More

    ಜನರ ಬೇಡಿಕೆಗಳಿಗೆ ಅನುಗುಣವಾಗಿ ಪರಿಹಾರ

    ಅಂಕೋಲಾ: ವಿಮಾನ ನಿಲ್ದಾಣಕ್ಕಾಗಿ ಭೂಮಿ ಕಳೆದುಕೊಂಡವರಿಗೆ 11 ಪುನರ್ವಸತಿಯ ಯೋಜನೆಗಳನ್ನು ಜಾರಿಗೆ ತರಲು ಅವಕಾಶವಿದೆ ಎಂದು ಅಪರ ಜಿಲ್ಲಾಧಿಕಾರಿ ಎಚ್.ಕೆ. ಕೃಷ್ಣಮೂರ್ತಿ ತಿಳಿಸಿದರು.

    ಅಲಗೇರಿಯಲ್ಲಿ ನಾಗರಿಕ ವಿಮಾನ ನಿಲ್ದಾಣ ನಿರ್ವಣಕ್ಕಾಗಿ ಭೂಸ್ವಾಧೀನ ಸಂಬಂಧ ಬೇಲೆಕೇರಿ ಗ್ರಾಮದಲ್ಲಿ ಮಂಗಳವಾರ ಅವರು ಸಭೆ ನಡೆಸಿ ಸಾರ್ವಜನಿಕರ ಅಹವಾಲು ಆಲಿಸಿದರು. ರಾಷ್ಟ್ರೀಯ ಹಿತಾಸಕ್ತಿ, ಪ್ರವಾಸೋದ್ಯಮ ಅಭಿವೃದ್ಧಿಯಂಥ ಕಾರಣಗಳಿಗೆ ತಾವೆಲ್ಲರೂ ಭೂತ್ಯಾಗ ಮಾಡಬೇಕಾಗಿ ಬಂದಿದೆ. ನಿಮ್ಮ ನೋವುಗಳು ನಮಗೆ ಅರ್ಥವಾಗುತ್ತವೆ. ಜಮೀನಿಗೆ ಪರಿಹಾರದ ಹೊರತಾಗಿ ವಸತಿ ಸೌಲಭ್ಯ, ಜಮೀನಿಗೆ ಪರಿಹಾರವಾಗಿ ಜಮೀನು ನೀಡುವುದು, ಅಭಿವೃದ್ಧಿ ಪಡಿಸಿದ ಜಮೀನಿಗೆ ಪರಿಹಾರ, ಉದ್ಯೋಗ ನೀಡುವುದು, ಒಂದು ವರ್ಷಕ್ಕೆ ಜೀವನಾಧಾರ ಭತ್ಯೆ ಸೌಲಭ್ಯ, ಸಾರಿಗೆ ವೆಚ್ಚ ಮತ್ತಿತರ ಹೆಚ್ಚುವರಿ ಸೌಲಭ್ಯ ನೀಡಲು ಭೂ ಸ್ವಾಧೀನ ಕಾಯ್ದೆಯಲ್ಲಿ ಅವಕಾಶವಿದೆ. ಸಾರ್ವಜನಿಕರ ಬೇಡಿಕೆಗಳಿಗೆ ಅನುಗುಣವಾಗಿ ಕ್ರಮ ವಹಿಸಲಾಗುವುದು ಎಂದರು. ಕುಮಟಾ ಎಸಿ ಎಂ. ಅಜಿತ ಮಾತನಾಡಿ, ವಿಮಾನ ನಿಲ್ದಾಣಕ್ಕಾಗಿ ಬೆಲೇಕೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ 81 ಕುಟುಂಬಗಳ 19 ಎಕರೆ 4 ಗುಂಟೆ ಜಮೀನು ಭೂಸ್ವಾದೀನಕ್ಕೆ ಒಳಪಡಲಿದೆ. ಹೊಸ ಭೂ ಸ್ವಾಧೀನ ಕಾಯ್ದೆಯಂತೆ ನಿರಾಶ್ರಿತರಿಗೆ ಎಲ್ಲ ಪರಿಹಾರ ಹಾಗೂ ಇನ್ನಿತರ ಸೌಲಭ್ಯ ಒದಗಿಸಲಾಗುವುದು ಎಂದರು. ಸಾರ್ವಜನಿಕರ ಪರವಾಗಿ ನಿವೃತ್ತ ಶಿಕ್ಷಕ ದೇವರಾಯ ಬೊಮ್ಮಯ್ಯ ನಾಯಕ ಮಾತನಾಡಿ, ಅತ್ಯಂತ ಫಲವತ್ತಾದ ಜಮೀನನ್ನು ನಾವು ಕಳೆದುಕೊಳ್ಳುತ್ತಿರುವುದು ಬೇಸರದ ಸಂಗತಿ. ಇದರಿಂದ ಭೂ ಸ್ವಾಧೀನಕ್ಕೆ ತಮ್ಮ ಆಕ್ಷೇಪಣೆ ಇದೆ ಎಂದರು. ತಾಪಂ ಇಒ ಪಿವೈ ಸಾವಂತ ವೇದಿಕೆಯಲ್ಲಿದ್ದರು. ತಹಸೀಲ್ದಾರ್ ಉದಯ ಕುಂಬಾರ ಸ್ವಾಗತಿಸಿದರು.

    ಸೇತುವೆಗಳಿಗಾಗಿ ಭೂ ಸ್ವಾಧೀನ
    ಕಾರವಾರ:
    ಅಂಕೋಲಾ ತಾಲೂಕಿನ ನೆಲ್ಲೂರು ಹಾಗೂ ಕಂಚಿನಬೈಲ್ ಗ್ರಾಮದಲ್ಲಿ ಸುಮಾರು 50 ಎಕರೆಯಷ್ಟು ಭೂಮಿಯನ್ನು ಸೀಬರ್ಡ್ ನೌಕಾ ಯೋಜನೆಗಾಗಿ ಭೂ ಸ್ವಾಧೀನ ಮಾಡಿಕೊಳ್ಳುವ ಸಂಬಂಧ ಸಾರ್ವಜನಿಕ ಅಹವಾಲು ಸಭೆ ಇತ್ತೀಚೆಗೆ ಜಿಲ್ಲಾಧಿಕಾರಿ ಡಾ. ಹರೀಶ ಕುಮಾರ ಕೆ. ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಭೂ ಮಾಲೀಕರ ಒಪ್ಪಿಗೆ ಪಡೆದು ಅವರಿಗೆ ನೇರ ಪರಿಹಾರ ಒದಗಿಸಿ ಭೂಮಿ ಸ್ವಾಧೀನ ಮಾಡಿಕೊಳ್ಳುವ ಸಂಬಂಧ ಸಿದ್ಧತೆ ನಡೆಸಲಾಗಿದೆ ಎಂದು ಎಡಿಸಿ ಕೃಷ್ಣಮೂರ್ತಿ ಎಚ್.ಕೆ. ಅವರು ವಿಜಯವಾಣಿಗೆ ತಿಳಿಸಿದ್ದಾರೆ. ಅಂಕೋಲಾ ತಾಲೂಕಿನ ಮಂಜಗುಣಿ- ನಾಡುಮಾಸ್ಕೇರಿ ಸೇತುವೆ, ಕುಮಟಾದ ಅಂತ್ರವಳ್ಳಿ- ತಲಕೊಪ್ಪ ಕಲ್ಲಬ್ಬೆ ಸೇತುವೆ, ಕೋಡ್ಕಣಿ- ಐಗಳಕುರ್ವೆ ಸೇತುವೆ, ಹೊನ್ನಾವರ ತಾಲೂಕಿನ ನಗರಬಸ್ತಿಕೇರಿ ಗೇರುಸೊಪ್ಪಾ ನಡುವೆ ಸೇತುವೆ, ಕಾರವಾರದ ಉಳಗಾ- ಕೆರವಡಿ ನಡುವಿನ ಸೇತುವೆಗಳ ನಿರ್ಮಾಣ ಹಾಗೂ ಸಂಪರ್ಕ ರಸ್ತೆ ನಿರ್ವಣಕ್ಕಾಗಿ ಅಲ್ಪ ಪ್ರಮಾಣದ ಖಾಸಗಿ ಭೂಮಿ ಪಡೆಯಬೇಕಿದೆ. ಈ ಸಂಬಂಧ ಈಗಾಗಲೆ ಜಿಲ್ಲಾಡಳಿತದಿಂದ ಬೆಲೆ ನಿಗದಿ ಹಾಗೂ ಸಾರ್ವಜನಿಕ ಅಹವಾಲು ಸಭೆಗಳನ್ನು ವಿವಿಧೆಡೆ ನಡೆಸಲಾಗಿದೆ. ಬಹುತೇಕ ಕಡೆಗಳಲ್ಲಿ ಭೂ ಸ್ವಾಧೀನ ಪ್ರಕ್ರಿಯೆ ನಡೆಸುವ ಪ್ರಸಂಗ ಬಂದಿಲ್ಲ. ಸಾರ್ವಜನಿಕರಿಂದ ಒಪ್ಪಿಗೆ ಪತ್ರ ಪಡೆದು ಅವರಿಗೆ ಪರಿಹಾರ ನೀಡಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts