More

    ಬಸವಳಿದ ಪ್ರಾಣಿ-ಪಕ್ಷಿಗಳಿಗೆ ಜಲದಾತನಾದ ಬಸವರಾಜ

    ತನ್ನದೆ ಕೃಷಿಹೊಂಡದಲ್ಲಿ ಪಂಪ್‌ಸೆಟ್ ನೀರು ಹರಿಸಿ ಪ್ರಾಣಿ-ಪಕ್ಷಿಗಳಿಗೆ ನೆರವು

    ಪಾಲಾಕ್ಷ ಬಿ. ತಿಪ್ಪಳ್ಳಿ

    ಯಲಬುರ್ಗಾ : ಬೇಸಿಗೆ ರಣಬಿಸಿಲಿಗೆ ಜನಜೀವನ ತತ್ತರಿಸಿದೆ. ಮಳೆ ಕೊರತೆಯಿಂದ ಕೆರೆ ಕಟ್ಟೆಗಳು ಬತ್ತಿ ಹೋಗಿವೆ. ಕೊಳವೆಬಾವಿಗಳಲ್ಲಿ ನೀರಿನ ಅಂತರ್ಜಲ ಮಟ್ಟ ಕುಸಿತಗೊಂಡಿದೆ. ಜಾನುವಾರುಗಳು ನೀರಿಗಾಗಿ ಪರದಾಡುವ ಸ್ಥಿತಿ ಅಲ್ಲಲ್ಲಿ ಕಾಣಸಿಗುತ್ತಿದೆ. ಇಂಥ ಜ್ವಲಂತ ಸಮಸ್ಯೆಯನ್ನು ಮನಗಂಡ ತಾಲೂಕಿನ ಬೋದೂರು ಗ್ರಾಮದ ಯುವಕ ಬಸವರಾಜ ಬೋದೂರು, ತನ್ನ ಜಮೀನಲ್ಲಿರುವ ಬತ್ತಿದ ಕೃಷಿಹೊಂಡಕ್ಕೆ ಪಂಪ್‌ಸೆಟ್ ನೀರು ಹರಿಸುವ ಮೂಲಕ ಕುರಿ, ದನಗಳ ದಾಹ ನೀಗಿಸುವ ಕೆಲಸ ಮಾಡುತ್ತಿದ್ದಾರೆ.

    ಬೋದೂರು ಕುಟುಂಬದ ಏಳು ಎಕರೆ ಜಮೀನಲ್ಲಿ ಸದ್ಯಕ್ಕೆ ಯಾವುದೇ ಬೆಳೆ ಬೆಳೆಯುತ್ತಿಲ್ಲ. ಅವರ ಜಮೀನಿನ ಆಸು ಪಾಸಿನಲ್ಲಿ ಸರಿಸುಮಾರು 50 ಎಕರೆ ಸರ್ಕಾರಿ ಭೂಮಿ ಇದೆ. ಅಲ್ಲಿ ಮೊಲ, ನವಿಲು, ತೋಳ, ನರಿ, ಕಾಡುಬೆಕ್ಕು ಸೇರಿದಂತೆ ನಾನಾ ತಳಿಯ ಕಾಡುಪ್ರಾಣಿ, ಪಕ್ಷಿಗಳು ಕಾಣಸಿಗುತ್ತವೆ. ಜಾನುವಾರುಗಳು ಸೇರಿದಂತೆ ವನ್ಯಜೀವಿಗಳಿಗೆ ಬೇಸಿಗೆ ಪ್ರಾರಂಭವಾಗುತ್ತಿದ್ದಂತೆ ಕುಡಿವ ನೀರಿನ ಅಭಾವ ಉಂಟಾಗಿ, ನೀರಿಗಾಗಿ ಅಲೆದಾಡುವುದು ಸಾಮಾನ್ಯ. ನೀರಿನ ಸಮಸ್ಯೆಯಿಂದ ನವಿಲುಗಳು ಮೃತಪಟ್ಟಿರುವ ಉದಾಹರಣೆ ಇದೆ.

    ಜಾನುವಾರುಗಳಿಗೆ ಉಂಟಾಗಬಹುದಾದ ಕುಡಿವ ನೀರಿನ ತೊಂದರೆ ತಪ್ಪಿಸುವ ಸಲುವಾಗಿ ಬಸವರಾಜ ಅವರು ಸ್ವಯಂ ಪ್ರೇರಿತರಾಗಿ ತಮ್ಮ ಜಮೀನಲ್ಲಿರುವ ಕೃಷಿಹೊಂಡಕ್ಕೆ ಕಳೆದ 20 ದಿನಗಳಿಂದ ತಮ್ಮದೆ ಕೊಳವೆಬಾವಿಯಿಂದ ನೀರಿನ ಸೌಲಭ್ಯ ಕಲ್ಪಿಸಿದ್ದಾರೆ. ಇದರಿಂದ ಬೋದೂರು ಸೇರಿದಂತೆ ಸುತ್ತಲಿನ ಗ್ರಾಮಗಳಾದ ಕೃಷ್ಣಾಪುರ, ನಾಗರಾಳ, ಗುಂಟಮಡು ಜಾನುವಾರುಗಳಿಗೆ ಸಹಕಾರಿಯಾಗಿದೆ.

    ನೀರಿನ ಕೊರತೆ ಯಿಂದ ಪ್ರಾಣಿ- ಪಕ್ಷಿಗಳು ಸಾಯುತ್ತಿವೆ. ಇದು ನೋವಿನ ವಿಷಯ. ಈ ಕಾರಣಕ್ಕೆ ಪ್ರಾಣಿ, ಪಕ್ಷಿಗಳ ಜೀವ ಉಳಿಸೋಣ ಎಂದು ಕೃಷಿ ಹೊಂಡಕ್ಕೆ ನೀರು ತುಂಬಿಸುತ್ತಿರುವೆ.
    | ಬಸವರಾಜ ಎನ್ ಬೋದೂರು

    ಏಳೆಂಟು ಕಿಮೀ ದೂರದಲ್ಲಿರುವ ಕುಷ್ಟಗಿ ತಾಲೂಕಿನ ಹುಲಿಯಾಪುರ ಕೆರೆಯಲ್ಲಿ ಕುರಿ, ದನಗಳಿಗೆ ನೀರು ಕುಡಿಸಿಕೊಂಡು ಬರುತ್ತಿದ್ದೆವು. ಈ ಉರಿ ಬಿಸಿಲಲ್ಲಿ ತುಂಬಾ ಆಯಾಸ ಪಡುವಂತಾಗಿತ್ತು. ಕಳೆದ 20 ದಿನದಿಂದ ಇಲ್ಲೆ ಕೃಷಿಹೊಂಡದಲ್ಲಿ ನೀರು ಕುಡಿಸುತ್ತಿದ್ದೇವೆ. ಕಾಡು ಪ್ರಾಣಿಗಳಿಗೂ ಉಪಯೋಗವಾಗಿದೆ.
    | ಬೋದುರಪ್ಪ ಕತ್ತಿ ಕುರಿಗಾಯಿ, ಬೋದೂರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts