More

  ಕಾರಿಗೆ ಲಾರಿ ಡಿಕ್ಕಿ, ಐವರು ಮೃತ್ಯು: ಸತ್ತವರು ಕಾಸರಗೋಡಿನ ಒಂದೇ ಕುಟುಂಬದವರು

  ವಿಜಯವಾಣಿ ಸುದ್ದಿಜಾಲ ಕಾಸರಗೋಡು

  ಕಣ್ಣೂರು ಜಿಲ್ಲೆಯ ಚೆರುಕುನ್ನು ಪುನ್ನಚ್ಚೇರಿ ಪೆಟ್ರೋಲ್ ಪಂಪ್ ಸಮೀಪ ಕಾರು ಮತ್ತು ಲಾರಿ ಮಧ್ಯೆ ನಡೆದ ಅಪಘಾತದಲ್ಲಿ ಕಾರಿನಲ್ಲಿದ್ದ ಕಾಸರಗೋಡಿನ ಒಂದೇ ಕುಟುಂಬದ ಐವರು ಮೃತಪಟ್ಟಿದ್ದಾರೆ.

  ಸೋಮವಾರ ತಡರಾತ್ರಿ ಅಪಘಾತ ನಡೆದಿದ್ದು, ಕಾಸರಗೋಡು ಜಿಲ್ಲೆಯ ಚಿತ್ತಾರಿಕಲ್ ಮಂಟಪಂ ಚೂರಿಕ್ಕಾಡ್ ನಿವಾಸಿ ಸುಧಾಕರನ್(52), ಅವರ ಪತ್ನಿ ಅಜಿತಾ(35), ಅಜಿತಾ ಅವರ ತಂದೆ ಪುತ್ತೂರ್‌ಕೋಯಮ್ಮಲ್ ನಿವಾಸಿ ಕೃಷ್ಣನ್(65), ಅಜಿತಾ ಅವರ ಸಹೋದರ ಅಜಿತ್ ಎಂಬುವರ ಪುತ್ರ ಆಕಾಶ್(8) ಹಾಗೂ ಕಾಲಿಚ್ಚಾನಡ್ಕ ಶಾಸ್ತಾಂಪಾರ ಶೀಶೈಲ ನಿವಾಸಿ ಕೆ.ಎನ್.ಪದ್ಮಕುಮಾರ್(59)ಮೃತಪಟ್ಟವರು.

  ಕಣ್ಣೂರಿನಿಂದ ಕಾಞಂಗಾಡು ಕಡೆಗೆ ಸಂಚರಿಸುತ್ತಿದ್ದ ಕಾರು ಹಾಗೂ ಎದುರಿನಿಂದ ಬಂದ ಗ್ಯಾಸ್ ಸಿಲಿಂಡರ್ ಸಾಗಾಟದ ಲಾರಿ ಮಧ್ಯೆ ಅಪಘಾತ ಸಂಭವಿಸಿದೆ. ಈ ಸಂದರ್ಭ ಕೆ.ಎನ್ ಪದ್ಮಕುಮಾರ್ ಕಾರು ಚಲಾಯಿಸುತ್ತಿದ್ದರು. ಅಪಘಾತದ ಬಳಿಕ ಸುಮಾರು ಒಂದು ಗಂಟೆಯಷ್ಟು ಹೊತ್ತು ಈ ಭಾಗದಲ್ಲಿ ವಾಹನ ಸಂಚಾರ ಸ್ಥಗಿತಗೊಂಡಿದ್ದು, ಊರವರು, ಪೊಲೀಸ್ ಹಾಗೂ ಅಗ್ನಿಶಾಮಕ ದಳದ ಕಾರ್ಯಾಚರಣೆಯಿಂದ ವಾಹನ ತೆರವುಗೊಳಿಸಿದ ನಂತರ ಸಂಚಾರ ಪುನರಾರಂಭಗೊಂಡಿತು.

  ಕಾರು ಪೂರ್ಣ ನಜ್ಜುಗುಜ್ಜು

  ಅಪಘಾತದ ರಭಸಕ್ಕೆ ಕಾರಿನ ಬಾನೆಟ್ ಸಂಪೂರ್ಣ ಲಾರಿಯ ತಳಭಾಗದಲ್ಲಿ ಸಿಲುಕಿಕೊಂಡಿದೆ. ಸಂಪೂರ್ಣ ನಜ್ಜುಗುಜ್ಜಾಗಿದ್ದ ಕಾರಿನೊಳಗೆ ಸಿಲುಕಿಕೊಂಡಿದ್ದವರನ್ನು ಪ್ರಯಾಸಪಟ್ಟು ಹೊರತೆಗೆಯಲಾಗಿದೆ. ಕಾರಿನಲ್ಲಿದ್ದವರಲ್ಲಿ ನಾಲ್ಕು ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದರೆ, ಬಾಲಕ ಆಕಾಶ್ ಆಸ್ಪತ್ರೆ ಸಾಗಿಸುವ ಹಾದಿ ಮಧ್ಯೆ ಮೃತಪಟ್ಟಿದ್ದಾನೆ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts