More

    ಚಿನ್ನ ಪಾಲಿಶ್ ನೆಪದಲ್ಲಿ ವಂಚನೆ !

    ಹುಬ್ಬಳ್ಳಿ: ಪಾಲಿಶ್ ಮಾಡಿಕೊಡುವುದಾಗಿ ನಂಬಿಸಿ ಚಿನ್ನಾಭರಣ ಪಡೆದು ವಂಚಿಸುವ ವಂಚಕರ ದೊಡ್ಡ ಜಾಲ ಜಿಲ್ಲೆಯಲ್ಲಿ ಬೀಡು ಬಿಟ್ಟಿರುವ ಶಂಕೆ ವ್ಯಕ್ತವಾಗಿದೆ.

    ವಂಚಕರು ಶನಿವಾರ ಒಂದೇ ದಿನ ಎರಡು ಕಡೆ ವಂಚಿಸಿದ್ದಾರೆ. ಮತ್ತೊಂದೆಡೆ ವಿಫಲರಾಗಿದ್ದಾರೆ. ವರೂರಲ್ಲಿ ಮಧ್ಯಾಹ್ನ 12 ಗಂಟೆ ಸುಮಾರು ಒಂದು ತಂಡ ವಾಸುದೇವ ಜೋಶಿ ದಂಪತಿಗೆ ವಂಚಿಸಿದೆ. ಮಧ್ಯಾಹ್ನ 2 ಗಂಟೆ ಸುಮಾರಿಗೆ ಹಳೇ ಹುಬ್ಬಳ್ಳಿ ಚನ್ನಪೇಟೆಯ ವಿಷ್ಣು ಪವಾರ ಅವರ ಮನೆಯಲ್ಲಿ ಮತ್ತೊಂದು ತಂಡ ವಂಚಿಸಿ ಚಿನ್ನದ ಸಮೇತ ಪರಾರಿಯಾಗಿದೆ.

    ಧಾರವಾಡದ ವಿದ್ಯಾಗಿರಿಯಲ್ಲಿ ತಂಡದ ಪ್ರಯತ್ನ ವಿಫಲವಾಗಿದೆ. ನಿವೃತ್ತ ಎಎಸ್​ಐ ಒಬ್ಬರ ಮನೆಗೆ ಅಪರಿಚಿತರಿಬ್ಬರು ತೆರಳಿದ್ದರು. ಚಿನ್ನದ ಒಡವೆ ಪಾಲಿಶ್ ಮಾಡಿಕೊಡುವುದಾಗಿ ಹೇಳಿದ್ದರು. ಬೇಡ ಎಂದು ಕುಟುಂಬದವರು ವಾಪಸ್ ಕಳುಹಿಸಿದ್ದಾರೆ.

    ಈ ಮೂರು ಪ್ರಕರಣಗಳಲ್ಲಿ ಒಂದೇ ತಂಡದ ಕೈವಾಡವಿರುವ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ. ಹು-ಧಾ ಕಮಿಷನರೇಟ್ ಮತ್ತು ಧಾರವಾಡ ಜಿಲ್ಲಾ ಪೊಲೀಸರು ವಂಚಕರ ರೇಖಾಚಿತ್ರದ ಜಾಡು ಹಿಡಿದು, ಆರೋಪಿತರ ಪತ್ತೆಗೆ ಬಲೆ ಬೀಸಿದ್ದಾರೆ.

    ವರೂರಲ್ಲಿ ದಂಪತಿಗೆ ವಂಚನೆ

    ಚಿನ್ನ ಪಾಲಿಶ್ ಮಾಡಿ ಕೊಡುವುದಾಗಿ ನಂಬಿಸಿ ತಾಲೂಕಿನ ವರೂರ ಗ್ರಾಮದ ವಾಸುದೇವ ಜೋಶಿ ದಂಪತಿಯಿಂದ 1.40 ಲಕ್ಷ ರೂ. ಮೌಲ್ಯದ 36 ಗ್ರಾಂ ಚಿನ್ನಾಭರಣ ಪಡೆದು ವಂಚಿಸಿದ್ದಾರೆ. ಚಿನ್ನಾಭರಣ ಸ್ವಚ್ಛಗೊಳಿಸಿ ಕೊಡುವುದಾಗಿ ನಂಬಿಸಿದ್ದಾರೆ. ವಾಸುದೇವ ಕೊರಳಲ್ಲಿದ್ದ 18 ಗ್ರಾಂ ಚಿನ್ನದ ಸರ ಹಾಗೂ ಪತ್ನಿ ಕೊರಳಲ್ಲಿದ್ದ 18 ಗ್ರಾಂ ಮಾಂಗಲ್ಯ ಸರ ನೀಡಿದ್ದಾರೆ. ವಂಚಕರು ಗಮನ ಬೇರೆಡೆ ಸೆಳೆದು ಆಭರಣ ಸಮೇತ ಪರಾರಿಯಾಗಿದ್ದಾರೆ. ಸ್ಥಳಕ್ಕೆ ಗ್ರಾಮೀಣ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.

    ಹೇಗೆ ವಂಚಿಸುತ್ತಾರೆ ?

    ವಂಚಕರು ಪ್ರತಿಷ್ಠಿತ ಕಂಪನಿಯೊಂದರ ಜಾಹೀರಾತು ಪ್ರತಿನಿಧಿಗಳು ಎಂದು ಪರಿಚಯಿಸಿಕೊಳ್ಳುತ್ತಾರೆ. ತಾಮ್ರದ ದೇವರ ಮೂರ್ತಿ ಸ್ವಚ್ಛಗೊಳಿಸಿ ನಂಬಿಸುತ್ತಾರೆ. ಬಳಿಕ ಚಿನ್ನಾಭರಣ ಪಾಲಿಶ್ ಮಾಡುತ್ತೇವೆ ಎನ್ನುತ್ತಾರೆ. ಜನರ ಕೈಯಿಂದಲೇ ಕುಕ್ಕರ್​ನಲ್ಲಿ ಚಿನ್ನದ ಸರ, ನೀರು, ಅರಿಶಿಣ ಪುಡಿ ಹಾಗೂ ಪೌಡರ್​ವೊಂದನ್ನು ಹಾಕಿ ಕುದಿಸಲು ಹೇಳುತ್ತಾರೆ. ಗಮನ ಬೇರೆಡೆ ಸೆಳೆದು ಚಿನ್ನಾಭರಣ ಎಗರಿಸಿ ಕಾಲ್ಕಿಳುತ್ತಾರೆ.

    ಬಂಗಾರದ ಆಭರಣ ಪಾಲಿಶ್ ಮಾಡುವುದಾಗಿ ವಂಚಿಸುವ ತಂಡ ಅವಳಿ ನಗರದಲ್ಲಿ ಬೀಡು ಬಿಟ್ಟಿರುವ ಶಂಕೆ ಇದೆ. ಈ ಕುರಿತು ವಿಶೇಷ ತಂಡ ರಚಿಸಲಾಗಿದೆ. ಶೀಘ್ರದಲ್ಲೇ ಆರೋಪಿಗಳನ್ನು ಬಂಧಿಸುತ್ತೇವೆ.

    | ಲಾಬುರಾಮ, ಹು-ಧಾ ಪೊಲೀಸ್ ಆಯುಕ್ತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts