More

    ಚುನಾವಣೆಯಲ್ಲಿ ಸೋತರೂ ಕುಂದದ ಚಿಕ್ಕಣ್ಣ ಶಕ್ತಿ

    ಎಚ್.ಡಿ.ಕೋಟೆ: ಮಾಜಿ ಶಾಸಕ ಚಿಕ್ಕಣ್ಣ ಚುನಾವಣೆಯಲ್ಲಿ ಸೋತರೂ ಅವರ ಶಕ್ತಿ ಕುಂದಿಲ್ಲ, ಹದಿಹರೆಯದ ವಯಸ್ಸಿನಲ್ಲೂ ಹುಮ್ಮಸಿನಲ್ಲಿದ್ದು, ಅವರ ಕೊನೆಯ ಆಸೆಯನ್ನು ತಾಲೂಕಿನ ಜನತೆ ಈಡೇರಿಸಬೇಕು ಎಂದು ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡ ಹೇಳಿದರು.

    ಪಟ್ಟಣದ ಮೈಸೂರು ರಸ್ತೆಯ ಕೃಷ್ಣಾಪುರ ಗ್ರಾಮದ ಬಾಬೂಜಿ ವೃತ್ತದಲ್ಲಿ ಬುಧವಾರ ಚಿಕ್ಕಣ್ಣ ಅಭಿಮಾನಿ ಬಳಗ ವತಿಯಿಂದ ಆಯೋಜಿಸಿದ್ದ ಚಿಕ್ಕಣ್ಣ ಅವರ 79ನೇ ಹುಟ್ಟುಹಬ್ಬ ಕಾರ್ಯಕ್ರಮದಲ್ಲಿ ಮಾತನಾಡಿದರು. ಇಳಿವಯಸ್ಸಿನಲ್ಲೂ ಮಾಜಿ ಶಾಸಕ ಚಿಕ್ಕಣ್ಣ ಹುರುಪಿನಿಂದ ಓಡಾಡುತ್ತಿದ್ದಾರೆ. ಪುತ್ರ ಜಯಪ್ರಕಾಶ್ ಅವರನ್ನು ಶಾಸಕರನ್ನಾಗಿ ಮಾಡುವುದು ಅವರ ಕೊನೆಯ ಆಸೆ. ಹಾಗಾಗಿ ತಾಲೂಕಿನ ಜನರು ಅವರನ್ನು ಆಶೀರ್ವದಿಸಬೇಕು ಎಂದರು.

    ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ತವರೂರು ಕೋಟೆ. ರಾಜ್ಯದಲ್ಲಿ ಜೆಡಿಎಸ್ ನೆಲೆಕಚ್ಚಿದಾಗ ಕೋಲಾರ ಮತ್ತು ಕೋಟೆಯಲ್ಲಿ ಜಯಭೇರಿ ಬಾರಿಸಿತ್ತು. ಹಾಗಾಗಿ ದೇವೇಗೌಡರಿಗೆ ತಾಲೂಕಿನ ಬಗ್ಗೆ ಅಭಿಮಾನ ಎಂದರು.

    ಮಾಜಿ ಶಾಸಕ ಚಿಕ್ಕಣ್ಣ ಮಾತನಾಡಿ, 1987ರಿಂದಲೂ ಜಿ.ಟಿ.ದೇವೆಗೌಡರೊಂದಿಗೆ ನನಗೆ ಒಡನಾಟವಿದ್ದು, ಅವರ ಮಾರ್ಗದರ್ಶನದಲ್ಲಿ ನನ್ನ ರಾಜಕೀಯ ನಡೆಯನ್ನು ಕಂಡುಕೊಂಡಿದ್ದೇನೆ. ಜಿಟಿಡಿ ಬಿಜೆಪಿಗೆ ಹೋದಾಗ ನಮಗೆ ಜಿಲ್ಲೆಯಲ್ಲೇ ಅಸ್ತಿತ್ವ ಇಲ್ಲವಾಗಿತ್ತು. ಅವರು ಮರಳಿ ಪಕ್ಷಕ್ಕೆ ಬಂದಾಗ ನಮಗೆ ಭೀಮ ಬಲ ಸಿಕ್ಕಂತಾಗಿದೆ ಎಂದು ತಿಳಿಸಿದರು.

    ಕಾರ್ಯಕ್ರಮಕ್ಕೂ ಮೊದಲು ಚಿಕ್ಕದೇವಮ್ಮ ಬೆಟ್ಟದಲ್ಲಿ ಕುಟುಂಬ ಸಮೇತರಾಗಿ ಚಿಕ್ಕಣ್ಣ ಪೂಜೆ ಸಲ್ಲಿಸಿದರು. ನಂತರ ಸರಗೂರು ಪಟ್ಟಣದಲ್ಲಿ ಅಭಿಮಾನಿಗಳು ಹಾಗೂ ಪಕ್ಷದ ಮುಖಂಡರಿಂದ ಅಭಿನಂದನೆ ಸ್ವೀಕರಿಸಿದ ಬಳಿಕ ಕೋಟೆ ಪಟ್ಟಣದ ಸರ್ಕಾರಿ ಪ್ರವಾಸಿ ಮಂದಿರದಿಂದ ವಿವಿಧ ಜಾನಪದ ಕಲಾತಂಡಗಳೊಂದಿಗೆ ತೆರೆದ ಅಲಂಕೃತ ವಾಹನದಲ್ಲಿ ಅದ್ದೂರಿ ಮೆರವಣಿಗೆಯಲ್ಲಿ ಸಾಗಿದರು.

    ಸಾರಿಗೆ ಬಸ್ ನಿಲ್ದಾಣದ ಬಳಿ ಕ್ರೈನ್ ಮೂಲಕ ಕಿತ್ತಳೆ, ಮೋಸಂಬಿ, ಸೇಬಿನ ಬೃಹತ್ ಹಾರವನ್ನು ಹಾಕಲಾಯಿತು. ಕೃಷ್ಣಪುರ ವೃತ್ತದಲ್ಲಿ ಅಭಿಮಾನಿಗಳು ಸೇಬಿನ ಹಾರ ಹಾಕಿ ಪಟಾಕಿ ಸಿಡಿಸಿ ಸಂಭ್ರಮಿಸಿದರು. ಕಾರ್ಯಕ್ರಮಕ್ಕೆ ಬಂದಿದ್ದ ಜನರಿಗೆ ಹೋಳಿಗೆ ಊಟ ಹಾಕಲಾಯಿತು.

    ಶಾಸಕ ಕೆ.ಮಹದೇವು, ಜೆಡಿಎಸ್ ಅಭ್ಯರ್ಥಿ ಜಯಪ್ರಕಾಶ್ ಚಿಕ್ಕಣ್ಣ, ಜೆಡಿಎಸ್ ಜಿಲ್ಲಾ ಅಧ್ಯಕ್ಷ ನರಸಿಂಹಸ್ವಾಮಿ, ತಾಲೂಕು ಅಧ್ಯಕ್ಷ ರಾಜೇಂದ್ರ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ನಯಿಮಾಸುಲ್ತಾನ್, ಮಾಜಿ ಸದಸ್ಯರಾದ ಎಚ್.ಸಿ.ಶಿವಣ್ಣ, ಎಂ.ಪಿ. ನಾಗರಾಜು, ಮುಖಂಡರಾದ ದೊಡ್ಡನಾಯಕ, ನರಸಿಂಹೇಗೌಡ, ಪಟೇಲ್ ರಾಜೇಗೌಡ, ಪ್ರಕಾಶ್, ಮಹೇಶ್, ಚಾ.ನಂಜುಂಡಮೂರ್ತಿ, ಚಾಕಳ್ಳಿ ಕೃಷ್ಣ, ರಾಜು ಇತರರಿದ್ದರು.

    ಮುಂಬರುವ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ 90 ಜನರ ಹೆಸರನ್ನು ಜೆಡಿಎಸ್ ಘೋಷಿಸಿದೆ. ಇನ್ನೂ 134 ಜನರ ಅಭ್ಯರ್ಥಿಗಳ ಪಟ್ಟಿ ಬಾಕಿ ಇದೆ. ಎರಡನೇ ಪಟ್ಟಿಯಲ್ಲಿ ಜಯಪ್ರಕಾಶ್ ಹೆಸರು ಘೋಷಣೆ ಆಗಲಿದೆ.
    ಜಿ.ಟಿ.ದೇವೆಗೌಡ ಶಾಸಕ, ಚಾಮುಂಡೇಶ್ವರಿ ಕ್ಷೇತ್ರ

     

     

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts