More

    ಜನಮನ್ನಣೆ ಪಡೆದಿವೆ ಕೇಂದ್ರದ ಯೋಜನೆ

    ಗಂಗಾವತಿ: ಆರ್ಥಿಕ ಸದೃಢತೆಯೊಂದಿಗೆ ಸಾಂಸ್ಕೃತಿಕ ಪುನರುತ್ಥಾನಕ್ಕಾಗಿ ಯೋಜನೆ ರೂಪಿಸುತ್ತಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರ ಜನತೆ ವಿಶ್ವಾಸ ಉಳಿಸಿಕೊಂಡಿದೆ ಎಂದು ಸಂಸದ ಹಾಗೂ ಬಿಜೆಪಿ ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ತೇಜಸ್ವಿ ಸೂರ್ಯ ಹೇಳಿದರು.

    ನಗರದ ತಾಲೂಕು ಕ್ರೀಡಾಂಗಣದಲ್ಲಿ ಬಿಜೆಪಿ ಜಿಲ್ಲಾ ಯುವ ಮೋರ್ಚಾದಿಂದ ಮಂಗಳವಾರ ಹಮ್ಮಿಕೊಂಡಿದ್ದ ಯುವ ಸಂಕಲ್ಪ ಸಮಾವೇಶ ಉದ್ಘಾಟಿಸಿ ಮಾತನಾಡಿದರು.
    ಜನರಿಂದ ನಾಯಕರಾಗಬೇಕಿದ್ದು, ಅಂತಹ ಸಾಮರ್ಥ್ಯವನ್ನು ಯುವ ಮೋರ್ಚಾ ರೂಪಿಸುತ್ತಿದೆ. ಈ ಹಿಂದೆ ದಿಲ್ಲಿಯ ಯೋಜನೆಗಳು ರಾಜಧಾನಿಗೆ ಮಾತ್ರ ತಲುಪುತ್ತಿದ್ದವು. ಪ್ರಧಾನಿ ನರೇಂದ್ರ ಮೋದಿ ಆಡಳಿತಾವಧಿಯಲ್ಲಿ ಹಳ್ಳಿಗಳಲ್ಲೂ ಅನುಷ್ಠಾನಗೊಂಡಿವೆ. ಆಯಷ್ಮಾನ ಭಾರತ, ಜಲ ಜೀವನ್ ಮಿಷನ್, ಉಜ್ವಲ ಯೋಜನೆಗಳೇ ಸಾಕ್ಷಿ. ಕಲ್ಯಾಣ ಕರ್ನಾಟಕದ ಅಭ್ಯುದಯಕ್ಕಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರ ವಿಶೇಷ ಗಮನಹರಿಸಿದ್ದು, ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರ ಸಬಲೀಕರಣಕ್ಕೆ ಆದ್ಯತೆ ನೀಡಿದೆ. ಸ್ವಾವಲಂಬಿ ಮತ್ತು ಸ್ವಾಭಿಮಾನಿ ರಾಷ್ಟ್ರ ನಿರ್ಮಾಣಕ್ಕಾಗಿ ಕೇಂದ್ರ ಸರ್ಕಾರ ಕೈಗೊಂಡಿರುವ ಕಾರ್ಯಕ್ರಮಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆಗಳಿಸಿವೆ. ಅಧಿಕಾರಕ್ಕೆ ಬರುವ ಗ್ಯಾರಂಟಿಯಿಲ್ಲದ ಕಾಂಗ್ರೆಸ್ ಪಕ್ಷ ಉಚಿತ ಯೋಜನೆ ಪ್ರಕಟಿಸುವ ಮೂಲಕ ಜನರ ದಿಕ್ಕನ್ನು ತಪ್ಪಿಸುತ್ತಿದ್ದಾರೆ. ಡಬಲ್ ಇಂಜಿನ್ ಸರ್ಕಾರ ಎಂದು ಟೀಕಿಸುವ ವಿಪಕ್ಷಗಳು ಅಭಿವೃದ್ಧಿಯ ಬಗ್ಗೆ ಯೋಚಿಸುತ್ತಿಲ್ಲ. ನಿರುದ್ಯೋಗಿಗಳಿಗೆ ಉದ್ಯೋಗ ಸೃಷ್ಟಿ ಬದಲಾಗಿ ಸಹಾಯಧನ ೋಷಿಸುವ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಅಸಾಧ್ಯ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಹೈವೇ ಯೋಜನೆ, ಅಂಜನಾದ್ರಿ ಅಭಿವೃದ್ಧಿ ಜತೆಗೆ ಉದ್ಯೋಗ ಸೃಷ್ಟಿಯ ಯೋಜನೆಗಳನ್ನು ರಾಜ್ಯ ಸರ್ಕಾರದ ಜಾರಿಗೆ ತರುತ್ತಿದ್ದು, ಸುಭದ್ರ ದೇಶಕ್ಕಾಗಿ ಬಿಜೆಪಿ ಬೆಂಬಲಿಸುವಂತೆ ಮನವಿ ಮಾಡಿದರು.

    ಎಂಎಲ್ಸಿ ಹಾಗೂ ಎಸ್‌ಸಿ ಮೋರ್ಚಾ ಅಧ್ಯಕ್ಷ ಛಲವಾದಿ ನಾರಾಯಣಸ್ವಾಮಿ ಮಾತನಾಡಿ, ಬಿಜೆಪಿ ರಥ ಯಾತ್ರೆ ಜನಾಭಿಪ್ರಾಯದಿಂದ ಕಾಂಗ್ರೆಸ್ ಸೇರಿ ವಿಪಕ್ಷಗಳು ವಿಚಲಿತವಾಗಿದ್ದು, ದಲಿತ ಸಮುದಾಯದ ಅಭಿವೃದ್ಧಿಗೆ ಮೀಸಲಿಟ್ಟ ಅನುದಾನವನ್ನು ಮೆಟ್ರೋ ಮತ್ತು ರಸ್ತೆ ಅಭಿವೃದ್ಧಿಗೆ ಬಳಿಸಿದ ಕಾಂಗ್ರೆಸ್ ಸರ್ಕಾರಕ್ಕೆ ಮತ ಕೇಳುವ ನೈತಿಕ ಹಕ್ಕಿಲ್ಲ. ಉಚಿತ ಯೋಜನೆಗಳಿಂದ ಪಕ್ಕದ ರಾಷ್ಟ್ರಗಳ ಸ್ಥಿತಿ ಏನಾಗಿದೆ ಎಂಬುದನ್ನು ಮತದಾರರು ಅರಿತುಕೊಳ್ಳಬೇಕು. ಕಾಂಗ್ರೆಸ್ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಚುನಾವಣೆ ಪ್ರಣಾಳಿಕೆ ಅನುಷ್ಟಾನಗೊಳಿಸಿಲ್ಲ. ಅಧಿಕಾರ ಪಡೆಯಲು ಸುಳ್ಳು ಭರವಸೆಗಳನ್ನು ನೀಡುತ್ತಿದ್ದು, ಅಸ್ತಿತ್ವಕ್ಕಾಗಿ ಪರದಾಡುತ್ತಿದೆ ಎಂದರು.
    ಯುವ ಮೋರ್ಚಾ ಸಮಾವೇಶ ಕುರಿತು ಜಿಲ್ಲಾಧ್ಯಕ್ಷ ಶಿವಕುಮಾರ ಅರಿಕೇರಿ ಪ್ರಾಸ್ತಾವಿಕ ಮಾತನಾಡಿದರು. ಮುದ್ರಕ ಶಿರಿಗೇರಿ ರಾಘವೇಂದ್ರ ಸೇರಿ ವಿವಿಧ ಪಕ್ಷದ ಯುವಕರು ಬಿಜೆಪಿಗೆ ಸೇರ್ಪಡೆಯಾದರು.

    ಯುವ ಮೋರ್ಚಾ ಅಧ್ಯಕ್ಷ ಡಾ.ಸಂದೀಪ ಕುಮಾರ, ಶಾಸಕರಾದ ಪರಣ್ಣಮುನವಳ್ಳಿ, ಬಸವರಾಜ ದಢೇಸೂಗುರು, ನಯೋಪ್ರಾ ಅಧ್ಯಕ್ಷ ಎಸ್.ರಾಘವೇಂದ್ರ ಶ್ರೇಷ್ಠಿ, ಮಾಜಿ ಶಾಸಕ ಜಿ.ವೀರಪ್ಪ, ಕಾಡಾ ಮಾಜಿ ಅಧ್ಯಕ್ಷರಾದ ಬಿ.ಎಚ್.ಎಂ.ತಿಪ್ಪೇರುದ್ರಸ್ವಾಮಿ, ಎಚ್.ಎಸ್.ಗಿರೇಗೌಡ, ಬಿಜೆಪಿ ಜಿಲ್ಲಾ ಮಾಜಿ ಅಧ್ಯಕ್ಷ ಸಿಂಗನಾಳ್ ವಿರೂಪಾಕ್ಷಪ್ಪ, ಯುವ ಮೋರ್ಚಾ ಕಾರ್ಯದರ್ಶಿ ಅಮರೇಶ ರೈತನಗರ, ಗ್ರಾಮೀಣಘಟಕದ ಅಧ್ಯಕ್ಷ ಚನ್ನಪ್ಪ ಮಳಗಿ, ಮುಖಂಡರಾದ ನೆಕ್ಕಂಟಿ ಸೂರಿಬಾಬು, ಸಂತೋಷ ಕೆಲೋಜಿ, ಲಂಕೇಶ ಗುಳದಾಳ್ ಇತರರಿದ್ದರು.

    ನಿಗದಿತಕ್ಕಿಂತ 2 ಗಂಟೆ ಕಾರ್ಯಕ್ರಮ ತಡವಾಗಿ ಆರಂಭವಾಗಿದ್ದು,ಇದಕ್ಕೂ ಮುನ್ನ ಆನೆಗೊಂದಿ ರಸ್ತೆಯಿಂದ ತಾಲೂಕು ಕ್ರೀಡಾಂಗಣದವರೆಗೂ ಬೈಕ್ ರ‌್ಯಾಲಿ ಹಮ್ಮಿಕೊಳ್ಳಲಾಗಿತ್ತು. ಶಾಸಕ ಪರಣ್ಣಮುನವಳ್ಳಿಗೆ ಗೆಲ್ಲಿಸುವಂತೆ ತೇಜಸ್ವಿ ಸೂರ್ಯ ಮತ್ತು ಛಲವಾದಿ ನಾರಾಯಣಸ್ವಾಮಿ ಬಹಿರಂಗ ಹೇಳಿಕೆ ನೀಡಿದ್ದು, ಅಕಾಂಕ್ಷಿಗಳಿಗೆ ಇರುಸುಮುರಸಾಗಿತ್ತು. ಶಾಸಕ ಬಸವರಾಜ ದಢೇಸೂಗುರು ಸೇರಿ ಪ್ರಮುಖ ಮುಖಂಡರಿಗೆ ಮಾತನಾಡಲು ಅವಕಾಶ ನೀಡದಿರುವುದಕ್ಕೆ ಬೆಂಬಲಿಗರು ಅಸಮಾಧಾನ ವ್ಯಕ್ತಪಡಿಸಿದರು. ಮುಖಂಡರೊಂದಿಗೆ ಸೆಲ್ಫಿ ತೆಗಿಸಿಕೊಳ್ಳಲು ಯುವಕರು ಮುಗಿಬಿದ್ದಿದ್ದು, ವೇದಿಕೆ ಮೇಲೆ ಪಿಕ್‌ಪ್ಯಾಕೇಟರ್ಸ್‌ಗಳ ಕೈಚಳಕ ಕಂಡುಬಂತು. ವಂದೇ ಮಾತರಂ ಗಾಯನ ಸಂದರ್ಭದಲ್ಲಿ ಶಾಸಕ ಬಸವರಾಜ ದಢೇಸೂಗುರು ಎರಡು ಮೊಬೈಲ್‌ನಲ್ಲಿ ನಿರತರಾಗುವ ಮೂಲಕ ಅಗೌರವ ತೋರಿಸಿದ್ದು, ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

    ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ರಾಜ್ಯ ಮತ್ತು ಕೇಂದ್ರ ಸರ್ಕಾರದಿಂದ ಸಾಕಷ್ಟು ಅನುದಾನ ಬಂದಿದ್ದು, ಎಲ್ಲ ಸಮುದಾಯಕ್ಕೂ ನ್ಯಾಯ ಒದಗಿಸಲಾಗಿದೆ. ಪಕ್ಷದ ಬಲವರ್ಧನೆಗೆ ಯುವಕರ ಪಾತ್ರ ಪ್ರಮುಖವಾಗಿದ್ದು, ಬೂತ್ ಮಟ್ಟದಲ್ಲಿ ಸರ್ಕಾರದ ಯೋಜನೆಗಳನ್ನು ಜನರಿಗೆ ತಿಳಿಸಲಾಗಿದೆ.
    ಪರಣ್ಣಮುನವಳ್ಳಿ, ಶಾಸಕ, ಗಂಗಾವತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts