More

    ಜಂಗಲ್ ಕಟಿಂಗ್ ಅಸಮರ್ಪಕ

    ಶಿರಸಿ: ಹೆಸ್ಕಾಂ ಶಿರಸಿ ಉಪವಿಭಾಗದ ವ್ಯಾಪ್ತಿಯಲ್ಲಿ ಜಂಗಲ್ ಕಟಿಂಗ್​ಗೆ 10 ಲಕ್ಷ ರೂಪಾಯಿಗೂ ಹೆಚ್ಚು ವೆಚ್ಚ ಮಾಡಿದರೂ ವ್ಯರ್ಥವಾದಂತಾಗಿದೆ. ಪರಿಣಾಮ ವಿದ್ಯುತ್ ಪೂರೈಕೆ ಕಷ್ಟಸಾಧ್ಯವಾಗಿದ್ದು, ಇದು ಕಟಿಂಗ್ ಕಾಮಗಾರಿ ಮಾಡುವವರ ಕಾರ್ಯವೈಖರಿಯನ್ನು ಅನುಮಾನದಿಂದ ನೋಡುವಂತಾಗಿದೆ.

    ಶಿರಸಿ ಉಪವಿಭಾಗ ವ್ಯಾಪ್ತಿಯಲ್ಲಿ 5 ಸೆಕ್ಷನ್​ಗಳಿದ್ದು, 23 ಫೀಡರ್​ಗಳಿವೆ. ಅಂದಾಜು 2760 ಕಿಮೀ ಎಲ್​ಟಿ ಲೈನ್ ಹಾಗೂ 8800 ಕಿಮೀ ಎಚ್​ಟಿ ಲೈನ್ ಮಾರ್ಗವಿದೆ. ಬಹುತೇಕ ಮಾರ್ಗ ಗ್ರಾಮೀಣ ಭಾಗ, ಅರಣ್ಯ ಪ್ರದೇಶದಲ್ಲಿಯೇ ಇದ್ದು, ಸಮರ್ಪಕ ವಿದ್ಯುತ್ ಪೂರೈಕೆ ಮಾಡಲು ಜಂಗಲ್ ಕಟಿಂಗ್ ಕಾರ್ಯ ಅನಿವಾರ್ಯವಾಗಿದೆ. ಆದರೆ, ಈ ಕಾರ್ಯ ವ್ಯವಸ್ಥಿತವಾಗಿ ನಡೆಯದಿರುವುದು ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲು ಕಾರಣವಾಗಿದೆ.

    ಮಾಸಿಕ 1.25 ಲಕ್ಷ ರೂ: ಜಂಗಲ್ ಕಟಿಂಗ್ ಕಾರ್ಯಕ್ಕೆ ಮಾಸಿಕ 1.25 ಲಕ್ಷ ರೂ. ವೆಚ್ಚ ಮಾಡಲಾಗುತ್ತಿದೆ. ಕಾಮಗಾರಿಯನ್ನು ಖಾಸಗಿ ಗುತ್ತಿಗೆದಾರರಿಗೆ ವಹಿಸಲಾಗಿದ್ದು, 1 ವಾಹನದ ಜತೆ 10 ಜನರ ತಂಡ ಕಟಿಂಗ್ ಕಾರ್ಯ ಮಾಡುತ್ತದೆ. ನಿಯಮದ ಪ್ರಕಾರ ಪ್ರತಿ ಸೆಕ್ಷನ್​ನಲ್ಲಿ 6 ದಿನ ಕೆಲಸ ಕಡ್ಡಾಯ. 1 ಫೀಡರ್ ವ್ಯಾಪ್ತಿಯಲ್ಲಿ ಕಾರ್ಯ ಪೂರ್ಣ ಮಾಡಲು ಒಂದು ವಾರ ಬೇಕು. ಎಲ್ಲ ಫೀಡರ್​ಗಳಲ್ಲಿ ಕೆಲಸ ಮಾಡಲು ಕನಿಷ್ಠ 140 ದಿನ ಬೇಕು. ಜತೆಗೆ, 2300 ಟ್ರಾನ್ಸ್​ಫಾರ್ಮರ್ ವ್ಯಾಪ್ತಿಯ ಪ್ರತ್ಯೇಕ ಕಾರ್ಯಕ್ಕೆ ತಲಾ ಒಂದಕ್ಕೆ 10 ಜನರಿಗೆ ಒಂದು ದಿನ ಬೇಕು. ಆದರೆ, ಈ ನಿಯಮಗಳೆಲ್ಲ ದಾಖಲೆಗಳಿಗಷ್ಟೇ ಸೀಮಿತವಾಗಿದ್ದು, ವಾಸ್ತವದಲ್ಲಿ ಶೇ. 50ರಷ್ಟು ಕಾರ್ಯವಾಗುತ್ತಿಲ್ಲ. ಗುತ್ತಿಗೆದಾರರಿಗೆ ನೀಡುವ ಹಣಕ್ಕೆ ತಕ್ಕ ಕಾರ್ಯ ನಡೆಯುತ್ತಿಲ್ಲ ಎನ್ನುವುದು ವಿದ್ಯುತ್ ಗ್ರಾಹಕರ ಆರೋಪವಾಗಿದೆ.

    ಗ್ರಾಮೀಣ ಭಾಗದಲ್ಲಿ ತೊಂದರೆ: ಗ್ರಾಮೀಣ ಭಾಗದಲ್ಲಿ ವಿದ್ಯುತ್ ತಂತಿಗೆ ಧಕ್ಕೆಯಾದರೆ ಎರಡ್ಮೂರು ದಿನ ವಿದ್ಯುತ್ ಸಂಪರ್ಕ ಕಡಿತವಾಗುತ್ತದೆ. ಮಳೆಗಾಲದಲ್ಲಿ ಈ ಸಮಸ್ಯೆ ಉಲ್ಬಣಿಸುತ್ತಿದೆ. ಎಲ್ಲಿ ಸಮಸ್ಯೆಯಾಗಿದೆ ಎಂಬುದನ್ನು ಹುಡುಕುವುದರಲ್ಲೇ ದಿನಗಳು ಕಳೆಯುತ್ತವೆ. ಹೀಗಾಗಿ ಜಂಗಲ್ ಕಟಿಂಗ್ ಕಾರ್ಯ ಮಾಡುವಾಗಲೇ ವ್ಯವಸ್ಥಿತವಾಗಿ ಮಾಡಬೇಕು. ಇಲ್ಲವಾದರೆ ನಿರಂತರ ವಿದ್ಯುತ್ ಪೂರೈಕೆ ಕನಸಿನ ಮಾತು ಎಂಬುದು ಗ್ರಾಮೀಣ ಭಾಗದ ಜನರ ಅಭಿಪ್ರಾಯ.

    ಹೆಸ್ಕಾಂ ಶಿರಸಿ ಉಪವಿಭಾಗ ವ್ಯಾಪ್ತಿಯಲ್ಲಿ ಜಂಗಲ್ ಕಟಿಂಗ್ ಕಾರ್ಯಕ್ಕೆ ವಾಹನ ಹಾಗೂ ಸಿಬ್ಬಂದಿ ಕೊರತೆಯಿದೆ. ಹೀಗಾಗಿ ವ್ಯವಸ್ಥಿತವಾಗಿ ಕಟಿಂಗ್ ಮಾಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಹೆಚ್ಚುವರಿ 3 ವಾಹನ, 30 ಸಿಬ್ಬಂದಿಗೆ ಅವಕಾಶ ನೀಡುವಂತೆ ಕೇಂದ್ರ ಕಚೇರಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಗುತ್ತಿಗೆದಾರನ ಸಿಬ್ಬಂದಿಯ ಜತೆಗೆ ಇಲಾಖೆ ಲೈನ್​ವೆುನ್​ಗಳು ಸೇರಿ ಪ್ರಸ್ತುತ ಜಂಗಲ್ ಕಟಿಂಗ್ ಕಾರ್ಯ ಮಾಡುತ್ತಿದ್ದಾರೆ.
    | ಧರ್ಮರಾಜ ನಾಯ್ಕ ಹೆಸ್ಕಾಂ ಎಇಇ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts