More

    ಜನತಾ ಕರ್ಫ್ಯೂಗೆ ಸ್ತಬ್ಧಗೊಂಡ ಜಿಲ್ಲೆ

    ಗದಗ: ದೇಶದಲ್ಲಿ ವ್ಯಾಪಕವಾಗಿ ಆವರಿಸುತ್ತಿರುವ ಕರೊನಾ ವೈರಸ್ ತಡೆಗಟ್ಟಲು ಪ್ರಧಾನಮಂತ್ರಿ ನರೇಂದ್ರ ಮೋದಿ ಕರೆ ನೀಡಿರುವ ಜನತಾ ಕರ್ಫ್ಯೂಗೆ ಜನರಿಂದ ವ್ಯಾಪಕ ಬೆಂಬಲ ವ್ಯಕ್ತವಾಯಿತು. ಗದಗ ಬೆಟಗೇರಿ ಅವಳಿ ನಗರ ಸೇರಿ ಇಡೀ ಜಿಲ್ಲೆ ಸ್ತಬ್ಧಗೊಂಡಿತ್ತು. ಜನರು ಸ್ವಯಂ ಪ್ರೇರಿತರಾಗಿ ಮನೆಯಲ್ಲಿ ಕುಳಿತು ಕರೊನಾ ತಡೆಗೆ ಕೇಂದ್ರ ಸರ್ಕಾರ ಕೈಗೊಂಡಿರುವ ಆಂದೋಲನ ಬೆಂಬಲಿಸಿ ಯಶಸ್ವಿಗೊಳಿಸಿದರು.

    ಬೆಳಗ್ಗೆ 7 ಗಂಟೆಯಿಂದಲೇ ಜನರು ಹೊರಗೆ ಬರಲಿಲ್ಲ. ಶನಿವಾರವೇ ಹಾಲು ಸೇರಿ ಇತರೆ ಅಗತ್ಯ ವಸ್ತುಗಳನ್ನು ಮನೆಗೆ ತೆಗೆದುಕೊಂಡು ಹೋಗಿದ್ದರಿಂದ ಭಾಗಶಃ ಜನರು ಮನೆ ಬಿಟ್ಟು ಹೊರಗೆ ಬರಲಿಲ್ಲ. ಭಾನುವಾರವಾಗಿದ್ದರಿಂದ ಮಕ್ಕಳು ಮನೆಯಲ್ಲಿ ಕೇರಂ ಇನ್ನಿತರ ಆಟಗಳಲ್ಲಿ ತಲ್ಲೀನರಾಗಿದ್ದರು. ಪುರುಷರು, ಮಹಿಳೆಯರು ನ್ಯೂಸ್ ಚಾನೆಲ್​ಗಳ ಮುಂದೆ ಕುಳಿತು ಕರೊನಾ ಅಪ್​ಡೇಟ್ ಸೇರಿ ಸಿನಿಮಾ ಹಾಗೂ ಮನರಂಜನೆ ಕಾರ್ಯಗಳನ್ನು ವೀಕ್ಷಿಸಿದರು. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಕರೆಗೆ ಓಗೊಟ್ಟ ಜನರು ಮನೆ ಬಿಟ್ಟು ಕದಲಲಿಲ್ಲ. ಅವಶ್ಯವಿರುವ ವಸ್ತುಗಳ ಬೇಕಿದ್ದರೆ ಸರ್ಕಾರ ವಿಧಿಸಿದ ಅವಧಿ ನಂತರ ತಂದರಾಯಿತು. ಇಲ್ಲವೇ ನಾಳೆ ತಂದುಕೊಂಡರಾಯಿತು ಎಂದು ಮನೆಯಲ್ಲಿ ನಿಶ್ಚಿಂತೆಯಿಂದ ಕಾಲ ಕಳೆದರು.

    ಗದಗ-ಬೆಟಗೇರಿ ನಗರದ ಪ್ರಮುಖ ಜನನಿಬಿಡಿ ಪ್ರದೇಶಗಳು ಎನಿಸಿದ ಸ್ಟೇಷನ್ ರಸ್ತೆ, ನಾಮಜೋಶಿ ರಸ್ತೆ, ಬ್ಯಾಂಕ್ ರಸ್ತೆ, ಮುಳಗುಂದ ನಾಕಾ, ಹಾತಲಗೇರಿ ನಾಕಾ, ಬೆಟಗೇರಿಯ ಟೆಂಗಿನಕಾಯಿ ಬಜಾರ್, ಹೆಲ್ತ್​ಕ್ಯಾಂಪ್, ಹಳೇ ಡಿಸಿ ಕಚೇರಿ ಬಳಿ ಜನರಿಲ್ಲದೇ ಬಣಗುಡುತ್ತಿತ್ತು. ಬಸ್ ಸಂಚಾರ ಮತ್ತು ರೈಲ್ವೆ ಸಂಚಾರ ಸ್ಥಗಿತಗೊಳಿಸಿದ್ದರಿಂದ ಬಸ್ ಮತ್ತು ರೈಲು ನಿಲ್ದಾಣಗಳು ಖಾಲಿಖಾಲಿಯಾಗಿದ್ದವು. ತರಕಾರಿ ಮಾರ್ಕೆಟ್, ಸರಾಫ್ ಬಜಾರ್, ಬಾರ್​ಗಳು, ಹೋಟೆಲ್​ಗಳು ಬಂದ್ ಆಗಿದ್ದವು. ಕೆಲವರು ಹಾಲು, ಮೆಡಿಸಿನ್ ಮತ್ತಿತರ ಅಗತ್ಯ ವಸ್ತುಗಳ ಖರೀದಿಗಾಗಿ ತಮ್ಮ ವಾಹನಗಳ ಒಬ್ಬಿಬ್ಬರು ಸಂಚಾರ ಮಾಡುತ್ತಿರುವುದು ಕಂಡುಬಂದಿತು. ಕೆಲ ಬಡಾವಣೆಗಳಲ್ಲಿ ಸಣ್ಣ ಸಣ್ಣ ಕಿರಾಣಿ ಅಂಗಡಿಗಳು ತೆರೆದಿದ್ದವು. ಇದನ್ನು ಹೊರತುಪಡಿಸಿದರೆ ಜನರು ಜನತಾ ಕರ್ಫ್ಯೂಗೆ ಸಂಪೂರ್ಣವಾಗಿ ಬೆಂಬಲ ನೀಡಿದರು. ಹೀಗಾಗಿ ರಾತ್ರಿ 9 ಗಂಟೆವರೆಗೂ ಸ್ವಯಂಘೋಷಿತ ಜನತಾ ಕರ್ಫ್ಯೂ ನಿರಾತಂಕವಾಗಿ ನಡೆಯಿತು.

    ಜನತಾ ಕರ್ಫ್ಯೂ ಹಿನ್ನೆಲೆಯಲ್ಲಿ ನಗರದ ವೀರನಾರಾಯಣ ದೇವಸ್ಥಾನ, ತ್ರಿಕೂಟೇಶ್ವರ ದೇವಸ್ಥಾನ, ಸಾಯಿಬಾಬಾ ಮಂದಿರ ಹೀಗೆ ಪ್ರಮುಖ ದೇವಾಲಯಗಳ ಬಾಗಿಲು ಮುಚ್ಚಲಾಗಿತ್ತು.

    ತಮಟೆ, ಗಂಟೆ ಬಾರಿಸಿ ಗೌರವ ಸಲ್ಲಿಕೆ: ಕರೊನಾ ಸೋಂಕು ವಿರುದ್ಧ ಹೋರಾಡುತ್ತಿರುವ ಎಲ್ಲರಿಗೂ ಗೌರವ ಸಲ್ಲಿಸುವ ಸಲುವಾಗಿ ಜನರು ತಮ್ಮ ಮನೆ ಮುಂದೆ ಬಂದು ಚಪ್ಪಾಳೆ ತಟ್ಟಿ ಪ್ರೋತ್ಸಾಹಿಸಿ ಅಭಿನಂದನೆ ಸಲ್ಲಿಸಿದರು. ತಮ್ಮ ಮನೆಯಿಂದ ಹೊರ ಬಂದ ಜನರು ತಮಟೆ, ಗಂಟೆ ಬಾರಿಸಿ ಗೌರವ ಸಲ್ಲಿಸಿದರು. ಕರೊನಾ ವಿರುದ್ಧ ಹೋರಾಡುತ್ತಿರುವ ವೈದ್ಯರು, ನರ್ಸ್​ಗಳು, ಸರ್ಕಾರಿ ಅಧಿಕಾರಿ ಸಿಬ್ಬಂದಿ ಪರ ಘೋಷಣೆ ಕೂಗಿದರು. ಕರೊನಾ ಹೆಮ್ಮಾರಿಯನ್ನು ದೇಶದಿಂದ ಹೊರಗಟ್ಟಲು ನಮ್ಮ ಬೆಂಬಲವಿದೆ. ಕೇಂದ್ರ ಮತ್ತು ಸರ್ಕಾರಗಳು ಸೋಂಕು ಹರಡದಂತೆ ಇನ್ನಷ್ಟು ಕಠಿಣ ನಿರ್ಧಾರಗಳನ್ನು ಕೈಗೊಳ್ಳಬೇಕು ಎಂದು ಅನೇಕರು ಒತ್ತಾಯಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts