More

    ಜನಸಂಚಾರ ಕೊಂಚ ಹೆಚ್ಚಳ

    ಧಾರವಾಡ: ರಾಜ್ಯ ಸರ್ಕಾರ ಲಾಕ್​ಡೌನ್ ನಿಯಮಗಳನ್ನು ಸ್ವಲ್ಪ ಸಡಿಲಿಸಿದ ನಂತರ ನಗರದಲ್ಲಿ ಶನಿವಾರ ಜನಸಂಚಾರ ಕೊಂಚ ನಿರಾಳವಾಗಿತ್ತು.

    ಸಿಮೆಂಟ್, ಸ್ಟೀಲ್, ಇಟ್ಟಿಗೆ, ಡಾಂಬರ್ ಸೇರಿ ಎಲ್ಲ ಸರಕುಗಳ ಸಾಗಣೆಗೆ ವಿನಾಯಿತಿ ಸಿಕ್ಕಿದ್ದರಿಂದ ನಗರದಲ್ಲಿ ಇಂಥ ವಾಹನಗಳ ಓಡಾಟ ಕಂಡುಬಂತು. ಅದೇರೀತಿ ಬಹುತೇಕ ಕಿರಾಣಿ ಅಂಗಡಿಗಳು ಅರೆಬರೆ ತೆರೆದಿದ್ದವು. ಅಲ್ಲದೆ, ತಿಂಗಳಿಂದ ಮನೆಗಳಲ್ಲಿ ನೆಲೆಸಿರುವ ಜನರು ಬೈಕ್​ಗಳ ಮೇಲೆ ಸುತ್ತಾಡಿದ್ದರಿಂದ ವಾಹನಗಳ ಸಂಚಾರ ಪುನರಾರಂಭಗೊಂಡಂತಿತ್ತು. ನಗರದ ಹಲವು ಕಡೆಗಳಲ್ಲಿ ಚೆಕ್​ಪೋಸ್ಟ್​ಗಳನ್ನು ತೆರೆದಿರುವ ಪೊಲೀಸರು, ವಾಹನ ಸವಾರರನ್ನು ತಡೆದು ತಪಾಸಣೆಗೊಳಪಡಿಸಿದರು. ಮಾಸ್ಕ್ ಧರಿಸುವುದು ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಸೂಚಿಸಿದರು.

    ಮತ್ತೆ 117 ಶಂಕಿತರು ಪತ್ತೆ

    ಧಾರವಾಡ: ಜಿಲ್ಲೆಯಲ್ಲಿ ಶಂಕಿತ ಕರೊನಾ ಸೋಂಕಿತರ ಸಂಖ್ಯೆ ಜತೆಗೆ ನಿಗಾ ವಹಿಸುವವರ ಸಂಖ್ಯೆಯಲ್ಲೂ ದಿನೇ ದಿನೇ ಏರಿಕೆ ಕಾಣುತ್ತಿರುವುದು ಜಿಲ್ಲಾಡಳಿತಕ್ಕೂ ತಲೆನೋವಾಗಿ ಪರಿಣಮಿಸಿದಂತಾಗಿದೆ.

    ಜಿಲ್ಲೆಯಲ್ಲಿ ಶುಕ್ರವಾರ ಸಂಜೆಯಿಂದ ಶನಿವಾರ ಸಂಜೆವರೆಗಿನ 24 ಗಂಟೆ ಅವಧಿಯಲ್ಲಿ 117 ಶಂಕಿತರು ಪತ್ತೆಯಾಗಿದ್ದು, ಅವರ ಗಂಟಲ ದ್ರವ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಶಂಕಿತರ ಜತೆಗೆ ನಿಗಾ ವಹಿಸಲಾಗಿರುವವರ ಸಂಖ್ಯೆಯಲ್ಲೂ ಏರಿಕೆಯಾಗಿದೆ. ಶುಕ್ರವಾರ ಇದ್ದ ಒಟ್ಟು 2079 ಶಂಕಿತರ ಸಂಖ್ಯೆ ಶನಿವಾರ 2184ಕ್ಕೆ ಏರಿಕೆಯಾಗಿದೆ.

    ಈವರೆಗೆ ಜಿಲ್ಲೆಯಲ್ಲಿ 1661 ಶಂಕಿತ ವ್ಯಕ್ತಿಗಳ ಗಂಟಲುದ್ರವ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಿದ್ದು, 1367 ಜನರ ವರದಿ ನೆಗೆಟಿವ್ ಬಂದಿವೆ. 9 ಪ್ರಕರಣದಲ್ಲಿ ಪಾಸಿಟಿವ್ ಬಂದಿದ್ದು, 7 ಜನರಿಗೆ ಕಿಮ್್ಸ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಧಾರವಾಡ, ಹುಬ್ಬಳ್ಳಿಯ ತಲಾ ಒಬ್ಬರು ಗುಣಮುಖನಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇನ್ನೂ 287 ವರದಿಗಳು ಬರಬೇಕಿದೆ.

    ವೈರಸ್ ಭೀತಿ ಹಿನ್ನೆಲೆಯಲ್ಲಿ ಜಿಲ್ಲೆಯ ಆರೋಗ್ಯ ಇಲಾಖೆಯು ವಿದೇಶದಿಂದ ಆಗಮಿಸಿರುವ ಹಾಗೂ ಅವರ ಸಂಪರ್ಕಕ್ಕೆ ಒಳಗಾದ 2184 ಜನರ ಮೇಲೆ ನಿಗಾ ಇಟ್ಟಿದೆ. ಈ ಪೈಕಿ 1430 ಜನರು ಮನೆಯಲ್ಲೇ ಪ್ರತ್ಯೇಕವಾಗಿ (14 ದಿನ) ವಾಸವಾಗಿದ್ದಾರೆ. ಆಸ್ಪತ್ರೆಯ ಪ್ರತ್ಯೇಕ ವಾರ್ಡ್​ಗಳಲ್ಲಿ 9 ಜನ ದಾಖಲಾಗಿದ್ದಾರೆ. 58 ಜನರು 14 ದಿನಗಳ ಪ್ರತ್ಯೇಕ ವಾಸ ಪೂರ್ಣಗೊಳಿಸಿದ್ದರೆ, 687 ಜನರು 28 ದಿನಗಳ ಪ್ರತ್ಯೇಕ ವಾಸ ಪೂರ್ಣಗೊಳಿಸಿದ್ದಾರೆ ಎಂದು ಆರೋಗ್ಯ ಇಲಾಖೆ ಪ್ರಕಟಣೆ ತಿಳಿಸಿದೆ.

    ಸೋಂಕಿತರಿಗೆ ಚಿಕಿತ್ಸೆ ನೀಡಿದವರಿಗೆ ಸನ್ಮಾನ ಇಂದು

    ಹುಬ್ಬಳ್ಳಿ: ಇಲ್ಲಿಯ ಕಿಮ್ಸ್​ಗೆ ದಾಖಲಾದ ಮೊದಲ ಕರೊನಾ ಸೋಂಕಿತ ವ್ಯಕ್ತಿಯ ಬಳಿ ತೆರಳಿ ಚಿಕಿತ್ಸೆ ನೀಡಿ ಗುಣಪಡಿಸಿದ ವೈದ್ಯಕೀಯ ಸಿಬ್ಬಂದಿಗೆ ವಿ.ಬಿ. ಪ್ರತಿಷ್ಠಾನದಿಂದ ಏ. 26ರಂದು ಬೆಳಗ್ಗೆ 9.30ಕ್ಕೆ ಸನ್ಮಾನ ಕಾರ್ಯಕ್ರಮ ಕಿಮ್್ಸ ಆವರಣದಲ್ಲಿ ಏರ್ಪಾಟಾಗಿದೆ.

    ಮೆಡಿಸಿನ್ ವಿಭಾಗದ ಮುಖ್ಯಸ್ಥ ಡಾ. ಈಶ್ವರ ಹಸಬಿ, ಸಹ ಪ್ರಾಧ್ಯಾಪಕ ಡಾ. ಸಚಿನ್ ಹೊಸಕಟ್ಟಿ, ಸ್ನಾತಕೋತ್ತರ ವೈದ್ಯಕೀಯ ವಿದ್ಯಾರ್ಥಿಗಳಾದ ಡಾ. ಕಿರಣ್, ಡಾ. ಚೇತನ್, ಶುಶ್ರೂಷಕರಾದ ಹನ್ನಪಾಲ, ಕಮಲಾ ಬಿ., ಡಿ ಗ್ರುಪ್ ನೌಕರ ಪರಶುರಾಮ ಮಲ್ಯಾಳ, ನಿರ್ದೇಶಕ ಡಾ. ರಾಮಲಿಂಗಪ್ಪ ಅಂಟರತಾನಿ, ಪ್ರಭಾರ ವೈದ್ಯಕೀಯ ಅಧೀಕ್ಷಕ ಡಾ. ಅರುಣಕುಮಾರ ಸಿ. ಅವರನ್ನು ಸನ್ಮಾನಿಸಲಾಗುವುದು ಎಂದು ಸದಾನಂದ ಡಂಗನವರ ತಿಳಿಸಿದ್ದಾರೆ.

    ಆಯುಷ್ ವೈದ್ಯರ ನಿಯೋಜನೆ

    ಹುಬ್ಬಳ್ಳಿ: ನಗರದ ಲ್ಯಾಮಿಂಗ್ಟನ್ ರಸ್ತೆಯ ಹೋಟೆಲ್ ಒಂದನ್ನು ಸರ್ಕಾರಿ ಕ್ವಾರಂಟೈನ್ ಕೇಂದ್ರವಾಗಿಸಿದ್ದು, ಅಲ್ಲಿಗೆ ಹುಬ್ಬಳ್ಳಿಯ ಕೆಲ ಖಾಸಗಿ ಆಯುಷ್ ವೈದ್ಯರನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿದೆ. ಡಾ. ಮೋಹಿನ್ ಸಾಬ್ರಿ (ಬೆಳಗ್ಗೆ 8ರಿಂದ ಮಧ್ಯಾಹ್ನ 4), ಡಾ. ಮಹಾಂತೇಶ ಹರಿಹರ (ಮಧ್ಯಾಹ್ನ 4ರಿಂದ ರಾತ್ರಿ 10), ಡಾ. ಎನ್.ಎನ್. ಕುಲಮಿ (ರಾತ್ರಿ 10ರಿಂದ ಬೆಳಗ್ಗೆ 8) ಅವರನ್ನು ನಿಯೋಜನೆ ಮಾಡಲಾಗಿದೆ. ಇವರೆಲ್ಲ ಸ್ವಯಂ ಪ್ರೇರಣೆಯಿಂದ ಆಗಮಿಸಿದ್ದು, ಇವರಿಗೆ ಸಂರಕ್ಷಣಾ ಪರಿಕರ ನೀಡಲಾಗುತ್ತಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts