More

    ಚಿಂಚೋಳಿಯಲ್ಲಿ ಮಳೆರಾಯನ ಆರ್ಭಟ

    ಚಿಂಚೋಳಿ: ತಾಲೂಕಿನಲ್ಲಿ ಮಳೆರಾಯನ ಆರ್ಭಟ ಮುಂದುವರಿದಿದ್ದು, ಬುಧವಾರ ಮಧ್ಯಾಹ್ನದಿಂದ ಆರಂಭವಾದ ಮಳೆಯಿಂದ ಕೆಲ ಗ್ರಾಮಗಳು ಅಕ್ಷರಶಃ ಜಲಾವೃತಗೊಂಡಿವೆ.
    ಪಟ್ಟಣದ ಜೈಭೀಮ ನಗರ, ಬಡಿ ದರ್ಗಾ , ಛೋಟಿ ದರ್ಗಾ , ಭೋವಿ ಬಡಾವಣೆಗಳು ಹಾಗೂ ಚಂದಾಪುರದ ಆಶ್ರಯ ಕಾಲನಿ, ಚಂದಾಪುರ, ಪಟೇಲ್ ಕಾಲನಿ, ಬಸವ ನಗರ, ಗಣೇಶ ನಗರ ಬಡಾವಣೆಗಳಿಗೆ ನೀರು ನುಗ್ಗಿದೆ. ಮನೆಯಲ್ಲಿನ ದವಸ- ಧಾನ್ಯಗಳು ಹಾಳಾಗಿವೆ.
    ಕೊಳ್ಳೂರ, ನಾಗಇದಲಾಯಿ, ತುಮಕುಂಟಾ, ಚಿಕ್ಕನಿಂಗದಳ್ಳಿ, ದೇಗಲ್ಮಡಿ, ಹರಗುಂಡಗಿ, ಪೋಲಕಪಳ್ಳಿ, ಚೆಂಗಟಾ ಸೇರಿ ಇನ್ನಿತರ ಹಳ್ಳಿಗಳಲ್ಲಿ ಮಳೆರಾಯ ಅವಾಂತರ ಸೃಷ್ಟಿಸಿದ್ದಾನೆ. ಕೊಳ್ಳೂರ ಗ್ರಾಮದಲ್ಲಿ ಹೊಟೇಲ್ ಹಾಗೂ ಮನೆಗಳಿಗೆ ನೀರು ನುಗ್ಗಿ ಅಪಾರ ಪ್ರಮಾಣದ ಹಾನಿ ಸಂಭವಿಸಿದೆ. ಇನ್ನು ನಾಗಇದಲಾಯಿ ಗ್ರಾಮದ ಯಲ್ಲಮ್ಮ ಹಳ್ಳಕ್ಕೆ ಅಪಾರ ಪ್ರಮಾಣದ ನೀರು ಹರಿದು ಬಂದಿದ್ದು, ಗ್ರಾಮದಲ್ಲಿನ 50ಕ್ಕೂ ಅಧಿಕ ಮನೆಗಳು ಜಲಾವೃತಗೊಂಡಿವೆ. ಬಟ್ಟೆ, ದವಸ- ಧಾನ್ಯ, ಹಣ ಸೇರಿ ಇನ್ನಿತರ ವಸ್ತುಗಳು ಹಳ್ಳದಲ್ಲಿ ಕೊಚ್ಚಿ ಹೋಗಿವೆ.
    ತುಮಕುಂಟಾದ ನಾಲಾಕ್ಕೆ ಹೆಚ್ಚಿನ ನೀರು ಹರಿದಿದ್ದರಿಂದ ರಾಜ್ಯ ಹೆದ್ದಾರಿಯ ಒಂದು ಭಾಗ ಕೊಚ್ಚಿಕೊಂಡು ಹೋಗಿದೆ. ಇದರಿಂದ ಕೆಲಕಾಲ ಸಂಚಾರಕ್ಕೆ ತೊಂದರೆ ಉಂಟಾಯಿತು. ನಾಲಾಕ್ಕೆ ನಿರ್ಮಿಸಿದ ತಡೆಗೋಡೆಯೂ ಕೊಚ್ಚಿ ಹೋಗಿದೆ. ರೋಡ್ ಕಲ್ಲೂರ ಗ್ರಾಮದಕ್ಕೆ ಅಪಾರ ಪ್ರಮಾಣದ ನೀರು ನುಗ್ಗಿದ್ದು, ಗ್ರಾಮದಲ್ಲಿನ ಶ್ರೀ ವೀರಭದ್ರೇಶ್ವರ ದೇವಾಲಯ ಜಲಾವೃತಗೊಂಡಿದೆ.
    ಚಿಕ್ಕನಿಂಗದಳ್ಳಿ ಕೆರೆ ಭರ್ತಿಯಾಗಿ ನಾಲಾಕ್ಕೆ ಅಪಾರ ಪ್ರಮಾಣದ ನೀರು ಹರಿದು ಬರುತ್ತಿದ್ದು, ಸೋಮನಿಂಗದಳ್ಳಿಯ ಬಹುತೇಕ ಮನೆಗಳು ಹಾಗೂ ದೇಗಲ್ಮಡಿಯ 20ಕ್ಕೂ ಅಧಿಕ ಮನೆಗಳಿಗೆ ನೀರು ನುಗ್ಗಿದೆ. ಮನೆಯಲ್ಲಿರುವ ನೀರು ಹೊರ ಹಾಕುವುದೇ ಕೆಲಸವಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts