More

    ಚರ್ಮಗಂಟು ಬಾಧೆಗೆ 196 ಜಾನುವಾರು ಬಲಿ

    ಜಗದೀಶ ಹೊಂಬಳಿ ಬೆಳಗಾವಿ: ರೈತರ ಜೀವನದ ಅವಿಭಾಜ್ಯ ಅಂಗವಾಗಿರುವ ಜಾನುವಾರುಗಳಲ್ಲಿ ಚರ್ಮಗಂಟು (ಲಂಪಿ ಸ್ಕಿನ್ ಡಿಸೀಸ್) ಸಾಂಕ್ರಾಮಿಕ ರೋಗ ಉಲ್ಬಣವಾಗುತ್ತಿದ್ದು, ಜಿಲ್ಲೆಯಲ್ಲಿ ಈವರೆಗೆ 196 ಜಾನುವಾರುಗಳು ಅಸುನೀಗಿವೆ.

    ಜಿಲ್ಲೆಯ 317 ಗ್ರಾಮಗಳಲ್ಲಿ ಒಟ್ಟಾರೆ 2,578 ಜಾನುವಾರುಗಳಲ್ಲಿ ಚರ್ಮಗಂಟು ರೋಗ ಕಾಣಿಸಿಕೊಂಡಿದ್ದು, ರೈತಾಪಿ ವರ್ಗ ತಲ್ಲಣಗೊಂಡಿದೆ. ಪಶುಪಾಲನೆ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯು ರೋಗ ತಡೆಗಟ್ಟುವುದಕ್ಕೆ ಹಳ್ಳಿಗಳಲ್ಲಿ ತುರ್ತು ಚಿಕಿತ್ಸೆಗಳನ್ನು ನೀಡುತ್ತಿದೆಯಾದರೂ ಜಾನುವಾರುಗಳಿಂದ ಜಾನುವಾರುಗಳಿಗೆ ರೋಗ ಹರಡುತ್ತಿರುವುದು ಇಲಾಖೆಗೆ ತಲೆನೋವು ತರಿಸಿದೆ. ಸೊಳ್ಳೆ, ಉಣ್ಣೆಗಳಿಂದ ರೋಗ ವೇಗವಾಗಿ ಹರಡುತ್ತಿದೆ. ಕ್ಯಾಪ್ರಿಸಾಕ್ಸ್ ಎಂಬ ವೈರಾಣುವಿನಿಂದ ರೋಗ ಬರುತ್ತಿದ್ದು, ಈ ರೋಗಕ್ಕೆ ನಿರ್ದಿಷ್ಟ ಚಿಕಿತ್ಸೆಯಾಗಲಿ, ಲಸಿಕೆಯಾಗಲಿ ಇಲ್ಲದಿರುವುದು ಜಾನುವಾರು ಮಾಲೀಕರ ಆತಂಕಕ್ಕೆ ಕಾರಣವಾಗಿದೆ. ಅದಕ್ಕಾಗಿ ಮುನ್ನೆಚ್ಚರಿಕೆ ವಹಿಸುವಂತೆ ಪಶು ವೈದ್ಯರು ರೈತರಿಗೆ ಹಾಗೂ ಜಾನುವಾರುಗಳ ಮಾಲೀಕರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ.

    21.67 ಲಕ್ಷ ರೂ. ಪರಿಹಾರ: ಚರ್ಮಗಂಟು ರೋಗದಿಂದ ಮೃತಪಟ್ಟ ಜಿಲ್ಲೆಯ ಜಾನುವಾರುಗಳಿಗೆ ಪರಿಹಾರ ನೀಡುವುದಕ್ಕೆ 33.35 ಲಕ್ಷ ರೂ. ಬೇಡಿಕೆ ಸಲ್ಲಿಸಲಾಗಿತ್ತು. ಈ ಪೈಕಿ 21.67 ಲಕ್ಷ ರೂ. ಪರಿಹಾರ ಬಿಡುಗಡೆಯಾಗಿದೆ. ಇನ್ನುಳಿದ ಪರಿಹಾರದ ಹಣ ಶೀಘ್ರದಲ್ಲಿಯೇ ಬಿಡುಗಡೆಯಾಗುವ ನಿರೀಕ್ಷೆ ಇದೆ. ಜಿಲ್ಲೆಯಲ್ಲಿ ರೋಗ ನಿಯಂತ್ರಣಕ್ಕೆ ತರುವುದಕ್ಕೆ ತುರ್ತು ಚಿಕಿತ್ಸೆಗಳನ್ನು ನೀಡಲಾಗುತ್ತಿದೆ. ಜಾನುವಾರುಗಳ ರಕ್ಷಣೆಗೆ ‘ಗೋಟ್ ಪೋಕ್ಸ್’ ಲಸಿಕೆ ನೀಡಲಾಗುತ್ತಿದ್ದು, ಈವರೆಗೆ 42,882 ಲಸಿಕೆ ಹಾಕಲಾಗಿದೆ.
    ಇನ್ನುಳಿದ ಲಸಿಕೆ ಹಾಕುವುದಕ್ಕೆ ಇಲಾಖೆ ಕ್ರಮ ಕೈಗೊಂಡಿದೆೆ. ಜತೆಗೆ ಇಲಾಖೆಯಿಂದ ಹಂತ ಹಂತವಾಗಿ ಲಸಿಕೆ ಪೂರಕೆಯಾಗುತ್ತಿದೆ. ಚರ್ಮಗಂಟು ರೋಗ ಕಂಡುಬಂದಲ್ಲಿ ಹತ್ತಿರದ ಪಶು ವೈದ್ಯರನ್ನು ಸಂಪರ್ಕಿಸಬೇಕು. ನಮ್ಮ ವೈದ್ಯರು ‘ಜಿಪಿಎಸ್ ಫೋಟೋ ಲೋಕೇಷನ್’ ಆ್ಯಪ್ ಮೂಲಕ ತಾವು ಚಿಕಿತ್ಸೆ ನೀಡಿದ ಸ್ಥಳದಿಂದ ವರದಿಗಳನ್ನು ಇಲಾಖೆ ಸಲ್ಲಿಸುತ್ತಿದ್ದಾರೆ.

    ರೋಗ ತಡೆಗಟ್ಟುವಿಕೆ ಹೇಗೆ?: ಈ ರೋಗವು ವೈರಾಣು ರೋಗವಾಗಿರುವುದರಿಂದ ನಿರ್ದಿಷ್ಟವಾದ ಚಿಕಿತ್ಸೆ ಇರುವುದಿಲ್ಲ. ಜಾನುವಾರುಗಳಿಗೆ ರೋಗದ ಲಕ್ಷಣಗಳ ತಕ್ಕಂತೆ ಚಿಕಿತ್ಸೆ ನೀಡಬೇಕಾಗುತ್ತದೆ.

    ದೇಹವನ್ನು ತಂಪಾಗಿಸಲು ಮೈಮೇಲೆ ಹಸಿ ಬಟ್ಟೆ ಹಾಕುವುದು ಹಾಗೂ ತಂಪಾದ ಜಾಗದಲ್ಲಿ ಕಟ್ಟುವುದು, ಚರ್ಮದ ಮೇಲಿನ ಗಾಯಗಳಿಗೆ ಪೋಟ್ಯಾಶಿಯಂ ಪರ್ಮಾಂಗನೇಟ್ ದ್ರಾವಣದಿಂದ ತೊಳೆದು ಐಯೋಡಿನ್ ದ್ರಾವಣ, ಮುಲಾಮು ಹಾಗೂ ಬೇವಿನ ಎಣ್ಣೆ ಲೇಪಿಸುವುದು, ರೋಗ ಹರಡುವುದನ್ನು ತಡೆಯಲು ರೋಗಗ್ರಸ್ಥ ಜಾನುವಾರುಗಳನ್ನು ಬೇರ್ಪಡಿಸುವುದು, ರೋಗಗ್ರಸ್ಥ ಜಾನುವಾರುಗಳಿಗೆ ಉಪಯೋಗಿಸಿದ ಎಲ್ಲ ಸಾಮಗ್ರಿಗಳನ್ನು ಸ್ವಚ್ಛಗೊಳಿಸಬೇಕು. ಸೊಳ್ಳೆ, ಉಣ್ಣೆಗಳಿಂದ ರೋಗ ಹರಡುತ್ತಿದೆ. ಇದಕ್ಕಾಗಿ ಮುನ್ನೆಚ್ಚರಿಕೆ ವಹಿಸಬೇಕು. ಬೆಳಗ್ಗೆ, ಸಂಜೆ ಜಾನುವಾರು ಕಟ್ಟುವ ಕೊಟ್ಟಿಗೆಯನ್ನು ಸ್ವಚ್ಛ ಮಾಡಬೇಕು ಎಂದು ಪಶು ವೈದ್ಯರು ಸಲಹೆ ನೀಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts