More

    ಜಲ ದಿಗ್ಬಂಧನದಲ್ಲಿ ಮೂರು ದಿನ

    ಜೊಯಿಡಾ: ತಾಲೂಕಿನಲ್ಲಿ ಬೀಳುತ್ತಿರುವ ಮಳೆಯಿಂದ ಕಾನೇರಿ ನದಿ ತುಂಬಿ ಹರಿಯುತ್ತಿದ್ದು, ಕಳೆದ ಮೂರು ದಿನಗಳಿಂದ ಇಲ್ಲಿಯ ಸೇತುವೆ ನೀರಿನಲ್ಲಿ ಮುಳುಗಿ ರಸ್ತೆ ಸಂಪರ್ಕ ಕಡಿತವಾಗಿದೆ.

    ಕಾನೇರಿ ನದಿಗೆ ಕುಂಡಲ ಸಮೀಪ ಆಣೆಕಟ್ಟು ನಿರ್ವಿುಸಿ ಸುರಂಗದ ಮೂಲಕ ನೀರನ್ನು ಸೂಪಾ ಜಲಾಶಯಕ್ಕೆ ತರಲಾಗಿದೆ. ಈ ಡ್ಯಾಮ್ ಮೇಲ್ಗಡೆ ಪ್ರತಿ ವರ್ಷದ ಮಳೆಗಾಲದಲ್ಲಿ ಹಿನ್ನೀರು ತುಂಬಿ ರಸ್ತೆ ಸಂಪರ್ಕ ಸಂಪೂರ್ಣ ಸ್ಥಗಿತಗೊಳ್ಳುತ್ತಿದೆ.

    ಹೊಸದಾಗಿ ಸೇತುವೆ ನಿರ್ಮಾಣ ಮಾಡಿ ಮೂರು ವರ್ಷವಷ್ಟೇ ಆಗಿದ್ದು, ಜಲಾಶಯದ ನೀರಿನ ಮಟ್ಟಕ್ಕಿಂತ ಕೆಳಗಿರುವ ಕಾರಣ ಈ ಸೇತುವೆ ಇದ್ದೂ ಇಲ್ಲದಂತಾಗಿದೆ.

    ಮೂರು ದಿನಗಳಿಂದ ಈ ಸೇತುವೆಯ ಮೇಲೆ 6 ಮೀ. ನಷ್ಟು ನೀರು ತುಂಬಿ ಕುರಾವಲಿ, ಕೇಲೊಲಿ, ಕುಂಡಲ, ಘಟ್ಟಾವ ಮುಂತಾದ ಊರಿನ ಜನರು ರಸ್ತೆ ಸಂಪರ್ಕವಿಲ್ಲದೆ ತೊಂದರೆಗೆ ಒಳಗಾಗಿದ್ದಾರೆ. ಇರುವ ಒಂದು ದೋಣಿಯೂ ತೂತು ಬಿದ್ದ ಹಿನ್ನೆಲೆಯಲ್ಲಿ ಅದನ್ನು ಬಳಸುವಂತಿಲ್ಲ. ತಾಲೂಕು ಆಡಳಿತ ಕೂಡಲೆ ದೋಣಿ ವ್ಯವಸ್ಥೆ ಕಲ್ಪಿಸಬೇಕು ಎನ್ನುವುದು ಸಾರ್ವಜನಿಕರ ಒತ್ತಾಯ.

    ಆಸ್ಪತ್ರೆಗೆ ತೆರಳಲು ಹರಸಾಹಸ: ಎರಡು ದಿನದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಎರಡು ತಿಂಗಳ ಮಗುವನ್ನು ಶನಿವಾರ ಮಧ್ಯಾಹ್ನ ವೈಟ್ ವಾಟರ್ ಎಡ್ವಂಚರ್ ತಂಡದ ಚಾಂದ್ ಕುಟ್ಟಿ, ರಫೀಕ ಕುಟ್ಟಿ, ಅನೂಪ, ಕಿರಣ, ಅಕ್ಷಯ್ ಎಂಬುವರು ಕುಂಡಲ ಸೇತುವೆ ಮುಳುಗಿದ ಸ್ಥಳದಲ್ಲಿ ಬೋಟ್ ಬಳಸಿ ಜೊಯಿಡಾ ಆಸ್ಪತ್ರೆಗೆ ದಾಖಲಿಸಿದ್ದಾರೆ.

    ಕೋವಿಡ್ ಪರೀಕ್ಷೆಗೂ ಅಡ್ಡಿ: ಕಳೆದ ಮೂರು ದಿನಗಳ ಹಿಂದೆ ಬೆಳಗಾವಿ ಆಸ್ಪತ್ರೆಗೆ ಹೋಗಿ ಬಂದ ಕುಂಡಲದ ಇಬ್ಬರಿಗೆ ಕರೊನಾ ದೃಢಪಟ್ಟಿತ್ತು. ಇವರ ಜೊತೆ ಪ್ರಾಥಮಿಕ ಸಂಪರ್ಕಕ್ಕೆ ಬಂದ 10ಕ್ಕೂ ಹೆಚ್ಚು ಜನರನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಬೇಕಾಗಿತ್ತಾದರೂ ಮೂರು ದಿನಗಳಿಂದ ರಸ್ತೆ ಸಂಪರ್ಕ ಕಡಿತವಾದ್ದರಿಂದ ಆರೋಗ್ಯ ಇಲಾಖೆಯ ಅಧಿಕಾರಿಗಳು ಕುಂಡಲಕ್ಕೆ ಬರಲು ಸಾಧ್ಯವಾಗಿಲ್ಲ.

    ದೋಣಿ ನಡೆಸಲು ನಾಳೆಯಿಂದ ಜನರನ್ನು ನೇಮಿಸಲಾಗುತ್ತದೆ. ಸೋಂಕು ದೃಢಪಟ್ಟವರ ಜೊತೆ ಪ್ರಾಥಮಿಕ ಸಂಪರ್ಕದಲ್ಲಿರುವವರನ್ನು ಹೋಂ ಕ್ವಾರಂಟೈನ್​ನಲ್ಲಿರುವಂತೆ ತಿಳಿಸಿದ್ದು, ನಾಳೆ ಅವರನ್ನು ಕರೆತಂದು ಪರೀಕ್ಷೆ ನಡೆಸಲಾಗುತ್ತದೆ.

    | ಸಂತೋಷ ಅಣ್ವೆಕರ, ಪಿಡಿಒ ಗ್ರಾ.ಪಂ ಕುಂಬಾರವಾಡಾ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts