More

    ಜಮೀನಿಗೆ ತೆರಳಲು ತೆಪ್ಪ ಬಳಕೆ

    ಶಿಗ್ಗಾಂವಿ: ತಾಲೂಕಿನ ಶಿಡ್ಲಾಪುರ ಗ್ರಾಮದ ಡೊಂಕೇರಿ ಕೆರೆ ಭರ್ತಿಯಾದ ಹಿನ್ನೆಲೆಯಲ್ಲಿ ಜಮೀನುಗಳಿಗೆ ತೆರಳಲು ದಾರಿ ಇಲ್ಲದೆ ರೈತರು ತೆಪ್ಪ ಬಳಸುವಂತಾಗಿದೆ.

    ಕೃಷಿಯನ್ನೇ ಅವಲಂಬಿಸಿರುವ ಈ ಪುಟ್ಟ ಗ್ರಾಮದ ರೈತರು, ನೀರು ಇಲ್ಲದಾಗ ಕೆರೆಯಲ್ಲಿಯೇ ಎತ್ತು, ಚಕ್ಕಡಿ ತೆಗೆದುಕೊಂಡು ಹೊಲಕ್ಕೆ ತೆರಳುತ್ತಾರೆ. ಆದರೆ, ಸದ್ಯ ಕೆರೆ ಭರ್ತಿಯಾಗಿದ್ದು, ದಾರಿ ಇಲ್ಲದಂತಾಗಿದೆ. ಸದ್ಯ ಚೆಂಡು ಹೂವು ಕಟಾವಿಗೆ ಬಂದಿದೆ. ಹೀಗಾಗಿ ಕೊಯ್ಲಿಗೆ ಮಹಿಳೆಯರು ತೆಪ್ಪದಲ್ಲಿ ತೆರಳುತ್ತಿದ್ದಾರೆ. ತೆಪ್ಪ ಓಡಿಸಲು ಹುಟ್ಟಿಲ್ಲದೇ ಹಗ್ಗದ ಸಹಾಯದಿಂದ ಕೈಯಲ್ಲಿ ಜೀವ ಹಿಡಿದು ಕೆರೆ ದಾಟುತ್ತಿರುವ ದೃಶ್ಯ ನೊಡಿದರೆ ಎದೆ ಝುಲ್ ಎನ್ನುತ್ತದೆ. ಸ್ವಲ್ಪ ಎಚ್ಚರ ತಪ್ಪಿದರೂ ಜೀವಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ. ಇದು ಪ್ರತಿವರ್ಷದ ಕಥೆ.

    ಈ ಕೆರೆಗೆ ಶಿಗ್ಗಾಂವಿ ಏತ ನೀರಾವರಿ ಯೋಜನೆ ಮೂಲಕ ವರದಾ ನದಿಯಿಂದ ನೀರು ತುಂಬಿಸುವ ಪೈಪ್​ಲೈನ್ ಕಾಮಗಾರಿ ಮುಕ್ತಾಯದ ಹಂತದಲ್ಲಿದೆ. ಯೋಜನೆ ಅನುಷ್ಠಾನವಾದ ನಂತರ ಬೇಸಿಗೆಯಲ್ಲಿಯೂ ರೈತರು ಜಮೀನಿಗೆ ಹೋಗಲು ತಾಪತ್ರಯ ಎದುರಾಗಲಿದೆ.

    ಕಳೆದ ಐದಾರು ವರ್ಷಗಳಿಂದ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಸ್ಥಳೀಯ ಶಾಸಕ, ಗೃಹ ಸಚಿವ ಬಸವರಾಜ ಬೊಮ್ಮಯಿ ಅವರ ಗಮನಕ್ಕೆ ತಂದರೂ ಪರಿಹಾರ ಸಿಕ್ಕಿಲ್ಲ ಎಂದು ಗ್ರಾಮಸ್ಥರಾದ ಮತ್ತಪ್ಪ ಸಣ್ಣಮನಿ, ತಿರಕಪ್ಪ ಸಣ್ಣಮನಿ, ಮಾರುತೆಪ್ಪ ದೊಡಮನಿ, ಪುತ್ರಪ್ಪ ಸಣ್ಣಮನಿ, ಬಸಪ್ಪ ದೊಡಮನಿ, ಚಿಕ್ಕಪ್ಪ ಹರಿಜನ, ಮೈಲಾರೆಪ್ಪ ಹರಿಜನ, ಫಕೀರಪ್ಪ ದೊಡಮನಿ, ಮಾದಕ್ಕ ಬಂಕಾಪುರ, ರೇಣುಕಾ ಬಡಪ್ಪನವರ, ಮಂಜವ್ವ ಕಲಕಟ್ಟಿ, ಶಾಂತವ್ವ ಸಣ್ಣಮನಿ ಬೇಸರ ವ್ಯಕ್ತಪಡಿಸುತ್ತಾರೆ.

    ದುರಂತ ಸಂಭವಿಸುವ ಮುನ್ನ ಅಧಿಕಾರಿಗಳು ಎಚ್ಚೆತ್ತುಕೊಂಡು ರೈತರು ತಮ್ಮ ಜಮೀನುಗಳಿಗೆ ತೆರಳಲು ಕೆರೆಗೆ ಅಡ್ಡಲಾಗಿ ಸೇತುವೆ ನಿರ್ವಿುಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

    ಮುಂಗಾರು ಹಂಗಾಮಿನಲ್ಲಿ ರೈತರು ಬಿತ್ತನೆ ಮಾಡಿದ ನಂತರ ಉಳುಮೆ, ಕಳೆ, ಗೊಬ್ಬರ ಮತ್ತು ಕಟಾವು ಮಾಡಿದ ನಂತರ ಬೆಳೆ ಮನೆಗೆ ತರುವುದು ಕಷ್ಟವಾಗಿದೆ. ಕೆರೆಗೆ ಸೇತುವೆ ನಿರ್ವಿುಸಿ, ಒಂದು ಚಕ್ಕಡಿ ಹೋಗುವಷ್ಟು ದಾರಿ ಮಾಡಿಕೊಡಲು ಜನಪ್ರತಿನಿಧಿಗಳು ಮುಂದಾಗಬೇಕು.
    | ಉಮೇಶ ಯಲಗಚ್ಚ, ಸ್ಥಳೀಯ ರೈತ.

    ಸಮಸ್ಯೆ ನಮ್ಮ ಗಮನಕ್ಕೆ ಬಂದಿಲ್ಲ. ಈ ಕುರಿತು ಸೋಮವಾರ ಮಾಹಿತಿ ಪಡೆದು ಮೇಲಧಿಕಾರಿಗಳ ಗಮನಕ್ಕೆ ತಂದು ರೈತರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಲಾಗುವುದು.
    | ಎಂ.ಎಸ್. ಪಾಟೀಲ, ಉಪತಹಸೀಲ್ದಾರ್ ಶಿಗ್ಗಾಂವಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts