More

    ಜಕಾತಿ ಸಂಗ್ರಹಕ್ಕೆ ರಸೀದಿ ನೀಡಲು ಆಗ್ರಹ- ಬೀದಿಬದಿ ವ್ಯಾಪಾರಿಗಳ ಪ್ರತಿಭಟನೆ 

    ದಾವಣಗೆರೆ: ಬೀದಿಬದಿ ವ್ಯಾಪಾರಿಗಳಿಂದ ಸಂಗ್ರಹಿಸುವ ಜಕಾತಿಗೆ ಕ್ರಮಬದ್ಧ ರಸೀದಿ ನೀಡುವುದು ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ದಾವಣಗೆರೆ ಬೀದಿಬದಿ ಚಿಲ್ಲರೆ ವ್ಯಾಪಾರಸ್ಥರ ಸಂಘ ಹಾಗೂ ಸೋಷಿಯಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯುನಿಸ್ಟ್) ಪಕ್ಷದ ಸಹಯೋಗದಲ್ಲಿ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.

    ಕೆ.ಆರ್.ಮಾರುಕಟ್ಟೆಯಿಂದ ನಗರಪಾಲಿಕೆವರೆಗೆ ಪ್ರತಿಭಟನೆ ನಡೆಸಿದ ಬೀದಿಬದಿ ವ್ಯಾಪಾರಿಗಳು ಹಾಗೂ ಸಂಘಟನೆ ಮುಖಂಡರು ಆಯುಕ್ತೆ ರೇಣುಕಾ ಹಾಗೂ ಪಾಲಿಕೆ ವಿಪಕ್ಷನಾಯಕ ಗಡಿಗುಡಾಳ್ ಮಂಜುನಾಥ್ ಅವರಿಗೆ ಮನವಿಪತ್ರ ಸಲ್ಲಿಸಿದರು.
    ಕ್ರಮ ಸಂಖ್ಯೆ, ದಿನಾಂಕ, ಮೊತ್ತ ಹಾಗೂ ಮಹಾನಗರ ಪಾಲಿಕೆಯ ಮೊಹರು ಮುದ್ರಿತ ರಸೀದಿ ನೀಡಬೇಕು. ಜಕಾತಿ ಪಡೆಯುವವರು ಗುರುತಿನ ಚೀಟಿ ಹಾಗೂ ಸಮವಸ್ತ್ರ ಧರಿಸಿರಬೇಕು. ಪಾಲಿಕೆ ನಿಗದಿಪಡಿಸಿದಂತೆ ನಿರ್ದಿಷ್ಟ ಮೊತ್ತದ ಜಕಾತಿ ಸಂಗ್ರಹಿಸಬೇಕು. ಸಮಸ್ಯೆಯಾದಲ್ಲಿ ಆಯುಕ್ತರು ಮಧ್ಯ ಪ್ರವೇಶಿಸಿ ಸಮಸ್ಯೆ ಬಗೆಹರಿಸಬೇಕು.
    ಬೀದಿಬದಿ ವ್ಯಾಪಾರಸ್ಥರ ಕಲ್ಯಾಣ ಮಂಡಳಿಯ ಹಣವನ್ನು 10 ಲಕ್ಷ ರೂ.ನಿಂದ 50 ಲಕ್ಷ ರೂ.ಗೆ ಏರಿಸಬೇಕು .ಆ ಹಣದಿಂದ ಬೀದಿಬದಿ ವ್ಯಾಪಾರಸ್ಥರ ಜೀವನ ಸುಧಾರಣೆಯ ಆರ್ಥಿಕ ಕಾರ್ಯಕ್ರಮಗಳನ್ನು ಕೈಗೊಳ್ಳಬೇಕು ಎಂದು ಆಗ್ರಹಿಸಲಾಯಿತು.
    ಪಕ್ಷದ ಜಿಲ್ಲಾ ಕಾರ್ಯದರ್ಶಿ ಮಂಜುನಾಥ್ ಕೈದಾಳೆ ಮಾತನಾಡಿ 2014ರ ಅಧಿನಿಯಮ 2ರ ಪ್ರಕಾರ ಸುಪ್ರೀಂಕೋರ್ಟ್ ಆದೇಶದಂತೆ ಬಹು ವರ್ಷದಿಂದ ವ್ಯಾಪಾರ ನಡೆಸುತ್ತಿರುವವರನ್ನು ತೆರವುಗೊಳಿಸುವಂತಿಲ್ಲ. ಕಿರುಕುಳ ನೀಡುವಂತಿಲ್ಲ. ಟೆಂಡರ್ ಪ್ರಕ್ರಿಯೆ ನಡೆಯುವಾಗ ಮಹಾನಗರ ಪಾಲಿಕೆಯು ವರ್ತಕರು, ಜಕಾತಿ ಗುತ್ತಿಗೆದಾರರು, ಪಾಲಿಕೆ ಆಯುಕ್ತರು-ಮಹಾಪೌರರು ತ್ರಿಪಕ್ಷೀಯ ಸಭೆಯಲ್ಲಿ ಚರ್ಚಿಸಬೇಕೆಂದು ಆಗ್ರಹಿಸಿದರು.
    ಬೀದಿಬದಿ ವ್ಯಾಪಾರಿಗಳ ಸಂಘದ ಅಧ್ಯಕ್ಷ ಇಸ್ಮಾಯಿಲ್ ಮಾತನಾಡಿ ಚಿಲ್ಲರೆ ವ್ಯಾಪಾರ ನಡೆಯುವ ಸ್ಥಳಗಳಲ್ಲಿ ಸರಿಯಾದ ಕಸ ವಿಲೇವಾರಿ ನಡೆಯುತ್ತಿಲ್ಲ. ಅವರ ಬಳಿ ತಿಂಗಳಿಗೆ ಸುಮಾರು 100 ರಿಂದ 150 ರೂ. ನೀಡುವಂತೆ ಒತ್ತಡ ಹಾಕಲಾಗುತ್ತಿದೆ. ಪಾಲಿಕೆಯು ಉಚಿತ ಕಸ ವಿಲೇವಾರಿ ಮಾಡಬೇಕೆಂದು ಮನವಿ ಮಾಡಿದರು.
    ಪಕ್ಷದ ಸದಸ್ಯರಾದ ತಿಪ್ಪೇಸ್ವಾಮಿ, ಭಾರತಿ, ಅನಿಲ್‌ಕುಮಾರ್ ಬಳ್ಳಾರಿ, ಪರಶುರಾಂ, ಬೀದಿಬದಿ ವ್ಯಾಪಾರಿಗಳ ಸಂಘದ ಗೌರವಾಧ್ಯಕ್ಷ ರಾಮಣ್ಣ, ಖಜಾಂಚಿ ಈರಣ್ಣ, ಅಂಬುಜಮ್ಮ, ಫಾತಿಮಾ, ನೀಲಮ್ಮ, ಅಸ್ಮಾಬಾನು ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts