನೂರು ಕೆರೆಕೋಡಿ ಒಡೆದು ಚಿಕ್ಕದೇವನೂರಿನ ಕೆಲವು ಮನೆಗಳ ಸುತ್ತ ನೀರು ನಿಂತಿದೆ. ಪ್ರಾಥಮಿಕ ಆರೋಗ್ಯ ಕೇಂದ್ರದ ಸಹಾಯಕಿಯರ ಕಚೇರಿ ಸುತ್ತ ನೀರು ಆವರಿಸಿದೆ. ಇಲ್ಲಿಂದ ಎರಡು ಕಿಮೀ ದೂರದಲ್ಲಿರುವ ಕಾಮೇನಹಳ್ಳಿಯಲ್ಲಿ ಮನೆಗೆ ನೀರು ನುಗ್ಗಿ ದಿನಸಿ ಪದಾರ್ಥಗಳು ನೀರುಪಾಲಾಗಿವೆ. ಮಲಗಲು ಜಾಗವಿಲ್ಲದೆ ಕುಟುಂಬದವರು ಮಂಚದ ಮೇಲೆ ಕುಳಿತು ರಾತ್ರಿ ಕಳೆದಿದ್ದಾರೆ.

    ಅಪಾಯದ ಮಟ್ಟದಲ್ಲಿ ಶೆಟ್ಟಿಕೆರೆ: ಕಳಸಾಪುರ ಗ್ರಾಮದಲ್ಲಿ ವರುಣನ ಆರ್ಭಟ ಜೋರಾಗಿದ್ದು ಗ್ರಾಮದ ಹಲವು ರಸ್ತೆ, ಮನೆಗಳು ಜಲಾವೃತಗೊಂಡಿವೆ. ಇದ್ದಕ್ಕಿದ್ದಂತೆ ಸುರಿದ ಭಾರಿ ಮಳೆಗೆ ಗ್ರಾಮಸ್ಥರು ಕಂಗಾಲಾಗಿದ್ದಾರೆ. ಅಂಚಿನ ಶೆಟ್ಟಿಕೆರೆ ಕೋಡಿ ಬಿದ್ದಿದ್ದರಿಂದ ಈ ಅನಾಹುತ ಉಂಟಾಗಿದೆ. ಶೆಟ್ಟಿಕೆರೆ ಕೆರೆ ನೀರು ಅಪಾಯದ ಮಟ್ಟ ತಲುಪಿದ್ದರಿಂದ ಕಳಸಾಪುರ ಗ್ರಾಮದಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿದೆ. ತಡರಾತ್ರಿಯಿಂದ ಸುರಿದ ಭಾರಿ ಮಳೆಗೆ ಕಳಸಾಪುರ ಗ್ರಾಮ ತತ್ತರಿಸಿದೆ. ಬೆಳಗ್ಗೆ ಮಳೆ ಸ್ವಲ್ಪ ಬಿಡುವು ನೀಡಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts