More

    ಜನತಾ ಕರ್ಫ್ಯೂ ಉಲ್ಲಂಘಿಸಿದರೆ ಕ್ರಮ

    ಕಾರವಾರ: ಜನತಾ ಕರ್ಫ್ಯೂ ಉಲ್ಲಂಘಿಸುವವರ ವಿರುದ್ಧ ಪ್ರಕರಣ ದಾಖಲಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಹರೀಶ ಕುಮಾರ ಕೆ. ಎಚ್ಚರಿಸಿದ್ದಾರೆ.

    ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರ ಕೋರಿಕೆಯಂತೆ ಜನರ ಹಿತ ದೃಷ್ಟಿಯಿಂದ ಜಿಲ್ಲೆಯಲ್ಲೂ ಸಂಪೂರ್ಣ ಬಂದ್ ಆಚರಿಸಲಾಗುತ್ತಿದೆ. ಅದನ್ನು ಉಲ್ಲಂಘಿಸುವವರ ವಿರುದ್ಧ ಐಪಿಸಿ ಸೆಕ್ಷನ್ 144 ನಂತೆ ಎಫ್​ಐಆರ್ ದಾಖಲಿಸಲಾಗುವುದು ಎಂದರು.

    ಮಾ.22 ರಂದು ಆಸ್ಪತ್ರೆಗಳಂಥ ತುರ್ತು ಸೇವೆ ಹೊರತುಪಡಿಸಿ ಕಚೇರಿಗಳು, ಶಾಲೆ, ಕಾಲೇಜ್​ಗಳು ಸೇರಿದಂತೆ ಉಳಿದ್ಯಾವ ಸೇವೆಗಳೂ ಲಭ್ಯವಿರುವುದಿಲ್ಲ. ಎನ್​ಡಬ್ಲ್ಯುಕೆಆರ್​ಟಿಸಿ ಬಸ್, ರೈಲ್ವೆ ಸಂಚಾರ ಬಂದ್ ಇರಲಿವೆ. ಜನರು ಮನೆಯಲ್ಲೇ ಇದ್ದು ಕರ್ಫ್ಯೂಗೆ ಸಹಕಾರ ನೀಡಬೇಕು. ಇದಕ್ಕಾಗಿ ಜಿಲ್ಲೆಯ ವಿವಿಧೆಡೆ ಪ್ರಚಾರ ಕೈಗೊಳ್ಳಲಾಗಿದೆ. ಭಾನುವಾರ ಬೆಳಗ್ಗೆ 6.50 ಗಂಟೆಗೆ ಜಿಲ್ಲೆಯ ದೇವಸ್ಥಾನ, ಮಸೀದಿಗಳ ಮೂಲಕ ದೊಡ್ಡ ಸೈರನ್ ಮೊಳಗಿಸುವ ವ್ಯವಸ್ಥೆ ಮಾಡಲಾಗುವುದು. ಐದು ಗಂಟಗೆ ಒಂದು ಸಣ್ಣ ಸೈರನ್ ಆಗಲಿದೆ. 9 ಗಂಟೆಗೆ ಮತ್ತೊಂದು ಸೈರನ್ ಆದಾಗ ಕರ್ಫ್ಯೂ ಮುಕ್ತಾಯವಾಗಲಿದೆ ಎಂದರು.

    ಕರ್ಫ್ಯೂ ಯಶಸ್ವಿ ಮಾಡಲು ಜಿಲ್ಲೆಯ ಗಡಿಗಳಲ್ಲಿ ಚೆಕ್​ಪೋಸ್ಟ್​ಗಳನ್ನು ಮತ್ತಷ್ಟು ಬಲ ಪಡಿಸಲಾಗುವುದು. ತುರ್ತು ಪರಿಸ್ಥಿತಿ ಹೊರತುಪಡಿಸಿ ಹೊರಗಿನ ವಾಹನಗಳನ್ನು ತಡೆಯಲಾಗುವುದು ಎಂದರು. ತಹಸೀಲ್ದಾರ್, ಪಿಡಿಒ, ವಿಲೇಜ್ ಅಕೌಂಟೆಂಟ್, ಗ್ರಾಮ ಸಹಾಯಕ ಸೇರಿ ವಿವಿಧ ಇಲಾಖೆ ಅಧಿಕಾರಿಗಳ ತಂಡ ರಚಿಸಲಾಗುತ್ತಿದೆ. ಆ ಎಲ್ಲ ಸಿಬ್ಬಂದಿಗೆ ಸ್ಯಾನಿಟೈಸರ್ ಹಾಗೂ ಮಾಸ್ಕ್ ವಿತರಣೆ ಮಾಡಲಿದ್ದೇವೆ ಎಂದರು.

    ಜನಸಂದಣಿ ನಿಷೇಧಕ್ಕೆ ಚಿಂತನೆ: ಭಾನುವಾರದ ಪರಿಸ್ಥಿ ಅವಲೋಕಿಸಿ ಜನತಾ ಕರ್ಫ್ಯೂ ಯಶಸ್ವಿಯಾದರೆ ಮುಂದಿನ ದಿನದಲ್ಲಿ ಐದಕ್ಕಿಂತ ಹೆಚ್ಚು ಜನರು ಒಂದೆಡೆ ಸೇರದಂತೆ ಆದೇಶ ಹೊರಡಿಸುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ. ಜನರಿಗೆ ಬೇಕಾದ ತರಕಾರಿ, ಧಾನ್ಯ, ಮೀನು ಮುಂತಾದ ಅಗತ್ಯ ವಸ್ತುಗಳನ್ನು ಮನೆಗೇ ತಲುಪಿಸುವ ಬಗ್ಗೆ ಚಿಂತನೆ ನಡೆದಿದೆ ಎಂದರು. ಎಸ್​ಪಿ ಶಿವ ಪ್ರಕಾಶ ದೇವರಾಜು ಇದ್ದರು.

    ಆಸ್ಪತ್ರೆಗಳಲ್ಲಿ ಅಡ್ಮೀಟ್ ಇಲ್ಲ: ಸಣ್ಣ, ಪುಟ್ಟ ಸಮಸ್ಯೆ ಇದ್ದವರನ್ನು ಆಸ್ಪತ್ರೆಗಳಲ್ಲಿ ಹೆಚ್ಚು ದಿನ ಇಟ್ಟುಕೊಳ್ಳಬೇಡಿ ಎಂದು ಆರೋಗ್ಯ ಇಲಾಖೆ ಸೂಚಿಸಿದೆ. ಜ್ವರ, ಥಂಡಿಗಳಂಥ, ಪ್ರಕರಣಗಳು, ಸಣ್ಣಪುಟ್ಟ ಗಾಯವಾದ ರೋಗಿಗಳಿಗೆ ತಕ್ಷಣ ಚಿಕಿತ್ಸೆ ನೀಡಿ ಕಳಿಸಿಬಿಡಿ. ಕರೊನಾ ಸೋಂಕಿತರು ಬಂದರೆ ಹೆಚ್ಚಿನ ಲಕ್ಷ್ಯ ನೀಡಿ ಎಂದು ತಿಳಿಸಲಾಗಿದೆ. ಅದರಂತೆ ಕ್ರಮ ವಹಿಸಲಾಗಿದೆ ಎಂದು ಕ್ರಿಮ್್ಸ ನಿರ್ದೇಶಕ ಡಾ.ಗಜಾನನ ನಾಯಕ ‘ವಿಜಯವಾಣಿ’ಗೆ ತಿಳಿಸಿದ್ದಾರೆ.

    ಜಿಲ್ಲೆಯಲ್ಲಿ ಯಾವುದೇ ಕಾರಣಕ್ಕೂ ಪರಿಸ್ಥಿತಿ ಕೈಮೀರಲು ಅವಕಾಶ ನೀಡುವುದಿಲ್ಲ. ಹಾಗೊಮ್ಮೆ ಆದರೆ, ನಿಯಂತ್ರಣಕ್ಕೆ ಹಾಸ್ಟೆಲ್​ಗಳನ್ನು ಸಿದ್ಧಪಡಿಸಲಾಗಿದೆ. ಮೆಡಿಕಲ್ ಕಾಲೇಜ್, ನರ್ಸಿಂಗ್, ಪ್ಯಾರಾ ಮೆಡಿಕಲ್ ವಿದ್ಯಾರ್ಥಿಗಳನ್ನೂ ತುರ್ತು ಸೇವೆಗೆ ಬಳಸಿಕೊಳ್ಳಲಾಗುತ್ತದೆ. ಅವರಿಗೆ ತರಬೇತಿ ನೀಡಲಾಗಿದ್ದು, ಅವರಿಗೆ ರಜೆಯನ್ನು ರದ್ದು ಮಾಡಲಾಗಿದೆ. ಪರಿಸ್ಥಿತಿ ನಿಭಾಯಿಸಲು ಎಲ್ಲ ಸಿದ್ಧತೆ ನಡೆಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಡಾ.ಹರೀಶ ಕುಮಾರ್ ತಿಳಿಸಿದ್ದಾರೆ.

    ಏನಿರುತ್ತೆ?:
    ಪತ್ರಿಕೆಗಳ ವಿತರಣೆ
    ಆಸ್ಪತ್ರೆಗಳು
    ವಿದ್ಯುತ್, ಫೋನ್ ಮುಂತಾದ ಸೇವೆ
    ಏನಿರದು..?:
    ಬಸ್, ರೈಲು
    ಆಟೋ ರಿಕ್ಷಾ, ಮ್ಯಾಕ್ಸಿ ಕ್ಯಾಬ್
    ಅಂಗಡಿಗಳು, ಹೋಟೆಲ್​ಗಳು
    ಸಂತೆ ಮಾರುಕಟ್ಟೆ

    ಬಿಜೆಪಿಯಿಂದ ಪ್ರಚಾರ:
    ಮಾ.22 ರ ಜನತಾ ಕರ್ಫ್ಯೂ ಬೆಂಬಲಿಸುವಂತೆ ಶಾಸಕಿ ರೂಪಾಲಿ ನಾಯ್ಕ ಹಾಗೂ ಬಿಜೆಪಿ ಮುಖಂಡರು ಶನಿವಾರ ನಗರದ ಮಾರುಕಟ್ಟೆಯಲ್ಲಿ ಸಂಚಾರ ನಡೆಸಿ ಮನವಿ ಮಾಡಿದರು.
    ರೈಲುಗಳು ರದ್ದು:
    ಮಾರ್ಚ್ 22 ರ ಕಾರವಾರ-ಪೆರ್ನೆಂ-ಕಾರವಾರ (70101/70102)ಡೆಮು ರೈಲು,ಯಶವಂತಪುರ-ವಾಸ್ಕೋ-ಯಶವಂತಪುರ 17310/17309 ರೈಲುಗಳು ಮಾ.31 ರವರೆಗೆ ಬಂದ್ ಇರಲಿವೆ ಎಂದು ಕೊಂಕಣ ರೈಲ್ವೆ ಪ್ರಕಟಣೆ ತಿಳಿಸಿದೆ.

    ಜನತಾ ಕರ್ಫ್ಯೂ ಯಾರ ವಿರುದ್ಧವೂ ಅಲ್ಲ. ಎಲ್ಲರ ಒಳ್ಳೆಯದಕ್ಕೆ. ಜನ ಅದನ್ನು ಅರಿತು ಸಹಕಾರ ನೀಡಬೇಕು.
    ಎಂ.ರೋಶನ್ ಜಿಪಂ ಸಿಇಒ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts